ಮೈತ್ರಿ ಬಗ್ಗೆ ಯಾರೂ ಪ್ರಾಮಾಣಿಕರಲ್ಲ...

7

ಮೈತ್ರಿ ಬಗ್ಗೆ ಯಾರೂ ಪ್ರಾಮಾಣಿಕರಲ್ಲ...

Published:
Updated:
ಮೈತ್ರಿ ಬಗ್ಗೆ ಯಾರೂ ಪ್ರಾಮಾಣಿಕರಲ್ಲ...

ಆಗ್ರಾ:  `ಕೋಮುವಾದಿ ಶಕ್ತಿಗಳನ್ನು ಹೊರಗಿಡಲು ಈ ಮೈತ್ರಿ ಅನಿವಾರ್ಯವಾಗಿತ್ತು~ ಇಲ್ಲವೇ `ಕಾಂಗ್ರೆಸೇತರ ಶಕ್ತಿಗಳೆಲ್ಲ ಒಂದಾಗುವುದು ಈಗಿನ ರಾಜಕೀಯ ಅನಿವಾರ್ಯತೆಯಾಗಿದೆ~-ಎಂಬ ಆಣಿಮುತ್ತುಗಳು  ಚುನಾವಣಾ ಫಲಿತಾಂಶದ ಮರುದಿನ ಉತ್ತರಪ್ರದೇಶದ ರಾಜಕಾರಣಿಗಳ ಬಾಯಿಗಳಿಂದ ಉದುರಿದರೆ ಯಾರಿಗೂ ಅಚ್ಚರಿಯಾಗಲಾರದು.

 

ಈ ರಾಜ್ಯದ 275 ಕ್ಷೇತ್ರಗಳ ಮತದಾರರ ಆಯ್ಕೆ ಮತಪೆಟ್ಟಿಗೆಗಳಲ್ಲಿ ಮತ್ತು 128 ಕ್ಷೇತ್ರಗಳ ಮತದಾರರ ಆಯ್ಕೆ ಅವರವರ ಮನಸ್ಸಲ್ಲಿ ಭದ್ರವಾಗಿದೆ. ಹೆಚ್ಚುಕಡಿಮೆ ಅದು `ತ್ರಿಶಂಕು ವಿಧಾನಸಭೆ~ಯ ಸೂಚನೆಯನ್ನೇ ನೀಡುತ್ತಿದೆ. ಅದರಲ್ಲಿ ಹೆಚ್ಚಿನ ವ್ಯತ್ಯಾಸವಾಗಲಾರದು. ಈಗ ಎಲ್ಲರ ಕುತೂಹಲದ ಕಣ್ಣು ಚುನಾವಣೋತ್ತರ ರಾಜಕೀಯದ ಜಂಗಿಕುಸ್ತಿಯ ಮೇಲೆ ನೆಟ್ಟಿದೆ. ಚುನಾವಣೆ ಕಾಲದಲ್ಲಿ ದೊಡ್ಡ ಅಲೆ ಎದ್ದಾಗ ಯಾವುದಾದರೂ ಒಂದು ಪಕ್ಷ ಬಹುಮತ ಗಳಿಸುವುದು ಸಾಮಾನ್ಯ ವಿದ್ಯಮಾನ. 2007ರಲ್ಲಿ ಈ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ ಇದಕ್ಕೆ ಉತ್ತಮ ಉದಾಹರಣೆ. ಇನ್ನೊಂದು ಉದಾಹರಣೆ ಬಿಹಾರ.ಬಹಳ ಮಂದಿ ರಾಜಕೀಯ ಪಂಡಿತರು ಇಂತಹ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಆದರೆ ಇಲ್ಲಿ ಈ ನಿಯಮ ನಿಜವಾಗುವ ಸಾಧ್ಯತೆ ಕಡಿಮೆ.ಉತ್ತರಪ್ರದೇಶದಲ್ಲಿ ಗುಪ್ತಗಾಮಿನಿಯಾಗಿ ಬದಲಾವಣೆಯ ಪರವಾಗಿರುವ ಅಲೆ ಇದ್ದರೂ ಅದರೊಳಗೆ  ಜಾತಿ ಸಮೀಕರಣದ ಪಲ್ಲಟವೂ ಸೇರಿಕೊಂಡಿರುವುದನ್ನು ಮರೆಯುವಂತಿಲ್ಲ. ಈ ರಾಜ್ಯದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದ ದಲಿತ, ಮುಸ್ಲಿಂ, ಹಿಂದುಳಿದ ಜಾತಿ ಮತ್ತು ಬ್ರಾಹ್ಮಣ ಮತಗಳು ಈ ಬಾರಿ ಸ್ಥಿತ್ಯಂತರಗೊಳಗಾಗಲಿರುವುದರಿಂದ ಹಂಚಿಹೋಗುವ ಮತಗಳು ಮತ್ತೆ `ತ್ರಿಶಂಕು ವಿಧಾನಸಭೆ~ಯನ್ನೇ ಸೃಷ್ಟಿಸಬಹುದು.ಅಂತಹ ಸ್ಥಿತಿಯಲ್ಲಿ ಸಮಾಜವಾದಿ ಪಕ್ಷ-ಕಾಂಗ್ರೆಸ್ ಇಲ್ಲವೇ ಬಿಎಸ್‌ಪಿ-ಬಿಜೆಪಿ ಮೈತ್ರಿಕೂಟ ಅನಿವಾರ್ಯ. ಹತ್ತುದಿನಗಳ ಹಿಂದೆ ಮುಲಾಯಂಸಿಂಗ್ ಇಂತಹ ಮೈತ್ರಿಯ ಸೂಚನೆಯನ್ನು ನೀಡಿ, ನಂತರ ಹಿಂದೆಗೆದುಕೊಂಡಿದ್ದನ್ನು ಬಿಟ್ಟರೆ ಯಾವ ರಾಜಕೀಯ ಪಕ್ಷವೂ ಬಹಿರಂಗವಾಗಿ ಈ ಸಾಧ್ಯತೆ ಬಗ್ಗೆ ಚರ್ಚೆ ನಡೆಸುತ್ತಿಲ್ಲ.

 

ಎಸ್‌ಪಿ ಮತ್ತು ಕಾಂಗ್ರೆಸ್, ಬಿಎಸ್‌ಪಿ ಮತ್ತು ಬಿಜೆಪಿ ನಾಯಕರು ಪರಸ್ಪರ ಬೆಂಕಿ ಉಗುಳುತ್ತಿರುವುದನ್ನು ಕೇಳಿದರೆ ಈ ಪಕ್ಷಗಳು ಜೀವಮಾನದಲ್ಲಿ ಎಂದೆಂದೂ ಮೈತ್ರಿಮಾಡಿಕೊಳ್ಳಲಾರರು ಎಂದು ಅನಿಸಿಬಿಡಬಹುದು.

 

ಆದರೆ ಬೀದಿಯಲ್ಲಿ ಜನ ಮಾತ್ರ ಈ ಎರಡರಲ್ಲಿ ಒಂದು ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂದು ಬಾಜಿ ಕಟ್ಟುತ್ತಿದ್ದಾರೆ. ಇವರ ಜತೆ ಸೇರಿಕೊಳ್ಳುವ ರಾಜಕಾರಣಿಗಳು ಕೂಡಾ ಖಾಸಗಿಯಾಗಿ ಈ `ಜನಾಭಿಪ್ರಾಯ~ಕ್ಕೆ ದನಿಗೂಡಿಸುತ್ತಾರೆ. ಆದರೆ ಬಹಿರಂಗವಾಗಿ ಮೈತ್ರಿ ಇಲ್ಲವೇ ಇಲ್ಲ ಎಂದು ಆಣೆಮಾಡುತ್ತಾರೆ.ಈ ರೀತಿ ಆಣೆ-ಪ್ರಮಾಣವನ್ನು ಮಾಡುತ್ತಿರುವವರು ಮತ್ತು ಅದನ್ನು ಕೇಳುತ್ತಿರುವವರು ಕೇಂದ್ರದ ಯುಪಿಎ ಸರ್ಕಾರಕ್ಕೆ ಬಿಎಸ್‌ಪಿ ಮತ್ತು ಎಸ್‌ಪಿ ಈಗಲೂ ಬೆಂಬಲ ನೀಡುತ್ತಿದೆ ಎನ್ನುವುದನ್ನು ಮರೆತಿದ್ದಾರೆ. ಭ್ರಷ್ಟಾಚಾರದ ಆರೋಪಗಳ ಬಗ್ಗೆ  ಮಾಯಾವತಿ ಮತ್ತು ಮುಲಾಯಂಸಿಂಗ್ ಯಾದವ್ ಬಗ್ಗೆ ಸಿಬಿಐ ನಡೆಸುತ್ತಿರುವ ತನಿಖೆ ಕುಂಟುತ್ತಾ ಸಾಗಲು ಕಾಂಗ್ರೆಸ್ ಹಸ್ತಕ್ಷೇಪ ಇಲ್ಲದೆ ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಯಾರು ಕೇಳುತ್ತಿಲ್ಲ. ಉತ್ತರಪ್ರದೇಶಕ್ಕೆ ಹೊರಡುವ ಮೊದಲು ಮಾತಿಗೆ ಸಿಕ್ಕ ಸೋನಿಯಾಗಾಂಧಿಯವರ ಸಮೀಪವರ್ತಿಗಳಾಗಿರುವ ಎಐಸಿಸಿ ಸದಸ್ಯರೊಬ್ಬರು `ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 60-70 ಸ್ಥಾನಗಳು ಬರಬಹುದು. ನಂತರ ಎಸ್‌ಪಿ ಜತೆ ಮೈತ್ರಿ ಮಾಡಿಕೊಳ್ಳಬಹುದು~ ಎಂದು ಹೇಳಿದ್ದರು. ಎರಡು ದಿನಗಳ ಹಿಂದೆ ಅವರನ್ನು ಸಂಪರ್ಕಿಸಿದಾಗ ಅವರ ನಿರೀಕ್ಷೆಯ ಬಲ ನೂರು ಸ್ಥಾನಗಳನ್ನು ದಾಟಿತ್ತು.ಆದರೆ ಎಸ್‌ಪಿ ಜತೆ ಮೈತ್ರಿಯ ಅಭಿಪ್ರಾಯ ಮಾತ್ರ ಬದಲಾಗಿರಲಿಲ್ಲ. ಮತದಾನ ಪ್ರಾರಂಭವಾಗುವ ಮೊದಲು `ಬಿಎಸ್‌ಪಿ ಬಿಜೆಪಿ ಫ್ರೆಂಡ್‌ಷಿಪ್~ ಎಂಬ ಮೇಲ್ ಐಡಿಯಿಂದ ಲಖನೌದ ಪತ್ರಕರ್ತರಿಗೆಲ್ಲ ಒಂದು ಪತ್ರ ಬಂದಿತ್ತು. ಅದರಲ್ಲಿ ಕಳೆದ ಜೂನ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಬಂದಿದ್ದ ಆ ಪಕ್ಷದ ನಾಯಕರ ಹೋಟೆಲ್ ಬಿಲ್‌ಗಳನ್ನು ಬಿಎಸ್‌ಪಿ ನಾಯಕರು ಪಾವತಿಸಿದ್ದ ವಿವರಗಳಿದ್ದವು. ಇದು ಈ ಪಕ್ಷಗಳ ಒಳಒಪ್ಪಂದದ ಸಣ್ಣ ಉದಾಹರಣೆಗಳು ಮಾತ್ರ.ಇಂತಹ ಮೈತ್ರಿಯನ್ನು ಚುನಾವಣಾ ಪೂರ್ವದಲ್ಲಿ ಮಾಡಿದರೆ ಅದರ ಪಾವಿತ್ರ್ಯವೂ ಹಾಳಾಗುವುದಿಲ್ಲ ಮತ್ತು ಮತಗಳು ಹಂಚಿಹೋಗದೆ ಮೈತ್ರಿಕೂಟ ಹೆಚ್ಚಿನ ಸ್ಥಾನ ಗಳಿಸಬಹುದಲ್ಲವೇ ಎಂಬ ಪ್ರಶ್ನೆ ಸಹಜ. ಆದರೆ ಇದಕ್ಕೆ ಮೊದಲ ಅಡ್ಡಿ ರಾಜಕೀಯ ನಾಯಕರ ನಡುವಿನ ವ್ಯಕ್ತಿಪ್ರತಿಷ್ಠೆಯ ಕಾದಾಟ, ಎರಡನೆಯದ್ದು ಜಾತಿ-ಧರ್ಮಗಳ ಮತಗಳಲ್ಲಿ ಆಗಲಿರುವ ಏರುಪೇರು.

 

ಬಿಎಸ್‌ಪಿಗೆ ಈ ಚುನಾವಣೆಯಲ್ಲಿ ಹಿನ್ನಡೆ ಉಂಟಾದರೆ ಅದಕ್ಕೆ ಒಂದು ಕಾರಣ ಚುನಾವಣೋತ್ತರ ರಾಜಕಾರಣದಲ್ಲಿ ಆ ಪಕ್ಷ ಬಿಜೆಪಿ ಜತೆ ಸೇರಿಕೊಳ್ಳಬಹುದು ಎಂಬ ಊಹಾಪೋಹ. ಇದರಿಂದಾಗಿ ಆ ಪಕ್ಷದ ಜತೆ ಇದ್ದ ಮುಸ್ಲಿಂ ಮತದಾರರು ತಳಮಳಕ್ಕಿಡಾಗಿದ್ದಾರೆ.

 

ಅದೇ ರೀತಿ ಬ್ರಾಹ್ಮಣರು ತಮ್ಮ ಮೂಲ ಪಕ್ಷವಾದ ಕಾಂಗ್ರೆಸ್‌ಗೆ ಮರಳುತ್ತಿದ್ದಾರೆ ಎಂಬ ಸೂಚನೆಗಳಿದ್ದರೂ ಎಸ್‌ಪಿ ಜತೆಗೆ ಕಾಂಗ್ರೆಸ್ ಮೈತ್ರಿಯ ಸಾಧ್ಯತೆ ಅವರನ್ನು ಹಿಂಜರಿಯುವಂತೆ ಮಾಡಿದೆ. ಬಿಎಸ್‌ಪಿ ಬಗ್ಗೆ ಅಸಂತುಷ್ಠರಾಗಿರುವ ಜಾಟವೇತರ ದಲಿತರು ಮತ್ತು ಯಾದವೇತರ ಹಿಂದುಳಿದ ಜಾತಿಗಳ ಮತದಾರರಿಗೆ ಕೂಡಾ ಕಾಂಗ್ರೆಸ್ ಬಗ್ಗೆ ಒಲವಿದೆ, ಆದರೆ ಕಾಂಗ್ರೆಸ್-ಎಸ್‌ಪಿ ಮೈತ್ರಿ ಬಗ್ಗೆ ಭಯ ಇದೆ.ಇದನ್ನು ಉಳಿದೆಲ್ಲ ಪಕ್ಷಗಳಿಗಿಂತ ಮೊದಲು ಗ್ರಹಿಸಿದ್ದು ಕಾಂಗ್ರೆಸ್ ಪಕ್ಷ. ಐವತ್ತರ ಆಜುಬಾಜಿನ ಸ್ಥಾನಗಳ ನಿರೀಕ್ಷೆಯಲ್ಲಿದ್ದ ಆ ಪಕ್ಷದಲ್ಲಿ ರಾಹುಲ್‌ಗಾಂಧಿಯ ಆಕ್ರಮಣಕಾರಿ ಪ್ರಚಾರ ಜನರನ್ನು ಸೆಳೆಯುತ್ತಿರುವುದನ್ನು ಕಂಡ ನಂತರ ತಾವೇ ಮೊದಲ ಸ್ಥಾನಕ್ಕೆ ಬರಬಹುದು ಎಂಬ ಆಸೆ ಹುಟ್ಟಿಕೊಂಡಿದೆ.ಪ್ರಾರಂಭದಿಂದಲೂ ರಾಹುಲ್‌ಗಾಂಧಿ ಮೈತ್ರಿಗೆ ವಿರೋಧವಾಗಿದ್ದರು ಎನ್ನುತ್ತಾರೆ ಕಾಂಗ್ರೆಸ್ ನಾಯಕರು. ಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ ಮೈತ್ರಿಯ ಮಾತುಕತೆಯಲ್ಲಿ ಎಸ್‌ಪಿ ಮಾಡಿದ ಅವಮಾನದಿಂದ ಸಿಟ್ಟಾದ ರಾಹುಲ್ ಸ್ವತಂತ್ರವಾಗಿ ಚುನಾವಣೆ ಎದುರಿಸುವ ನಿರ್ಧಾರ ಕೈಗೊಂಡಿದ್ದರು.

 

ಆ ನಿರ್ಧಾರಕ್ಕೆ ಸಿಕ್ಕ ಜನಬೆಂಬಲ ರಾಹುಲ್ ಅವರನ್ನು ಇನ್ನಷ್ಟು ಮೈತ್ರಿ ವಿರೋಧಿಯನ್ನಾಗಿ ಮಾಡಿದೆ. ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿರುವ ಆರ್‌ಎಲ್‌ಡಿ ಜತೆ ಇತರ ಸಣ್ಣಪಕ್ಷಗಳು ಹಾಗೂ ಪಕ್ಷೇತರರ ಬೆಂಬಲ ಪಡೆದು ಸರ್ಕಾರ ರಚಿಸಲು ಸಾಧ್ಯವಾದರೆ ಮಾತ್ರ ಅಧಿಕಾರಕ್ಕೆ ಬರಲು ಪ್ರಯತ್ನ ಪಡಬೇಕು ಇಲ್ಲದೆ ಇದ್ದರೆ ವಿರೋಧಪಕ್ಷದಲ್ಲಿ ಕೂರಬೇಕು ಎನ್ನುವ ಅಭಿಪ್ರಾಯ ರಾಹುಲ್‌ಗಾಂಧಿಯವರಲ್ಲಿದೆ ಎನ್ನುತ್ತಿದೆ ಕಾಂಗ್ರೆಸ್ ಮೂಲಗಳು.ಆದರೆ ಉತ್ತರಪ್ರದೇಶದ ಮೈತ್ರಿ ರಾಜಕಾರಣದ ಇತಿಹಾಸವನ್ನು ನೋಡಿದರೆ ಇಲ್ಲಿ ಎಲ್ಲವೂ ಸಾಧ್ಯ ಎಂದು ಅನಿಸದೆ ಇರದು. ಇಲ್ಲಿ ಮಾಯಾವತಿ 1995,1997 ಮತ್ತು 2002ರಲ್ಲಿ ಬಿಜೆಪಿ ಬೆಂಬಲದೊಡನೆ ಮುಖ್ಯಮಂತ್ರಿಯಾಗಿದ್ದರು. 1993ರಲ್ಲಿ ಎಸ್‌ಪಿ ಜತೆ ಮತ್ತು 1996ರಲ್ಲಿ ಕಾಂಗ್ರೆಸ್ ಜತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಬಿಎಸ್‌ಪಿ ವಿಧಾನಸಭಾ ಚುನಾವಣೆ ಎದುರಿಸಿತ್ತು.

 

1989ರಲ್ಲಿ ಮುಲಾಯಂ ಸಿಂಗ್ ಯಾದವ್ ಬಿಜೆಪಿ ಬೆಂಬಲದ ಬಲದಿಂದಲೇ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿ ಬೆಂಬಲ ವಾಪಸು ಪಡೆದಾಗ ಕಾಂಗ್ರೆಸ್ ಬೆಂಬಲದಿಂದ ಅವರು ಮುಂದುವರಿದಿದ್ದರು. 2004ರಲ್ಲಿ  ವಿಧಾನಸಭಾ ಅಧ್ಯಕ್ಷರಾಗಿದ್ದ ಬಿಜೆಪಿಯ ಕೈಲಾಸನಾಥ ತ್ರಿಪಾಠಿ ಅವರು ಬಿಎಸ್‌ಪಿ ಪಕ್ಷೇತರರ ಬಗ್ಗೆ ಮೌನವಾಗಿದ್ದು ಮಾಡಿದ್ದ `ಸಹಾಯ~ದಿಂದಾಗಿ  ಮುಲಾಯಂಸಿಂಗ್ ಸರ್ಕಾರ ರಚಿಸಿದ್ದರು. ಆದ್ದರಿಂದ ಸೈದ್ದಾಂತಿಕ ಕಾರಣಗಳಿಂದಾಗಿ ಕಾಂಗ್ರೆಸ್-ಬಿಜೆಪಿ ಮತ್ತು ವೈಯಕ್ತಿಕ ಪ್ರತಿಷ್ಠೆಯ ಸಂಘರ್ಷದಿಂದಾಗಿ ಬಿಎಸ್‌ಪಿ-ಎಸ್‌ಪಿ ಮೈತ್ರಿಯನ್ನು ಹೊರತುಪಡಿಸಿ ಇಲ್ಲಿ ಎಲ್ಲವೂ ಸಾಧ್ಯ.ಎಸ್‌ಪಿ-ಬಿಜೆಪಿ - ಕೇಂದ್ರ ಸರ್ಕಾರದ  `ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ಕೇಂದ್ರ~ ಸ್ಥಾಪನೆಯ ಪ್ರಸ್ತಾವದ ವಿರುದ್ದ ನವೀನ್ ಪಟ್ನಾಯಕ್ ಅವರಿಂದ ಹಿಡಿದು ಮಮತಾ ಬ್ಯಾನರ್ಜಿವರೆಗೆ ಎಲ್ಲರೂ ಒಟ್ಟಾಗುತ್ತಿರುವುದನ್ನು ನೋಡಿದರೆ ಕೊನೆಯದಾಗಿ ಆ ಮೈತ್ರಿಯನ್ನೂ ತಳ್ಳಿಹಾಕುವಂತಿಲ್ಲ. ಆದ್ದರಿಂದಲೇ ಚುನಾವಣಾ ಫಲಿತಾಂಶದಿಂದಲೇ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಾರದು, ಅದಕ್ಕಾಗಿ ಚುನಾವಣೋತ್ತರ ರಾಜಕೀಯಕ್ಕಾಗಿ ಕಾಯಬೇಕೇನೋ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry