ಮಂಗಳವಾರ, ಡಿಸೆಂಬರ್ 10, 2019
26 °C
ಜಿಲ್ಲಾ ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಅಧಿಕಾರಿ ಹೇಳಿಕೆ

ಮೇವಿಗೆ ಬರವಿಲ್ಲ, ಇಳುವರಿ ಖಾತರಿ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇವಿಗೆ ಬರವಿಲ್ಲ, ಇಳುವರಿ ಖಾತರಿ ಇಲ್ಲ

ಚಿತ್ರದುರ್ಗ: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಈ ಸಂದರ್ಭದಲ್ಲಿ ಶೇಂಗಾ ಗಿಡಗಳು ಸೊಂಪಾಗಿ ಬೆಳೆಯುತ್ತವೆ. ಮೇವಿಗೆ ತೊಂದರೆಯಿಲ್ಲ. ಆದರೆ ನೆಲಗಡಲೆ ಇಳುವರಿ ಕುಂಠಿತಗೊಳ್ಳುತ್ತದೆ ಎಂದು ಜಂಟಿ ಕೃಷಿ ನಿದೇರ್ಶಕ ಕೃಷ್ಣಮೂರ್ತಿ  ತಿಳಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆಗಸ್ಟ್ ಅಂತ್ಯದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದರು.ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ ತಾಲ್ಲೂಕಿನಲ್ಲಿ ಜುಲೈ ಅಂತ್ಯದಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಅಧಿಕ ಮಳೆಯಿಂದ ಹಾನಿಯಾಗಿದೆ.  ಮೊಳಕಾಲ್ಮುರು, ಹಿರಿಯೂರು, ಚಳ್ಳಕೆರೆ ತಾಲ್ಲೂಕಿನಲ್ಲಿ ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ಸಮಪರ್ಕವಾಗಿ ಮಳೆಯಾಗದ ಕಾರಣ ಬಿತ್ತಿದ ಶೇಂಗಾ ಬೆಳೆ ಶೇ ೪೦ ರಷ್ಟು ಮಾತ್ರ ಇಳುವರಿಯಾಗಿದೆ. ಮುಂದೆ ಮಳೆಯಾದರೆ ಪ್ರಮಾಣ ಹೆಚ್ಚಾಗಬಹುದು. ಸೆಪ್ಟೆಂಬರ್ ತಿಂಗಳಲ್ಲಿ ಈ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿರುವುದರಿಂದ ಶೇಂಗಾ ಬೆಳೆಯಲ್ಲಿ ಉತ್ತಮ ಮೇವು ಬರಲಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ ೮೮ ರಷ್ಟು ಬಿತ್ತನೆ ಪೂರ್ಣಗೊಂಡಿದೆ ಎಂದು ತಿಳಿಸಿದರು.ಈ ಮೂರ ತಾಲ್ಲೂಕುಗಳಲ್ಲಿನ ಬರದ ಬಗ್ಗೆ ಹಾಗೂ ಶೇಂಗಾ ಬೆಳೆಯ ಕುರಿತು ವಿವರ ಸಂಗ್ರಹಿಸಲು ಕೃಷಿ ಇಲಾಖೆಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. ವಾರದೊಳಗಾಗಿ ಈ ಸಮೀಕ್ಷಾ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದರು.ಪರ್ಯಾಯ ಬೆಳೆಗೆ ಸಲಹೆ: ಶೇಂಗಾ ಕೈಕೊಟ್ಟಿದೆ. ಹತ್ತಿಯೂ ನಾಶವಾಗುತ್ತಿದೆ. ಮುಂಗಾರು ಬೆಳೆಗಳ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಹಾಗಾದರೆ ರೈತರು ಯಾವ ಬೆಳೆಗಳನ್ನು ಪರ್ಯಾಯವಾಗಿ ಬಿತ್ತನೆ ಮಾಡಬಹುದು ಎಂದು ಸಿಇಒ ಕೆ.ಎಂ.ನಾರಾಯಣಸ್ವಾಮಿ ಕೃಷಿ ಅಧಿಕಾರಿಗಳನ್ನು ಪ್ರಶ್ನಿಸಿದರು.‘ಮುಂಗಾರು ಪೂರ್ಣಗೊಂಡಿದೆ. 3–4 ದಿನಗಳಿಂದ ಉತ್ತಮ ಮಳೆಯಾಗಿದೆ. ಹಿಂದೆ ಬಿತ್ತನೆ ಮಾಡದೇ ಇರುವವರು ಪರ್ಯಾಯವಾಗಿ ಮೂರು ತಿಂಗಳ ಸೂರ್ಯಕಾಂತಿ ಹಾಗೂ ಜೋಳ ಬಿತ್ತನೆ ಮಾಡಬಹುದು’ ಎಂದು ಕೃಷಿ ಅಧಿಕಾರಿಗಳು ಪ್ರಶ್ನೆಗೆ ಉತ್ತರಿಸಿದರು.ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಿ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗದಿರುವುದರಿಂದ ಅಂತರ್ಜಲ ಮಟ್ಟ ಇನ್ನೂ ಹೆಚ್ಚಾಗಿಲ್ಲ. ಇದರಿಂದ ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆ ಜೀವಂತವಾಗಿದೆ. ಕುಡಿಯುವ ನೀರಿಗಾಗಿ ಹಲವು ಕಡೆ ಕೊಳವೆಬಾವಿ ಕೊರೆದರೂ ಮೋಟರ್, ಪೈಪ್ ಲೈನ್ ಅಳವಡಿಸಿಲ್ಲ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳನ್ನು ಕೇಳಿದರೆ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿಲ್ಲ, ಅದಕ್ಕಾಗಿ ಅಳವಡಿಸಲಾಗಿಲ್ಲ ಎಂಬುದಾಗಿ ಸಬೂಬೂ ನೀಡುತ್ತಾರೆ. ಎಲ್ಲಿ ಸಮಸ್ಯೆ ಇದೆ, ಅಂತಹ ಕಡೆ ತಕ್ಷಣವೇ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಲು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಲ್ಲೂಕು ಮಟ್ಟದಲ್ಲಿ ಕೊಳವೆಬಾವಿ ಕೊರೆದಿದ್ದರೂ, ಮೋಟಾರ್ ಹಾಗೂ ಇನ್ನಿತರ ಪರಿಕರ ಅಳವಡಿಕೆಗೆ ಟೆಂಡರ್‌ ಪ್ರಕ್ರಿಯೆ ನೆಪ ಹೇಳಿ ವಿಳಂಬ ಮಾಡಬೇಡಿ. ತಕ್ಷಣ ಕಾರ್ಯಪ್ರವೃತ್ತರಾಗಬೇಕೆಂದ ಜಿ.ಪಂ ಉಪಾಧ್ಕ್ಷ ಅನಿಲ್ ಕುಮಾರ್‌ ಸೂಚನೆ ನೀಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್‌ ರಾಜ್ ಎಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಎಂಜಿನಿಯರ್, ಸಭೆಗೆ ಮಾಹಿತಿ ನೀಡಿ, ಸಮಸ್ಯೆ ಇರುವ ಕಡೆ ತಕ್ಷಣವೇ ಮೋಟಾರ್, ಪೈಪ್ ಲೈನ್ ಅಳವಡಿಸಲಾಗುತ್ತದೆ. ಶಾಸಕರ ಅಧ್ಯಕ್ಷತೆಯ ಟಾಸ್ಕ್ ಪೋರ್ಸ್‌ನಿಂದ ಅನುಮೋದನೆಗೊಂಡ ಕಾಮಗಾರಿಗಳಿಗೆ ಟೆಂಡರ್ ಅವಶ್ಯಕತೆ ಇರುವುದಿಲ್ಲ. ಆದರೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಿಗೆ ಮಾತ್ರ ಟೆಂಡರ್ ಕರೆಯಬೇಕಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ` ೭೪.೧೬ ಕೋಟಿಯಲ್ಲಿ ೨,೦೮೩ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ಅನುಮೋದನೆಯಾಗಿದೆ. ಈವರೆಗೆ ೫೮೬ ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸಿ ` ೭.೨೦ ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.ಸಹಾಯಧನ ಪಟ್ಟಿ ನೀಡಿ: ತೋಟಗಾರಿಕೆ ಇಲಾಖೆಯಿಂದ ಹನಿ ನಿರಾವರಿಗೆ ಸಹಾಯಧನ ನೀಡಲಾಗುತ್ತಿದ್ದು ಈ ವರ್ಷ ೨೬೮ ಹೆಕ್ಟೇರ್‌ಗಳಿಗೆ ಹನಿ ನೀರಾವರಿ ಸಹಾಯಧನ ನೀಡಲು ` ೧.೪೦ ಕೋಟಿ ಆರ್ಥಿಕ ಗುರಿಯಲ್ಲಿ ಈವರೆಗೆ ೧೧೩ ಫಲಾನುಭವಿಗಳಿಗೆ ` ೪೬.೪೦ ಲಕ್ಷ ಸಹಾಯಧನ ವಿತರಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕರು ತಿಳಿಸಿದಾಗ ತಾಲ್ಲೂಕುವಾರು ಫಲಾನುಭವಿಗಳ ಪಟ್ಟಿಯನ್ನು ನೀಡಬೇಕೆಂದು ಅಧ್ಯಕ್ಷರು ತಿಳಿಸಿದರು.ಎಲ್ಲಾ ಇಲಾಖೆಗಳಲ್ಲಿನ ವಿಶೇಷ ಘಟಕ ಹಾಗೂ ಬುಡಕಟ್ಟು ಉಪ ಯೋಜನೆಯಡಿ ಕೈಗೊಳ್ಳಬೇಕಾದ ಕಾಮಗಾರಿ ಹಾಗೂ ಸೌಲಭ್ಯಗಳನ್ನು ಸಕಾಲದಲ್ಲಿ ಕಲ್ಪಿಸಬೇಕು. ಸಮಾಜ ಕಲ್ಯಾಣ ಸಚಿವರು ನಮ್ಮ ಜಿಲ್ಲೆಯವರೇ ಆಗಿರುವುದರಿಂದ ಇದಕ್ಕೆ ವಿಶೇಷ ಗಮನ ನೀಡುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.ಸದ್ಯಕ್ಕೆ ಗೋಶಾಲೆ ಅಗತ್ಯವಿಲ್ಲ: ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಬರ ಹಿನ್ನೆಲೆಯಲ್ಲಿ ಗೋಶಾಲೆಗಳನ್ನು ಆರಂಭಿಸಬೇಕಾಗಿತ್ತು. ಈಗ ಮಳೆಯಾಗುತ್ತಿರುವುದರಿಂದ ಮೇವು ಲಭ್ಯವಿರುವುದರಿಂದ ಇನ್ನೆರಡು ತಿಂಗಳು ಗೋಶಾಲೆಯ ಅಗತ್ಯ ಕಂಡು ಬಂದಿಲ್ಲ ಎಂದು ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕರು ತಿಳಿಸಿದರು. ಮಳೆ ಬಂದಿರುವುದರಿಂದ ಮೇವು ಯಾವ ಪ್ರಮಾಣದಲ್ಲಿ ಯಾವ, ಯಾವ ಮೂಲದಿಂದ ಸಿಗಲಿದೆ ಎಂದು ವರದಿ ನೀಡಿ ಎಂದು ಸಿಇಓ ತಿಳಿಸಿದರು.ಸಣ್ಣ ನೀರಾವರಿ ವಿಭಾಗದಿಂದ ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿ ರೈತರಿಗೆ ನೀರಾವರಿಗಾಗಿ ಕೊಳವೆಬಾವಿಗಳನ್ನು ಕೊರೆಯಿಸಿ ನೀರಾವರಿ ಕಲ್ಪಿಸಿಕೊಡಲಾಗುತ್ತಿದೆ. ಹಿರಿಯೂರು ತಾಲ್ಲೂಕಿನ ಆದಿವಾಲ ಸಮೀಪದ ಗಾಂಧಿನಗರದಲ್ಲಿ ೨೫ ಹೆಕ್ಟೇರ್‌ಗೆ ಎರಡು ಕೊಳವೆಬಾವಿಯನ್ನು ಕೊರೆಹಿಸಲಾಗಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಸಭೆಗೆ ತಿಳಿಸಿದರು. ‘ಇದು ಹೇಗೆ ಸಾಧ್ಯವಿದೆ, ಒಂದು ಕೊಳವೆಬಾವಿಯಿಂದ ೨.೫ ಹೆಕ್ಟೇರ್‌ವರೆಗೆ ಮಾತ್ರ ನೀರಾವರಿ ಸೌಲಭ್ಯ ಕಲ್ಪಿಸಬಹುದು. ಎಲ್ಲೆಲ್ಲಿ ಕೊಳವೆಬಾವಿ ಕೊರೆಸಿ ಕೃಷಿ ಜಮೀನುಗಳಿಗೆ ನೀರಾವರಿ ಕಲ್ಪಿಸಲಾಗಿದೆ. ಈ ಬಗ್ಗೆ ಪಟ್ಟಿಯನ್ನು ನೀಡಿ, ಖುದ್ದು ಪರಿಶೀಲನೆ ನಡೆಸಲಾಗುತ್ತದೆ’ ಎಂದು ಅಧ್ಯಕ್ಷರು ತಿಳಿಸಿದರು.ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್,  ಮುಖ್ಯ ಯೋಜನಾಧಿಕಾರಿ ಓಂಕಾರಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)