ಮೈಸೂರಿನ ವಿಶೇಷವನ್ನು ವಿಶ್ವವ್ಯಾಪಿ ಮಾಡಿದವರು

7

ಮೈಸೂರಿನ ವಿಶೇಷವನ್ನು ವಿಶ್ವವ್ಯಾಪಿ ಮಾಡಿದವರು

Published:
Updated:

ಆರ್.ಕೆ. ನಾರಾಯಣ್ ಅವರ ನಿವಾಸವನ್ನು ಸ್ಮಾರಕ ಮಾಡುವ ವಿವಾದದ ಬಗ್ಗೆ ನಾಲ್ಕು ಮಾತು. ಅವರ ಮೈಸೂರಿನ ಮನೆ, ಸಾಹಿತ್ಯಾಸಕ್ತರಿಗೆ ವಿಶೇಷ ಆಕರ್ಷಣೆ. ನಾರಾಯಣ್ ಅವರು ಬಿಳಿಲುಂಗಿ ಸುತ್ತಿಕೊಂಡು ಅರ್ಧ ತೋಳಿನ ಬಿಳಿಅಂಗಿ ತೊಟ್ಟು, ದಪ್ಪ ಕನ್ನಡಕ ಧರಿಸಿ, ಮೈಸೂರು ಮೆಟ್ಟನ್ನ ತೊಟ್ಟು, ಮನೆ ಮುಂದೆ ಬೆತ್ತದ ಕುರ್ಚಿ ಮೇಲೆ ಕೂತು ಏನನ್ನಾದರೂ ಓದುವುದನ್ನೋ, ಬರೆಯುವುದನ್ನೋ ಮಾಡುತ್ತಿದ್ದರು.  ಯಾರಾದರೂ ಅವರನ್ನು ನೋಡಲು ಬಂದರೆ, ಅವರನ್ನ ಕರೆದು ಮಾತಾಡಿಸಿ `ಏಕೆ ಬಂದಿದ್ದೀರಿ?~ ಎಂದು ಕೇಳುತ್ತಿದ್ದರು. ಅವರನ್ನೇ ನೋಡುವುದಕ್ಕೆ ಬಂದದ್ದು, ಎಂದು ಹೇಳಿದರೆ ಮಾತ್ರ, ಅವರ ಮಾತು ಮುಂದುವರಿಯುತ್ತಿತ್ತು. “ಮೈಸೂರು ನೋಡಲಿಕ್ಕೆ ಬಂದಿದ್ದೆವು. ಹಾಗೇ ನಿಮ್ಮನ್ನು ನೋಡಿಕೊಂಡು ಹೋಗೋಣವೆಂದುಕೊಂಡು ಬಂದೆವು” ಎಂದರೆ ಸಾಕು, ಸಿಡಿಮಿಡಿಗೊಂಡು ಮಾತನ್ನೇ ನಿಲ್ಲಿಸಿಬಿಡುತ್ತಿದ್ದರು. ಈ ರೀತಿ ಸಿಡಿಮಿಡಿಗೊಳ್ಳುವುದಕ್ಕೆ ಅವರನ್ನೇ ಬಂದು ನೋಡುವವರೇ ಇಲ್ಲ ಎನ್ನುವ ಅನಾಥ ಭಾವನೆ ಅವರಲ್ಲಿ ಬೆಳದಿತ್ತೇನೋ?ಅವರ ತಂದೆ ರಾಸಿಪುರಂ ಕೃಷ್ಣಸ್ವಾಮಿ ಅಯ್ಯರ್. ಅವರು ಮೈಸೂರಿನ ಮಹಾರಾಜ ಹೈಸ್ಕೂಲ್ ಮತ್ತು ಚನ್ನಪಟ್ಟಣದ ಹೈಸ್ಕೂಲ್‌ನಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿ ನಿವೃತ್ತರಾಗಿ, ದಿವಾನ್ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿದ್ದ ಪ್ರೊ. ಹಿರಿಯಣ್ಣನವರಿಗೆ ಸೇರಿದ್ದ ಮನೆಯಲ್ಲಿ ವಾಸವಾಗಿದ್ದರು. ಮನೆಯ ಸುತ್ತ ಇದ್ದಂತವರು ಹೆಸರಾದಂತ ಕನ್ನಡದ ಜನರೇ. ನಾರಾಯಣ್ ಈ ವಾತಾವರಣದಲ್ಲೇ ಬೆಳೆದು ಕನ್ನಡ ಮಾತಾಡಿಕೊಂಡು, ಕನ್ನಡ ಶಾಲೆಗಳಲ್ಲೇ ಓದಿ ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ, ಕೆಲ ವರ್ಷಗಳು ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ದುಡಿದು ಬರವಣಿಗೆಯತ್ತ ತೆರಳಿದರು.ಅವರು ತಮ್ಮ ಮನೆಯ ಮಾತು ಮತ್ತು ಮನದ ಮಾತನ್ನೆಲ್ಲಾ ಬದಿಗೊತ್ತಿ ಇಂಗ್ಲಿಷ್‌ನಲ್ಲೇ ಬರೆದರು. ಮೈಸೂರು ಮತ್ತು ಸುತ್ತಲಿನ ಜಾಗವನ್ನೇ ತಮ್ಮ ಬರಹಗಳಲ್ಲಿ `ಮಾಲ್ಗುಡಿ~ ಎನ್ನುವ ಕಲ್ಪನೆಯ ಹೆಸರನ್ನಿತ್ತು ಬರೆದರು. ಮೊದ ಮೊದಲು ಬರೆದ ಬರಹಗಳಲ್ಲಿ ಈ ಮಾಲ್ಗುಡಿ ಒಂದು ಚಿಕ್ಕ ಊರು, ಅವರ ಬರವಣಿಗೆ ವೃದ್ಧಿಗೊಂಡಂತೆಲ್ಲಾ ದೊಡ್ಡದಾಗುತ್ತಾ, ಕೊನೆಗೆ ಸೌಕರ್ಯಗಳನ್ನುಳ್ಳ ಪಟ್ಟಣವೇ ಆಯ್ತು ಅಲ್ಲಿನ ಪೋಸ್ಟ್ ಆಫೀಸ್, ಶಾಲಾ ಕಾಲೇಜುಗಳು, ರಸ್ತೆಗಳು ಜಾಗಗಳೆಲ್ಲಾ ಮೈಸೂರಿನಲ್ಲಿರುವಂತವುಗಳೇ. ಅವರ ಕಾದಂಬರಿಗಳಲ್ಲಿನ ಪಾತ್ರಗಳಾದ ನಾಗರಾಜ, ವಾಸು, ಸಂಪತ್, ಸುಶೀಲ ಇಂಗ್ಲಿಷ್ ಟೀಚರ್ ಇತ್ಯಾದಿಗಳೆಲ್ಲಾ ಮೈಸೂರಿನವರೇ. ಅವರ ಉಡುಗೆ ತೊಡುಗೆ, ಹವ್ಯಾಸಗಳು, ಮಾತಿನವರಸೆ, ನಂಬಿಕೆ, ಆಚರಣೆಗಳೆಲ್ಲಾ ಮೈಸೂರಿನ ಸುತ್ತಲಿನ ಜಾಗಕ್ಕೆ ಸಂಬಂಧಪಟ್ಟಂತವುಗಳೇ.  ಚಿನುವ ಅಚಿಬೆ ತಮ್ಮ “ಥಿಂಗ್ಸ್ ಫಾಲ್ ಅಪಾರ್ಟ್‌” ಕಾದಂಬರಿ ಮೂಲಕ ವಿಶ್ವದ ಎಲ್ಲೋ ಒಂದು ಮೂಲೆಯಲ್ಲಿ ಕಾಡಿನ ಮಧ್ಯೆ ಇದ್ದ `ಇಬೋ~ ಸಂಸ್ಕೃತಿಯನ್ನು ವಿಶ್ವವಿಖ್ಯಾತಗೊಳಿಸಿದರು. ಅದೇ ರೀತಿ ನಾರಾಯಣ್ ಕನ್ನಡವನ್ನು ಮಾತಾಡದೆ ಕನ್ನಡದ ಸೊಗಡನ್ನ, ತಮ್ಮ ಬರಹಗಳ ಮೂಲಕ ವಿಶ್ವದ ನಾನಾ ಮೂಲೆಗಳಿಗೆ ಕಳಿಸಿಕೊಟ್ಟಿದ್ದಾರೆ. ಅವರ ಕಾದಂಬರಿಗಳಲ್ಲಿ ಬರುವ ಪಾತ್ರಗಳ ಉಡುಗೆ ತೊಡುಗೆಗಳೆಲ್ಲಾ ಮೈಸೂರಿನವುಗಳೇ, ಅವು ಮೈಸೂರಿನ ಕೆಳಮಧ್ಯಮ ವರ್ಗದ ಜನರು ಧರಿಸುವಂತಾ ವಸ್ತುಗಳೇ. ಹೀಗಾಗಿ ಅವರ ಸ್ಮಾರಕ ಸಾರ್ಥಕ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry