ಭಾನುವಾರ, ಏಪ್ರಿಲ್ 18, 2021
33 °C

ಮೈಸೂರಲ್ಲಿ ಮುಂದುವರಿದ ಸರಣಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದಲ್ಲಿ ಸರಣಿ ಪ್ರತಿಭಟನೆ ಮುಂದುವರೆದಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಗುರುವಾರ ಪ್ರತಿಭಟನೆ ಮಾಡಿದವು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಕಾರ್ಯಕರ್ತರು ನಗರದ ತಾತಯ್ಯ ಪ್ರತಿಮೆ ಎದುರು ಧರಣಿ ನಡೆಸಿದರು.ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ ಜನರನ್ನು ತೀವ್ರವಾಗಿ ಕಾಡುತ್ತಿವೆ. ಸಚಿವರು, ಶಾಸಕರು ಮತ್ತು ಅಧಿಕಾರಿಗಳ ಭ್ರಷ್ಟಾಚಾರ ಎಲ್ಲೆ ಮೀರಿದೆ. ಭ್ರಷ್ಟರೇ ಸಾರ್ವಜನಿಕ ಜೀವನ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಜನತೆ ಹೋರಾಟಕ್ಕೆ ಇಳಿಯುವ ಅಗತ್ಯ ಇದೆ. ನಗರ ಪ್ರದೇಶಕ್ಕೂ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಬೇಕು. ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿಯನ್ನು ರದ್ದು ಮಾಡಬೇಕು. ಕಾರ್ಮಿಕರ ಕನಿಷ್ಠ ಕೂಲಿ ರೂ.10 ಸಾವಿರ ನಿಗದಿ ಮಾಡಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯ ಕರ್ತೆಯರಿಗೆ ಸರ್ಕಾರಿ ನೌಕರರ ಸ್ಥಾನಮಾನ ನೀಡಬೇಕು ಎಂದು ಧರಣಿನಿರತರು ಒತ್ತಾಯಿಸಿ ದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ಶೇಷಾದ್ರಿ, ಎಐಟಿಯುಸಿ ಕಾರ್ಯದರ್ಶಿ ರಾಜು ನೇತೃತ್ವ ವಹಿಸಿದ್ದರು.ಕರ್ನಾಟಕ ಜನ ಸಂಗ್ರಾಮ ಪರಿಷತ್

ಕ್ವಿಟ್ ಇಂಡಿಯ ಸಂಸ್ಮರಣೆ ಮತ್ತು ಭ್ರಷ್ಟರೇ ಸಾರ್ವಜನಿಕ ಜೀವನ ಬಿಟ್ಟು ತೊಲಗುವಂತೆ ಆಗ್ರಹಿಸಿ ಕರ್ನಾಟಕ ಜನ ಸಂಗ್ರಾಮ ಪರಿಷತ್ ಶಾಖೆ ಸದಸ್ಯರು ನಗರದ ಗಾಂಧಿಚೌಕದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡಿದರು.ರಾಜ್ಯದಲ್ಲಿ ನಡೆಯುತ್ತಿರುವ ಭೂ ಸ್ವಾಧೀನ, ಭ್ರಷ್ಟಾಚಾರ ತಡೆಗಟ್ಟಬೇಕು. ಭ್ರಷ್ಟ ಜನರು ಮತ್ತು ಅಧಿಕಾರಿಗಳು ಸಾರ್ವಜನಿಕ ಜೀವನಕ್ಕೆ ಬರದಂತೆ ತಡೆಯಬೇಕು. ಅಕ್ರಮ ಗಣಿಗಾರಿಕೆಗೆ ಮತ್ತೊಮ್ಮೆ ಅವಕಾಶವಾಗದಂತೆ ನೋಡಿಕೊಳ್ಳ ಬೇಕು. ಅಕ್ರಮ ಗಣಿಗಾರಿಕೆಯಿಂದ ಸಾರ್ವಜನಿಕ ಹಣವನ್ನು ಲೂಟಿ ಮಾಡಿದ್ದನ್ನು ವಸೂಲಿ ಮಾಡಬೇಕು. ಪ್ರಕೃತಿ, ಸಂಸ್ಕೃತಿ, ಸಮಾಜಗಳ ನಡುವೆ ಮಧುರ ಸಂಬಂಧ ಕಲ್ಪಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.ಸಾಹಿತಿಗಳಾದ ಕೆ.ಎಸ್.ಭಗವಾನ್, ಕಾಳೇಗೌಡ ನಾಗವಾರ, ಭ್ರಷ್ಟಾಚಾರ ವಿರುದ್ಧ ಮೈಸೂರು ಸಂಘಟನೆಯ ವಸಂತಕುಮಾರ್ ಮೈಸೂರ್ ಮಠ್, ಜೋಗನಹಳ್ಳಿ ಗುರು ಮೂರ್ತಿ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಸಿದ್ದರಾಜು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ದ.ಸಂ.ಸ ಧರಣಿ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋ ಗದ ಶಿಫಾರಸು ಜಾರಿಗೆ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಲು ಮಸೂದೆ ಮಂಡಿಸಿ ಪರಿಶಿಷ್ಟರ ಮೀಸಲಾತಿ ವರ್ಗೀಕರಿಸಿ ಒಳ ಮೀಸಲಾತಿ ಕಲ್ಪಿಸಬೇಕು. ಸ್ವಾತಂತ್ರ ಸಂದರ್ಭ ದಲ್ಲಿ ಜಾರಿಯಾದ 101 ಪರಿಶಿಷ್ಟ ಜಾತಿ ಗಳೊಟ್ಟಿಗೆ ಅನೇಕ ಜಾತಿಗಳನ್ನು ಸೇರಿಸಿ 150 ಉಪ ಜಾತಿಗಳನ್ನು ಬೆಳೆಸಿರುವ ಹಿನ್ನೆಲೆಯಲ್ಲಿ ಶೇ 18 ಮೀಸಲಾತಿಯನ್ನು ಇಂದಿನ ಪರಿಶಿಷ್ಟ ಕೋಟಾದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಶೇ 25 ರಷ್ಟು ಮೀಸಲಾತಿ ಹೆಚ್ಚಿಸಬೇಕು. ಬಹು ರಾಷ್ಟ್ರೀಯ ಕಂಪೆನಿಗಳು ಸೇರಿದಂತೆ ಎಲ್ಲ ಖಾಸಗಿ ಕಂಪೆನಿಗಳು ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ಉದ್ಯೋಗ ನೇಮಕಾತಿಯಲ್ಲಿ ಪರಿಶಿಷ್ಟರಿಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಬೆಳ್ತೂರು ಮಹದೇವ, ನಗರ ಘಟಕ ಅಧ್ಯಕ್ಷ ಎನ್.ಮಂಜುನಾಥ್ ಪ್ರತಿಭಟನೆಯಲ್ಲಿದ್ದರು. ಅನಿರ್ದಿಷ್ಟಾವಧಿ ಧರಣಿ 2ನೇ ದಿನಕ್ಕೆ

ಕನಿಷ್ಠ ವೇತನ, ತುಟ್ಟಿ ಭತ್ಯೆ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ಸದಸ್ಯರು ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.ಜಿಲ್ಲೆಯ ಬಹುತೇಕ ಪಂಚಾಯ್ತಿಗಳಲ್ಲಿ ನೌಕರರಿಗೆ ಕನಿಷ್ಠ ವೇತನ ಜಾರಿಯಾಗಿಲ್ಲ. ಸರ್ಕಾರದ ಆದೇಶ ಇದ್ದರೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅನು ಮೋದನೆ ನೆಪವೊಡ್ಡಿ ಬೇಕಾಬಿಟ್ಟಿ ಸಂಬಳ ನೀಡುತ್ತಿದ್ದಾರೆ.ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕನಿಷ್ಠ ಕೂಲಿ ಪಡೆಯುತ್ತಿರುವ ನೌಕರರು ತತ್ತರಿ ಸಿದ್ದಾರೆ. ಕನಿಷ್ಠ ವೇತನ ಮತ್ತು ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ನೌಕರರ ಸಮಸ್ಯೆಗೆ ಉತ್ತರ ಸಿಗುವವರೆಗೂ ಅನಿರ್ದಿ ಷ್ಟಾವಧಿ ಧರಣಿ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿ.ಬಸವರಾಜು ಕಲ್ಕುಣಿಕೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.