ಗುರುವಾರ , ಜೂನ್ 24, 2021
28 °C

ಮೈನವಿರೇಳಿಸಿದ ಗ್ರಾಮೀಣ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರೂರು: ಪಟ್ಟಣದ ಕನಕಶ್ರಿ ನೌಕರರ ಬಳಗ ಮತ್ತು ಸಾರ್ವಜನಿಕರ ಆಶ್ರಯದಲ್ಲಿ ಇದೇ ಪ್ರಥಮ ಬಾರಿಗೆ ನಡೆದ ಮರಳು ತುಂಬಿದ ಎತ್ತಿನ ಗಾಡಿಗಳ ಓಟದ ಸ್ಪರ್ಧೆಯಲ್ಲಿ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದ ಮಂಜು ಶ್ರಿರಾಂ ಹೂಡಿದ್ದ ಎತ್ತುಗಳು ವೇಗವಾಗಿ ಗುರಿ ಮುಟ್ಟಿ ಪ್ರಥಮ ಸ್ಥಾನ ಗಳಿಸಿದವು.ಬೀರೂರಿನ ಇತಿಹಾಸದಲ್ಲಿ ಇದೇ ಮೊದಲ ಬಾರಿ ಆಯೋಜಿಸಲಾಗಿದ್ದ ಸ್ಪರ್ಧೆಗೆ ಭಾನುವಾರ ನಿರೀಕ್ಷೆಗೂ ಮೀರಿ  ಸ್ಪರ್ಧಾಳುಗಳ ಪಾಲ್ಗೊಳ್ಳುವಿಕೆ ನೆರೆದಿದ್ದವರ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.ಸ್ಪರ್ಧೆಯಲ್ಲಿ ತರೀಕೆರೆ, ಕಡೂರು, ಅಜ್ಜಂಪುರ, ಚಿಕ್ಕಮಗಳೂರು, ಬೀರೂರು ಸುತ್ತಮುತ್ತಲ ಗ್ರಾಮಗಳೂ ಸೇರಿ ಅನೇಕ ಕಡೆಗಳಿಂದ ಬಂದ ನೂರಾ ಎಂಟು ಜತೆ ಎತ್ತುಗಳು ಓಟದಲ್ಲಿ ಪಾಲ್ಗೊಂಡವು.ಕೆಎಲ್‌ಕೆ ಮೈದಾನದಲ್ಲಿ ಸಿದ್ಧ ಪಡಿಸಿದ್ದ ನೂರಾ ಮೂವತ್ತು ಮೀ.ಉದ್ದದ ಓಟದ ಜಾಡನ್ನು ಸಾಕಷ್ಟು ಜೊತೆ ಎತ್ತುಗಳು ಪೈಪೋಟಿಯ ಮೇಲೆ ಓಡಿ ನೆರೆದಿದ್ದ ಸಹಸ್ರಾರು ಪ್ರೇಕ್ಷಕರಲ್ಲಿ ಫಲಿತಾಂಶದ ಬಗ್ಗೆ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾದವು.ಮೈಸೂರು ಜಿಲ್ಲೆ ಸಾಲಿಗ್ರಾಮದ ಮಂಜು ಶ್ರಿರಾಂ ಹೂಡಿದ್ದ ಎತ್ತುಗಳು ನೂರಾಮೂವತ್ತು ಮೀ.ದೂರವನ್ನು 13.53ಸೆಕೆಂಡ್‌ಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಗಳಿಸಿ ಇಪ್ಪತ್ತು ಸಾವಿರ ರೂ ಬಹುಮಾನವನ್ನು ತನ್ನದಾಗಿಸಿ ಕೊಂಡರೆ, ಅಜ್ಜಂಪುರದ ಜೈಕಿರಾಳಿ ಗವಿರಂಗಪ್ಪನವರ ಎತ್ತು ಗಳು 14.94ಸೆಕೆಂಡ್‌ಗಳಲ್ಲಿ ಕ್ರಮಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟು ಹತ್ತುಸಾವಿರ ರೂ ಬಹುಮಾನಕ್ಕೆ ಪಾತ್ರವಾಯಿತು.ಚಿಕ್ಕಮಗಳೂರಿನ ಉಮೇಶ್ ಅವರ ಎತ್ತಿನಜೋಡಿ 15.81 ಸೆಕೆಂಡ್‌ಗಳಲ್ಲಿ ದೂರ ಕ್ರಮಿಸಿ ತೃತೀಯ ಬಹುಮಾನ ಐದು ಸಾವಿರ ರೂ ಗಳಿಸಿದರೆ ಚಿಕ್ಕ ಮಗಳೂರಿನವರೇ ಆದ ಪುಟ್ಟೇಗೌಡ ಅವರ ಜೋಡೆತ್ತುಗಳು 16.31 ಸೆಕೆಂಡ್ ಸಮಯದಲ್ಲಿ ಸ್ಪರ್ಧೆ ಪೂರೈಸಿ ಸಮಾ ಧಾನಕರ ಬಹುಮಾನಕ್ಕೆ ಪಾತ್ರವಾದವು.ಬೀರೂರು ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ ಸ್ಪರ್ಧೆಗಳನ್ನು ಉದ್ಘಾಟಿಸಿ ಗ್ರಾಮೀಣ ಜಾತ್ರೆ,ಆಟೋಟಗಳ ಸಡಗರ ಮಾಯವಾಗುತ್ತಿರುವ ಈ ಕಾಲದಲ್ಲಿ ಈ ರೀತಿಯ ಜಾನಪದ ಕ್ರೀಡೆ ಆಯೋಜಿಸಿರುವ ಸಂಘಟಕರ ಶ್ರಮ ಸಾರ್ಥಕವಾಗಿದೆ. ಹಳ್ಳಿಗರು ಮತ್ತು ಯುವಕರಲ್ಲಿ ಇಂತಹ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಈ ತರಹದ ಸ್ಪರ್ಧೆಗಳನ್ನು ಆಯೋಜಿಸುವಂತೆ ಕರೆ ನೀಡಿದರು. ಪುರಸಭಾಧ್ಯಕ್ಷ ಎಸ್.ರಮೇಶ್  ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ಬಿ.ಪಿ.ನಾಗರಾಜ್, ಪುರಸಭಾ ಸದಸ್ಯ ಬಿ.ಕೆ.ಶಶಿಧರ್, ದೈಹಿಕ ಶಿಕ್ಷಣ ಪರಿವೀಕ್ಷಕ ಮಲ್ಲಪ್ಪ ಓಟದ ಸ್ಪರ್ಧೆಗಳ ನೇತೃತ್ವ ವಹಿಸಿದ್ದರು. ಕಡೂರು ತಾ.ಪಂ.ಮಾಜಿ ಅಧ್ಯಕ್ಷರಾದ ಮಹೇಶ್ವರಪ್ಪ, ಸೀಗೇಹಡ್ಲು ಹರೀಶ್,ಪುರಸಭೆ ಮಾಜಿ ಅಧ್ಯಕ್ಷರಾದ ಡಿ.ಆರ್.ಯತೀಶ್,ಎಂ.ಪಿ. ದಯಾ ನಂದ್, ಬಿ.ಸಿ.ಪ್ರಕಾಶ್, ಬಿ.ವಿ.ಮಹೇಶ್ವರಪ ಮತ್ತು ಕನಕಶ್ರಿ ನೌಕರರ ಬಳಗದ ವಸಂತಕುಮಾರ್, ಶಿವಾಜಿ ವ್ಯಾಯಾಮ ಶಾಲೆಯ ಬಿ.ಕೆ.ಮಂಜು ಮತ್ತು ಸಾವಿರಾರು ನಾಗರಿಕರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.