ಮೈಕಲ್‌ಗೆ ಪ್ರಶಸ್ತಿ `ಡಬಲ್'

7
ಬೆಳಗಾವಿ ಐಟಿಎಫ್ ಟೂರ್ನಿ

ಮೈಕಲ್‌ಗೆ ಪ್ರಶಸ್ತಿ `ಡಬಲ್'

Published:
Updated:

ಬೆಳಗಾವಿ:  ಡಬಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಅಮೆರಿಕಾದ ಮೈಕಲ್ ಶಬಾಜ್ ಇಲ್ಲಿನ ವಿಟಿಯು ಟೆನಿಸ್ ಅಂಕಣದಲ್ಲಿ ಶನಿವಾರ ಮುಕ್ತಾಯವಾದ ಬೆಳಗಾವಿ ಓಪನ್ ಐಟಿಎಫ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಸಂಭ್ರಮ ಹೆಚ್ಚಿಸಿಕೊಂಡರು. ಉತ್ತಮ ಪ್ರದರ್ಶನದ ನಡುವೆಯೂ ಪ್ರಶಸ್ತಿ ಗೆಲ್ಲಲಾರದೆ ಜರ್ಮನಿಯ ಟಾರ್ಸ್ಟನ್ ವಿಟೊಸ್ಕಾ ನಿರಾಸೆ ಅನುಭವಿಸಿದರು.ಪಂದ್ಯದ ಮೊದಲ ಸೆಟ್‌ನಲ್ಲಿ ಎದುರಾಳಿಗೆ ಒಂದೂ ಅವಕಾಶ ಬಿಟ್ಟುಕೊಡದ ಆರನೇ ಶ್ರೇಯಾಂಕದ ಮೈಕಲ್ ಶಬಾಜ್ 6-0 ಅಂತರದಿಂದ ಸುಲಭವಾಗಿ ಸೆಟ್ ವಶಪಡಿಸಿಕೊಂಡರು. ಕೇವಲ 30 ನಿಮಿಷದಲ್ಲಿ ಈ ಸೆಟ್ ಅಂತ್ಯ ಕಂಡಿತು. ಆದರೆ ಎರಡನೇ ಸೆಟ್‌ನಲ್ಲಿ ವಿಟೊಸ್ಕಾ ತಿರುಗಿಬಿದ್ದರು. ತಮ್ಮ ಬ್ಯಾಕ್‌ಹ್ಯಾಂಡ್ ಹೊಡೆತಗಳಿಂದ ಎದುರಾಳಿಯನ್ನು ಕಂಗೆಡಿಸಲು ಯತ್ನಿಸಿದ ಅವರು 12ನೇ ಗೇಮ್‌ವರೆಗೂ ಮುಂದಿದ್ದರು. ಛಲ ಬಿಡದ ಮೈಕಲ್ ತಿರುಗಿಬಿದ್ದು ಪಂದ್ಯವನ್ನು ಟೈ-ಬ್ರೇಕ್‌ಗೆ ಕೊಂಡೊಯ್ದರು. ಆದಾಗ್ಯೂ ಟಾರ್ಸ್ಟನ್ ಯಶಸ್ಸು ಕಾಣಲಿಲ್ಲ. ಒಂದು ಗಂಟೆ 20 ನಿಮಿಷಗಳ ಹೋರಾಟದ ನಡುವೆಯೂ ಗೆಲುವು ಪಡೆಯಲು ವಿಫಲರಾಗಿ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡರು.ಈ ವರ್ಷ ತಮ್ಮ ಎರಡನೇ ಸಿಂಗಲ್ಸ್ ಪ್ರಶಸ್ತಿ ಜೊತೆಗೆ 1300 ಡಾಲರ್ ಅನ್ನು ಜೇಬಿಗೆ ಇಳಿಸಿಕೊಂಡ ಮೈಕಲ್ `ಆರೋಗ್ಯದ ಸಮಸ್ಯೆಯಿಂದಾಗಿ ಅಂಕಣದಿಂದ ಕೆಲವು ದಿನ ದೂರ ಉಳಿದಿದ್ದು, ಕರ್ನಾಟಕದಲ್ಲಿನ ಐಟಿಎಫ್ ಟೂರ್ನಿಗಳ ಮೂಲಕ ಆಟಕ್ಕೆ ಮರುಪ್ರವೇಶ ಮಾಡಿದ್ದೆ. ಮೂರು ವಾರಗಳ ಕಾಲ ಇಲ್ಲಿ ಉತ್ತಮ ಫಲಿತಾಂಶವೇ ದೊರೆತಿದೆ' ಎಂದು ಹರ್ಷ ವ್ಯಕ್ತಪಡಿಸಿದರು. ಮೈಕಲ್ ತಮ್ಮ ಜೊತೆಗಾರ ಅಮೃತ್ ನರಸಿಂಹನ್ ಜೊತೆಗೂಡಿ ಧಾರವಾಡ ಓಪನ್ ಡಬಲ್ಸ್ ವಿಭಾಗದ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು.`ಕರ್ನಾಟಕದಲ್ಲಿ ಮೂರು ವಾರಗಳ ಆಟ ವೃತ್ತಿ ಬದುಕಿನಲ್ಲಿ ಒಳ್ಳೆಯ ಅನುಭವ ನೀಡಿದೆ. ವಿಟಿಯು ಅಂಕಣ ಸಹ ಉತ್ತಮವಾಗಿದೆ. ಭವಿಷ್ಯದಲ್ಲಿ ಇಲ್ಲಿ ಮತ್ತೆ ಆಡಲು ಬರುತ್ತೇನೆ' ಎಂದು ವಿಟೊಸ್ಕಾ ಭಾವುಕರಾಗಿ ನುಡಿದರು.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್. ಮಹೇಶಪ್ಪ ವಿಜೇತರಿಗೆ ಟ್ರೋಫಿ ವಿತರಿಸಿದರು. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಉಪಾಧ್ಯಕ್ಷ ಎಂ. ರಾಧಾಕೃಷ್ಣ ಹಾಗೂ ಕಾರ್ಯದರ್ಶಿ ಸುಂದರ್‌ರಾಜ್ ಚೆಕ್ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry