ಮಂಗಳವಾರ, ನವೆಂಬರ್ 19, 2019
22 °C

ಮೈನವಿರೇಳಿಸಿದ ಚಕ್ಕಡಿ ಓಟದ ಸ್ಪರ್ಧೆ

Published:
Updated:
ಮೈನವಿರೇಳಿಸಿದ ಚಕ್ಕಡಿ ಓಟದ ಸ್ಪರ್ಧೆ

ಲಕ್ಷ್ಮೇಶ್ವರ: ಗ್ರಾಮದ ಜನರಲ್ಲಿ ಸಂಭ್ರಮ, ಸಡಗರ ಜೊತೆಗೆ ಕುತೂಹಲ. ಸ್ಪರ್ಧೆಯಲ್ಲಿ ಯಾರ ಎತ್ತಿನ ಜೋಡಿ ಚಕ್ಕಡಿ ಗೆಲ್ಲುತ್ತದೆ ಎಂಬ ತವಕ. ಹುಚ್ಚೆದ್ದು ದಿಕ್ಕುತಪ್ಪಿ ಹೂಡಿದ ಚಕ್ಕಡಿಯೊಡನೆ ಓಡಿ ಬರುತ್ತಿದ್ದ ಎತ್ತಿನ ಜೋಡಿಗಳು ನೋಡುಗರಲ್ಲಿ ರೋಮಾಂಚನ ಮೂಡಿಸಿದ್ದವು. ಈ ಅದ್ಭುತ ದೃಶ್ಯ ಕಂಡು ಬಂದಿದ್ದು ಗದಗ ಜಿಲ್ಲೆ ಹಾಗೂ ಶಿರಹಟ್ಟಿ ತಾಲ್ಲೂಕಿನ ಕೊನೆಯ ಗ್ರಾಮ ರಾಮಗಿರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸಾಪುರದಲ್ಲಿ. ಸದ್ಯ ರಾಜ್ಯದಲ್ಲಿ ಚುನಾವಣೆ ಕಾವು ತುಂಬಿಕೊಂಡಿದ್ದರೆ, ಬಸಾಪುರದಲ್ಲಿ   ಚಕ್ಕಡಿ ಓಡಿಸುವ ಕಾವು ತುಂಬಿಕೊಂಡಿತ್ತು. ಅತೀ ಸಣ್ಣ ಹಾಗೂ ಹಿಂದುಳಿದ ಹಳ್ಳಿ ಬಸಾಪುರದ ಬಸವೇಶ್ವರ ಭಜನಾ ಸಮಿತಿಯ ಯುವ ಗೆಳೆಯರ ಬಳಗದ ಸದಸ್ಯರು ಊರಿನ ಎಲ್ಲ ಹಿರಿಯರ ಸಹಕಾರದೊಂದಿಗೆ ರಾಜ್ಯ ಮಟ್ಟದ  ಚಕ್ಕಡಿ (ಗಾಡಾ) ಓಡಿಸುವ ಸ್ಪರ್ಧೆ ಸಂಘಟಿಸಿದ್ದರು. ಅಂದು ಗ್ರಾಮದಲ್ಲಿ ಜಾತ್ರೆ ವಾತಾವರಣ ನಿರ್ಮಾಣವಾಗಿತ್ತು.ಬೆಳಿಗ್ಗೆಯಿಂದಲೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅನೇಕ ಸ್ಪರ್ಧಾಳುಗಳು ತಮ್ಮ ಕಟ್ಟುಮಸ್ತಾದ ಎತ್ತುಗಳನ್ನು ಹೂಡಿದ ಚಕ್ಕಡಿ ಓಡಿಸುವಲ್ಲಿ ತಲ್ಲೆನರಾಗಿದ್ದ ದೃಶ್ಯ ಕಂಡು ಬಂದಿತು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಬಸಾಪುರ ಹಾಗೂ ಸುತ್ತಮುತ್ತಲಿನ ಸಾವಿರಾರು ಜನರು  ಕುತೂಹಲದಿಂದ ಸ್ಪರ್ಧೆ ವೀಕ್ಷಿಸಲು ಆಗಮಿಸಿದ್ದರು.ಕುಂದಗೋಳ, ಕಮಡೊಳ್ಳಿ, ಸಂಶಿ, ಗೌಡಗೇರಿ, ಗುಂಜಳ, ಯರೇಬೂದಿಹಾಳ, ಲಕ್ಷ್ಮೇಶ್ವರ ಸೇರಿದಂತೆ 50ಕ್ಕೂ ಹೆಚ್ಚು ಚಕ್ಕಡಿಗಳು ಸ್ಪರ್ಧೆಗೆ ಆಗಮಿಸಿದ್ದವು. ಯರೇಬೂದಿಹಾಳದ ವಿನಾಯಕ ಕುರುಹಿನಶೆಟ್ಟಿ ಅವರು ಚಕ್ಕಡಿಯ ನೊಗಕ್ಕೆ ಜತಿಗೆಯಿಂದ ಎತ್ತುಗಳನ್ನು ಕಟ್ಟಿ ಯಾವುದೇ ಹಗ್ಗ ಹಿಡಿಯದೆ ಎತ್ತುಗಳನ್ನು ಓಡಿಸಿದ್ದು ವಿಶೇಷ.ಬೆಳಿಗ್ಗೆ 8ರಿಂದ ಆರಂಭವಾದ ಸ್ಪರ್ಧೆಯಲ್ಲಿ ಪ್ರತಿ ಜೋಡಿ ಎತ್ತುಗಳು ಒಂದು ನಿಮಿಷ ಕಾಲಾವಧಿಯಲ್ಲಿ  ಓಡುವ ಅಂತರದ ಆಧಾರದ ಮೇಲೆ ಆಯ್ಕೆ ನಡೆಯಿತು.ಕೊನೆಯದಾಗಿ,ಗೌಡಗೇರಿ ಗ್ರಾಮದ ಯಲ್ಲಪ್ಪಗೌಡ ಚನ್ನಾಪುರ ಅವರ ಎತ್ತುಗಳು ನಿಗದಿತ ಸಮಯದಲ್ಲಿ ಹೆಚ್ಚು ಅಂತರ ಓಡಿ ಪ್ರಥಮ ಬಹುಮಾನ 10 ಗ್ರಾಂ ಬಂಗಾರವನ್ನು ಮುಡಿಗೇರಿಸಿಕೊಂಡವು. ಅದರಂತೆ ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಕ್ರಮವಾಗಿ ಯರೇಬೂದಿಹಾಳದ ಹೊಳಲಮ್ಮದೇವಿ ಪ್ರಸನ್ನ ಹೆಸರಿನ ಚಕ್ಕಡಿ ಹಾಗೂ ಚಿಕ್ಕಗುಂಜಳದ ಮಾಲತೇಶ ಪ್ರಸನ್ ಹೆಸರಿನ ಚಕ್ಕಡಿ ಓಸವಾರರು ಪಡೆದುಕೊಂಡರು. ಪ್ರಥಮ ಬಹುಮಾನವನ್ನು ಬಸಾಪುರ ಗ್ರಾಮದ ಬಸವೇಶ್ವರ ಭಜನಾ ಸಮಿತಿ ನೀಡಿದರೆ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಕ್ರಮವಾಗಿ  ಮಲ್ಲಯ್ಯ ಭಕ್ತಿಮಠ ಹಾಗೂ ಈರುಬಾಯಿ ಕೊಟಗಿ ಅವರು ನೀಡಿದರು.

ಪ್ರತಿಕ್ರಿಯಿಸಿ (+)