ಮೇವು ಪೂರೈಕೆಗೆ ಗ್ರಾಮಸ್ಥರ ಒತ್ತಾಯ

7

ಮೇವು ಪೂರೈಕೆಗೆ ಗ್ರಾಮಸ್ಥರ ಒತ್ತಾಯ

Published:
Updated:
ಮೇವು ಪೂರೈಕೆಗೆ ಗ್ರಾಮಸ್ಥರ ಒತ್ತಾಯ

ಚಿತ್ರದುರ್ಗ: ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಜಾನುವಾರುಗಳಿಗೆ ಸರ್ಕಾರ ಮೇವು ಪೂರೈಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮಸ್ಥರು ಹೆಚ್ಚುವರಿ ಜಿಲ್ಲಾಧಿಕಾರಿ ಎ.ಎಸ್. ನಿರ್ವಾಣಪ್ಪ  ಅವರಿಗೆ  ಸೋಮವಾರ ಮನವಿ ಸಲ್ಲಿಸಿದರು.ಈ ವರ್ಷ ಮಳೆ ಬಾರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿ ಸ್ವಲ್ಪವೂ ಮಳೆಯಾಗಿಲ್ಲ. ಮಳೆಯಾಗದ ಕಾರಣ ಜಾನುವಾರುಗಳಿಗೆ ಮೇವು ದೊರೆಯುತ್ತಿಲ್ಲ. ಇದರಿಂದ ಜಾನುವಾರುಗಳನ್ನು ಕಸಾಯಿಖಾನೆಗೆ ಕಳುಹಿಸುವ ಸ್ಥಿತಿ ತಲುಪಿದೆ ಎಂದು ಗ್ರಾಮಸ್ಥರು ವಿವರಿಸಿದರು.ಎತ್ತುಗಳನ್ನು ಸೀಬಾರ ಬಳಿಯ ಗೋಶಾಲೆಗೆ ಬಿಟ್ಟರೆ ಜಮೀನುಗಳನ್ನು ಸಿದ್ಧಪಡಿಸುವುದು ಮತ್ತು ಆಕಸ್ಮಿಕವಾಗಿ ಮಳೆ ಬಂದರೆ ಜಮೀನುಗಳಲ್ಲಿ ಕೂಡಲೇ ಬಿತ್ತನೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಜಾನುವಾರುಗಳಿಗೆ ಮೇವನ್ನು ಸರ್ಕಾರವೇ ತಕ್ಷಣ ಪೂರೈಸಬೇಕು. ಈ ವಿಷಯದಲ್ಲಿ ವಿಳಂಬ ಮಾಡಬಾರದು ಎಂದು ಒತ್ತಾಯಿಸಿದರು. ಜಾನುವಾರುಗಳಿಗೆ ಮೇವು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರಿದರು.ಬರದಿಂದಾಗಿ ಕುಡಿಯುವ ನೀರಿನ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದ್ದು, ಜಿಲ್ಲಾಡಳಿತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಬರದಿಂದ ಕಂಗಾಲಾಗಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ದೊಡ್ಡಸಿದ್ದವ್ವನಹಳ್ಳಿ ಭಾಗದಲ್ಲಿ ಮಳೆ ಇಲ್ಲದೆ ಬೆಳೆಗಳು ಸಂಪೂರ್ಣ ಒಣಗಿವೆ. ಬೆಳೆ ಹಾನಿಯನ್ನು ಸಮರ್ಪಕವಾಗಿ ಸಮೀಕ್ಷೆ ಮಾಡಿ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು. ಜತೆಗೆ, ಸಾಲ ಮತ್ತು ಬಡ್ಡಿ ಮನ್ನಾ ಮಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿಜಯಮ್ಮ, ಈಶ್ವರಪ್ಪ, ಚಂದ್ರಶೇಖರ್, ನಟರಾಜು, ಶ್ರೀನಿವಾಸ್, ಚಂದ್ರಶೇಖರಪ್ಪ, ಹನುಮಂತಪ್ಪ, ಶಶಿಕುಮಾರ್, ಜಯಶೀಲರೆಡ್ಡಿ, ಎನ್.ಆರ್. ದೇವರಾಜರೆಡ್ಡಿ, ತಿಪ್ಪೇಸ್ವಾಮಿ, ಆನಂದರೆಡ್ಡಿ, ಪರಮೇಶ್ವರಪ್ಪ, ಭೀಮಣ್ಣ, ರಾಮಚಂದ್ರಪ್ಪ, ಶಂಕರಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry