ಗುರುವಾರ , ಜೂನ್ 17, 2021
22 °C
ನಷ್ಟದಿಂದ ಹೊರ ಬರದ ಕಾರ್ಖಾನೆ

ಮೈಷುಗರ್‌ ಸರ್ವ ಸದಸ್ಯರ ಸಾಮಾನ್ಯಸಭೆ ಇಂದು

ಪ್ರಜಾವಾಣಿ ವಾರ್ತೆ/ ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ಮಂಡ್ಯ:  ಜಿಲ್ಲೆಯ ರೈತರ ಜೀವನಾಡಿ, ನೂರಾರು ಕಾರ್ಮಿಕ ಅನ್ನ ನೀಡುವ ಮೈಷುಗರ್‌ ಕಾರ್ಖಾನೆಯ ಮಹತ್ವದ 77ನೇ ಸರ್ವ ಸದಸ್ಯರ ಸಾಮಾನ್ಯಸಭೆಯು ಕುತೂಹಲ ಮೂಡಿಸಿದೆ.



ಕಳೆದ ಐದು ವರ್ಷಗಳಲ್ಲಿ ನೀಡಿದ ಸರ್ಕಾರದ ಅನುದಾನ ಬಳಕೆ, ಆಗಿರುವ ನಷ್ಟ, ಎರಡನೇ ಮಿಲ್‌ ಆರಂಭವಾಗ ದಿರುವುದು ಸೇರಿದಂತೆ ಹಲವು ವಿಷಯಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ. ಮೂರು ವರ್ಷದ ನಂತರ ಸರ್ವ ಸದಸ್ಯರ ಸಾಮಾನ್ಯಸಭೆ ಮಾರ್ಚ್‌ 12ರಂದು ನಡೆಯುತ್ತಿದೆ.



2010–11ರ ಲೆಕ್ಕಪತ್ರವನ್ನು ಈಗ ಮಂಡಿಸಲಾಗುತ್ತಿದ್ದು, 2011–12, 2012–13ರ ಆಡಿಟ್‌ ಇನ್ನು ಮೇಲಷ್ಟೇ ಆಗಬೇಕಿದೆ. ವರ್ಷಗಳೇ ಉರುಳಿದರೂ, ಸರಿಯಾದ ಸಮಯಕ್ಕೆ ಲೆಕ್ಕಪತ್ರ ಸಲ್ಲಿಕೆಯಾಗದಿರುವುದು ಚರ್ಚೆಗೆ ಗ್ರಾಸ ಒದಗಿಸುವ ಸಾಧ್ಯತೆಗಳಿವೆ.



ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಿಜೆಪಿ ಸರ್ಕಾರದಲ್ಲಿ ಇನ್ನಿತರರು  ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ₨170 ಕೋಟಿ ಹೆಚ್ಚು ಹಣವನ್ನು ಮೈಷುಗರ್‌ಗೆ ನೀಡಿದೆ. ಆ ಹಣದ ಬಳಕೆಯ ವಿಷಯವೂ ಚರ್ಚೆಗೆ ಬರಲಿದೆ ಎನ್ನುತ್ತಾರೆ ಸದಸ್ಯರೊಬ್ಬರು.



2010–11ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ವರದಿಯಲ್ಲಿ 2001ರಿಂದ 2010ರ ವರೆಗಿನ ಲೆಕ್ಕಪತ್ರವನ್ನು ನೀಡಲಾಗಿದ್ದು, ಪ್ರತಿ ವರ್ಷ ಕಾರ್ಖಾನೆಯ ಸಂಚಿತ ನಷ್ಟದ ಪ್ರಮಾಣ ಏರುತ್ತಲೇ ಸಾಗಿದೆ. 2001ರಲ್ಲಿ ₨ 34.45 ಲಕ್ಷ 2005ರ ವೇಳೆಗೆ ₨ 151.77 ಕೋಟಿ  ಏರುತ್ತದೆ. 2010ರ ವೇಳೆಗೆ ನಷ್ಟದ ಪ್ರಮಾಣವು ₨ 347.34ಕ್ಕೆ ಮುಟ್ಟಿದೆ.



ಪ್ರತಿ ಟನ್‌ ಕಬ್ಬಿಗೆ ಉತ್ತಮ ಪ್ರಮಾಣದಲ್ಲಿ ಸಕ್ಕರೆ ಇಳುವರಿ ಪಡೆಯುತ್ತಿದ್ದ ಕಾರ್ಖಾನೆಯು ಅದನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಕೂಡಾ ಅಂಕಿ–ಅಂಶಗಳಿಂದ ಗೊತ್ತಾಗುತ್ತದೆ. ಕಾರ್ಖಾನೆಯ ನಿರ್ವಹಣೆಯಲ್ಲಿನ ಲೋಪಗಳೇ ಇದಕ್ಕೆ ಕಾರಣವಾಗಿವೆ ಎನ್ನುವುದು ರೈತರ ಮುಖಂಡ ಆರೋಪ.



2001ರಲ್ಲಿ ಪ್ರತಿ ಟನ್‌ ಕಬ್ಬಿಗೆ 9.51 ಇಳುವರಿ ಪಡೆದಿದ್ದರೆ, 2002ರಲ್ಲಿ 9.10ಕ್ಕೆ ಇಳಿಯುತ್ತದೆ. 2008–09ರ ವೇಳೆಗೆ 5.52ಕ್ಕೆ ಇಳಿಯುವ ಮೂಲಕ ನೂತನ ದಾಖಲೆಯನ್ನೇ ಬರೆದಿದೆ. 2010–11ರಲ್ಲಿ 8.38ಕ್ಕೆ ಏರಿರುವುದು ಸಮಾಧಾನಕರ ಸಂಗತಿ. ಈಗಲೂ 9ರ ಆಸು–ಪಾಸಿನಲ್ಲಿಯೇ ಇದೆ.



ಕಂಪೆನಿಯು ₨ 1,68,07,20,198  ಸಾಲ ಹೊಂದಿದೆ. ಇದನ್ನು ತೀರಿಸಿ, ಕಾರ್ಖಾನೆಯನ್ನು ಲಾಭದ ಹಳಿಗೆ ತರುವ ಬಗೆಗೂ ಗಂಭೀರ ಚರ್ಚೆಯಾಗಬೇಕಿದೆ.



2010–11ನೇ ಸಾಲಿನ ಆಡಿಟ್‌ನಲ್ಲಿಯೇ ಮಿಲ್‌ ಆಧುನೀಕರಣ ಬಗೆಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಲಾಗಿದೆ. ಮಿಲ್‌ ಆಧುನೀಕರಣದ ಕಾಮಗಾರಿ ಯೇನೂ ಆರಂಭವಾಗಿದೆ.



ಆದರೆ, ಅಂತ್ಯಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಮಿಲ್‌ ಆಧುನೀಕರಣದ ಗುತ್ತಿಗೆ ನೀಡಿದ್ದ ಟೆಂಡರ್‌ ಮೊತ್ತದ ಶೇ 90 ರಷ್ಟು ಹಣವನ್ನು ಈಗಾಗಲೇ ಪಾವತಿಸಲಾಗಿದೆ. ಈ ಕುರಿತು ಉಂಟಾಗಿದ್ದ ಅನುಮಾನಗಳ ಪರಿಹಾರಕ್ಕಾಗಿ ತನಿಖೆಯೂ ಆರಂಭವಾಗಿದೆ.



2009–10 ಹಾಗೂ 10–11ರಲ್ಲಿ ಸಾಲಿನಲ್ಲಿ ಕಬ್ಬು ನುರಿಸಿದ್ದರಿಂದ ಕ್ರಮವಾಗಿ ₨ 7.93 ಕೋಟಿ  ಹಾಗೂ ₨ 18.63 ಕೋಟಿ  ನಷ್ಟ ಹೊಂದಿದೆ. ಆದರೆ, ಆ ವರ್ಷಗಳಲ್ಲಿ ಡಿಸ್ಟಿಲರಿಯಿಂದ ಕ್ರಮವಾಗಿ 2.66 ಹಾಗೂ ₨ 1.71 ಕೋಟಿ  ಲಾಭ ಹೊಂದಿದೆ. ಲಾಭ ತಂದುಕೊಡುವ ಡಿಸ್ಟಿಲರಿಯೇ ಬಂದ್‌ ಆಗಿರುವುದು ಮಾತ್ರ ದುರಂತ.



ರೋಗಗ್ರಸ್ತ ಕೈಗಾರಿಕಾ ಕಂಪೆನಿಗಳು ಕಾಯ್ದೆಯಡಿ ಮೈಷುಗರ್‌ ಕಾರ್ಖಾನೆಯನ್ನು ರೋಗಗ್ರಸ್ತ ಎಂದು ಘೋಷಿಸಲಾಗಿದ್ದು, ಇದನ್ನು ಹೊರತರುವ ಪ್ರಯತ್ನ ಆಗಬೇಕಿದೆ. ಕಂಪೆನಿಯನ್ನು ಬಲಪಡಿಸಬೇಕು ಎಂಬುದು ರೈತರ ಆಶಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.