ಭಾನುವಾರ, ಜನವರಿ 19, 2020
20 °C
ಮುಖ್ಯರಸ್ತೆ ದ್ವಿಮುಖ ರಸ್ತೆಯಾಗಿಸಲು ಆಗ್ರಹ

ಮೈಮೇಲೆ ಸಗಣಿ ಸುರುವಿಕೊಂಡು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ಪಟ್ಟಣದ ಮುಖ್ಯ ರಸ್ತೆಯನ್ನು ವಿಸ್ತರಿಸಿ ದ್ವಿಮುಖ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಸೋಮವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಹೋರಾಟ ಸಮಿತಿ ಸದಸ್ಯರು ಬುಧವಾರ ಪೊಲೀಸ್‌ರ ಎದುರಿಗೆ  ಸಗಣಿ ಮೈಮೇಲೆ ಸುರುವಿಕೊಳ್ಳುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದರು.ಕಳೆದೆರಡು ದಿನಗಳಿಂದ ಉಪವಾಸ ಸತ್ಯಾಗ್ರಹದಲ್ಲಿದ್ದ ಹೋರಾಟ ಸಮಿತಿಯ ಸದಸ್ಯರನ್ನು ಸೌಜನ್ಯಕ್ಕಾದರೂ  ಮಾತನಾಡದ ಹಿನ್ನೆಲೆಯನ್ನು ಹೋರಾಟವನ್ನು ತೀವ್ರಗೊಳಿಸಿ ದರು. ಆಟೋ ಚಾಲಕರು ಮುಖ್ಯ ರಸ್ತೆ ಬಂದ್‌ ಮಾಡಿ ಸುಮಾರು ಒಂದು ಗಂಟೆಯವರೆಗೆ ಪ್ರತಿಭಟನೆ ನಡೆಸಿದರು. ಇದರಿಂದ ದೂರದ ಪ್ರಯಾಣಿಕರು ತೀವ್ರ ತೊಂದರೆ ಪಡುವಂತಾಯಿತು.  ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ವಕೀಲ ಸುರೇಶ ಛಲವಾದಿ ಮಾತನಾಡಿ ಮೆಣಸಿನಕಾಯಿ ವ್ಯಾಪಾರಕ್ಕೆ ಪ್ರಸಿದ್ಧವಾದ ಬ್ಯಾಡಗಿ ಮಾರುಕಟ್ಟೆಗೆ ದಿನನಿತ್ಯ ಸಾವಿರಾರು ವಾಹನಗಳು ಮೆಣಸಿನಕಾಯಿ ಹೇರಿಕೊಂಡು ಮಾರುಕಟ್ಟೆಗೆ ಬರುತ್ತವೆ. ಅಲ್ಲದೆ ಟಿಪ್ಪರ್‌ಗಳು, ಡಾಂಬರ ಗಾಡಿಗಳು ಸೇರಿದಂತೆ ಭಾರಿ ವಾಹನಗಳು ಸಂಚರಿಸುತ್ತವೆ. ಇದರಿಂದ ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು, ರೋಗಿಗಳು ತುಂಬಾ ತೊಂದರೆಯನ್ನು ಅನುಭವಿಸು ವಂತಾಗಿದೆ. ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿ ಹೋರಾಟ ಮಾಡಲಾಗಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿದರು. ಬುಧವಾರ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಉಪವಾಸ ನಡೆಸುತ್ತಿರುವ ಕಾರ್ಯಕರ್ತರನ್ನು ಸೌಜನ್ಯಕ್ಕಾದರೂ ಮಾತನಾಡಿಸಬಹುದಿತ್ತು. ಆದರೆ ಸೌಜನ್ಯ ತೋರದೆ ಜಿಲ್ಲಾಧಿಕಾರಿಗಳು ಅವಮಾನ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.ಸಗಣಿ ಸುರುವಿಕೊಂಡು ಪ್ರತಿಭಟನೆ ನಡೆಸುತ್ತಿರುವ ಸುದ್ದಿ ತಿಳಿದು ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ್‌, ತಹಶೀಲ್ದಾರ ಶಿವಶಂಕರ ನಾಯಕ ಹಾಗೂ ಪುರಸಭೆ ಮುಖ್ಯಾಧಿಕಾರಿ ಜಿ.ಟಿ.ವೀರೇಶಕುಮಾರ ಪ್ರತಿಭಟನಾ ನಿರತರನ್ನು ಮವೊಲಿಸಲು ಮುಂದಾದರು. ಕಳೆದೆರಡು ದಿನಗಳಿಂದ ಆಹಾರ ಸೇವಿಸದೆ ಹೋರಾಟ ನಡೆಸುತ್ತಿದ್ದ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಹಾಗೂ ಎಸ್‌ಎಫ್‌ಐ ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಜುನಾಥ ಪೂಜಾರ ತೀವ್ರ ಅಸ್ವಸ್ಥಗೊಂಡರು. ಕೂಡಲೆ 108 ವಾಹನದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು.ಬಳಿಕ ಜಿ.ಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಣ್ಣ ಉಕ್ಕುಂದ ಹಾಗೂ ಅಧಿಕಾರಿಗಳು ಶಾಸಕ ಬಸವರಾಜ ಶಿವಣ್ಣನವರ ಸಂಪರ್ಕಿಸಿ ಹತ್ತು ದಿನಗಳಲ್ಲಿ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೊನೆಗೊಂಡಿತು.ಪ್ರತಿಭಟನೆಯಲ್ಲಿ  ಮೋಹನ ಬಿನ್ನಾಳ, ಅಜೀಜ್‌ ಬಿಜಾಪುರ, ಈರಪ್ಪ ಭೈರಾಪೂರ, ಶಾಂತಪ್ಪ ಅರ್ಕಾಚಾರಿ, ಜಿತೇಂದ್ರ ಸುಣಗಾರ, ಜಗದೀಶ ಹಾಲನಗೌಡ್ರ, ವಿನಾಯಕ ಶಿಗ್ಲಿ, ಮಂಜುನಾಥ ಕೋಡಿಹಳ್ಳಿ, ವಿನಾಯಕ ಕಂಬಳಿ, ದುರಗೇಶ ಗೋಣೆಮ್ಮನವರ, ಜಿನ್ನಾ ಹಲಗೇರಿ,  ನಿಸ್ಸಾರ್ಅಹಮ್ಮದ ಹಾವನೂರ, ಸಂತೋಷ ಗುದಗಿ, ಮಂಜು ಡಂಬ್ರಳ್ಳಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)