ಮೇವಿನ ಕೊರತೆ; ಕಸಾಯಿಖಾನೆಗೆ ಜಾನುವಾರು

ಧರ್ಮಪುರ: ಮಳೆ ಕೊರತೆ, ಬತ್ತಿದ ಕೆರೆ ಕುಂಟೆಗಳು, ಹಸಿರಿಲ್ಲದ ಅಡವಿ, ಹಿಡಿ ಮೇವು ಮತ್ತು ಬೊಗಸೆ ನೀರಿಗೆ ಹಾಹಾಕಾರ. ದಿನೇ ದಿನೇ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಕಸಾಯಿಖಾನೆ ಸೇರುತ್ತಿರುವ ಜಾನುವಾರುಗಳ ಸಾಲು ಸಾಲು!.. ಧರ್ಮಪುರ ಹೋಬಳಿಯ ಹಳ್ಳಿಗಳಲ್ಲಿ ನಿತ್ಯವೂ ಕಾಣುವ ವಾಸ್ತವ ಚಿತ್ರಣವಿದು.
ಪಶುಪಾಲನೆಯನ್ನೇ ನಂಬಿ ಬದುಕುತ್ತಿರುವ ಧರ್ಮಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೇವು ಮತ್ತು ನೀರಿನ ಕೊರತೆ ಕಾಡುತ್ತಿದೆ. ಹಸು, ಎತ್ತು, ಕುರಿ, ಮೇಕೆಗಳಿಗೆ ಮೇವು ಸಿಗದೇ, ಮೇವು ಅರಿಸಿಕೊಂಡು, ಜನರು ಊರೂರು ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಕೆಲವರು ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಟಕ್ಕೂ ಮುಂದಾಗಿದ್ದಾರೆ’ ಎಂದು ನೊಂದು ನುಡಿಯುತ್ತಾರೆ ರೈತ ನಾಗರಾಜ್.
‘ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಈ ಭಾಗದಲ್ಲಿ ಬರ ಆವರಿಸಿದೆ. ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯಿಂದ ಅಂತರ್ಜಲ ಬಸಿದು ಹೋಗಿದೆ. ಇದರಿಂದ ಮೇವಿಗೆ ತೀವ್ರ ಸಮಸ್ಯೆ ಎದುರಾಗಿದೆ’ ಎನ್ನುವುದ ಅವರ ಅಭಿಪ್ರಾಯವಾಗಿದೆ.
ಗೋಶಾಲೆಗೆ ಒತ್ತಾಯ: ಧರ್ಮಪುರ ಹೋಬಳಿಯ 63 ಹಳ್ಳಿಗಳಲ್ಲೂ ತೀವ್ರ ಮೇವಿನ ಸಮಸ್ಯೆ ಉಲ್ಭಣವಾಗಿದ್ದು, ಟಿ.ಗೊಲ್ಲಹಳ್ಳಿಯಲ್ಲಿ ಸರ್ಕಾರ ಗೋಶಾಲೆಯನ್ನು ಪ್ರಾರಂಭಿಸಿ ತುರ್ತಾಗಿ ಮೇವು ವಿತರಿಸಬೇಕು. ಅದೇ ರೀತಿ ಖಂಡೇನಹಳ್ಳಿ ಗಡಿ ಭಾಗವಾಗಿದ್ದು, ಹೆಚ್ಚುವರಿ ಮತ್ತೆರಡು ಗೋಶಾಲೆಗಳನ್ನು ಈ ಭಾಗದಲ್ಲಿ ಆರಂಭಿಸಬೇಕು ಎಂಬುದು ರೈತರ ಒತ್ತಾಯ.
ನೀರು ಶುದ್ಧೀಕರಣ ಘಟಕ: ಹೋಬಳಿಯ ಬಹುತೇಕ ಕಡೆ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದೆ. ಇದಕ್ಕೆ ಪರಿಹಾರವಾಗಿ ನೀರು ಶುದ್ಧೀಕರಣ ಘಟಕಗಳನ್ನು ಪ್ರಾರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಅದರ ಪ್ರಕಾರ ಶ್ರವಣಗೆರೆ ಮತ್ತು ಪಿ.ಡಿ.ಕೋಟೆ ಗ್ರಾಮಗಳಲ್ಲಿನ ನೀರು ಶುದ್ಧೀಕರಣ ಘಟಕವನ್ನು ಕೆಲವು ತಿಂಗಳುಗಳ ಹಿಂದೆ ನಿರ್ಮಿಸಲಾಯಿತಾದರೂ, ಅದಕ್ಕಿನ್ನೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ. ಪರಿಣಾಮವಾಗಿ ಆ ಎರಡು ಗ್ರಾಮಗಳಿಗೆ ಹೊಂದಿಕೊಂಡಿರುವ ಪುಟ್ಟ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಮುಂದುವರಿದಿದೆ. ಇದರ ಜತೆಗೆ ವಿದ್ಯುತ್ ಸಮಸ್ಯೆಯೂ ಸೇರಿಕೊಂಡು, ಪರಿಸ್ಥಿತಿ ಬಿಗಡಾಯಿಸಿದೆ. ‘ಟ್ಯಾಂಕರ್ ನೀರನ್ನಾದರೂ ಸರ್ಕಾರ ಪೂರೈಸುವಂತಾದರೆ, ಕುಡಿಯುವ ನೀರಿಗಾದರೂ ತಾತ್ಕಾಲಿಕ ಪರಿಹಾರ ನೀಡಿದಂತಾಗುತ್ತದೆ’ ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಧರ್ಮಪುರ ಹೋಬಳಿಯ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಡಿ.ಸುಧಾಕರ್ , ‘ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ಕುಡಿಯುವ ನೀರು ಒದಗಿಸುವುದು ನಮ್ಮ ಮೊದಲ ಆದ್ಯತೆ. ಇದಕ್ಕಾಗಿ ಸರ್ಕಾರ ಸನ್ನದ್ಧವಾಗಿದ್ದು, ಶೀಘ್ರದಲ್ಲೇ ಪರಿಹಾರ ಕಾರ್ಯಗಳನ್ನು ಹಳ್ಳಿಗಳಿಗೆ ತಲುಪಿಸುತ್ತೇವೆ’ ಎಂದು ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.