ಶುಕ್ರವಾರ, ಮೇ 14, 2021
21 °C

ಮೇ 4ರಂದು ಹೂಡಿಕೆದಾರರ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕೈಗಾರಿಕಾ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಸ್ಥಳೀಯರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ವಿಭಾಗ ಮಟ್ಟದ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮೇ 4ರಂದು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಮೈಸೂರು ವಿಭಾಗದ ಅಧ್ಯಕ್ಷ ಸುಧಾಕರಶೆಟ್ಟಿ ಗುರುವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಿಂದ 20 ಸಾವಿರ ಕೋಟಿ ಬಂಡವಾಳ ಹೂಡಿಕೆಯಲ್ಲಿ 1 ಲಕ್ಷ ಉದ್ಯೋ ಗಾವಕಾಶ ಕಲ್ಪಿಸಲಾಗುವುದು. ನಿರುದ್ಯೋಗ ಯುವಕ, ಯುವತಿಯರಿಗೆ ಸಣ್ಣ ಉದ್ಯಮದಿಂದ ದೊಡ್ಡ ಉದ್ಯಮ ಮಾಡಲು ಸಹಕಾರ ನೀಡಲಾಗುವುದು. ಇದರೊಂದಿಗೆ  ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕಲ್ಪಿಸಿಕೊಡಲಾಗುವುದು.ಸ್ಥಳೀಯ ಯುವಕ,ಯವತಿಯರು ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಯೋಜನೆಯನ್ನು ತಿಳಿಸಿದರೆ ಸಹಕಾರ ಈ ಸಮಾವೇಶದಲ್ಲಿ ಪಡೆದುಕೊಳ್ಳಬಹುದು. ಜಿಲ್ಲಾ ವ್ಯಾಪ್ತಿಯಲ್ಲಿ ಅಷ್ಟೇನು ಕೈಗಾರಿಕೆಗಳಿಲ್ಲದ ಕಾರಣ ರಾಜ್ಯದ ಆದಾಯಕ್ಕೆ ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಶೇ. 2 ರಷ್ಟು ಮಾತ್ರ ಆದಾಯ ಬರುತ್ತಿದೆ. ಆದ್ದರಿಂದ, ಜಿಲ್ಲಾ ಕೇಂದ್ರದಲ್ಲಿರುವ ಮಾನವ ಸಂಪನ್ಮೂಲವನ್ನು ಬಳಕೆ ಮಾಡಿಕೊಂಡು ತಮ್ಮದೇ ಉದ್ಯೋಗವನ್ನು ಸೃಷ್ಟಿಸಿಕೊಳ್ಳಲು ಇದೊಂದು ಸದಾವಕಾಶ.ಆಹಾರ ಉತ್ಪಾದನೆ, ಆಟೋ ಮೊಬೈಲ್, ಹೋಟೆಲ್, ಕೆಮಿಕಲ್, ಹೌಸಿಂಗ್ ಪ್ರಾಜೆಕ್ಟ್ ಇಂತಹ ಅನೇಕ ಉದ್ಯೋಗದಲ್ಲಿ ಆಸಕ್ತಿ ಹೊಂದಿರುವವರಿಗೆ ಅವಕಾಶ ಕಲ್ಪಿಸಲಾಗಿದೆ. ಎಂಬಿಎ, ಮೇಕಾನಿಕಲ್ ಮಾಡಿರುವವರು ಹಾಗೂ ಇತರರು ಸಹ ತಮ್ಮ ಕ್ಷೇತ್ರದ ಯೋಜನೆಯ  ಕನಸನ್ನು ನನಸಾಗಿಸಿಕೊಳ್ಳಬಹುದು. ಜಿಲ್ಲೆಯಲ್ಲಿ 1 ಲಕ್ಷ ಉದ್ಯೋಗಿ ವಿದ್ಯಾವಂತರಿದ್ದಾರೆ ಆದರೆ, ಸ್ವಂತ ಉದ್ಯೋಗ ಮಾಡಲು ಮುಂದಾಗುತ್ತಿಲ್ಲ.

 

ಮೈಸೂರು ವಿಭಾಗ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಮೈಸೂರಿನ ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಬೆಳಿಗ್ಗೆ 10ಕ್ಕೆ ರಾಜ್ಯದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಸಮಾವೇಶವನ್ನು ಉದ್ಘಾಟಿಸುವರು.ಕೈಗಾರಿಕಾ ಸಚಿವ ಮುರುಗೇಶ್ ನೀರಾಣಿ, ಎ.ರಾಮದಾಸ್ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಜಿಲ್ಲೆಯ ಯುವಕ, ಯುವತಿಯರು ಉಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಜಂಟಿ ನಿರ್ದೇಶಕ ಸಿದ್ದಪ್ಪ, ಯೋಜನಾ ಸಮಿತಿ ಅಧ್ಯಕ್ಷ ಜಯಂತ್, ಪ್ರಧಾನ ಕಾರ್ಯದರ್ಶಿ ಸುರೇಶ್ ಜೈನ್ ಹಾಜರಿದ್ದರು.ಸಿಎಂ ಜಿಲ್ಲೆಗೆ ಇಂದು

ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ ಅವರು ಏಪ್ರಿಲ್, 27 ಹಾಗೂ 28 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಏಪ್ರಿಲ್, 27ರಂದು ಮಧ್ಯಾಹ್ನ 3.15 ಗಂಟೆಗೆ ಕೊಳ್ಳೇಗಾಲದ ಎಂ.ಜಿ.ಎಸ್. ಹೆಲಿಪ್ಯಾಡ್‌ಗೆ  ಆಗಮಿಸಲಿರುವ ಮುಖ್ಯಮಂತ್ರಿಯವರು 3.30ಕ್ಕೆ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ರಸ್ತೆ ಮೂಲಕ ಭೇಟಿ ನೀಡುವರು.ಸಂಜೆ 6 ಗಂಟೆಗೆ ಮಲೆ ಮಹದೇಶ್ವರ ಬೆಟ್ಟದ ಅತಿಥಿ ಗೃಹಕ್ಕೆ ಆಗಮಿಸುವರು. 6.30 ಗಂಟೆಗೆ ಜಿಲ್ಲೆಯ ಬರ ಪರಿಸ್ಥಿತಿ ಮತ್ತು ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಶಾಸಕರು, ಸಂಸತ್ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಅಂದು ರಾತ್ರಿ 8 ಗಂಟೆಗೆ ಮಲೆ ಮಹದೇಶ್ವರ ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ ನಡೆಸಲಿರುವರು.ಏಪ್ರಿಲ್, 28 ರಂದು ಬೆಳಿಗ್ಗೆ 6 ಗಂಟೆಗೆ  ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಬೆಳಿಗ್ಗೆ 8 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯ ಅಧಿಕಾರಿ ಡಾ. ಕೆ. ಎ ಅಪ್ಪಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.