ಗುರುವಾರ , ಆಗಸ್ಟ್ 13, 2020
27 °C

ಮೈತ್ರಿ ಬಲದ ಜೊತೆ ಬಣ ಬಲದ ಸ್ಪರ್ಧೆ !

ಕೆ.ನರಸಿಂಹಮೂರ್ತಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈತ್ರಿ ಬಲದ ಜೊತೆ ಬಣ ಬಲದ ಸ್ಪರ್ಧೆ !

ಕೋಲಾರ: ಜಿಲ್ಲಾ ಪಂಚಾಯಿತಿಯ ಐದು ಸ್ಥಾಯಿ ಸಮಿತಿಗಳಿಗೆ ಬುಧವಾರ ಚುನಾವಣೆ ನಡೆಯಲಿದ್ದು, ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಬಿಜೆಪಿ ಮತ್ತು ಶಾಸಕ ವರ್ತೂರು ಪ್ರಕಾಶರ ಬಣ ಹೇಗೆ ಎದುರಿಸಲಿದೆ ಎಂಬುದು ಕುತೂಹಲ ಕಾರಿಯಾಗಿದೆ.

 

ಬಾಗಿಲು ಮುಚ್ಚಿದ ಕೋಣೆಯೊಳಗೆ (ಕ್ಲೋಸ್ಡ್ ಡೋರ್ ಪ್ರೊಸೀಡಿಂಗ್ಸ್) ನಡೆಯಲಿರುವ ಚುನಾವಣೆಗೆ ಈಗಾಗಲೇ ಪಕ್ಷಗಳು ಕೊನೇ ಕ್ಷಣದ ಸಕಲ ಸಿದ್ಧತೆ ನಡೆಸಿವೆ.ಜಿಲ್ಲಾ ಪಂಚಾಯಿತಿಯಲ್ಲಿ ಐದು ಸ್ಥಾಯಿ ಸಮಿತಿಗಳಿವೆ. ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸಮಿತಿ, ಕೃಷಿ ಮತ್ತು ಕೈಗಾರಿಕಾ ಸಮಿತಿ. ಸಾಮಾಜಿಕ ನ್ಯಾಯ ಸಮಿತಿ, ಸಾಮಾನ್ಯ ಸ್ಥಾಯಿ ಸಮಿತಿಗಳಿವೆ. ಹಣಕಾಸು ಸಮಿತಿಗೆ ಜಿ.ಪಂ. ಅಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ.ಸಾಮಾನ್ಯ ಸಮಿತಿಗೆ ಉಪಾಧ್ಯಕ್ಷರೇ ಅಧ್ಯಕ್ಷರು. ಉಳಿದ ಮೂರು ಸಮಿತಿಗಳಿಗೆ ಅಧ್ಯಕ್ಷರನ್ನು ಮತ್ತು ಎಲ್ಲ ಸಮಿತಿಗಳಿಗೆ ತಲಾ ಐವರು ಸದಸ್ಯರನ್ನು ಆಯ್ಕೆ ಮಾಡುವ ಸಲುವಾಗಿ ಚುನಾವಣೆ ನಡೆಯಲಿದೆ.ಒಪ್ಪಂದ: ಉಳಿದ ಮೂರು ಸಮಿತಿಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಎಂಬ ಕುರಿತು ಈಗಾಗಲೇ ಕಾಂಗ್ರೆಸ್-ಜೆಡಿಎಸ್ ನಡುವೆ ಒಪ್ಪಂದ ನಡೆದಿದೆ. ಎರಡೂ ಪಕ್ಷಕ್ಕೆ ಸೇರಿದ ಎಲ್ಲ ಜಿಪಂ ಸದಸ್ಯರೂ ಸೇರಿ ಕಳೆದ ಶನಿವಾರ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿದ್ದಾರೆ.ಕಾಂಗ್ರೆಸ್‌ನ ಎಂ.ಎಲ್.ಅನಿಲ್‌ಕುಮಾರ್, ಜನಘಟ್ಟ ವೆಂಕಟ ಮುನಿಯಪ್ಪ, ಜೆಡಿಎಸ್‌ನ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಅಲಂಗೂರು ಶ್ರೀನಿವಾಸ್, ಮಾಲೂರು ನಾಗರಾಜ್ ನೇತೃತ್ವದಲ್ಲಿ ಒಪ್ಪಂದ ಏರ್ಪಟ್ಟಿದೆ. ಮೂರು ಸ್ಥಾನಗಳ ಪೈಕಿ ಎರಡು ಸ್ಥಾನವನ್ನು ಕಾಂಗ್ರೆಸ್‌ಗೆ, ಒಂದು ಸ್ಥಾನವನ್ನು ಜೆಡಿಎಸ್‌ಗೆ ನೀಡಬೇಕೆಂಬುದು ಒಪ್ಪಂದದ ತಿರುಳು.ಜೆಡಿಎಸ್‌ಗೆ ಸೇರಿದ, ಜಿಪಂ ಉಪಾಧ್ಯಕ್ಷ ಸೋಮಶೇಖರ್ ಸಾಮಾನ್ಯ ಸಮಿತಿಗೆ ಅಧ್ಯಕ್ಷರಾಗಿರುವುದರಿಂದ, ಜೆಡಿಎಸ್‌ಗೆ ಒಂದು ಸ್ಥಾನ ನೀಡಿದರೆ, ಎರಡೂ ಪಕ್ಷಗಳಿಗೆ ತಲಾ ಎರಡು ಸ್ಥಾನ ದೊರಕಿದಂತಾಗುತ್ತದೆ ಎಂಬುದು ಒಪ್ಪಂದದ ಹಿಂದಿನ ಲೆಕ್ಕಾಚಾರ. ಇದು ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸಂಗತಿ. ಆದರೆ ಮೂರು ಸ್ಥಾನಗಳಿಗೆ ಬಿಜೆಪಿಯೂ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.ಸಾಧ್ಯತೆ?: ಜಿಲ್ಲಾ ಪಂಚಾಯಿತಿ 28 ಸದಸ್ಯರು, ಜಿಲ್ಲೆಯ ಆರು ಶಾಸಕರು, ಐದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಮೂವರು ವಿಧಾನ ಪರಿಷತ್ ಸದಸ್ಯರು (ಸ್ಥಳೀಯ ಮತದಾರರಲ್ಲದ ಕಾರಣ ನಸೀರ್ ಅಹ್ಮದ್ ಮತ್ತು ಎಸ್.ಆರ್.ಲೀಲಾ ಅವರಿಗೆ ಮತದಾನದ ಅವಕಾಶವಿಲ್ಲ) ಮತ್ತು ಒಬ್ಬ ಸಂಸದರು ಸೇರಿದಂತೆ 43 ಮತದಾರರಿದ್ದಾರೆ.28 ಸದಸ್ಯರ ಪೈಕಿ ಜೆಡಿಎಸ್‌ನ 11, ಕಾಂಗ್ರೆಸ್‌ನ 5, ಬಿಜೆಪಿಯ 7 ಮತ್ತು  ಐವರು ಪಕ್ಷೇತರರಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಯಲ್ಲಿ 16 ಸದಸ್ಯರಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ವಿ.ಆರ್.ಸುದರ್ಶನ್, ಸಂಸದ ಕೆ.ಎಚ್.ಮುನಿಯಪ್ಪ, ಮುಳಬಾಗಲು, ಶ್ರೀನಿವಾಸಪುರ ತಾ.ಪಂ. ಅಧ್ಯಕ್ಷರು, ಶಾಸಕ ರಾದ ಅಮರೇಶ್,  ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸೇರಿ 23 ಸದಸ್ಯ ಬಲ ಮೈತ್ರಿಯಲ್ಲಿದೆ.ಬಿಜೆಪಿಯಲ್ಲಿ: ಬಿಜೆಪಿಯ ಏಳು ಮತ್ತು ಬಿಜೆಪಿಗೆ ಬೆಂಬಲ ನೀಡಿರುವ ಶಾಸಕ ವರ್ತೂರು ಪ್ರಕಾಶರ ಬಣದ ಐವರು ಸೇರಿದರೆ 12 ಸದಸ್ಯರಾಗುತ್ತಾರೆ. ಶಾಸಕರಾದ ವರ್ತೂರು, ಎಸ್.ಎನ್.ಕೃಷ್ಣಯ್ಯಶೆಟ್ಟಿ, ವೈ.ಸಂಪಂಗಿ, ಕೋಲಾರ, ಮಾಲೂರು ಮತ್ತು ಬಂಗಾರಪೇಟೆ ತಾ.ಪಂ. ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಸೇರಿ ಆಡಳಿತಾರೂಢ ಬಿಜೆಪಿಗೆ 19 ಸದಸ್ಯ ಬಲವಿದೆ.

 

ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿರುವ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಟಸ್ಥ ನಿಲುವನ್ನು ತಳೆದಿದ್ದಾರೆ ಎನ್ನಲಾಗಿದೆ. ಬಿಜೆಪಿಗೆ ಹೋಲಿಸಿದರೆ ಒಟ್ಟಾರೆ 4 ಮತದಾರರನ್ನು ಹೆಚ್ಚುವರಿಯಾಗಿ ಹೊಂದಿರುವ ಕಾಂಗ್ರೆಸ್-ಜೆಡಿಎಸ್ ಮೂರು ಸ್ಥಾಯಿ ಸಮಿತಿಗಳಿಗೆ ತಮ್ಮವರನ್ನೇ ಅಧ್ಯಕ್ಷರನ್ನಾಗಿ ಮಾಡುವ ಅವಕಾಶಗಳು ದಟ್ಟವಾಗಿವೆ.ಈ ಸಾಧ್ಯತೆಗಳ ನಡುವೆ, ವೈ.ಎ.ನಾರಾಯಣ ಸ್ವಾಮಿಯವರನ್ನು ಸೆಳೆಯಲು ಕಾಂಗ್ರೆಸ್-ಜೆಡಿಎಸ್, ಬಿಜೆಪಿ-ವರ್ತೂರು ಬಣಗಳು ಪ್ರಯತ್ನಿಸುತ್ತಿವೆ. ಸಮಿತಿಗಳಿಗೆ ಅಧ್ಯಕ್ಷರು ಯಾರಾಗಬೇಕು ಎಂಬುದನ್ನು ಕಾಂಗ್ರೆಸ್-ಜೆಡಿಎಸ್ ಬುಧವಾರ ಬೆಳಿಗ್ಗೆಯೇ ನಿರ್ಧರಿಸಲಿವೆ. ಮೈತ್ರಿಬಲ ಮತ್ತು ಬಣ ಬಲಗಳ ಮುಖಾಮುಖಿಗೆ ವೇದಿಕೆ ಸಜ್ಜುಗೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.