ಮೇಳೈಸಿದ ಕೊಡವ ಸಂಸ್ಕೃತಿಯ ಅನಾವರಣ

7

ಮೇಳೈಸಿದ ಕೊಡವ ಸಂಸ್ಕೃತಿಯ ಅನಾವರಣ

Published:
Updated:
ಮೇಳೈಸಿದ ಕೊಡವ ಸಂಸ್ಕೃತಿಯ ಅನಾವರಣ

ಬೆಂಗಳೂರು: ಅಲ್ಲಿ ನೆರೆದಿದ್ದವರಲ್ಲಿ ಸಂಭ್ರಮ ಮನೆ ಮಾಡಿತ್ತು. ಎಲ್ಲರ ಮೊಗದಲ್ಲಿ ಸಂತಸದ ಭಾವ. ಹಿರಿಯರಿಗೆ ಕಿರಿಯರಿಂದ ಗೌರವ, ಪರಸ್ಪರ ಆಲಿಂಗನ. ಒಂದು ರೀತಿಯಲ್ಲಿ ಹಬ್ಬದ ಸಡಗರ ಅಲ್ಲಿ ಕಂಡು ಬಂದಿತು. ಕರ್ನಾಟಕದ ಶ್ರೀಮಂತ ಸಂಸ್ಕೃತಿಯೊಂದು ಅಲ್ಲಿ ಮೇಳೈಸಿತ್ತು.ಇದು ನಗರದ ಅರಮನೆ ಮೈದಾನದಲ್ಲಿ ಶನಿವಾರ ನಡೆದ ಬೆಂಗಳೂರು ಕೊಡವ ಸಮಾಜದ ಶತಮಾನೋತ್ಸವ ಸಮಾರಂಭದಲ್ಲಿ ಕಂಡು ಬಂದ ದೃಶ್ಯ. 1911ರಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಬೆರಳೆಣಿಕೆಯಷ್ಟು ಕೊಡವ ಸಮಾಜದ ಗಣ್ಯರು ದೂರದೃಷ್ಟಿಯಿಂದ ಸ್ಥಾಪಿಸಿದ ಬೆಂಗಳೂರು ಕೊಡವ ಸಮಾಜಕ್ಕೆ ಇದೀಗ ನೂರು ವರ್ಷಗಳ ಸಂಭ್ರಮ.

 

ಈ ಅವಿಸ್ಮರಣೀಯ ಸಮಾರಂಭದಲ್ಲಿ ಕೇವಲ ಬೆಂಗಳೂರಿನಲ್ಲಿ ನೆಲೆಸಿರುವ ಕೊಡವ ಕುಟುಂಬಗಳಷ್ಟೇ ಅಲ್ಲದೆ, ಕೊಡಗಿನಿಂದಲೂ ಅಪಾರ ಸಂಖ್ಯೆಯ ಜನ ಆಗಮಿಸಿದ್ದರು. ಕುಪ್ಪೆಚಾಲೆ, ಪೀಚೆಕತ್ತಿಯೊಂದಿಗೆ ಪುರುಷರು ಗಮನಸೆಳೆದರೆ, ಸಾಂಪ್ರದಾಯಿಕ ದಿರಿಸಿನಲ್ಲಿ ಮಹಿಳೆಯರು ಮಿಂಚಿದರು. ಸಂಜೆ ಕೊಡವರ ಜಾನಪದ ಶ್ರೀಮಂತಿಕೆಯನ್ನು ಬಿಂಬಿಸುವ ಉಮ್ಮತ್ತಾಟ್, ಬೊಳಕಾಟ್ ಸೇರಿದಂತೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಬೆಳಿಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್, `ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ ಅವರಂತಹ ವೀರಸೇನಾನಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ಕೊಡವರು ಇನ್ನು ಮುಂದೆಯೂ ಸೇನೆಯಲ್ಲಿ ತಮ್ಮ ಛಾಪು ಮುಂದುವರಿಸಿಕೊಂಡು ಹೋಗಬೇಕು~ ಎಂದು ಕರೆ ನೀಡಿದರು.`ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾರತದಂತಹ ದೇಶದಲ್ಲಿ ಕೊಡವ ಜನಾಂಗದ ಸಂಸ್ಕೃತಿ, ಆಚಾರ-ವಿಚಾರ ಕೂಡ ಅತ್ಯಂತ ಭಿನ್ನವಾದದ್ದು. ಇಂತಹ ಶ್ರೀಮಂತ ಸಂಸ್ಕೃತಿ-ಪರಂಪರೆಯನ್ನು ಜೋಪಾನವಾಗಿ ಕಾಪಾಡಲು ಸಮಾಜ ಪ್ರಯತ್ನ ನಡೆಸಬೇಕು~ ಎಂದು ಅವರು ಸಲಹೆ ಮಾಡಿದರು.`ಪ್ರಕೃತಿ ಸಂಪತ್ತಿನಿಂದ ಗಮನಸೆಳೆದಿರುವ ಕೊಡಗು ನೈಸರ್ಗಿಕ ಸಂಪನ್ಮೂಲಗಳಿಂದಲೂ ಗಮನಸೆಳೆದಿದೆ. ಹೀಗಾಗಿ, ಕರ್ನಾಟಕಕ್ಕೆ ಆಗಮಿಸುವ ಪ್ರವಾಸಿಗರು ಕೊಡಗಿಗೆ ಭೇಟಿ ನೀಡದೆ ಹಿಂತಿರುಗಲು ಸಾಧ್ಯವಿಲ್ಲ. ಇಂತಹ ನಾಡಿನ ಜನರಿಗೆ ಎಂತಹ ಸಹಾಯ ಮಾಡಲು ನಾನು ಸಿದ್ಧ~ ಎಂದು ರಾಜ್ಯಪಾಲರು ಭರವಸೆ ನೀಡಿದರು.ಬುಡಕಟ್ಟು ಸಮುದಾಯಕ್ಕೆ ಸೇರಿದ ಕೊಡವರು ತಮ್ಮ ಜನಾಂಗದ ಮಾನ್ಯತೆಗಾಗಿ ಹೋರಾಟ ನಡೆಸುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದ ಅವರು, `ಈ ಸಮಾಜಕ್ಕೆ ಕಿಂಚಿತ್ತಾದರೂ ಸಹಾಯ ಮಾಡಬೇಕೆಂಬ ನನ್ನ ಆಸೆ ಕೈಗೂಡಲಿಲ್ಲ. ಇನ್ನು ಮುಂದೆಯೂ ಕಾನೂನು ಚೌಕಟ್ಟಿನಲ್ಲಿ ಬೇಡಿಕೆ ಈಡೇರಿಕೆಗೆ ನೆರವು ನೀಡುತ್ತೇನೆ~ ಎಂದು ಆಶ್ವಾಸನೆ ನೀಡಿದರು.ಗಿರಿಜನರ ಸಮಸ್ಯೆ ಬಗೆಹರಿಯಬೇಕು: `ಕೊಡಗಿನಲ್ಲಿ ಗಿರಿಜನರು ಬಹಳ ಸಂಕಷ್ಟದಲ್ಲಿದ್ದಾರೆ. ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಗಿರಿಜನರಿಗಾಗಿ ಜಾರಿಗೊಳಿಸಿರುವ ಯೋಜನೆಗಳ ಸವಲತ್ತುಗಳನ್ನು ತಲುಪಿಸಲು ಸರ್ಕಾರ ಪ್ರಯತ್ನ ನಡೆಸಬೇಕಾಗಿದೆ~ ಎಂದು ಅವರು ಹೇಳಿದರು.ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು. ಕೇಂದ್ರ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ಐಚೆಟ್ಟಿರ ಪ್ರೇಮಾ ಕಾರ್ಯಪ್ಪ ಮಾತನಾಡಿದರು.ಹಟ್ಟಿ ಚಿನ್ನದ ಗಣಿಯ ವ್ಯವಸ್ಥಾಪಕ ನಿರ್ದೇಶಕ ಅವರೆಮಾದಂಡ ಕೆ. ಮೊಣ್ಣಪ್ಪ, ಬೆಂಗಳೂರು ನಗರ ಜಿಲ್ಲಾಧಿಕಾರಿ ಮುರುವಂಡ ಕೆ. ಅಯ್ಯಪ್ಪ, ಬ್ರಿಗೇಡಿಯರ್ ಕೊಡಂದೇರ ಅರ್ಜುನ್ ಮುತ್ತಣ್ಣ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.ಸ್ವಾಗತ ಭಾಷಣ ಮಾಡಿದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆಪ್ಪುಡಿರ ಎಂ. ತಿಲಕ್ ಸುಬ್ಬಯ್ಯ, ಶಾಲೆ ಸ್ಥಾಪನೆಗೆ ಯಲಹಂಕ ಬಳಿ ಐದು ಎಕರೆ ಜಾಗ ಮಂಜೂರು ಮಾಡಿಸಲು ಸರ್ಕಾರಕ್ಕೆ ಸೂಚಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸಿದರು. ಉಪಾಧ್ಯಕ್ಷೆ ಸೀತಾ ಅಯ್ಯಣ್ಣ ವಂದಿಸಿದರು.`ರಸ್ತೆ ದುರಸ್ತಿಗೆ ವಿಶೇಷ ಅನುದಾನ~

ಬೆಂಗಳೂರು:
ಕೊಡಗಿನ ರಸ್ತೆ ಹಾಗೂ ಸೇತುವೆಗಳ ದುರಸ್ತಿಗೆ ರಾಜ್ಯ ಸರ್ಕಾರ ವಿಶೇಷ ನೆರವು ನೀಡಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಶನಿವಾರ ಇಲ್ಲಿ ಒತ್ತಾಯಿಸಿದರು.ಬೆಂಗಳೂರು ಕೊಡವ ಸಮಾಜದ ಶತಮಾನೋತ್ಸವ ಸಮಾರಂಭದ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಪ್ರತಿ ವರ್ಷ ಕೊಡಗಿನಲ್ಲಿ ಸುರಿಯುವ ಭೀಕರ ಮಳೆಯಿಂದ ಪ್ರವಾಹ ಉಂಟಾಗಿ ಸುಮಾರು 1500 ಕಿ.ಮೀ.ನಷ್ಟು ರಸ್ತೆಗಳು ಹಾಳಾಗುತ್ತಿವೆ.ಆದರೆ, ಪ್ರತಿ ವರ್ಷ ರಸ್ತೆ- ಸೇತುವೆಗಳ ದುರಸ್ತಿಗೆ ನೆರವು ಕೋರುತ್ತಿದ್ದರೂ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಭಾನುವಾರ ಸಮಾರಂಭದಲ್ಲಿ ಭಾಗವಹಿಸಲಿರುವ ಮುಖ್ಯಮಂತ್ರಿಗಳ ಮುಂದೆಯೂ ಸಮಾಜ ಈ ಬೇಡಿಕೆ ಮುಂದಿಡಲಿದೆ~ ಎಂದರು.ಜಮ್ಮಾ ಬಾಣೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಮರ ಮಾಲೀಕತ್ವದ ಸಮಸ್ಯೆ ಕೂಡ ಇತ್ಯರ್ಥವಾಗಿಲ್ಲ. ಈ ಎರಡೂ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡು ಹಿಡಿಯಬೇಕು. ಅಲ್ಲದೆ, ಕೊಡಗಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry