ಶುಕ್ರವಾರ, ಆಗಸ್ಟ್ 23, 2019
22 °C
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇದೇ 14ಕ್ಕೆ ಆರಂಭ

ಮೈಸೂರಿಗೆ ತಡೆರಹಿತ ನೇರ ಸಂಪರ್ಕಕ್ಕೆ `ಫ್ಲೈ ಬಸ್'

Published:
Updated:

ಬೆಂಗಳೂರು: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ತಡೆರಹಿತ ನೇರ ಸಂಪರ್ಕ ಕಲ್ಪಿಸುವ ನೂತನ `ಫ್ಲೈ ಬಸ್' ಸೇವೆ ಇದೇ 14ರಿಂದ ಆರಂಭವಾಗಲಿದೆ.ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಹಾಗೂ ಆರಾಮದಾಯಕ ಸೇವೆ ಒದಗಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಹಯೋಗದೊಂದಿಗೆ `ಫ್ಲೈ ಬಸ್' ಸೇವೆ ಆರಂಭಿಸಲು ಕೆಎಸ್‌ಆರ್‌ಟಿಸಿ ಒಪ್ಪಂದ ಮಾಡಿಕೊಂಡಿದೆ.ಇದು ವಿಶಿಷ್ಟವಾದ ಐಷಾರಾಮಿ ಸೇವೆಯಾಗಿದೆ. ಫ್ಲೈ ಬಸ್ ಉನ್ನತ ತಂತ್ರಜ್ಞಾನ ಹೊಂದಿದೆ. ಈ ಬಸ್‌ನಲ್ಲಿ ರಾಸಾಯನಿಕ ಶೌಚಾಲಯ, ಅಡುಗೆ ಮನೆ, ಆರಾಮದಾಯಕ ಆಸನಗಳು, ಪ್ರತಿ ಆಸನಗಳಿಗೆ ಟಿ.ವಿ. ಸ್ಕ್ರೀನ್ (70+ ಲೈವ್ ಟಿ.ವಿ. ಚಾನಲ್‌ಗಳು) ಅಳವಡಿಸಲಾಗಿದೆ. ಜತೆಗೆ ವಿಮಾನಯಾನದ ಆಗಮನ, ನಿರ್ಗಮನ ಕುರಿತು ನೇರ ಮಾಹಿತಿ ಪ್ರದರ್ಶಿಸುವ ವೈಶಿಷ್ಟ್ಯ ಹೊಂದಿದೆ.ವಿಮಾನ ನಿಲ್ದಾಣದಿಂದ ಮೈಸೂರಿಗೆ ಬೆಳಿಗ್ಗೆ 9.45ಕ್ಕೆ ಮತ್ತು ರಾತ್ರಿ 9.45ಕ್ಕೆ ಫ್ಲೈ ಬಸ್ ಸೇವೆ ಲಭ್ಯವಿದೆ. ಮೈಸೂರಿನಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2ಕ್ಕೆ ಮತ್ತು ಮಧ್ಯರಾತ್ರಿ 12.20ಕ್ಕೆ ಹೊರಡುತ್ತದೆ.`ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯನ್ನು ವೆಬ್‌ಸೈಟ್‌ನಲ್ಲೂ ಆರಂಭಿಸಲಾಗಿದೆ. ಈ ಸೇವೆ ಯಶಸ್ವಿಯಾಗುವ ವಿಶ್ವಾಸವಿದೆ. ಕೆಲವು ಪ್ರಯಾಣಿಕರು ಅನಿವಾರ್ಯ ಕಾರಣಗಳಿಂದ 3ರಿಂದ 4 ಸಾವಿರ ರೂಪಾಯಿ ಖರ್ಚು ಮಾಡಿ ಟ್ಯಾಕ್ಸಿಯಲ್ಲಿ ವಿಮಾನ ನಿಲ್ದಾಣದಿಂದ ಮೈಸೂರಿಗೆ ಪ್ರಯಾಣಿಸುತ್ತಾರೆ.ಹಲವರು ಕನಿಷ್ಠ ಎರಡು ಮೂರು ವಾಹನಗಳನ್ನು ಬದಲಾಯಿಸಿ ಪ್ರಯಾಣಿಸುತ್ತಾರೆ. ಈ ಅಂಶಗಳನ್ನು ಪರಿಗಣಿಸಿ ಫ್ಲೈ ಬಸ್ ಸೇವೆ ಪರಿಚಯಿಸುತ್ತಿದ್ದೇವೆ. ಮೈಸೂರು ಬಸ್ ನಿಲ್ದಾಣದಲ್ಲಿ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಫ್ಲೈ ಬಸ್‌ಗೆ ಪ್ರತ್ಯೇಕ ಸ್ಥಳ ಕಾಯ್ದಿರಿಸಲಾಗಿದೆ. ಟರ್ಮಿನಲ್ ಕಟ್ಟಡದ ಹೊರಗೆ ವಿಚಾರಣಾ ಕೇಂದ್ರ ಮತ್ತು ಮುಂಗಡ ಟಿಕೇಟ್ ಕಾಯ್ದಿರಿಸುವ ಸೇವೆ ಒದಗಿಸಲಾಗಿದೆ' ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ  ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ.`ಈ ಸೇವೆಯು ದೇಶದ ವಿಮಾನ ನಿಲ್ದಾಣಗಳಲ್ಲಿಯೇ ಮೊದಲನೆಯ ಸಾರಿಗೆ ಸಂಚಾರ ವ್ಯವಸ್ಥೆ. ಕರ್ನಾಟಕದ ಇತರ ನಗರಗಳಿಗೂ ಸಂಪರ್ಕ ಕಲ್ಪಿಸುವಲ್ಲಿಯೂ ಮೊದಲ ಹೆಜ್ಜೆಯಾಗಲಿದೆ. ಏರ್‌ಲೈನ್ಸ್‌ಗಳ ಜತೆ ಚರ್ಚಿಸಿ ಸ್ವದೇಶಿ ಮತ್ತು ವಿದೇಶಿ ವಿಮಾನದ ಟಿಕೆಟ್ ಜತೆಗೆ ಫ್ಲೈ ಬಸ್‌ನಲ್ಲಿ ಸೀಟು ಕಾಯ್ದಿರಿಸುವಿಕೆ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುವುದು' ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ರೆಡ್ಡಿ ತಿಳಿಸಿದ್ದಾರೆ.

Post Comments (+)