ಮೈಸೂರಿನಲ್ಲಿ ಮಾರಾಟ ಮಳಿಗೆ ಸ್ಥಾಪನೆ: ಎಚ್ಕೆ

7
ರಾಜ್ಯದಲ್ಲಿ ರಾಜೀವ್ ಗಾಂಧಿ ಚೈತನ್ಯ ಯೋಜನೆ

ಮೈಸೂರಿನಲ್ಲಿ ಮಾರಾಟ ಮಳಿಗೆ ಸ್ಥಾಪನೆ: ಎಚ್ಕೆ

Published:
Updated:

ಮೈಸೂರು: ರಾಜ್ಯ ಸರ್ಕಾರವು ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ನಿರುದ್ಯೋಗಿಗಳಿಗೆ ಎರಡು ಲಕ್ಷ ಉದ್ಯೋಗವಕಾಶ ಕಲ್ಪಿಸುವ ಗುರಿ ಹೊಂದಿದೆ. ಫಲಾನುಭವಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಮೈಸೂರಿನಲ್ಲಿ ಮಾರಾಟ ಮಳಿಗೆಯೊಂದನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ನಗರದ ವಿನೋಬಾ ರಸ್ತೆಯ ಜಲದರ್ಶಿನಿ ಆವರಣದಲ್ಲಿ ಭಾನುವಾರ ನಡೆದ ಚಾಮರಾಜ ಕ್ಷೇತ್ರದ ಶಾಸಕ ವಾಸು ಅವರ ಸಾರ್ವಜನಿಕ ಸಂಪರ್ಕ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ರಾಜೀವ್ ಗಾಂಧಿ ಚೈತನ್ಯ ಯೋಜನೆಯ ಫಲಾನುಭವಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ ಅವರನ್ನು ಪ್ರೋತ್ಸಾಹಿಸಬೇಕಿದೆ. ಮಾಲ್, ಸಂತೆ, ಮೇಳ ಇತ್ಯಾದಿ ಯಾವುದೇ ರೀತಿಯ ಮಾರುಕಟ್ಟೆ ಕಲ್ಪಿಸಿ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ವೇದಿಕೆ ಒದಗಿಸಲು ಚಿಂತನೆ ನಡೆದಿದೆ. ಸ್ಥಳವಕಾಶ ಕಲ್ಪಿಸಿದರೆ ಮೈಸೂರಿನ ಚಾಮರಾಜ ಕ್ಷೇತ್ರದಲ್ಲೇ ಮಾರಾಟ ಮಳಿಗೆ ತೆರೆಯಲೂ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಮೈಸೂರು ಸ್ಫೂರ್ತಿ ಕೇಂದ್ರವಾಗಿದೆ. ಕ್ಷೇತ್ರದ ಸಮಸ್ಯೆಗಳನ್ನು ತಿಳಿದು ಅವುಗಳನ್ನು ಹಂತ ಹಂತವಾಗಿ ಜನಪ್ರತಿನಿಧಿಗಳು ಪರಿಹರಿಸಬೇಕು. ಶಾಸಕರ ಕಚೇರಿಯಲ್ಲಿ ಕ್ಷೇತ್ರದ ಸಮಸ್ಯೆಗಳ ಪಟ್ಟಿ ಮತ್ತು ಆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಫಲಕದಲ್ಲಿ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಮಾತನಾಡಿ, ಅಶಕ್ತರ ಏಳಿಗೆ ಮತ್ತು ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪುವಂತೆ ನೋಡಿಕೊಳ್ಳುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ ಎಂದು ನುಡಿದರು.ರಾಜಕಾರಣಿಗಳು ಜವಾಬ್ದಾರಿಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು. ಜನರ ಆಸೆ-ಆಕಾಂಕ್ಷೆಗಳು ಹಿಮಾಲಯದಷ್ಟಿರುತ್ತವೆ. ಜನಪ್ರತಿನಿಧಿಯು ಮಿತಿಯೊಳಗೆ ಜನರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಅಧಿಕಾರವು ಅಮಲನ್ನು ಏರಿಸುತ್ತದೆ, ರಾಜಕಾರಣಿ ಪಕ್ಷದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಪ್ರಜೆಗಳ ಮುಂದೆ ನಿಲ್ಲಲೇಬೇಕು. ಚುನಾವಣೆ ಎಂಬ ಅಗ್ನಿಪರೀಕ್ಷೆಯಲ್ಲಿ ಗೆಲ್ಲಿಸುವವರು/ ಸೋಲಿಸುವವರು ಮತದಾರರೇ. ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳ ಭವಿಷ್ಯ ಮತದಾರರ ಪ್ರಭುಗಳ ಕೈಯಲ್ಲಿರುತ್ತದೆ ಎಂದು ಹೇಳಿದರು.ಬಡತನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಾಯಕರು ಕಾರ್ಯೋನ್ಮುಖರಾಗಬೇಕು. ಬಡತನ ರೇಖೆಯ ಕೆಳಗಿರುವವರನ್ನು ಮೇಲೆತ್ತುವುದು ಜನಪತ್ರಿನಿಧಿಗಳ ಕರ್ತವ್ಯ. ಈ ಭರದಲ್ಲಿ ಉಳ್ಳವರಿಗೆ ಯಾವುದೇ ತೊಂದರೆ ನೀಡಬಾರದು. ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಜನಪರ ಯೋಜನೆಗಳನ್ನು ಸ್ಥಳೀಯ ಆಡಳಿತಗಳ ಮೂಲಕ ಅರ್ಹರಿಗೆ ತಲುಪಿಸುವುದೇ ಅಧಿಕಾರ ವಿಕೇಂದ್ರೀಕರಣದ ಉದ್ದೇಶವಾಗಿದೆ. ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಜನರು ಪಾಲ್ಗೊಂಡು ಯೋಜನೆಗಳು, ಸೌಲಭ್ಯಗಳ ಮಾಹಿತಿ ಪಡೆದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಹಿರಿಯ ಸಾಹಿತಿ ದೇ. ಜವರೇಗೌಡ ಮಾತನಾಡಿ, ಕನ್ನಡ ಸಾಹಿತ್ಯ ಶ್ರೇಷ್ಠವಾದುದು. ಕನ್ನಡವನ್ನು ರಾಜ್ಯದ ಆಡಳಿತ ಭಾಷೆಯಾಗಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿನ ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಇತ್ಯಾದಿ ಎಲ್ಲ ಕಚೇರಿಗಳಲ್ಲಿ ಅಧಿಕಾರಿಗಳು ಕನ್ನಡದಲ್ಲೇ ಟಿಪ್ಪಣಿ ಬರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಪಾಲಿಕೆ ಸದಸ್ಯ ಸ್ನೇಕ್ ಶ್ಯಾಮ್, ಸಂಚಾರ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಎಂ.ಜಿ. ರಮೇಶ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸಾಮಾಜಿಕ ಸಂಸ್ಥೆಗಳಿಗೆ ಹಣಕಾಸು ನೆರವು ನೀಡಲಾಯಿತು.ಸುತ್ತೂರಿನ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಜರತ್ ಮೌಲನಾ ಉಸ್ಮಾನ್ ಷರೀಫ್, ಶಾಸಕ ತನ್ವೀರ್ ಸೇಟ್, ಬಸವೇಗೌಡ, ಮಾದೇಗೌಡ, ದಾಸೇಗೌಡ, ಸತ್ಯಪ್ಪ, ಲಕ್ಷ್ಮಣ್ ಇತರರು ಇದ್ದರು. ಶಾಸಕ ವಾಸು ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry