ಶನಿವಾರ, ಜೂನ್ 12, 2021
23 °C

ಮೈಸೂರಿಗೆ ಸೀಮಿತ ಸರ್ಕಾರ: ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸುವ ಮೂಲಕ ಕೇವಲ ಮೈಸೂರು ಭಾಗಕ್ಕೆ ಸೀಮಿತರಾ­ಗಿದ್ದಾರೆ. ಎತ್ತಿನಹೊಳೆ ಯೋಜನೆಗೆ ಆದ್ಯತೆ ನೀಡುವ ಮೂಲಕ ಕೃಷ್ಣೆಯನ್ನು ಮರೆತಿದ್ದಾರೆ, ರಾಜ್ಯ ಸರ್ಕಾರ ಕೇವಲ ಮೈಸೂರಿಗೆ ಸೀಮಿತವಾಗಿದೆ ಎಂದು ಮಾಜಿ ಸಚಿವ, ಮುಧೋಳ ಶಾಸಕ ಗೋವಿಂದ ಕಾರಜೋಳ ಆರೋಪಿಸಿದರು.ನಗರದ ಬಿವಿವಿ ಸಂಘದ ಸಭಾಂಗಣದಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ­ವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬೆಲೆ ಏರಿಕೆ, ಭ್ರಷ್ಟಾಚಾರದಿಂದ ದೇಶದ ಜನತೆಗೆ ಶಾಪವಾಗಿರುವ ಕಾಂಗ್ರೆಸ್‌ ಅನ್ನು ಈ ಚುನಾವಣೆಯಲ್ಲಿ ಬೇರು ಸಹಿತ ಕಿತ್ತೊಗೆಯಬೇಕಾಗಿದೆ, ಕಾಂಗ್ರೆಸ್‌ ಈ ದೇಶಕ್ಕೆ ಕ್ಯಾನ್ಸರ್‌ ಇದ್ದಂತೆ ಎಂದರು.ಹತ್ತು ವರ್ಷಗಳ ಯುಪಿಎ ಆಡಳಿತಾ­ವಧಿಯಲ್ಲಿ ಪ್ರಧಾನಿ ಹುದ್ದೆಯು ಘನತೆ, ಗೌರವ ಕಳೆದು­ಕೊಂಡಿದೆ, ವಿಶ್ವದಲ್ಲಿ ಭಾರತ ತಲೆ­ತಗ್ಗಿಸುವಂತಹ ಭ್ರಷ್ಟಾಚಾರ ನಡೆದಿದೆ ಎಂದರು.ಬಿಜೆಪಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ವಿರೋಧಿ ಎಂಬ ಸುಳ್ಳು ಆರೋಪ ಮಾಡುವ ಮೂಲಕ ಕಾಂಗ್ರೆಸ್‌ ಜನತೆಯನ್ನು ಭಯದ ವಾತಾವರಣದಲ್ಲಿ ಇಟ್ಟಿದೆ. ಕಾಂಗ್ರೆಸ್‌­ನಿಂದ ದಲಿತರಿಗೆ, ಹಿಂದುಳಿದ ವರ್ಗದ­ವರಿಗೆ ಮತ್ತು ಅಲ್ಪಸಂಖ್ಯಾತರಿಗೆ ಮೋಸ­ವಾಗಿದೆ ಎಂದು ಆರೋಪಿಸಿ­ದರು.ಕೂಡಲಸಂಗಮದ ವರೆಗೆ ಪಾದ­ಯಾತ್ರೆ ಮಾಡುವ ಮೂಲಕ ಕಾಂಗ್ರೆಸ್‌ ಮುಖಂಡರು ಈ ಹಿಂದೆ ತಮ್ಮ ಪಾಪ ತೊಳೆದುಕೊಂಡರೇ ಹೊರತು, ಕೃಷ್ಣಾ ನೀರಾವರಿ ಯೋಜನೆಗಳ ಅನುಷ್ಠಾನ ಸಂಬಂಧ ಅಂದು ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ದೂರಿದರು.‘ಅನ್ನಭಾಗ್ಯ’ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ, ಇದರಲ್ಲಿ ಸರ್ಕಾರದ ಪಾಲೂ ಇದೆ ಎಂದು ಆರೋಪ ಮಾಡಿ­ದರು.ದೇಶದಲ್ಲಿ ಪ್ರಥಮ ಭಾರಿಗೆ ರೈತರ ಸಾಲ ಮನ್ನಾ ಯೋಜನೆ, ಪಡಿತರ ವ್ಯವಸ್ಥೆ ಜಾರಿಗೆ ತಂದವರು ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸರ್ಕಾರವೇ ಹೊರತು ಕಾಂಗ್ರೆಸ್‌ ಅಲ್ಲ ಎಂದರು.ದೇಶದಲ್ಲಿ ಜಾತಿ–ಜಾತಿಗಳ ನಡುವೆ, ಧರ್ಮ, ಧರ್ಮಗಳ ನಡುವೆ ಜಗಳ ಹಚ್ಚುವ ಕೆಲಸ ಕಾಂಗ್ರೆಸ್‌ ಮಾಡಿದೆ ಎಂದು ದೂರಿದರು.

ಹೊಳ್ಳಿ ಹೊಳ್ಳಿ ಪೂಜೆ: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ವರ್ಷ­ವಾದರೂ ಯಾವೊಂದು ಹೊಸ ಯೋಜನೆ, ಕಾಮಗಾರಿ ಜಾರಿಗೊಳಿ­ಸಿಲ್ಲ, ಬಿಜೆಪಿ ಅವಧಿಯಲ್ಲಿ ಅನು­ಮೋದನೆ­ಗೊಂಡ, ಅನುಷ್ಠಾನ­ಗೊಂಡ ಯೋಜನೆಗಳಿಗೆ ಮುಖ್ಯಮಂತ್ರಿ ಮತ್ತು ಸಚಿವ, ಶಾಸಕರು ಹೊಳ್ಳಿ ಹೊಳ್ಳಿ ಪೂಜೆ, ಶಂಕುಸ್ಥಾಪನೆ, ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಬಿಜೆಪಿ ಅವಧಿಯಲ್ಲಿ ₨ 555 ಕೋಟಿ ಮೊತ್ತದಲ್ಲಿ ಕೈಗೊಳ್ಳಲಾಗಿದ್ದ ಬಾಗಲಕೋಟೆ ನವನಗರ ಯೂನಿಟ್‌ 2ರ ಮೂಲಸೌಲಭ್ಯ ಅಭಿವೃದ್ಧಿಗೆ ಜಗದೀಶ್‌ ಶೆಟ್ಟರ್‌ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೂ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ವಿವೇಚನೆ ಇರುವವರು ಈ ರೀತಿ ಮಾಡುವುದಿಲ್ಲ ಎಂದರು.ಪಕ್ಷ ಗೆದ್ದೇಗೆಲ್ಲುತ್ತದೆ ಎಂದು ಬಿಜೆಪಿ ಕಾರ್ಯಕರ್ತರು ಅತಿಯಾದ ಆತ್ಮವಿಶ್ವಾಸದಿಂದ ಮೈಮರೆತು ಕುಳಿತುಕೊಳ್ಳದೇ ಹೆಚ್ಚಿನ ಶ್ರಮವಹಿಸ­ಬೇಕು ಎಂದು ಹೇಳಿದರು.ಅಪಪ್ರಚಾರ: ಪ್ರತಿ ಚುನಾವಣೆ ಸಂದರ್ಭದಲ್ಲಿ ನನ್ನ ವಿರುದ್ಧ ಕೆಲವರು ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡುವುದು ಮೊದಲಿನಿಂದಲೂ ನಡೆದುಬಂದಿದೆ. ನನ್ನ ವಿರುದ್ಧ ಏಕಮುಖವಾಗಿರುವ ಆರೋಪಗಳು ಕಳೆದ ಹತ್ತಾರು ವರ್ಷದಿಂದ ನಡೆಸ­ಲಾಗುತ್ತಿದೆ. ಆದರೂ 24 ವರ್ಷದಿಂದ ಬಿವಿವಿ ಸಂಘದ ಕಾರ್ಯಾಧ್ಯಕ್ಷನಾಗಿ, ಎರಡು ಬಾರಿ ಶಾಸಕನಾಗಿ ಜನಪರ ಕೆಲಸ ಮಾಡಿದ್ದೇನೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಟೀಕಾಕಾರರಿಗೆ ಕಾನೂನು ಪ್ರಕಾರ ಉತ್ತರ ನೀಡುತ್ತೇನೆ ಎಂದು ಚರಂತಿಮಠ ಎಚ್ಚರಿಕೆ ನೀಡಿದರು.ಬಿಜೆಪಿ ಲೋಕಸಭಾ ಅಭ್ಯರ್ಥಿ, ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಬಿಜೆಪಿ ಬೆಂಬಲಿಸುವ ಮೂಲಕ ಮೋದಿಯನ್ನು ಪ್ರಧಾನಿ­ಯನ್ನಾಗಿ ಮಾಡಬೇಕು ಎಂದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಶೀಲವಂತ, ಮಾಜಿ ಶಾಸಕರಾದ ಸಿದ್ದು ಸವದಿ, ದೊಡ್ಡನಗೌಡ ಪಾಟೀಲ, ಶ್ರೀಕಾಂತ ಕಲುಕರ್ಣಿ, ವಿಧಾನ ಪರಿಷತ್‌ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಎಂಎಲ್‌ಸಿ ವಿ.ಆರ್.ಸೋರಗಾವಿ, ಜಿ.ವಿ.ಮಂಟೂರ, ಜಿ.ಪಂ.ಸದಸ್ಯ ಹೂವಪ್ಪ ರಾಠೋಡ, ಜಯಂತ ಕುರಂದವಾಡ, ಸಂತೋಷ ಹೊಕ್ರಾಣಿ, ಕಲಾವತಿ ರಾಜೂರ, ಸಿ.ವಿ.ಕೋಟಿ, ನಗರಸಭೆ ಅಧ್ಯಕ್ಷ ಸುರೇಶ ಕುದರಿಕಾರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಂದಾ ಹೊಸಮಠ, ಸಂಗಣ್ಣ ಕಲಾದಗಿ, ಸಿದ್ದಣ್ಣ ಶೆಟ್ಟರ್‌ ಮತ್ತಿತರರು ಸಮಾವೇಶದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.