ಮೈದುಂಬಿದ ನಿಡಶೇಸಿ ಕೆರೆ

7

ಮೈದುಂಬಿದ ನಿಡಶೇಸಿ ಕೆರೆ

Published:
Updated:

ಕುಷ್ಟಗಿ: ತಾಲ್ಲೂಕಿನ ಬಹುತೇಕ ಪ್ರದೇಶಗಳಲ್ಲಿ ಎರಡು ದಿನಗಳಿಂದ ಭಾರಿ ಮಳೆ ಸುರಿದಿದ್ದು, ಹಳ್ಳಗಳು ಉಕ್ಕಿ ಹರಿದರೆ, ಚೆಕ್‌ಡ್ಯಾಂ, ಕೃಷಿಹೊಂಡಗಳು ಒಡೆದು ಹೋಗಿವೆ. ಭಾನುವಾರ ರಾತ್ರಿ, ಸೋಮವಾರ ರಾತ್ರಿ ಅಧಿಕ ಮಳೆಯಾಗಿದೆ. ಎರಡು ತಿಂಗಳಿನಿಂದಲೂ ಮಳೆ ಇಲ್ಲದೆ ಕಂಗೆಟ್ಟಿದ್ದ ರೈತರಲ್ಲಿ ಈಗ ಸುರಿದಿರುವ ಮಳೆ ಸಂತಸ ಮೂಡಿಸಿದೆ.ಕೆರೆ ಭರ್ತಿ: ನಾಲ್ಕು ವರ್ಷಗಳಿಂದ ಹನಿ ನೀರಿಲ್ಲದೇ ಬಿರುಕು ಬಿಟ್ಟಿದ್ದ ಮದಲಗಟ್ಟಿ ಬಳಿ ಇರುವ ನಿಡಶೇಸಿ ಕೆರೆ ಮಂಗಳವಾರ ತುಂಬಿ ಹರಿದಿದೆ. ವಿಶಾಲ ಪ್ರದೇಶದಲ್ಲಿ ಹರಡಿದ್ದ ಜಲರಾಶಿ ಮತ್ತು ಕೋಡಿಯಿಂದ ಧುಮ್ಮಿಕ್ಕುತ್ತಿರುವ ಜಲಧಾರೆಯನ್ನು ಕಂಡು ಜನ ಖುಷಿಪಟ್ಟರು. ಸದರಿ ಹಳ್ಳದಿಂದ ಹರಿಯುತ್ತಿದ್ದ ಭಾರಿ ಪ್ರಮಾಣದ ನೀರಿನಿಂದ ಹಳ್ಳ ತುಂಬಿಹರಿಯುತ್ತಿತ್ತು.ನಿಡಶೇಸಿ ಹಳ್ಳಕ್ಕೆ ಪ್ರವಾಹ ಬಂದಿದ್ದರಿಂದ ಹನಮಸಾಗರ ಮತ್ತು ಇಳಕಲ್ ರಸ್ತೆಯಲ್ಲಿ ಬೆಳಿಗ್ಗೆ 10ಗಂಟೆವರೆಗೂ ಸಂಚಾರ ಸ್ಥಗಿತಗೊಂಡಿತ್ತು. ಅಲ್ಲದೇ ಬಳೂಟಗಿ ಗ್ರಾಮದ ಸೇತುವೆ ಅಪೂರ್ಣ ಸ್ಥಿತಿಯಲ್ಲಿದ್ದು, ಮಂಗಳವಾರ ಸಂಜೆವರೆಗೂ ಗ್ರಾಮ ನಡುಗಡ್ಡೆಯಾಗಿತ್ತು.ಕೊಚ್ಚಿದ ಡ್ಯಾಂ, ಸೇತುವೆ: ಕಳಪೆ ಕಾಮಗಾರಿಯಿಂದ ತಾಲ್ಲೂಕಿನ ಯಲಬುರ್ತಿ ಗ್ರಾಮದ ರಾಜ್ಯ ಹೆದ್ದಾರಿ ಮತ್ತು ಕೊರಡಕೇರಾ ರಸ್ತೆಗಳು ಸಂಪೂರ್ಣ ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿದೆ. ಹಿರೇಬನ್ನಿಗೋಳ ಗ್ರಾಮದಲ್ಲಿ ಅರ್ಧಕ್ಕೆ ನಿಂತಿದ್ದ ರೂ 40 ಲಕ್ಷ ವೆಚ್ಚದ ತಡೆಗೋಡೆ ಮತ್ತು ರೂ 20 ಲಕ್ಷದಲ್ಲಿ ನಿರ್ಮಿಸಲಾಗಿದ್ದ ಚೆಕ್‌ಡ್ಯಾಂ ಒಡೆದುಹೋಗಿವೆ ಎಂದು ಗ್ರಾಮಸ್ಥರು ತಿಳಿಸಿದರು.ಬೆಳೆ ಹಾನಿ: ಭಾರಿ ಮಳೆಯಿಂದ ವಿವಿಧ ಗ್ರಾಮಗಳಲ್ಲಿ ಬೆಳೆದು ನಿಂತಿದ್ದ ಸಜ್ಜೆ, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ ಮತ್ತು ತರಕಾರಿ ಬೆಳೆಗಳು ನೆಲಕಚ್ಚಿವೆ. ಹಿರೇಬನ್ನಿಗೋಳ ದಲ್ಲಿನ ಅನೇಕ ರೈತರ ಹತ್ತಿ ಬೆಳೆಯಲ್ಲಿ ನೀರು ಮಡುಗಟ್ಟಿದೆ.ಪ್ರಸ್ತಾವನೆ: ಮಳೆಯಿಂದ ವಿವಿಧ ಗ್ರಾಮಗಳಲ್ಲಿ ಹಾಳಾಗಿರುವ ಬೆಳೆ ಹಾನಿಯ ಅಂದಾಜು ಮಾಡಲು ಜಂಟಿ ಸರ್ವೆ ನಡೆಸುವಂತೆ ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗೆ ಸೂಚಿಸಲಾಗಿದ್ದು, ವರದಿ ಬಂದನಂತರ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ ಎಂದು ತಹಶೀಲ್ದಾರ್‌ ವೀರೇಶ ಬಿರಾದಾರ ‘ಪ್ರಜಾವಾಣಿ’ಗೆ ವಿವರಿಸಿದರು.ಕೆರೆ ಒಡೆದು ನೀರು ಪೋಲು

ಕುಷ್ಟಗಿ: ತಾಲ್ಲೂಕಿನ ನಿಡಶೇಸಿ ಕೆರೆಗೆ ಮಂಗಳವಾರ ಹೆಚ್ಚಿದ ನೀರಿನ ಹರಿದು ಬಂದು ತಡರಾತ್ರಿ ಕೆರೆ ಒಡೆದು ಅಪಾರ ನೀರು ನಷ್ಟವಾಗಿದೆ.ನೀರಾವರಿ ಇಲಾಖೆಯ ಅಧಿಕಾರಿಗಳು, ರೈತರು ಕೆರೆಗೆ ಬಿದ್ದಿರುವ ಕೋಡಿಯನ್ನು ಮುಚ್ಚಲು ಹರಸಾಹಸ ಮಾಡುತ್ತಿದ್ದರೂ ರಾತ್ರಿ ಸುರಿದ ಮಳೆ ದುರಸ್ತಿ ಕಾರ್ಯಕ್ಕೆ ಅಡ್ಡಿಯಾಯಿತು. ಈಗಾಗಲೇ ತುಂಬಿ ತುಳುಕುತ್ತಿರುವ ಕೆರೆ ಒಂದು ವೇಳೆ ಒಡೆದರೆ ಬನ್ನಟ್ಟಿ ಗ್ರಾಮಕ್ಕೆ ನೀರು ನುಗ್ಗಿ ತೊಂದರೆಯಾಗುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry