ಮೈಸೂರಿಗೆ ದಾಖಲೆ ಬಂಡವಾಳ!

7

ಮೈಸೂರಿಗೆ ದಾಖಲೆ ಬಂಡವಾಳ!

Published:
Updated:
ಮೈಸೂರಿಗೆ ದಾಖಲೆ ಬಂಡವಾಳ!

`ಉದ್ಯಮಿಯಾಗು-ಉದ್ಯೋಗ ನೀಡು~ ಎಂಬುದು ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ (ಜಿಮ್) ಧ್ಯೇಯೋದ್ದೇಶವಾದರೆ, `ಕನಸಿನೊಂದಿಗೆ ಬನ್ನಿ.. ಉದ್ದಿಮೆ ಆರಂಭಿಸಿ~..ಇದು `ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ~ಯ ಹೊಸ ಮಂತ್ರ.

ಯುವಕರಿಗೆ ಉದ್ದಿಮೆ ಸ್ಥಾಪಿಸಲು ನೆರವಾಗುವ ಉದ್ದೇಶದಿಂದ ಇದೇ ಮೊದಲ ಬಾರಿಗೆ `ಜಾಗತಿಕ ಬಂಡವಾಳ ಹೂಡಿಕೆದಾರರ (ಜಿಮ್) ಸಮಾವೇಶ~ ಮಾದರಿಯಲ್ಲಿ  ಮೇ 4ರಂದು ಮೈಸೂರಿನಲ್ಲಿ ಏರ್ಪಡಿಸಿದ್ದ ವಲಯ ಮಟ್ಟದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 612 ಮಂದಿ ಉದ್ದಿಮೆದಾರರು 10725 ಕೋಟಿ ರೂಪಾಯಿ ದಾಖಲೆ ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡರು. ಪ್ರವಾಸಿಗರ  ಮೆಚ್ಚಿನ ನಗರ ಮೈಸೂರಿಗೆ 9416 ಕೋಟಿ ರೂಪಾಯಿ ಬಂಡವಾಳ ಹರಿದು ಬಂದರೆ, ಮಂಜಿನ ನಗರಿಯತ್ತ ಉದ್ಯಮಿಗಳು ಕೊಂಚ ನಿರಾಸಕ್ತಿ ತೋರಿದ್ದು, ಕೇವಲ 3.40 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಒಲವು ತೋರಿದ್ದಾರೆ.

ವಿಶ್ವಪ್ರಸಿದ್ಧ `ತಾಜ್ ಮಹಲ್~ಗಿಂತ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಮೈಸೂರು ನಗರದಲ್ಲಿ ಪ್ರವಾಸೋದ್ಯಮ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಇಂಗಿತ ವ್ಯಕ್ತಪಡಿಸಿರುವುದು ಗಮನಾರ್ಹ. ಇದಲ್ಲದೆ, ಆರೋಗ್ಯ, ಜವಳಿ, ಆಟೋಮೊಬೈಲ್, ಆಹಾರ ಸಂಸ್ಕರಣೆ, ಎಂಜಿನಿಯರಿಂಗ್, ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್, ಮಿನರಲ್ಸ್, ಫಾರ್ಮಾ, ಕೆಮಿಕಲ್ಸ್, ಹೌಸಿಂಗ್ ಹಾಗೂ ಹೋಟೆಲ್ ಉದ್ಯಮಗಳಲ್ಲೂ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬಂದಿದ್ದಾರೆ.

ಅಗ್ರೊಟೆಕ್-101, ಆಟೋಮೊಬೈಲ್-77, ಶಿಕ್ಷಣ-20, ಎನ್ವಿರಾನ್‌ಮೆಂಟಲ್-11, ಆರೋಗ್ಯ-17, ಐಟಿ-10, ಮೂಲಸೌಲಭ್ಯ-30, ಜವಳಿ-14 ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ 33 ಮಂದಿ ಉದ್ದಿಮೆದಾರರು ಬಂಡವಾಳ ಹೂಡಿಕೆಗೆ ಉತ್ಸುಕರಾಗಿದ್ದಾರೆ. ತಂತ್ರಜ್ಞಾನದ ಭರಾಟೆಯಲ್ಲಿ ನಲುಗಿ ಹೋಗಿರುವ `ಗುಡಿ ಕೈಗಾರಿಕೆ~ ವಲಯದಲ್ಲಿ 59 ಮಂದಿ ಹಾಗೂ 60 ಮಹಿಳಾ ಉದ್ಯಮಿಗಳು ಉದ್ದಿಮೆ ಆರಂಭಿಸುವ ಕನಸಿನೊಂದಿಗೆ ಮುಂದೆ ಬಂದಿದ್ದಾರೆ.

ಈ ಪೈಕಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯು ವಿಶ್ವವಿದ್ಯಾನಿಲಯ ಆರಂಭಿಸಲು 500 ಕೋಟಿ ರೂಪಾಯಿ, ಆಯುರ್ವೇದ ಪಾರ್ಕ್‌ಗೆ 150 ಕೋಟಿ ಹಾಗೂ ಶ್ರೀಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಎರಡನೇ ಕ್ಯಾಂಪಸ್ ಆರಂಭಿಸಲು 100 ಕೋಟಿ ಸೇರಿದಂತೆ ಒಟ್ಟು 750 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುತ್ತಿದೆ. ಚಾಮುಂಡಿ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಫೌಂಡ್ರಿ ಆರಂಭಿಸಲು ರೂ. 15 ಕೋಟಿ, ಹೆಬ್ಬಾಳು ಕೈಗಾರಿಕಾ ಇಂಡಸ್ಟ್ರಿಯಲ್ ಅಸೋಸಿಯೇಷನ್ 100 ಕೋಟಿ ರೂಪಾಯಿ, ಡಿ.ಎನ್ ಸೌತ್ ಇಂಡಿಯಾ ಕಂಪೆನಿಯು ಪ್ರವಾಸೋದ್ಯಮದಲ್ಲಿ 250 ಕೋಟಿ ರೂಪಾಯಿ, ವಿದ್ಯುತ್ ಉತ್ಪಾದನೆಗೆ 210 ಕೋಟಿ, ಹೌಸಿಂಗ್ 25 ಕೋಟಿ ರೂಪಾಯಿ ಹಾಗೂ ಜವಳಿ ಉದ್ಯಮದಲ್ಲಿ 12 ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದೆ.

ರೋಪ್‌ವೇ

ನಾಡ ಅಧಿದೇವತೆ ಎಂದೇ ಬಿಂಬಿತವಾಗಿರುವ ಚಾಮುಂಡಿಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಸಂಬಂಧ ಸಮಾವೇಶದಲ್ಲಿ ವಿಷಯ ಪ್ರಸ್ತಾಪವಾಗಿದ್ದು ಈ ಬಗ್ಗೆ ಕೂಡಲೇ ಕ್ರಿಯಾಯೋಜನೆ ರೂಪಿಸುವಂತೆ ಏಜೆನ್ಸಿಗೆ ಸೂಚಿಸುವುದಾಗಿ ಬೃಹತ್ ಕೈಗಾರಿಕಾ ಸಚಿವರು ಭರವಸೆ ನೀಡಿದ್ದಾರೆ. ಅದೇ ರೀತಿ, ಮೈಸೂರು-ಬೆಂಗಳೂರು ಜೋಡಿ ರೈಲು ಹಳಿ ನಿರ್ಮಾಣ, ವಿಮಾನ ಹಾರಾಟ ಪುನರಾರಂಭ ಮಾಡಲು ಕ್ರಮಕೈಗೊಳ್ಳುವುದಾಗಿಯೂ ಹೇಳಿದ್ದಾರೆ.

ಉದ್ದಿಮೆದಾರರಲ್ಲಿ ಹೊಸ ನಿರೀಕ್ಷೆ

ಮೈಸೂರು-ತಿ.ನರಸೀಪುರ ರಸ್ತೆಯ ಲಲಿತ ಮಹಲ್ ಹೆಲಿಪ್ಯಾಡ್ ಬಳಿ 32.3 ಎಕರೆಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ವಿಶ್ವ ದರ್ಜೆ ಸಭಾಂಗಣ, ಫಿಲಂ ಸಿಟಿ (ಚಿತ್ರ ನಗರಿ), ಆಯುರ್ವೇದ ನಗರ, ಫಾರ್ಮಾ ಪಾರ್ಕ್ ನಿರ್ಮಾಣ, ಮೈಸೂರು-ಬೆಂಗಳೂರು ನಡುವೆ 25 ನಿಮಿಷದಲ್ಲಿ ಸಂಚರಿಸುವ `ಬುಲೆಟ್ ಟ್ರೈನ್~ ಸೇವೆ, ಮೈಸೂರು-ಹಾಸನ-ಮಂಗಳೂರು ನಡುವೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಭರವಸೆ ನೀಡಿರುವುದು ಮೈಸೂರು ವಲಯದ ಉದ್ದಿಮೆದಾರರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಉದ್ದಿಮೆದಾರರ ಪ್ರಮುಖ ಬೇಡಿಕೆಗಳು

ಮೈಸೂರು-ಬೆಂಗಳೂರು ಚತುಷ್ಪಥ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ವಾರಕ್ಕೆ 2 ಅಥವಾ 3 ದಿನ ಮೈಸೂರಿನಿಂದ ಬೆಂಗಳೂರು, ದೆಹಲಿ, ಕೋಲ್ಕತ್ತಾ ಹಾಗೂ ಚೆನ್ನೈ ನಗರಗಳಿಗೆ ವಿಮಾನ ಸಂಚಾರ ಕಲ್ಪಿಸಬೇಕು. ಹೋಟೆಲ್ ಉದ್ಯಮಕ್ಕೆ ಶೇ 35 ಸಬ್ಸಿಡಿ ನೀಡಬೇಕು. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಪ್ರವಾಸಿ ವಾಹನಗಳ ತೆರಿಗೆಯನ್ನು ರದ್ದುಪಡಿಸಬೇಕು. ಮೂರು ಸಾವಿರ ಆಸನಗಳ ಸಾಮರ್ಥ್ಯವುಳ್ಳ ವಿಶ್ವದರ್ಜೆ ಸಭಾಂಗಣ ನಿರ್ಮಿಸಬೇಕು. ಮೈಸೂರಿನ ವಿವಿಧ ಭಾಗಗಳಲ್ಲಿ ನಾಲ್ಕು ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಬೇಕು.  ರೈಲ್ವೆ ಜೋಡಿ ಹಳಿ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು. ಮೈಸೂರು ನಗರವನ್ನು `ಪ್ರವಾಸೋದ್ಯಮ ಕೇಂದ್ರ~ವನ್ನಾಗಿ ಘೋಷಿಸಬೇಕು. ಕೈಗಾರಿಕಾ ಟೌನ್‌ಶಿಪ್ ನಿರ್ಮಾಣ ಮಾಡಬೇಕು.

- ಸುಧಾಕರ ಎಸ್.ಶೆಟ್ಟಿ, ಅಧ್ಯಕ್ಷ, ಮೈಸೂರು ಕೈಗಾರಿಕಾ ಹಾಗೂ ವಾಣಿಜ್ಯ ಸಂಸ್ಥೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry