ಮೈಕ್ರೊಸಾಫ್ಟ್ ತೆಕ್ಕೆಗೆ ನೋಕಿಯಾ

7

ಮೈಕ್ರೊಸಾಫ್ಟ್ ತೆಕ್ಕೆಗೆ ನೋಕಿಯಾ

Published:
Updated:
ಮೈಕ್ರೊಸಾಫ್ಟ್ ತೆಕ್ಕೆಗೆ ನೋಕಿಯಾ

ಮುಂಬೈ (ಪಿಟಿಐ): ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪ್ಯೂಟರ್ ಸಾಫ್ಟ್‌ವೇರ್ ಕಂಪೆನಿ ಮೈಕ್ರೊಸಾಫ್ಟ್, ಫಿನ್ಲೆಂಡ್ ಮೂಲದ ದೂರಸಂಪರ್ಕ ಉಪಕರಣಗಳ ತಯಾರಿಕಾ ಕಂಪೆನಿ ನೋಕಿಯಾದ  ಮೊಬೈಲ್ ಹ್ಯಾಂಡ್‌ಸೆಟ್ ವಹಿವಾಟು ವಿಭಾಗವನ್ನು ಸುಮಾರು ರೂ47,200 ಕೋಟಿಗೆ (717 ಕೋಟಿ ಡಾಲರ್) ಸ್ವಾಧೀನಪಡಿಸಿಕೊಂಡಿದೆ.ಮಂಗಳವಾರ ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. `ಸ್ಮಾರ್ಟ್‌ಫೋನ್ ಮಾರುಕಟ್ಟೆ ವಿಸ್ತರಣೆ ಉದ್ದೇಶದಿಂದ ನೋಕಿಯಾದ ಹ್ಯಾಂಡ್‌ಸೆಟ್ ವಿಭಾಗ ಸ್ವಾಧೀನಪಡಿಸಿಕೊಳ್ಳಲಾಗಿದೆ' ಎಂದು ಮೈಕ್ರೊಸಾಫ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.  ಈ ಒಪ್ಪಂದಕ್ಕೆ ನೋಕಿಯಾದ ಷೇರುದಾರರು ಮತ್ತು ನಿಯಂತ್ರಣ ಸಂಸ್ಥೆಗಳು ಒಪ್ಪಿಗೆ ಸೂಚಿಸಬೇಕಿದ್ದು, 2014ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.`2011ರ ಜುಲೈನಲ್ಲಿ ನೋಕಿಯಾ ಮೈಕ್ರೊಸಾಫ್ಟ್ ಜತೆಗೆ ಪಾಲುದಾರಿಕೆ ಪ್ರಕಟಿಸಿತ್ತು. ನೋಕಿಯಾದ `ಲುಮಿಯಾ' ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ವಿಂಡೋಸ್ ಕಾರ್ಯನಿರ್ವಹಣಾ ತಂತ್ರಾಂಶ ಬಳಸಲು ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಷೇರುದಾರರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ಪಾಲುದಾರಿಕೆಯೇ ಈಗಿನ ಸ್ವಾಧೀನಕ್ಕೆ ಪ್ರಮುಖ ಕಾರಣ' ಎಂದು ಮೈಕ್ರೊಸಾಫ್ಟ್‌ನ `ಸಿಇಒ' ಸ್ಟೀವ್ ಬಲ್ಮರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.32 ಸಾವಿರ ಉದ್ಯೋಗಿಗಳು

ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ನೋಕಿಯಾ ಹ್ಯಾಂಡ್‌ಸೆಟ್ ವಿಭಾಗದಲ್ಲಿರುವ 32 ಸಾವಿರ ಉದ್ಯೋಗಿಗಳು ಮೈಕ್ರೊಸಾಫ್ಟ್ ಸೇರಲಿದ್ದಾರೆ. ನೋಕಿಯಾದ ಮಧ್ಯಂತರ `ಸಿಇಒ' ಆಗಿ ಟಿಮೊ ನೇಮಕಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry