ಮೈಲೇಜ್ ಇದ್ದರೆ ಜೀವನ ಸಲೀಸು!

7

ಮೈಲೇಜ್ ಇದ್ದರೆ ಜೀವನ ಸಲೀಸು!

Published:
Updated:
ಮೈಲೇಜ್ ಇದ್ದರೆ ಜೀವನ ಸಲೀಸು!

ವಾಹನ ಲೋಕದ ಆಳ ಅಗಲಗಳಲ್ಲಿ ಮುಳುಗೇಳುವುದೇ ಇಂದು ರೋಮಾಂಚನಕಾರಿ ಸಂಗತಿ. ಕೈಯಲ್ಲೊಂದಿಷ್ಟು ಹಣ, ಜಾಣ್ಮೆಯ ಆಯ್ಕೆಯಿದ್ದಲ್ಲಿ ವಾಹನ ಲೋಕವನ್ನು ಗೆಲ್ಲುವುದು ಕಷ್ಟವೇನಲ್ಲ. ಆದರೆ ಭಾರತೀಯ ವಾಹನ ಮಾಲೀಕರ ಮನಸ್ಥಿತಿ ಪಾಶ್ಚಿಮಾತ್ಯ ರಾಷ್ಟ್ರಗಳ ವಾಹನ ಮಾಲೀಕರ ಮನಸ್ಥಿಗೆ ಹೋಲಿಸಿದಲ್ಲಿ ಭಿನ್ನವಾಗೇ ಇದೆ. ಇಲ್ಲಿ ವಾಹನ ಎಷ್ಟೇ ಅಂದವಿರಲಿ, ಎಷ್ಟೇ ಶಕ್ತಿಶಾಲಿಯಾಗಿರಲಿ, ಮೊದಲು ಕೇಳುವ ಪ್ರಶ್ನೆಯೇ ಇದು ಎಷ್ಟು ಮೈಲೇಜ್ ನೀಡುತ್ತದೆ ಎಂದು!ಹೌದು, ಭಾರತದಲ್ಲಿ ಮೈಲೇಜ್ ವಾಹನ ಖರೀದಿಯಲ್ಲಿ ಮೊದಲ ಮಾನದಂಡ. ಆ ನಂತರ ವಾಹನದ ದೃಢತೆ, ಕಾರ್ಯಕ್ಷಮತೆ, ಸುರಕ್ಷೆ ಮುಂತಾದವುಗಳಿಗೆ ಪ್ರಾಶಸ್ತ್ಯ. ಅದರಲ್ಲೂ ಬೈಕ್‌ಗಳ ವಿಚಾರಕ್ಕೆ ಬಂದರಂತೂ ಮೈಲೇಜ್‌ನ ಅಗತ್ಯ ದಿನೇ ದಿನೇ ಹೆಚ್ಚುತ್ತಲೇ ಇದೆ. ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂಪಾಯಿ ಮುಟ್ಟುವ ಕಾಲ ದೂರವಿಲ್ಲ ಎಂಬ ಸಂಗತಿ ಮನದಟ್ಟಾಗುತ್ತಿದ್ದಂತೂ ಹೆಚ್ಚು ಮೈಲೇಜ್ ನೀಡುವ ಬೈಕ್‌ಗಳನ್ನೇ ಹೊಂದಬೇಕು ಎಂದು ಗ್ರಾಹಕರು ಬಯಸುತ್ತಿದ್ದಾರೆ.ಮೈಲೇಜ್- ಏಕಿಷ್ಟು ಬೇಡಿಕೆ?

ವಾಹನವೊಂದು ತನ್ನ ಒಡಲಿನಲ್ಲಿ ಇರುವ ಇಂಧನವನ್ನು ಎಷ್ಟು ಸಮರ್ಥವಾಗಿ ಬಳಸಿಕೊಂಡು ಎಷ್ಟು ಗರಿಷ್ಟ ದೂರ ಓಡಬಲ್ಲದು ಎಂಬುದೇ ಅದರ ಮೈಲೇಜನ್ನು ನಿರ್ಧರಿಸುತ್ತದೆ. ಮೈಲೇಜ್ ಎಂದರೆ ಸರಳ ಪದಗಳಲ್ಲಿ ಇಂಧನ ದಕ್ಷತೆ. ಹೆಚ್ಚು ಮೈಲೇಜ್ ನೀಡುವ ಬೈಕ್‌ಗಳು ಕೇವಲ ಅವು ಬಳಸಿಕೊಂಡಿರುವ ತಂತ್ರಜ್ಞಾನದಿಂದ ಇದನ್ನು ಸಾಧ್ಯಮಾಡಿವೆ ಎಂಬುದು ಅರ್ಧ ಸತ್ಯ. ತಂತ್ರಜ್ಞಾನ ಮೈಲೇಜ್‌ಗರಿಷ್ಟಗೊಳಿಸಲು ಸಹಾಯ ಮಾಡಬಹುದೇ ಹೊರತು, ಕೇವಲ ತಂತ್ರಜ್ಞಾನವನ್ನು ಮಾತ್ರ ನಂಬಿಕೊಂಡು ಹೆಚ್ಚು ಮೈಲೇಜ್ ಗಿಟ್ಟಿಸಬಹುದು ಎಂದುಕೊಂಡರೆ ತಪ್ಪಾದೀತು.ಇಂದು ಸಾಕಷ್ಟು ಎಲ್ಲ ಬ್ರಾಂಡ್‌ಗಳ, ಎಲ್ಲ ಬೈಕ್‌ಗಳಲ್ಲೂ ಮೈಲೇಜ್ ಹೆಚ್ಚಿಸುವುದಕ್ಕೆ ಸಂಬಂಧಿಸಿದ ತಂತ್ರಜ್ಞಾನ ಒಂದು ಶಿಷ್ಟತೆಯಾಗಿ (ಸ್ಟಾಂಡರ್ಡ್) ಬಳಕೆಯಲ್ಲಿದೆ. ಇದರಲ್ಲಿ ಮುಖ್ಯವಾದದ್ದು ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ. ಸಾಂಪ್ರದಾಯಿಕ ಬೈಕ್‌ಗಳಲ್ಲಿ ಬಳಕೆಯಲ್ಲಿರುವ ಕಾರ್ಬುರೇಟರ್‌ಬದಲಿಗೆ, ಅದೇ ಕೆಲಸವನ್ನು ಮಾಡುವ ಕಂಪ್ಯೂಟರ್ ನಿಯಂತ್ರಿತ ಸಾಧನವಿದು. ಬೈಕ್‌ನ ಎಂಜಿನ್‌ನಲ್ಲಿ ಇಂಧನ ದಹನ ಎಷ್ಟು ಪ್ರಮಾಣದಲ್ಲಿ ಆಗಬೇಕು ಎಂಬುದನ್ನು ಕಂಪ್ಯೂಟರ್ ನಿರ್ಧರಿಸಿ, ಇಂಧನ ಬಿಡುಗಡೆಗೊಳಿಸುತ್ತದೆ.

 

ಕಾರ್ಬುರೇಟರ್‌ನಲ್ಲಿ ಯಾಂತ್ರಿಕವಾಗಿ ಆಗುವ ಈ ಪ್ರಕ್ರಿಯೆ ಇಲ್ಲಿ ಕಂಪ್ಯೂಟರ್‌ನಿಂದ ಆಗುವುದರಿಂದ ಇಂಧನ ಕೊಂಚವೂ ದಂಡವಾಗದು. ಆದರೆ ಕಾರ್ಬುರೇಟರ್ ಇನ್ನೂ ಬಳಕೆಯಲ್ಲಿದೆ. ಇದಕ್ಕೆ ಕಾರಣ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಹೊಂದಲು ಗ್ರಾಹಕರರಿನ್ನೂ ಸಿದ್ಧರಾಗಿಲ್ಲ.  ಆದ್ದರಿಂದ ಕಾರ್ಬುರೇಟರ್ ಇಟ್ಟುಕೊಂಡೇ ಹೇಗೆ ಮೈಲೇಜ್ ಹೆಚ್ಚಿಸಬಹುದು ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸಲಾಗಿದೆ. ಎಂಜಿನ್‌ನ ಹೆಡ್‌ನಲ್ಲಿ ಎರಡು ಸ್ಪಾರ್ಕ್ ಪ್ಲಗ್ ಅಳವಡಿಸಿ ಇಂಧನ ಕೊಂಚವೂ ದಹಿಸದೇ ವ್ಯರ್ಥವಾಗದಂತೆ ನೋಡಿಕೊಳ್ಳುವುದು.

 

ಮತ್ತೆ ಕೆಲವು ಬೈಕ್‌ಗಳಲ್ಲಿ ಡಿಟಿಎಸ್- ಐ (ಡಿಜಿಟಲ್ ಟ್ವಿನ್ ಸ್ಪಾರ್ಕ್ ಇಗ್ನಿಷನ್) ಅಳವಡಿಕೆಯಿದೆ. ಇದರ ಜತೆಗೆ ಬೈಕ್‌ನ ತೂಕವನ್ನು ಆದಷ್ಟು ಕಡಿಮೆಗೊಳಿಸಿ, ಎಂಜಿನ್‌ಗೆ ಹೊರೆಯನ್ನು ಕಡಿಮೆಗೊಳಿಸಿ ಇಂಧನವನ್ನು ಹೆಚ್ಚಿಸುವುದು. ಹಾಗಾಗಿ ಸಾಮಾನ್ಯ ಕಾರ್ಬುರೇಟರ್ ಇರುವ ಬೈಕ್‌ಗಳೇ ಭಾರತದಲ್ಲಿ ಲೀಟರ್ ಪೆಟ್ರೋಲ್‌ಗೆ 100 ಕಿಲೋ ಮೀಟರ್‌ವರೆಗೂ ಮೈಲೇಜ್ ನೀಡುವುದನ್ನು ಗಮನಿಸಬಹುದು.

ಈ ಮೈಲೇಜುಗಳೇ ಇದ್ದರೂ ಬೈಕ್ ತಯಾರಕರ ಪ್ರಕಾರ `ಆದರ್ಶ ಸ್ಥಿತಿಯ ಮೈಲೇಜು~. ನಾವು ಬೈಕ್‌ಗಳ ಜಾಹಿರಾತುಗಳಲ್ಲಿ ಗಮನಿಸಿರಬಹುದು. ಲೀಟರ್‌ಗೆ ಮೈಲೇಜ್ ಇಷ್ಟು ಸಿಗುತ್ತದೆ ಎಂದು ಹೇಳಿ. ನಿಗದಿತ ಸ್ಥಿತಿಗತಿಗಳಲ್ಲಿ ಮಾತ್ರ ಎಂದು ಹೇಳಲಾಗಿರುತ್ತದೆ. ಹಾಗಂದರೇನು?ಸಾಮಾನ್ಯವಾಗಿ ಯಾವುದೇ ಬೈಕ್ ಅದರ ಎಂಜಿನ್ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಮೈಲೇಜ್ ನೀಡಿಯೇ ನೀಡುತ್ತದೆ. ಆದರೆ ಶ್ರೇಷ್ಠ ಮೈಲೇಜ್ ನೀಡಲು ಸೂಕ್ತ ವೇಗವನ್ನು ನಿಗದಿಪಡಿಸಲಾಗಿದೆ. ಆ ವೇಗದಲ್ಲಿ ಮಾತ್ರ ಇಂಧನ ಅತ್ಯಲ್ಪ ಉರಿಯುತ್ತದೆ ಎಂದು ಇದರ ಅರ್ಥ. ಬೈಕು, ಸ್ಕೂಟರ್, ಕಾರುಗಳಿಂದ ಹಿಡಿದು ಎಲ್ಲ ವಾಹನಗಳಲ್ಲಿ ಈ ವೇಗ ಗಂಟೆಗೆ 40 ಕಿಲೋಮೀಟರ್‌ಗಳು. ಇದು  ಸುಮಾರು 5 ಕಿಲೋಮೀಟರ್ ಹೆಚ್ಚು- ಕಡಿಮೆಯಾದರೂ ಚಿಂತೆಯಿಲ್ಲ. ಈ ವೇಗವನ್ನು ಮುಟ್ಟಿದರೆ ಮಾತ್ರ ಸಾಲದು. ಈ ವೇಗವನ್ನು ಕಾಪಾಡಿಕೊಳ್ಳಬೇಕು. ಇದರ ಜತೆಗೆ ಹೆಚ್ಚು ಬ್ರೇಕ್ ಬಳಸಕೂಡದು.

 

ಆಗ ವೇಗ ಕಡಿಮೆಯಾಗಿ ಮೈಲೇಜ್ ಕುಸಿಯುತ್ತದೆ. ರಸ್ತೆ ಉತ್ತಮವಾಗಿದ್ದು, ವಾಹನ ದಟ್ಟಣೆಯೂ ಹೆಚ್ಚಿರಬಾರದು. ಇವೆಲ್ಲಕ್ಕೂ ಮುಖ್ಯವಾಗಿ ಬಳಸುವ ಪೆಟ್ರೋಲ್ ಪರಿಶುದ್ಧವಾಗಿರಬೇಕು. ಈ ಕಂಡೀಷನ್ನೇ ಅತ್ಯಂತ ಕಷ್ಟವಾದದ್ದು. ಒಳ್ಳೆಯ ಪೆಟ್ರೋಲ್ ಬಳಸುತ್ತಿದ್ದೇವೆ ಎಂಬುದು ಕೇವಲ ನಂಬಿಕೆ ಮಾತ್ರ. ಹಾಗಾಗಿ ಕೇವಲ ಸ್ಟಾಂಡರ್ಡ್ ಕಂಡೀಷನ್‌ಗಳನ್ನು ಪಾಲನೆ ಮಾಡುವುದರಿಂದ ಮಾತ್ರ ಉತ್ತಮ ಮೈಲೇಜ್ ಪಡೆಯಲಾಗದು ಎಂಬ ಅರಿವು ಚಾಲಕನಿಗೆ ಇರಲೇಬೇಕು.ಉತ್ತಮ ಮೈಲೇಜ್‌ಗೆ ಯಾವ ಬೈಕ್?

ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಮೈಲೇಜ್ ಸಿಗುವ ಬೈಕ್‌ಗಳು ಈಗ ಸಾಕಷ್ಟಿವೆ. ಆದರೆ ಉತ್ತಮ ಮೈಲೇಜ್ ಎಂದರೇನು ಎಂಬುದನ್ನು ತೋರಿಸಿಕೊಟ್ಟ ಕೀರ್ತಿ ಮಾತ್ರ ಹೀರೋ ಹೊಂಡಾದ ಸಿ.ಡಿ.100 ಬೈಕ್‌ಗೆ ಸೇರಲೇಬೇಕು. ಹಾಗೂ ಅದನ್ನು ಭಾರತೀಯ ವಾಹನ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಸ್ಮರಿಸಲೇಬೇಕು. ಏಕೆಂದರೆ ಸಿ.ಡಿ.100 ಕೇವಲ ಉತ್ತಮ ಮೈಲೇಜ್ ನೀಡುವ ಬೈಕಲ್ಲ.ಇದು ದೇಶದ ಮೊದಲ 4 ಸ್ಟ್ರೋಕ್ ಬೈಕ್ ಸಹಾ ಹೌದು. ರಾಯಲ್ ಎನ್‌ಫೀಲ್ಡ್ ಬುಲೆಟ್, ಯಜ್ಡಿ ಹಾಗೂ ರಾಜ್‌ದೂತ್ ಬೈಕ್‌ಗಳ ಕಡಿಮೆ ಮೈಲೇಜ್‌ನಿಂದ ದಣಿದಿದ್ದ ಬೈಕ್ ಪ್ರಿಯರಿಗೆ ಅಧುನಿಕ ನೋಟಗಳ ಬೈಕ್ ಪರಿಚಯಿಸುವುದರ ಜತೆಗೆ 4- ಸ್ಟ್ರೋಕ್ ಎಂಜಿನ್‌ನ ನಯವಾದ ಚಾಲನೆ, ಶ್ರೇಷ್ಠ ಮೈಲೇಜ್ ನೀಡಿದ್ದು, ಹೊಂಡಾ ತಂತ್ರಜ್ಞಾನದ ಸಾಧನೆ. 80 ರ ದಶಕದ ಅಂತ್ಯದ ಈ ಬೈಕ್ ಆಗಲೇ ಲೀಟರ್ ಪೆಟ್ರೋಲ್‌ವರೆಗೆ ಗರಿಷ್ಟ 80 ಕಿಲೋ ಮೀಟರ್ ಮೈಲೇಜ್ ನೀಡುತ್ತಿತ್ತು.ಆ ನಂತರ ಹೊರಬಂದ ಬಜಾಜ್ 4-ಎಸ್ ಬೈಕ್ ಸಹಾ ಉತ್ತಮ ಮೈಲೇಜ್ ನೀಡುತ್ತಿತ್ತೇ ಆದರೂ, ಅದರ ಸಾಧಾರಣ ರಚನೆ ಹಾಗೂ ಬಾಡಿಯ ಗುಣಮಟ್ಟದಿಂದಾಗಿ ಬಾಳಿಕೆ ಬಾರದೆ ಜನಪ್ರಿಯತೆ ಗಳಿಸುವಲ್ಲಿ ವಿಫಲವಾಯಿತು. ನಂತರ ಬಜಾಜ್ ಹೊರಬಿಟ್ಟ ಬಜಾಜ್ ಬಾಕ್ಸರ್, ಆ ನಂತರ ಸಿ.ಟಿ.100 ಆಗಿ, ಈಗ ಪ್ಲಾಟಿನಾ ಆಗಿ ರೂಪಾಂತರ ಪಡೆದಿದೆ. ಹೀರೋ ಹೊಂಡಾ ಸಿ.ಡಿ.100ನ ಪಳೆಯುಳಿಕೆಯಾಗಿ ಈಗ ಡಾನ್ ಮಾರುಕಟ್ಟೆಯಲ್ಲಿದೆ.ಹೊಸ ತಂತ್ರಜ್ಞಾನ: ಉತ್ತಮ ಮೈಲೇಜ್

ಭಾರತೀಯ ಬೈಕ್ ಗ್ರಾಹಕ ಈಗ ಕೊಂಚ ಬದಲಾಗಿದ್ದಾನೆ. ಅವನಿಗೀಗ ಮೈಲೇಜೂ ಬೇಕು. ಉತ್ತಮ ನೋಟ ಹಾಗೂ ಶಕ್ತಿ ಸಾಮರ್ಥ್ಯಗಳೂ ಇರಬೇಕು. ಈ ಅಂಶಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಈ ಟಾಪ್ 5 ಬೈಕ್‌ಗಳನ್ನು ಶ್ರೇಷ್ಠ ಮೈಲೇಜ್ ನೀಡುವ ಬೈಕ್‌ಗಳೆಂದು ಪಟ್ಟಿ ಮಾಡಬಹುದು.

1.ಬಜಾಜ್ ಪ್ಲಾಟಿನಾ

2.ಹೀರೋ ಡಾನ್ ಡಿಲಕ್ಸ್

3.ಹೋಂಡಾ ಸಿಬಿ ಟ್ವಿಸ್ಟರ್

4.ಹೀರೋ ಸ್ಪ್ಲೆಂಡರ್

5.ಟಿವಿಎಸ್ ಸ್ಟಾರ್

ಈ ಹಿಂದಿನ ಸಿ.ಡಿ.100, ಬಾಕ್ಸರ್, 4- ಎಸ್ ರೀತಿಯ ಹೆಚ್ಚು ಮೈಲೇಜ್ ನೀಡುವ ಬೈಕ್‌ಗಳನ್ನು ಗಮನಿಸಿದರೆ ಅವು ವಿನ್ಯಾಸದಲ್ಲಿ ಸಾಮಾನ್ಯಾತಿ ಸಾಮಾನ್ಯವಾಗಿದ್ದವು. ಸಾಧಾರಣ ಡ್ರಮ್ ಬ್ರೇಕ್‌ಗಳು, ಗೋಳಾಕಾರ ಅಥವಾ ಚಚ್ಚೌಕಾಕಾರದ ಹೆಡ್‌ಲೈಟ್, ಹಿಂಬದಿಯ ದೀಪ ಸಹ ಸಾಧಾರಣ. ಆದರೆ ಈಗಿನ ಮೈಲೇಜ್ ಹೆಚ್ಚು ನೀಡುವ ಬೈಕ್‌ಗಳಲ್ಲೂ ಅತಿ ಸುಂದರವಾದ, ಅಂತರ ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾದ ಸ್ಪೋರ್ಟ್ಸ್ ವಿನ್ಯಾಸಗಳಿವೆ. ಅಲಾಯ್ ವೀಲ್‌ಗಳು, ಡಿಸ್ಕ್ ಬ್ರೇಕ್, ಎಲೆಕ್ಟ್ರಿಕ್ ಸ್ಟಾರ್ಟ್, ಸ್ಪೋರ್ಟ್ಸ್ ಫೇರಿಂಗ್ (ಆಧುನಿಕ ಹೆಡ್ ಲೈಟ್ ಅಸೆಂಬ್ಲಿ) ಗಳನ್ನು ನೀಡಲಾಗಿದೆ.ಈ ಟಾಪ್ 5 ಬೈಕ್‌ಗಳ ಮೈಲೇಜ್ ಗಮನಿಸೋಣ. ಬಜಾಜ್ ಪ್ಲಾಟಿನಾ (ರಸ್ತೆಯಲ್ಲಿ) ಲೀಟರ್ ಪೆಟ್ರೋಲ್‌ಗೆ 85, ಹೀರೋ ಡಾನ್ ಡಿಲಕ್ಸ್ 80, ಹೋಂಡಾ ಸಿಬಿ ಟ್ವಿಸ್ಟರ್ 70, ಹೊಂಡಾ ಸ್ಪ್ಲೆಂಡರ್ 70, ಟಿವಿಎಸ್ ಸ್ಟಾರ್ 65 ರಿಂದ 70 ಕಿಲೋ ಮೀಟರ್ ಮೈಲೇಜ್ ನೀಡುತ್ತವೆ. ಇದರಲ್ಲಿ ಹೋಂಡಾದ ಸಿಬಿ ಟ್ವಿಸ್ಟರ್‌ನ ವಿನ್ಯಾಸ ಯಾವುದೇ ಸ್ಪೋರ್ಟ್ಸ್ ಅಥವಾ ಪ್ರೀಮಿಯಂ ಬೈಕ್‌ನ ವಿನ್ಯಾಸಕ್ಕೂ ಕಡಿಮೆಯಿಲ್ಲ.ಅಲ್ಲದೇ ಈ ಎಲ್ಲ ಅನುಕೂಲಗಳು ಈ ಬೈಕ್‌ಗಳಲ್ಲಿ ಇದ್ದರೂ ಬೆಲೆ ಹೆಚ್ಚೇನೂ ಇಲ್ಲ. ಬಜಾಜ್ ಪ್ಲಾಟಿನಾ (ರೂ. 43,805), ಹೀರೋ ಡಾನ್ (ರೂ. 45,700), ಹೋಂಡಾ ಸಿಬಿ ಟ್ವಿಸ್ಟರ್ (ರೂ. 49,000), ಹೀರೋ ಸ್ಪ್ಲೆಂಡರ್ (47,000), ಟಿವಿಎಸ್ ಸ್ಟಾರ್ (ರೂ. 45,300) ಗಳಿಗೆ ಆನ್ ರೋಡ್ ಬೆಲೆಯಲ್ಲೆೀ ಸಿಗಲಿರುವುದು ವಿಶೇಷ.ಸ್ಕೂಟರ್ ಮೈಲೇಜ್ ಕಡಿಮೆ

ಸ್ಕೂಟರ್ ಅಥವಾ ಬೈಕೇ ಇರಲಿ, ಅವುಗಳಿಗೆ ಸ್ವಯಂ ಚಾಲಿತ ಗಿಯರ್ ವ್ಯವಸ್ಥೆಯಿದ್ದಲ್ಲಿ ಮೈಲೇಜ್ ಕುಸಿಯುತ್ತದೆ. ಸದ್ಯಕ್ಕೆ ಭಾರತದಲ್ಲಿ ಯಾವುದೇ ಗಿಯರ್ ಲೆಸ್ ಬೈಕ್ ಇಲ್ಲದ ಕಾರಣ, ಸ್ಕೂಟರ್‌ಗಳು ಮಾತ್ರ ಈ ಅಪಕೀರ್ತಿಗೆ ಪಾತ್ರವಾಗಿವೆ. ಇದಕ್ಕೆ ಕಾರಣ ಸುಲಭ. ಗಿಯರ್ ಲೆಸ್ ವಾಹನಗಳಲ್ಲಿ ವೇರಿಯೋ ಟ್ರಾನ್ಸ್‌ಮಿಷನ್ ಎಂಬ ವ್ಯವಸ್ಥೆಯಿರುತ್ತದೆ. ಅದು ಚಾಲಕನ ಎಕ್ಸಿಲರೇಟರ್‌ನ ಸಂಜ್ಞೆಗಳಿಗೆ ಅನುಸಾರವಾಗಿ, ವಾಹನಕ್ಕೆ ವೇಗ ನೀಡುತ್ತದೆ.ಇದು ಸ್ವಯಂ ಚಾಲಿತ. ವೇಗಕ್ಕೆ ಅನುಗುಣವಾಗಿ ಗಿಯರ್ ಬದಲಿಸುವ ಸ್ವಾತಂತ್ರ್ಯ ಇಲ್ಲಿ ಇಲ್ಲದ ಕಾರಣ, ಇಂಧನ ಧಾರಾಳವಾಗಿ ಖರ್ಚಾಗುತ್ತದೆ. ಹಾಗಾಗಿ ಹೆಚ್ಚೆಂದರೆ ಇಂದಿನ ಸ್ಕೂಟರ್‌ಗಳಲ್ಲಿ ಹೊಂಡಾದ ಆಕ್ಟಿವಾ ನಗರ ರಸ್ತೆಗಳಲ್ಲಿ 35 ರಿಂದ 40 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಹೀರೋ ಪ್ಲೆಷರ್, ಸುಜುಕಿ ಆಕ್ಸಿಸ್ ಸಹಾ ಹೆಚ್ಚೂ ಕಡಿಮೆ ಇಷ್ಟೇ ಮೈಲೇಜ್ ನೀಡುತ್ತವೆ.

 

ಮೈಲೇಜ್ ಸಿಗಬೇಕಾದರೆ....

              

* ಉತ್ತಮ ಗುಣಮಟ್ಟದ, ಸವೆದಿರದ, ಮಸಲ್ ಹೊಂದಿದ ಟಯರ್ ಬೈಕ್‌ಗೆ ಇರಲಿ. ಬೈಕ್‌ನ ಕಂಪನಿ ಸೂಚಿಸಿದಷ್ಟು ಗಾಳಿ ಹಾಕಿಸಬೇಕು.* ಬೈಕ್‌ನ ಎಂಜಿನ್ ಆಯಿಲ್‌ನ ಮಟ್ಟ ಕಾಪಾಡಬೇಕು. ಸೂಕ್ತ ಸಮಯದಲ್ಲಿ ಬದಲಿಸಬೇಕು.*ಕಾರ್ಬುರೇಟರ್ ಕಸ ಮುಕ್ತವಾಗಿರಬೇಕು. ಆಗಾಗ ಶುಚಿಗೊಳಿಸಿ ಟ್ಯೂನ್ ಮಾಡಿಸಬೇಕು.*ಸೈಲೆನ್ಸರ್‌ನಲ್ಲಿ ಕಾರ್ಬನ್ ಡೆಪಾಸಿಟ್ ಕಾಲ ಕ್ರಮೇಣ ಹೆಚ್ಚುತ್ತದೆ. ಅದನ್ನು ಶುಚಿಗೊಳಿಸಬೇಕು.*ಎಂಜಿನ್ ಹೆಡ್‌ನಲ್ಲಿ ಸಹ ಕಾರ್ಬನ್ ಸೇರಿರುತ್ತದೆ, ಅದನ್ನು ಮುಕ್ತಗೊಳಿಸುವ ಡೀ ಕಾರ್ಬೊನೈಸಿಂಗ್ ವಿಧಾನವನ್ನು ನಿಗದಿತ ಸಮಯಕ್ಕೆ ಮಾಡಿಸಬೇಕು. ಸಾಮಾನ್ಯವಾಗಿ ಪ್ರತಿ 20 ಸಾವಿರ ಕಿಲೋ ಮೀಟರ್‌ಗೆ ಮಾಡಿಸಿದರೆ ಒಳಿತು.* ಬ್ರೇಕ್‌ಗಳು ಹೆಚ್ಚು ಬಿಗಿಯಾಗಿರದೇ, ಚಕ್ರವನ್ನು ಸರಾಗವಾಗಿ ಚಲಿಸುವಂತೆ ನೋಡಿಕೊಳ್ಳಬೇಕು. ಬ್ರೇಕ್ ಬಿಗಿಯಾಗಿದ್ದರೆ, ಮೈಲೇಜ್ ಗಣನೀಯವಾಗಿ ಕುಸಿಯುತ್ತದೆ.* ಬೈಕ್‌ನಲ್ಲಿರುವ ಸವೆಯುವ ಅಂಗಗಳಾದ ಚೈನ್, ಸ್ಪ್ರಾಕ್ಲೆಟ್ ವೀಲ್, ಗಿಯರ್ ವೀಲ್‌ಗಳು ಅತಿ ಬೇಗ ತುಕ್ಕುಹಿಡಿಯುತ್ತವೆ. ಹಾಗಾಗಿ ಅವುಗಳಿಗೆ ತೈಲ ಲೇಪನ ಸದಾ ಇರುವಂತೆ ಜಾಗ್ರತೆ ವಹಿಸಬೇಕು. ಇಲ್ಲವಾದಲ್ಲಿ ಈ ಭಾಗಗಳನ್ನು ಬದಲಿಸುವ ಖರ್ಚೂ ಸೇರಿ, ಮೈಲೇಜ್ ಸಹ ಕುಸಿಯುತ್ತದೆ.

* ಉತ್ತಮ ಇಂಧನ ಬಳಕೆಯೂ ಮೈಲೇಜ್ ಹೆಚ್ಚಳಕ್ಕೆ ಮುಖ್ಯ ಅಂಶ. ಆದರೆ ಯಾವ ಪೆಟ್ರೋಲ್ ಬಂಕ್‌ನಲ್ಲಿ ಉತ್ತಮ ಪೆಟ್ರೋಲ್ ಸಿಗುತ್ತದೆ ಎಂದು ಹೇಳಲು ಸಾಮಾನ್ಯರಿಗೆ ಕಷ್ಟ. ಅದೇನಿದ್ದರೂ ಅನುಭವದಿಂದ ಬರುವಂಥದ್ದು. ಆದ್ದರಿಂದ ಮೈಲೇಜ್ ಏರಿಳತಗಳನ್ನು ಗಮನಿಸಿ, ಉತ್ತಮ * ಮೈಲೇಜ್ ಸಿಕ್ಕ ಪೆಟ್ರೋಲ್‌ನ್ನೇ ಬಳಸುವುದು ಜಾಣ್ಮೆ* ಅತಿ ವೇಗದ ಚಾಲನೆ ಮೈಲೇಜ್‌ನ್ನು ಸಹಜವಾಗೇ ಕಡಿಮೆಗೊಳಿಸುತ್ತದೆ. ಇದರಿಂದ ಪ್ರಾಣಾಪಾಯವೂ ಹೆಚ್ಚು.

* ವಿವೇಚನೆಯಿಂದ ಹಳ್ಳ- ಕೊಳ್ಳಗಳಿಲ್ಲದ ರಸ್ತೆಗಳನ್ನು ಚಾಲನೆಗೆ ಆಯ್ಕೆ ಮಾಡಿಕೊಳ್ಳಬೇಕು. ನಗರದ ಚಿಕ್ಕ ದಾರಿಯ ಟ್ರಾಫಿಕ್ ಹೆಚ್ಚಿರುವ ರಸ್ತೆಗಿಂತ, ಕೊಂಚ ಬಳಸಾದರೂ, ದೊಡ್ಡ ರಸ್ತೆಯಲ್ಲಿ ಹೋಗುವುದೇ ಒಳಿತು.* ಪ್ರೀಮಿಯಂ ಪೆಟ್ರೋಲ್ ಬಳಸಿದರೆ ಉತ್ತಮ ಮೈಲೇಜ್ ಸಿಗುತ್ತದೆ ಎಂಬ ಅಭಿಪ್ರಾಯವಿದೆ. ಇದು ತಪ್ಪು. ಉತ್ತಮ ಮೈಲೇಜ್ ಸಿಗುವುದು ಮೇಲಿನ ಅಂಶ ಪಾಲನೆಯಿಂದ. ಇದರ ಬಳಕೆಯಿಂದ ಪೆಟ್ರೋಲ್ ಟ್ಯಾಂಕ್ ಹಾಗೂ ಇಂಜಿನ್‌ನಲ್ಲಿ ಬಿಳಿಯ ಬಣ್ಣದ ಪುಡಿಯು ಸೇರಿಕೊಂಡು, ಎಂಜಿನ್‌ಗೆ ಘಾಸಿ ಉಂಟು ಮಾಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry