ಮೈಸೂರಿನ ಅಂಗಳದಲ್ಲಿ ಆರ್ಚರಿ!

ಶುಕ್ರವಾರ, ಜೂಲೈ 19, 2019
24 °C

ಮೈಸೂರಿನ ಅಂಗಳದಲ್ಲಿ ಆರ್ಚರಿ!

Published:
Updated:

ಮೈಸೂರು: ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆ `ಮನೆ ಅಂಗಳಕ್ಕೆ ಕ್ರೀಡೆ~ ಶನಿವಾರ ಮೈಸೂರಿನಲ್ಲಿ `ಇಲಾಖೆ ಅಂಗಳದಲ್ಲಿ ಕ್ರೀಡೆ~ಯಾಗಿ ಮಾರ್ಪಟ್ಟಿತು!ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಈಚೆಗೆ ಬೆಂಗಳೂರಿನಲ್ಲಿ ಈ ಯೋಜನೆಗೆ ಇಲಾಖೆಯ ಸಚಿವ ಜನಾರ್ಧನ ರೆಡ್ಡಿ ಚಾಲನೆ ನೀಡಿದ್ದರು. ನಂತರ ನಿಗದಿಪಡಿಸಿದ ವೇಳಾಪಟ್ಟಿಯಂತೆ ಶನಿವಾರ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಹೆಬ್ಬಾಳ, ಹುಣಸೂರು ತಾಲ್ಲೂಕಿನ ಗಾವಡಗೆರೆಯಲ್ಲಿ ಮತ್ತು ಎಚ್.ಡಿ. ಕೋಟೆ ತಾಲ್ಲೂಕಿನ ಸರಗೂರು ವಿವೇಕಾನಂದ ಗಿರಿಜನಾಭಿವೃದ್ಧಿ ಸಂಸ್ಥೆ ಆವರಣದಲ್ಲಿ ತರಬೇತಿ ನಡೆಯಬೇಕಿತ್ತು.ಆದರೆ ಏಕಾಏಕಿ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿಯೇ ತರಬೇತಿ ಆರಂಭವಾಯಿತು. ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಹೆಬ್ಬಾಳದಲ್ಲಿ ತರಬೇತಿ ನೀಡುವುದಾಗಿ ಶುಕ್ರವಾರ ಸಂಜೆ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿತ್ತು.ಇಲ್ಲಿಯ ಡಿವೈಎಸ್‌ಎಸ್ ಕ್ರೀಡಾ ವಸತಿ ನಿಲಯದ ಮಕ್ಕಳು ಖುಷಿಯಿಂದಲೇ ತರಬೇತಿಯಲ್ಲಿ ಪಾಲ್ಗೊಂಡರು. ಎಲ್ಲರೂ ಬಿಲ್ಲುಗಾರಿಕೆಯ ಮಜಾ ಪಡೆದರು. ಆದರೆ, ಈ ತರಬೇತಿಯ ಉದ್ಘಾಟನೆಗೆ ಬರಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ ರಾಮದಾಸ್ ಸಂಜೆಯಾದರೂ ಬರಲೇ ಇಲ್ಲ. ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷ ಡಾ. ಶಿವರಾಮ್ ಅವರೇ ಗುರಿಗೆ ಬಾಣ ಬಿಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

`ಪ್ರತಿ ತಾಲ್ಲೂಕುಗಳಿಗೂ ಹೋಗಿ ಅಲ್ಲಿಯ ಆಯ್ದ ಕ್ರೀಡಾ ಸಂಸ್ಥೆಗಳ ಆಶ್ರಯದಲ್ಲಿ ಒಂದು ದಿನದ ತರಬೇತಿ ಶಿಬಿರ ಆಯೋಜಿಸಲಾಗುತ್ತದೆ. ನಂತರ ಅಲ್ಲಿಯ ಒಬ್ಬರನ್ನು ತರಬೇತುದಾರರನ್ನಾಗಿ ನೇಮಿಸಲಾಗುತ್ತದೆ. ಅವರಿಗೆ ಆರ್ಚರಿ, ಲಾನ್‌ಟೆನ್ನಿಸ್ ಸಲಕರಣೆಗಳನ್ನು ನೀಡಲಾಗು ತ್ತದೆ. ಕೆಲವು ದಿವಸಗಳ ನಂತರ ಮತ್ತೆ ಪರಿಶೀಲನೆ ನಡೆಸಿ ಉತ್ತಮವೆನಿಸುವ ಪ್ರತಿಭೆಗಳನ್ನು ಆಯ್ದು ವಿಶೇಷ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಅತ್ಯಂತ ಪ್ರಾಚೀನ ಮತ್ತು ಒಲಿಂಪಿಕ್ಸ್ ಮಾನ್ಯತೆ ಇರುವ ಕ್ರೀಡೆ ಬಿಲ್ಲುಗಾರಿಕೆ. ಆದ್ದರಿಂದ ಈ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ~ ಎಂದು ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ  ಕೆ. ಸುರೇಶ್ ವಿವರಿಸಿದರು.ಮಕ್ಕಳಿಗೆ ತರತಬೇತಿ ನೀಡುತ್ತಿರುವ ರಾಜ್ಯದ ಏಕೈಕ ಆರ್ಚರಿ ಕೋಚ್ ಬೆಂಗಳೂರಿನ ಬ್ರಿಜೇಶ್‌ಕುಮಾರ್, `ಏಳು ಊರುಗಳಲ್ಲಿ ಈಗಾಗಲೇ ತರಬೇತಿ ನೀಡಿ ಬಂದಿದ್ದೇವೆ. ಆದರೆ ಕೇವಲ ಒಂದು ಗಂಟೆಯಲ್ಲಿ ಯಾವುದೇ ಕ್ರೀಡೆಯನ್ನು ಸಂಪೂರ್ಣವಾಗಿ ಕಲಿಸುವುದು ಅಸಾಧ್ಯ. ನಾವು ಹೇಳಿಕೊಟ್ಟಿದ್ದನ್ನು ಸ್ಥಳೀಯ ಕೋಚ್‌ಗಳು ಪ್ರತಿನಿತ್ಯ ಮಕ್ಕಳಿಗೆ ಕಲಿಸುತ್ತ ಹೋದರೆ ಉತ್ತಮ ಫಲಿತಾಂಶ ಸಾಧ್ಯವಿದೆ. ವಿಶ್ವಮಟ್ಟದ ಪದಕವಿಜೇತ ಬಿಲ್ಲುಗಾರರು ನಮ್ಮ ದೇಶದಲ್ಲಿದ್ದಾರೆ. ಡೋಲಾ ಬ್ಯಾನರ್ಜಿ, ಲಿಂಬಾರಾಮ್ ಅವರಂತಹ ಆರ್ಚರಿ ಪಟುಗಳು ಇದ್ದಾರೆ. ಈ ಪುರಾತನ ಆಟವನ್ನು ಪ್ರಚುರಗೊಳಿಸಲೆಂದೇ ಈ ಯೋಜನೆಯಲ್ಲಿ ಇದನ್ನು ಸೇರ್ಪಡೆ ಮಾಡಲಾಗಿದೆ~ ಎಂದು `ಪ್ರಜಾವಾಣಿ~ಗೆ ವಿವರಿಸಿದರು.ಮೈಸೂರಿನಲ್ಲಿ ಆರು ತಿಂಗಳ ಹಿಂದೆ ಆರಂಭವಾಗಿರುವ ಚಾಮುಂಡಿ ಏವಿಯೇಷನ್, ಫೆನ್ಸಿಂಗ್, ಆರ್ಚರಿ ಸಂಸ್ಥೆಯ ಸಹಯೋಗದಲ್ಲಿ ಇಲಾಖೆಯು ತರಬೇತಿಯನ್ನು ಮುಂದುವರಿಸಲಿದೆ.ಕ್ರೀಡಾ ನಿಲಯದ ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳು, ಸಾರ್ವಜನಿಕರಿಗೆ ತರಬೇತಿ ಮುಕ್ತ ಎಂದು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ತರಬೇತುದಾರರ ತಂಡವು ಸರಗೂರಿಗೆ ತೆರಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry