ಮೈಸೂರಿನಲ್ಲಿ `ಸೈಕೊ' ವದಂತಿ

7

ಮೈಸೂರಿನಲ್ಲಿ `ಸೈಕೊ' ವದಂತಿ

Published:
Updated:

ಮೈಸೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡಿರುವ ಕೈದಿ ಜೈಶಂಕರ್ ಅಲಿಯಾಸ್ ಸೈಕೊ ಶಂಕರ್ ಇಲ್ಲಿನ ಒಂದು ಬಾರ್‌ನಲ್ಲಿ ಗುರುವಾರ ಪ್ರತ್ಯಕ್ಷವಾಗಿರುವ ವದಂತಿ ದಟ್ಟವಾಗಿ ಹಬ್ಬಿತ್ತು.ಸೆ. 1ರಂದು ಕಾರಾಗೃಹದಿಂದ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರುವ ಜೈಶಂಕರ್ ಪತ್ತೆಗಾಗಿ ರಾಜ್ಯ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿರುವ ನಡುವೆ ನಗರದ ಗ್ರಾಮಾಂತರ ಬಸ್ ನಿಲ್ದಾಣದ ಎದುರಿನ ಮಹಾರಾಜ ಕಾಂಪ್ಲೆಕ್ಸ್‌ನಲ್ಲಿರುವ ಮಹೇಶ್ವರಿ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಈತ ಗುರುವಾರ ಬೆಳಿಗ್ಗೆ ಬಂದು ಮದ್ಯ ಸೇವಿಸಿ ಹೋಗಿದ್ದಾನೆ ಎಂದು ಗ್ರಾಹಕರೊಬ್ಬರು ಬಾರ್ ಕ್ಯಾಷಿಯರ್‌ಗೆ ಮಾಹಿತಿ ನೀಡಿದರು.ಬಾರ್‌ಗೆ ಬೆಳಿಗ್ಗೆ 11.30ರ ಸುಮಾರಿನಲ್ಲಿ ಒಂಟಿಯಾಗಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮದ್ಯ ಮತ್ತು ಮಾಂಸದೂಟವನ್ನು ಆರ್ಡರ್ ಮಾಡಿದ್ದಾನೆ. ಇದನ್ನು ಗಮನಿಸಿದ ಎದುರಿನ ಟೇಬಲ್‌ನಲ್ಲಿದ್ದ ನಾಲ್ವರ ಪೈಕಿ ಒಬ್ಬ ಯುವಕ ಅಪರಿಚಿತ ವ್ಯಕ್ತಿ ಜೈಶಂಕರ್ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾನೆ.ಅರ್ಜುನ್ ಎಂದು ಹೇಳಿಕೊಂಡ!

`ನೀನು ನನಗೆ ಗೊತ್ತು, ನಿನ್ನನ್ನು ಹತ್ತಿರದಿಂದ ನೋಡಿದ್ದೇನೆ. ನಿನ್ನ ಹೆಸರೇನು?' ಎಂಬಿತ್ಯಾದಿ ಪ್ರಶ್ನೆಗಳನ್ನು ಯುವಕ ಅಪರಿಚಿತನಿಗೆ ಕೇಳಿದ್ದಾನೆ. ಇದರಿಂದ ಗಾಬರಿಯಾದ ಅಪರಿಚಿತ ತರಾತುರಿಯಲ್ಲಿ ಮದ್ಯ ಸೇವಿಸಿ, ಮಾಂಸದೂಟವನ್ನು ಟೇಬಲ್‌ನಲ್ಲೇ ಬಿಟ್ಟು ಬಿಲ್ ಪಾವತಿಸಿ ಹೊರಟುಹೋದ. ಆತ `ಸೈಕೊ ಕಿಲ್ಲರ್' ಜೈಶಂಕರ್ ಇರಬೇಕು ಎಂದು ಯುವಕ ಹೋಟೆಲ್ ಕ್ಯಾಷಿಯರ್‌ಗೆ ತಿಳಿಸಿದ್ದಾನೆ.ಬಾರ್‌ಗೆ ಬಂದಿದ್ದ ಅಪರಿಚಿತ ವ್ಯಕ್ತಿ ಜೈಶಂಕರ್ ಎಂಬ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ವಿಷಯ ತಿಳಿದ ನಜರ್‌ಬಾದ್ ಠಾಣೆ ಪೊಲೀಸರು ಮಹೇಶ್ವರಿ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಿಸಿ ಕ್ಯಾಮೆರಾದಲ್ಲಿ ದಾಖಲು: ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲಿಸಿದಾಗ 11.38ರ ಸುಮಾರಿನಲ್ಲಿ ವ್ಯಕ್ತಿಯೊಬ್ಬ ಬಾರ್‌ನಿಂದ ಹೊರಹೋಗಿರುವ ದೃಶ್ಯ ಸೆರೆಯಾಗಿದೆ. ಈ ದೃಶ್ಯ ಅಸ್ಪಷ್ಟತೆಯಿಂದ ಕೂಡಿದೆ. ಆದರೆ, ಅಪರಿಚಿತ ವ್ಯಕ್ತಿ ಜೈಶಂಕರ್ ಎಂಬುದನ್ನು ಪೊಲೀಸರು ಅಲ್ಲಗಳೆದಿದ್ದಾರೆ. `ಬಾರ್‌ಗೆ ಬಂದಾತ ಜೈಶಂಕರ್ ಅಲ್ಲ ಎಂಬುದು ಖಾತರಿಯಾಗಿದೆ. ಇದು ಊಹಾಪೋಹ ಅಷ್ಟೆ. ಜೈಶಂಕರ್ ಭಾವಚಿತ್ರವನ್ನು ಬಾರ್‌ನ ಕೆಲಸಗಾರರಿಗೆ ತೋರಿಸಲಾಯಿತು. ಬಾರ್‌ಗೆ ಬಂದ ವ್ಯಕ್ತಿ ಜೈಶಂಕರ್ ಭಾವಚಿತ್ರಕ್ಕೆ ಹೋಲಿಕೆಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು' ಎಂದು ನಗರ ಪೊಲೀಸ್ ಕಮಿಷನರ್ ಡಾ.ಎಂ.ಎ. ಸಲೀಂ ತಿಳಿಸಿದರು.ಕರೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ: `ಸೈಕೊ ಶಂಕರ್ ಪ್ರತ್ಯಕ್ಷನಾದ ಬಗ್ಗೆ ಸಕಲೇಶಪುರ, ಬಿಡದಿ, ಬೈರಸಂದ್ರ ಕ್ರಾಸ್, ಮೈಸೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕರೆಗಳು ಬಂದಿವೆ. ಎಲ್ಲ ಮಾಹಿತಿಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸಲಾಗುತ್ತಿದೆ. ಈವರೆಗೆ ಆತನ ಬಗ್ಗೆ ಸುಳಿವು ಸಿಕ್ಕಿಲ್ಲ. ಸಾರ್ವಜನಿಕರ ಸುರಕ್ಷತೆಗೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ' ಎಂದು ಬೆಂಗಳೂರಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಕಮಲ್ ಪಂತ್ `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry