ಸೋಮವಾರ, ಜನವರಿ 20, 2020
21 °C

ಮೈಸೂರಿನಲ್ಲಿ ಏಕಕಾಲಕ್ಕೆ ದೇವಸ್ಥಾನಗಳ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃವಾಗಿ ನಿರ್ಮಿಸಲಾಗಿದ್ದ ದೇವಸ್ಥಾನ, ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿ ಸುವುದಕ್ಕೆ ಕೊಂಚ ವಿರಾಮ ನೀಡಿದ್ದ ಜಿಲ್ಲಾಡಳಿತ ಮಂಗಳವಾರ ಮುಂಜಾನೆ ಯಿಂದಲೇ ತೆರವು ಕಾರ್ಯಾಚರಣೆಯನ್ನು ಆರಂಭಿಸಿತು.ಸುಪ್ರೀಂ ಕೋರ್ಟ್‌ನ ಆದೇಶದನ್ವಯ, ಜಿಲ್ಲಾಡಳಿತದ ಸೂಚನೆ ಮೇರೆಗೆ ಮಹಾನಗರಪಾಲಿಕೆಯ 9 ವಲಯ ಕಚೇರಿ ವ್ಯಾಪ್ತಿಗೆ ಬರುವ ಎಲ್ಲ ವಾರ್ಡ್‌ಗಳಲ್ಲೂ ಅನಧಿಕೃತವಾಗಿ ನಿರ್ಮಿಸಲಾಗಿದ್ದ ದೇವಸ್ಥಾನ ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಯನ್ನು ಮುಂಜಾನೆ 4 ಗಂಟೆಗೆ ಆರಂಭಿಸಲಾ ಯಿತು. ಎಲ್ಲ ವಲಯ ಕಚೇರಿಗಳ ಸಹಾಯಕ ಆಯುಕ್ತರ (ಎಸಿ) ನೇತೃತ್ವದಲ್ಲಿ 20 ಮಂದಿ ಪಾಲಿಕೆ ಎಂಜಿನಿಯರುಗಳು, 100 ಮಂದಿ ಗ್ಯಾಂಗ್‌ಮನ್‌ಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದರು. 10 ಟಿಪ್ಪರ್‌ಗಳು, ಜೆಸಿಬಿ ಯಂತ್ರಗಳನ್ನು ತೆರವು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.ನಗರದಲ್ಲಿ ಒಟ್ಟು 145 ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸಲು ಸ್ಥಳ ಗುರುತಿಸಲಾಗಿತ್ತು. ಈ ಪೈಕಿ 35 ಪ್ರಾರ್ಥನಾ ಮಂದಿರಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಲಾಯಿತು. ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾಗಿದ್ದ 15 ದೇವಸ್ಥಾನಗಳನ್ನು ತೆರವುಗೊಳಿಸಲಾಯಿತು.ಮಹದೇವಪುರ ರಸ್ತೆ, ಎಸ್ಪಿ ಕಚೇರಿ ಬಳಿ, ಬಸವೇಶ್ವರ ರಸ್ತೆ, ರಾಮಾನುಜ ರಸ್ತೆ, ಕುವೆಂಪುನಗರ, ಕುಂಬಾರಕೊಪ್ಪಲು, ಕುಂಬಾರಕೊಪ್ಪಲು ಗೇಟ್, ಹೆಬ್ಬಾಳು ಮುಖ್ಯ ರಸ್ತೆ, ಸರಸ್ವತಿಪುರಂ, ಎಂ.ಜಿ.ರಸ್ತೆ ಸೇರಿದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಪ್ರಾರ್ಥನಾ ಮಂದಿರಗಳನ್ನು ನೆಲಸಮ ಮಾಡಲಾಯಿತು.ಸ್ಥಳೀಯರ ವಿರೋಧ: ದೇವಸ್ಥಾನ ತೆರವು ಕಾರ್ಯಾಚರಣೆಗೆ ಕೆಲ ಬಡಾವಣೆಗಳಲ್ಲಿ ಸ್ಥಳೀಯರು ವ್ಯಾಪಕ ವಿರೋಧ ವ್ಯಕ್ತಪಡಿಸಿ ದರು. ದೇವಸ್ಥಾನಗಳನ್ನು ಮಾತ್ರ ಅಧಿಕಾರಿಗಳು ತೆರವು ಮಾಡುತ್ತಿರುವ ಕ್ರಮ ಖಂಡನೀಯ. ಏಕಕಾಲಕ್ಕೆ ಎಲ್ಲವನ್ನು ತೆರವುಗೊಳಿಸಬೇಕು ಎಂದು ನಾಗರಿಕರು ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ಹರಿಹಾಯ್ದರು. ಇದರಿಂದ ಮಾತಿನ ಚಕಮಕಿ ನಡೆಯಿತು.ಪ್ರತಿಭಟನೆ: ದೇವಸ್ಥಾನಗಳನ್ನು ಕೆಡವುದನ್ನು ವಿರೋಧಿಸಿ ಗುಂಡೂರಾವ್‌ನಗರ, ಕೆ.ಜಿ. ಕೊಪ್ಪಲು, ಕುಂಬಾರಕೊಪ್ಪಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು. ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ಸುಪ್ರೀಂ ಕೋರ್ಟ್ ಮತ್ತು ಜಿಲ್ಲಾಡಳಿತದ ಆದೇಶವಾದ್ದರಿಂದ ತೆರವು ಕಾರ್ಯಾಚರಣೆಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಮನದಟ್ಟು ಮಾಡಿಕೊಟ್ಟರು.ಆಟೋ ನಿಲ್ದಾಣಗಳಲ್ಲಿ ನಿರ್ಮಿಸಿರುವ ಧ್ವಜಾರೋಹಣ ಕಟ್ಟೆಗಳನ್ನು ಸ್ವಯಂಪ್ರೇರಿತ ರಾಗಿ ಸಂಜೆ ಒಳಗೆ ತೆರವುಗೊಳಿಸಲು ಅಧಿಕಾರಿ ಗಳು ಆಟೋ ಚಾಲಕರಿಗೆ ಸೂಚಿಸಿದರು. ಡಿಸಿಪಿಗಳಾದ ಬಸವರಾಜ ಮಾಲಗತ್ತಿ, ಪಿ.ರಾಜೇಂದ್ರ ಪ್ರಸಾದ್, ಎಸಿಪಿಗಳಾದ ಚೆಲುವರಾಜು, ಸಿ.ಡಿ.ಜಗದೀಶ್, ಶಂಕರೇಗೌಡ (ಸಂಚಾರ), ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಕಾರ್ಯಾಚರಣೆ ವೇಳೆ ಹಾಜರಿದ್ದರು. ಸುಮಾರು 1 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಪೊಲೀಸ್ ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ದೇವಸ್ಥಾನಗಳ ತೆರವು: ಶ್ರೀರಾಮ ಸೇನೆ ಖಂಡನೆ

ಮೈಸೂರು: ನಗರದಾದ್ಯಂತ ಜಿಲ್ಲಾಡಳಿತ ದೇವಸ್ಥಾನಗಳನ್ನು ತೆರವುಗೊಳಿಸುತ್ತಿರುವ ಕ್ರಮ ಖಂಡನೀಯ ಎಂದು ಶ್ರೀರಾಮ ಸೇನೆ ತಿಳಿಸಿದೆ.ಸುಪ್ರೀಂಕೋರ್ಟ್ ಆದೇಶದಂತೆ ದೇವಸ್ಥಾನಗಳನ್ನು ತೆರವುಗೊಳಿಸಲು ಜನರ ಮನವೊಲಿಸಿ ಬೇರೆಡೆಗೆ ಸ್ಥಳಾಂತರ ಮಾಡಲು ಕಾಲಾವಕಾಶ ನೀಡದೆ ಏಕಾಏಕಿ ಕಾರ್ಯಾಚರಣೆಗೆ ಮುಂದಾಗಿರುವುದು ಸರಿಯಲ್ಲ.ಇದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ. ನಗರಪಾಲಿಕೆ ಸದಸ್ಯರು ಜನರ ಮನವೊಲಿಸಿ ನಂತರ ಕಾರ್ಯಾಚರಣೆ ನಡೆಸಬೇಕು. ಸಾವಿರಾರು ಟನ್‌ಗಟ್ಟಲೆ ಕೊಳೆಯುತ್ತಿರುವ ಆಹಾರ ಪದಾರ್ಥಗಳನ್ನು ಜನರಿಗೆ ಹಂಚುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದನ್ನು ಬಿಟ್ಟು ದೇವಸ್ಥಾನಗಳನ್ನು ತೆರವುಗೊಳಿಸಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಸೇನೆಯ ಮೈಸೂರು ಘಟಕ ಅಧ್ಯಕ್ಷ ಸಂಜಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)