ಮೈಸೂರಿನಿಂದ ಮಹಾರಾಷ್ಟ್ರದ ಧೋತ್ರಿಯವರೆಗೆ ಕನ್ನಡ ಜ್ಯೋತಿ

7

ಮೈಸೂರಿನಿಂದ ಮಹಾರಾಷ್ಟ್ರದ ಧೋತ್ರಿಯವರೆಗೆ ಕನ್ನಡ ಜ್ಯೋತಿ

Published:
Updated:

ಕೂಡ್ಲಿಗಿ: ಎಲ್ಲಿಯ ಮೈಸೂರು, ಎಲ್ಲಿಯ ಮಹಾರಾಷ್ಟ್ರ ರಾಜ್ಯದ ಧೋತ್ರಿ ಎಂದು ಅಚ್ಚರಿಪಡಬೇಕಾಗಿಲ್ಲ. ಯುವಕನೊಬ್ಬ ಜ್ಯೋತಿಯನ್ನು ಹೊತ್ತು ಓಡುತ್ತಿರುವುದು ಮೈಸೂರಿನಿಂದ ಮಹಾರಾಷ್ಟ್ರದ ಧೋತ್ರಿಯವರೆಗೆ.  ಶುಕ್ರವಾರ ನಾಗನಾಥ ಎಂಬ ಯುವಕ ಹಾಗೂ ಸಂಗಡಿಗರು ಜ್ಯೋತಿಯನ್ನು ಹೊತ್ತು ಕೂಡ್ಲಿಗಿಯ ಮೂಲಕ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಸೊಲ್ಲಾಪುರಕ್ಕೆ ಸಾಗಿದರು.ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಧೋತ್ರಿ ಗ್ರಾಮದ ರೇಣುಕಾಚಾರ್ಯ ನವರಾತ್ರಿ ಮಹೋತ್ಸವ ಮಂಡಳದ ಯುವಕರು ಕಳೆದ 11 ವರ್ಷಗಳಿಂದಲೂ ನವರಾತ್ರಿ ಮಹೋತ್ಸವಕ್ಕಾಗಿ ನಿರಂತರವಾಗಿ ತಮ್ಮ ಗ್ರಾಮಕ್ಕೆ ಮೈಸೂರಿನ ಚಾಮುಂಡೇಶ್ವರಿಯಿಂದಲೇ ಜ್ಯೋತಿಯನ್ನು ಹೊತ್ತು ಘಟ ಸ್ಥಾಪನೆ ಮಾಡುತ್ತಾರೆ.ಅಕ್ಟೋಬರ್ 8ರಂದು ಮೈಸೂರಿನ ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ ಜ್ಯೋತಿಯನ್ನು ಬೆಳಗಿಸಿಕೊಂಡು ಯುವಕನೊಬ್ಬ ಓಡುತ್ತಲೇ ಸಾಗುತ್ತಾನೆ. ಜೊತೆಗೆ 25 ಯುವಕರ ಗುಂಪಿರುತ್ತದೆ. ಒಬ್ಬ ಯುವಕ ಮಾತ್ರ ಜ್ಯೋತಿಯನ್ನು ಹಿಡಿದು ಓಡುತ್ತಲೇ ಇರಬೇಕು ಎಂಬುದು ನಿಯಮ. ಉಳಿದವರು ಲಾರಿಯಲ್ಲಿ ನಿಧಾನವಾಗಿ ಸಾಗುತ್ತಾರೆ. ಒಬ್ಬನಿಗೆ ಸಾಕಾದರೆ ಮತ್ತೊಬ್ಬ ಸಿದ್ಧನಾಗಿರುತ್ತಾನೆ. ಹೀಗೆ ಈ ಯುವಕರು ಸುಮಾರು 750 ಕಿ.ಮೀ.ಗಳಷ್ಟು ಜ್ಯೋತಿಯನ್ನು ಓಡುತ್ತಲೇ ಒಯ್ದು ತಮ್ಮ ಗ್ರಾಮವಾದ ಧೋತ್ರಿಯಲ್ಲಿ ಘಟ ಸ್ಥಾಪನೆ ಮಾಡಿ ದೇವಿಯನ್ನು ಪ್ರತಿಷ್ಠಾಪಿಸುತ್ತಾರೆ. ಮಾರ್ಗ ಮಧ್ಯೆದಲ್ಲಿ ಜ್ಯೋತಿ ನಂದಬಾರದು ಎಂಬ ನಿಯಮವಿದೆ. ಒಂದು ವೇಳೆ ಜ್ಯೋತಿ ನಂದಿದಲ್ಲಿ ಮತ್ತೆ ಮರಳಿ ಮೈಸೂರಿಗೆ ಹೋಗಿ ಚಾಮುಂಡೇಶ್ವರಿಯ ಸನ್ನಿಧಿಯಿಂದಲೇ ಮರಳಿ ಜ್ಯೋತಿಯನ್ನು ತರಬೇಕೆಂಬುದು ಪದ್ಧತಿ ಎಂದು ಜ್ಯೋತಿಯನ್ನು ಒಯ್ಯುತ್ತಿದ್ದ ನಾಗನಾಥ ತಿಳಿಸಿದರು.ಅಕ್ಟೋಬರ್ 16ಕ್ಕೆ ತಮ್ಮ ಗ್ರಾಮವನ್ನು ತಲುಪಿ ದೇವಿಯನ್ನು ಪ್ರತಿಷ್ಠಾಪಿಸುವುದಾಗಿ ಯುವಕರು ತಿಳಿಸಿದರು. ಹಗಲು ರಾತ್ರಿ ಎನ್ನದೆ ಜ್ಯೋತಿ ನಿರಂತರವಾಗಿ ಸಾಗುತ್ತದೆ. ಪ್ರತಿದಿನಕ್ಕೆ 100 ಕಿ.ಮೀ.ನಷ್ಟು ಜ್ಯೋತಿ ಸಾಗುವುದು ಎಂದು ಯುವಕರು ತಿಳಿಸಿದರು. ಮಹಾರಾಷ್ಟ್ರದವರೆಗೆ ಗೌರವಪೂರ್ವಕ ವಾಗಿ ಓಡುತ್ತಲೇ ಒಯ್ಯುವ ಕನ್ನಡದ ಜ್ಯೋತಿ ಕೂಡ್ಲಿಗಿಯಿಂದ ಮುಂದೆ ಸಾಗಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry