ಮೇವಿನ ದಾರಿಯಲ್ಲಿ ಬಸವಳಿದ ರೈತ

7

ಮೇವಿನ ದಾರಿಯಲ್ಲಿ ಬಸವಳಿದ ರೈತ

Published:
Updated:

“ಅರಿಶಿನ ಕುಂಕುಮಕ್ಕೆಂದು ನನ್ನ ಅಜ್ಜಿ ಕೊಟ್ಟ 500 ರೂಪಾಯಿಗೆ ತನ್ನದೂ ಸೇರಿಸಿ ಒಂದು ಕುರಿ ಕೊಂಡುಕೊಂಡ ನಮ್ಮಮ್ಮ ಹಲವು ವರ್ಷ ಕಷ್ಟಪಟ್ಟು ನೂರಾರು ಕುರಿಗಳನ್ನು ಮಾಡಿದಳು. ಈಗ ನಮ್ಮ ಹಟ್ಟಿಯಲ್ಲಿ 200ಕ್ಕೂ ಹೆಚ್ಚು ಕುರಿಗಳಿವೆ. ಅದೊಂದು ಹೆಮ್ಮೆ. ಆದರೆ ಅಷ್ಟೇ ಸಂಕಟ. ಏಕೆಂದರೆ ನಮ್ಮ ಕುರಿಗಳಿಗೆ ಎಲ್ಲೂ ಮೇವು ಸಿಗ್ತಿಲ್ಲ. ಹೀಗಾಗಿ ಎಲ್ಲವನ್ನೂ ಮಾರಬೇಕು ಅಂತಿದೀವಿ...”ಕೋಲಾರ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ಯುವಕ ಶ್ರೀನಿವಾಸ ಹೇಳುತ್ತಾ ಹೋದ. ಕುಡಿಯುವ ನೀರಿಗೆ, ಕೃಷಿಗೆ ನೀರಿಲ್ಲದಿದ್ದರೆ, ರಾಸುಗಳಿಗೆ ಮೇವಿಲ್ಲದಿದ್ದರೆ ಬರ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂಬ ಮಾತು ಒಬ್ಬೊಬ್ಬ ರೈತನ ಜೀವನ, ದಿನಚರಿಯಲ್ಲಿ ಎಂಥ ಸನ್ನಿವೇಶಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಕೋಲಾರದ ಒಂದು ಮೂಲೆಯ ಉದಾಹರಣೆ ಅಷ್ಟೆ ಇದು. ಬರ ಎಂದರೆ ಪ್ರತಿ ರೈತನದೂ ಭಿನ್ನ ಸಂಕಟ. ನೋವು. ವ್ಯಸ್ತ ಬದುಕು.“ಮಳೆ ಇಲ್ಲ, ಮೇವು ಇಲ್ಲ, ನೀರಂತೂ ಸಿಗೋದೇ ಇಲ್ಲ. ಹೆಚ್ಚೆಂದರೆ ಒಂದು ತಿಂಗಳು ಕಾಯ್ತೀವಿ ಅಷ್ಟೆ. ಕನಿಷ್ಠ 10-15 ವರ್ಷದ ಹಿಂದೆ ಹಳ್ಳಿಯಲ್ಲಿ ಹುಲ್ಲುಗಾವಲಿತ್ತು. ಗುಂಡು ತೋಪುಗಳಿದ್ದವು. ಆದರೆ ಈಗ ಎಲ್ಲ ಒತ್ತುವರಿಯಾಗಿದೆ. ಕಾಣೆಯಾಗಿದೆ. ಕನಿಷ್ಠ 1 ಎಕೆರೆಯೂ ಇಲ್ಲ. ಕೆರೆ ಇದೆ ಅಷ್ಟೆ. ಅಲ್ಲಿ ಬಿಟ್ಟರೆ ಬೇರೆ ಕಡೆ ಕುರಿ ಮೇಯಿಸಲು ಜಾಗವೇ ಇಲ್ಲ. ಜಾಗವಿರುವ ಕಡೆ ತೇವವಿಲ್ಲ...”

ಶ್ರೀನಿವಾಸ ನಿಟ್ಟುಸಿರು ಬಿಟ್ಟ.“ನಾಟಿ ಮಾಡದೆ ಇರುವ ಭೂಮಿ, ಇಳುವರಿ ಮುಗಿದ ಭೂಮಿಯ ಮಾಲಿಕರನ್ನು ಕೇಳಿಕೊಂಡು ಅಲ್ಲಿ ಕುರಿ ಮೇಯಿಸಲು ಬಿಡುತ್ತೇವೆ. ಅವರು ದುಡ್ಡು ಕೇಳೋದಿಲ್ಲ ಎಂಬುದೇ ಸಮಾಧಾನ.ದುಡ್ ಕೊಟ್ಟು ಎಷ್ಟಂತ ಮೇವು ತರಬೋದು?” ಇದು ಅವನ ಪ್ರಶ್ನೆ.“ಬೇಸಿಗೆಯಲ್ಲಿ ಹುಣಿಸೆ ಮರ, ಅರಳಿ ಮರದ ಒಣಗಿದ ಎಲೆ-ತರಗೆಲೆಗಳೇ ನಮ್ಮ ಕುರಿಗಳಿಗೆ ಮೇವು. ಇಲ್ಲದಿದ್ದರೆ ನೀರು ಕುಡ್ಕೊಂಡು ಕಾಲ ಕಳೀಬೇಕು. ಆ ನೀರಿಗೂ ಕಿಲೋಮೀಟರುಗಟ್ಟಲೆ ನಡೀಬೇಕು. ಅರ್ಧ ಕಿಮೀ ನಡೆದರೂ ಮೇವು ಸಿಗೋದು ಕಷ್ಟ”

“ಮುಂದಿನ ಬೇಸಿಗೆಯಲ್ಲಿ ಕುರಿಗಳಿಗೆ ಹುರುಳಿ ಹೊಟ್ಟು ಕೂಡ ಸಿಗುವುದಿಲ್ಲ ಎಂದು ಖಾತ್ರಿಯಾಗಿಬಿಟ್ಟಿದೆ. ಏಕೆಂದರೆ ಈ ಬಾರಿ ಮಳೆ ಇಲ್ಲದೆ ಬಹಳಷ್ಟು ರೈತರು ತಮ್ಮ ಜಮೀನುಗಳಿಗೆ ಹುರುಳಿ ಚೆಲ್ಲಿಲ್ಲ. ನಮ್ಮ ಹಳ್ಳೀಲಿ ಯಾವ ರೈತರೂ ಈ ಬಾರಿ ಹುರುಳಿ ಬೆಳೀತಿಲ್ಲ.”ಈತ ಹೀಗೆ ಹೇಳುತ್ತಿದ್ದಂತೆಯೇ ಈತನ ಹೊಲದಲ್ಲಿ ತನ್ನ ಜೋಡೆತ್ತುಗಳೊಂದಿಗೆ ಒಂದು ಸುತ್ತು ಬಂದ ಅದೇ ಹಳ್ಳಿಯ ಶಂಕರಪ್ಪ ಹೇಳಲಾರಂಭಿಸಿದ. ಆತನ ಬಳಿ ಸದ್ಯಕ್ಕೆ ಇರುವ ಆದಾಯದ ಮೂಲ ಒಂದು ನೇಗಿಲು ಮತ್ತು ಜೋಡೆತ್ತುಗಳು ಮಾತ್ರ. ಅವಿಭಕ್ತ ಕುಟುಂಬದ ಆತನ ಅಣ್ಣ ಕಾಯಿಲೆಯಿಂದ ಮನೆ ಸೇರಿದ್ದಾನೆ. ಆತ ಓಡಿಸುತ್ತಿದ್ದ ಆಟೊರಿಕ್ಷಾ ಕೂಡ ಮೂಲೆ ಸೇರಿದೆ. ತಮ್ಮನೊಬ್ಬ ಬೆಂಗಳೂರಿನ ಗಾರ್ಮೆಂಟ್ ನಲ್ಲಿ ಕೆಲಸ ಹುಡುಕಿಕೊಂಡಿದ್ದಾನೆ. ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದಾರೆ. ಆತನಿಗೆ ಇಬ್ಬರು ಮಕ್ಕಳಿದ್ದಾರೆ.ಕೃಷಿ ಕೂಲಿಕಾರರ ಕೊರತೆಯನ್ನೇ ಆತ ತನ್ನ ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾನೆ. ಶ್ರೀನಿವಾಸನ ಜಮೀನಿಗೆ ನಾಟಿ ಮಾಡಿರುವ ಟೊಮೆಟೋ ಗಿಡಗಳಿಗೆ ಮಣಿಕಟ್ಟು ಸಾಲು (ಬೇರು ಮಟ್ಟದಲ್ಲಿ ಮಣ್ಣು ಸೇರಿಸುವುದು) ಒಡೆಯಲು ಕೂಲಿಗಳಿಲ್ಲ. ಹೀಗಾಗಿ ತನ್ನ ಎತ್ತುಗಳೊಡನೆ ಆತ ದಿನಕ್ಕೆ 500 ರೂಪಾಯಿಗೆ ಆ ಕೆಲಸ ಮಾಡುತ್ತಿದ್ದಾನೆ. ತಿಮ್ಮಸಂದ್ರದಲ್ಲಿ ಯಾರಿಗೇ ಕೂಲಿಯಾಳು ಬೇಕೆಂದರೂ ಶಂಕರಪ್ಪ ಹಾಜರಾಗುತ್ತಾನೆ. ಹತ್ತಿರದ ವಡಗೂರು, ತಿಮ್ಮಸಂದ್ರದಲ್ಲಿ ಈತ ಮಾಡಿದಷ್ಟೂ ಕೆಲಸವಿದೆ.ಆತ ತನ್ನ ಭಾಗಕ್ಕೆ ಬಂದಿರುವ 2 ಎಕರೆ ಜಮೀನಿನಲ್ಲಿ ನೀಲಗಿರಿ ಬೆಳೆಸಿದ್ದಾನೆ. 1 ಎಕರೆಯಲ್ಲಿ ರಾಗಿ ಬೆಳೆಯುತ್ತಿದ್ದಾನೆ. ಮಳೆ ಇಲ್ಲದೆ ಅದೂ ಸೊರಗಿದೆ. “ದಿನಕ್ಕೆ 500 ರೂಪಾಯಿ ಕೂಲಿ. ಇದು ಕೇಳಿಸಿಕೊಳ್ಳೋಕೆ ಪಸಂದಾಗಿ ಕೇಳ್ತದೆ. ಆದರೆ ಹಸುಗಳನ್ನು ಮೇಂಟೇನ್ ಮಾಡೋದು ಎಷ್ಟು ಕಷ್ಟ ಅಂತ ಮಾತಲ್ಲಿ ಹೇಳೋಕೆ ಆಗಲ್ಲ. ನೀರಿಲ್ಲ. ಮೇವಿಲ್ಲ. ದುಡ್ ಕೊಟ್ಟು ಮೇವು ತರಬೇಕು. ಉಳಿದಿದ್ದರಲ್ಲಿ ಮನೆ ಖರ್ಚು, ಮಕ್ಕಳ ಖರ್ಚು ಎಷ್ಟು ಅಂತ ಸರಿದೂಗಿಸೋದು?” ದಿನಸಿಯ ದರಪಟ್ಟಿಯೊಂದಿಗೆ ಆತ ಪ್ರಶ್ನೆಯನ್ನು ಜೋರಾಗಿಯೇ ಎಸೆದ.“30 ಸಾವಿರ ಕೊಟ್ಟು ಈ ದನಗಳನ್ನು ತಂದಿದ್ದೇನೆ. ಇವು ಬಸವಳಿದರೆ ನನ್ನ ಗತಿ ಕೇಳೋರ‌್ಯಾರು? ಮೇವಿಗೆ ಬಾಧೆ ಅಂದ್ರೆ ಇದೇ”

ಇವರ ಮಾತುಗಳನ್ನು ಎದೆಯಲ್ಲಿಟ್ಟುಕೊಂಡು ಜಿಲ್ಲಾ ಪಂಚಾಯತ್‌ಗೆ ಬಂದರೆ ಅಲ್ಲಿ ಮೇವಿನ ಸಮಸ್ಯೆ ನಿರ್ವಹಣೆ ಬಗ್ಗೆಯೇ ಗಂಭೀರ ಚರ್ಚೆ ನಡೆಯುತ್ತಿತ್ತು. ಪಶುಪಾಲನೆ ಇಲಾಖೆಯ ಸಹಾಯಕ ಯೋಜನಾಧಿಕಾರಿ ಹೇಳುತ್ತಿದ್ದರು: ಮೇವನ್ನು, ಪಶು ಆಹಾರವನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕಳೆದ 4 ತಿಂಗಳ ಹಿಂದೆ ಬರೆದ ಪತ್ರಕ್ಕೆ ಸರ್ಕಾರದಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಅವರ  ತಣ್ಣನೆಯ ಮಾತಿಗೆ ಅಧ್ಯಕ್ಷರಾದಿಯಾಗಿ ಸಭೆಯಲ್ಲಿದ್ದ ಎಲ್ಲರೂ ಅವಾಕ್ಕಾದರು.ಸರ್ಕಾರ ಸ್ಪಂದಿಸಲಿಲ್ಲ ಎಂದರೆ ನೀವು ಇಷ್ಟು ದಿನ ಏನು ಮಾಡುತ್ತಿದ್ದಿರಿ? ಎಂಬ ಪ್ರಶ್ನೆಗೆ ಅಧಿಕಾರಿ ಉತ್ತರಿಸಲು ಆಗಲಿಲ್ಲ.

ಮೇವು ಸಬ್ಸಿಡಿಯಲ್ಲಿದೆಯೆ? ಬಾರದ ಮಳೆಯಲ್ಲಿದೆಯೇ? ಬತ್ತಿದ ಕೊಳವೆಬಾವಿಯಲ್ಲಿದೆಯೇ? ಅಧಿಕಾರಿಗಳ ನಿರ್ಲಕ್ಷ್ಯದಲ್ಲಿದೆಯೇ? ರೈತರ ಕಾಯುವಿಕೆಯಲ್ಲಿದೆಯೆ? ಇವುಗಳಿಗೆ ಉತ್ತರ ಎಲ್ಲಿ ಎಂದು ಕೇಳಿದರೆ ಬರಪೀಡಿತ ಜಿಲ್ಲೆ ಎಂದಿನಂತೆ ಮೌನವಾಗುತ್ತದೆ.

ರೈತರ, ರಾಸುಗಳ ಅದೃಷ್ಟಕ್ಕೆ ಎರಡು ದಿನದಿಂದ ಮಳೆ ಬೀಳುತ್ತಿದೆ.... 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry