ಸೋಮವಾರ, ಡಿಸೆಂಬರ್ 16, 2019
17 °C

ಮೈಸೂರು ಅರಸರ ದಾನ-ಧರ್ಮ

-ಜೆ. ಪಿ. Updated:

ಅಕ್ಷರ ಗಾತ್ರ : | |

ಚೆಲ್ಲಿದರು ಮಲ್ಲಿಗೆಯ- ಭಾಗ 5

ಕರಗ ಉತ್ಸವಕ್ಕೆ ಕೇಂದ್ರ ಸ್ಥಳವಾದ ತಿಗಳರ ಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯ ಇಂದು ಹಳೆಯ ಪೇಟೆಗಳ ನಡುವೆ ಕಿರಿದಾಗಿ ಕಂಡರೂ ಅದಕ್ಕಿದ್ದ ಆವರಣ ಬಹುದೊಡ್ಡದು. ವಹ್ನಿ ಕುಲದವರ ಸೇವೆ ಹಾಗೂ ದಾನದ ಪರಿಣಾಮ ನೂರಾರು ಎಕರೆಗಳಷ್ಟು ಭೂಮಿ ದೇವಾಲಯದ ಹೆಸರಿಗಿತ್ತು.ಮೈಸೂರಿನ ಅರಸರಾಗಿದ್ದ ಮುಮ್ಮಡಿ ಕಷ್ಣರಾಜ ಒಡೆಯರು ಧರ್ಮರಾಯಸ್ವಾಮಿ ಗುಡಿಗೆ 1811ರಲ್ಲಿ ಭೇಟಿಕೊಟ್ಟರು. ಕರಗ ಶಕ್ತ್ಯೋತ್ಸವದ ವಿವರಗಳನ್ನು ತಿಳಿದುಕೊಂಡ ಅರಸರು ಗುಡಿಗೆ ಸನ್ನದು, ಭೂಮಿ ಮಾನ್ಯತೆ ನೀಡಿದರು. ಧೂಪನಹಳ್ಳಿ, ನೀಲಸಂದ್ರ, ಹೊಂಗಸಂದ್ರ ಹಾಗೂ ಸಿಂಗಸಂದ್ರಗಳಲ್ಲಿ ರಾಜರು ದೇವಾಲಯಕ್ಕಾಗಿ ಕೊಟ್ಟ ಭೂಮಿ ನೂರಾರು ಎಕರೆಗಳು.ಸುಮಾರು 150 ವರ್ಷಗಳಿಗೂ ಹೆಚ್ಚು ಕಾಲ ಈ ಭೂಮಿಯಲ್ಲಿ ಬೆಳೆದ ಬೆಳೆಯ ಪಾಲು ಗುಡಿಗೆ ಸಿಗುತ್ತಿತ್ತು. ಕಾಲಕ್ರಮೇಣ ಊರು ಬೆಳೆಯಿತು.  ದೇವಾಲಯದ ಭೂಮಿಯಲ್ಲಿ ಜಿರಾಯಿತಿ ಮಾಡುತ್ತಿದ್ದವರಿಂದ ಸರ್ಕಾರ ವಿವಿಧ ಇಲಾಖೆಗಳು ನಿವೇಶನ ಮಾಡಲು ಹಾಗೂ ಇನ್ನಿತರ ಉದ್ದೇಶಗಳಿಗಾಗಿ ಭೂ ಸ್ವಾಧೀನಪಡಿಸಿಕೊಂಡಿತು.ಅರಸರು ಕೊಟ್ಟ ನೂರಾರು ಎಕರೆ ಜಮೀನಿನ ವಿವರಗಳನ್ನು ಆಗಿನವರು ಇಟ್ಟಿರಲಿಲ್ಲ. ಗುಡಿಯ ದಾಖಲೆಗಳಲ್ಲೂ ಈ ಮಾಹಿತಿ ದೊರಕಿಲ್ಲ. ಪ್ರಸ್ತುತ ಚಾಲ್ತಿಯಲ್ಲಿರುವ ಧರ್ಮದರ್ಶಿ ಸಮಿತಿಯವರು ಶ್ರಮವಹಿಸಿ ಅಳಿದುಳಿದ ದೇವಾಲಯ ಭೂಮಿಯನ್ನು ಗುರುತಿಸಿ ಸಂಬಂಧಿಸಿದವರಿಗೆ ಮಾಹಿತಿ ಒದಗಿಸಿದ್ದರೂ ಸರಿಯಾದ ಪರಿಹಾರ ಧನವಿನ್ನೂ ಗುಡಿ ಖಾತೆಗೆ ಜಮೆ ಆಗಿಲ್ಲ.`ಧರ್ಮ ದತ್ತಿ ಇಲಾಖೆ ದೇವಾಲಯದ ನಿರ್ವಹಣೆ ಮಾಡುತ್ತಿದ್ದರೂ ಬೇರೆ ದೇವಾಲಯಗಳಿಗೆ ಸಿಕ್ಕಷ್ಟು ಹಣಕಾಸು ನೆರವು ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ಸಿಗುತ್ತಿಲ್ಲ. ಲಭ್ಯವಿರುವ ಆದಾಯದಲ್ಲಿಯೇ ಗುಡಿ ವೆಚ್ಚ ನಿರ್ವಹಣೆಯಾಗುತ್ತಿದೆ. ಕರಗ ಉತ್ಸವಕ್ಕೆ ನಿಗದಿಯಾಗುವ ಕರಗ ಪೂಜಾರಿ ವರ್ಷಪೂರ್ತಿ ದೇವಾಲಯ ಪೂಜಾ ಕೈಂಕರ್ಯ ನಡೆಸುವುದು ಸಂಪ್ರದಾಯ. ಅವರಿಗೆ ತಿಂಗಳಿಗೆ ಸಿಗುವ ಗೌರವ ಧನ ಕೇವಲ 800 ರೂಪಾಯಿ' ಎಂಬುದು ಧರ್ಮದರ್ಶಿ ಮಂಡಲಿಯ ಸದಸ್ಯರೊಬ್ಬರ ಬೇಸರದ ನುಡಿ.ದೇವಾಲಯ ಗಳಿಸುವ ಆದಾಯಕ್ಕೆ ಪೂರಕವಾಗಿ ಒದಗಿಸುವ ಹಣಕಾಸು ನೆರವು ಏನೇನೂ ಸಾಲದೆಂದು ಸಾಕಷ್ಟು ಬಾರಿ ಮನವರಿಕೆ ಮಾಡಿಕೊಟ್ಟರೂ ಸೂಕ್ತ ವ್ಯವಸ್ಥೆ ಇನ್ನೂ ಆಗಿಲ್ಲವೆನ್ನುವ ಕೊರಗು ಧರ್ಮದರ್ಶಿಗಳಲ್ಲಿದೆ. ದೇವಾಲಯದ ಹೆಸರಿನಲ್ಲಿರುವ ಠೇವಣಿಯಿಂದ ಬರುವ ಬಡ್ಡಿಹಣದಿಂದ ಇತಿಮಿತಿಯೊಳಗೆ ಖರ್ಚು ವೆಚ್ಚಗಳು ಸರಿದೂಗುತ್ತಿವೆ.ಮೈಸೂರು ಅರಸರು ಮಾನ್ಯತೆ ಕೊಟ್ಟ ಭೂಮಿಯದು ಒಂದು ಕಥೆಯಾದರೆ ಗುಡಿಗೆ ತಿಗಳ ವಂಶಸ್ಥರು ಕೊಟ್ಟ ಧಾನ ಭೂಮಿಯದು ಇನ್ನೊಂದು ಕಥೆ.ಮೊದಲಿಗೆ ಈಗಿನ `ಕರಗದ ಕುಂಟೆ' (ಬಿ.ಬಿ.ಎಂ.ಪಿ. ಕಚೇರಿಯಿಂದ ಶೇಷಾದ್ರಿ ಹಾಲ್ ಕಬ್ಬನ್ ಪಾರ್ಕ್ ಕಡೆಗೆ ಹೋಗುವಾಗ ಬಲಗಡೆ ಅಶ್ವತ್ಥ ಕಟ್ಟೆ ಹಿಂಬದಿಯಲ್ಲಿರುವ ಕುಂಟೆ) ಹಾಗೂ ಈಗಿನ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಕೇಂದ್ರ ಕಚೇರಿಗಳಿರುವ ಸ್ಥಳದಲ್ಲಿ ಧರ್ಮರಾಯಸ್ವಾಮಿ ದೇವಾಲಯದ ಸುಪರ್ದಿನಲ್ಲೇ ಇತ್ತು.ಬ್ರಿಟಿಷರು ಮೈಸೂರು ಸಂಸ್ಥಾನವನ್ನು ಟಿಪ್ಪು ಸುಲ್ತಾನರಿಂದ ವಶಪಡಿಸಿಕೊಂಡ ಮೇಲೆ ಬೆಂಗಳೂರನ್ನು ತಮ್ಮ ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡರು. ಇಲ್ಲೊಂದು ಮಿಲಿಟರಿ ನೆಲೆಯೂ ನಿರ್ಮಾಣವಾಯಿತು (ಕಂಟೋನ್ಮೆಂಟ್). ಅಲ್ಲೊಂದು ಮಿಲಿಟರಿ ಪ್ರದೇಶ ನಿರ್ವಹಣಾ ಕೇಂದ್ರವೂ ಕಾರ್ಯಾರಂಭ ಮಾಡಿತು (ಮೇಯೋಹಾಲ್). ಹಳೆಯ ಬೆಂಗಳೂರು ಪ್ರದೇಶಗಳಿಗೂ ನಿರ್ವಹಣಾ ಸಮಿತಿಯೊಂದನ್ನು ಆರಂಭಿಸಲು ಜನರಿಂದ ಆಗ್ರಹ ಬಂದಾಗ ನಗರಸಭೆಗೆ ನಾಂದಿಯಾಯಿತು. ಅದಕ್ಕೊಂದು ಕಚೇರಿ ನಿರ್ಮಾಣಕ್ಕೆ ಅಗತ್ಯವಾಗಿದ್ದ ಭೂಮಿಗೆ ಹುಡುಕಾಟ ಶುರುವಾಯಿತು.ಹಳೆಯ ಬೆಂಗಳೂರು ಹಾಗೂ ಮಿಲಿಟರಿ ಪ್ರದೇಶಗಳಿಗೂ ನಡುವೆ ಇದ್ದ ಶ್ರೀ ಧರ್ಮರಾಯಸ್ವಾಮಿ ಗುಡಿಯ ಆಸುಪಾಸಿನ ಸ್ಥಳವೇ ನಗರಸಭೆ ಕಚೇರಿಗೆ ಸೂಕ್ತ ಸ್ಥಳವೆಂದು ತೀರ್ಮಾನವಾಯಿತು. ಆಗ ಮೈಸೂರಿನ ದಿವಾನರಾಗಿದ್ದವರು ಸರ್ ಮಿರ್ಜಾ ಇಸ್ಮಾಯಿಲ್. ಧರ್ಮರಾಯ ಗುಡಿಯ ಧರ್ಮದರ್ಶಿ ಸಮಿತಿ ಸದಸ್ಯರೊಡನೆ ಸಭೆ ನಡೆಸಿದ ಮಿರ್ಜಾ, ಗುಡಿಯ ಭೂಮಿಯನ್ನು ನಗರಸಭೆಗೆ ದೊರಕುವಂತೆ ಮಾಡಿದರು. ಇದಕ್ಕೆ ಸಾಕ್ಷಿಯಾಗಿ ಮಿರ್ಜಾ ಇಸ್ಮಾಯಿಲ್, ದೇವಾಲಯದ ಧರ್ಮದರ್ಶಿಗಳು, ನಗರ ಪ್ರಮುಖರೂ ಇರುವ ಅಮೂಲ್ಯ ಗ್ರೂಪ್ ಫೋಟೊ ಗುಡಿ ಕಛೇರಿಯಲ್ಲಿದೆ.ಕಬ್ಬನ್ ಪಾರ್ಕ್ ವಿಸ್ತರಣೆ, ನಗರ ಸಭೆ ಕಚೇರಿ ನಿರ್ಮಾಣ, ರಸ್ತೆ ರಚನೆಗಳಿಗಾಗಿ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಭೂಮಿಯ ಬಹುಭಾಗ ಕೈಬಿಟ್ಟು ಹೋಗಿದೆ. ಆದರೆ ಆ ಸ್ಥಳಗಳಲ್ಲಿ ಕರಗದ ಕಾರ್ಯಕ್ರಮಗಳಾಗಲೀ, ಪೂಜಾವಿಧಿಗಳಾಗಲೀ ನಡೆಯುವುದು ಈಗಲೂ ನಿಂತಿಲ್ಲ. ಕರಗ ಉತ್ಸವದ ಸಂಭ್ರಮ, ವಿಜೃಂಭಣೆ ಈ ಸ್ಥಳಗಳಲ್ಲಿ ಈಗಲೂ ಇದೆ.ಕರಗ ಉತ್ಸವ ಕಾರ್ಯಕ್ರಮಗಳಲ್ಲಿ ಏಳು ಸುತ್ತಿನ ಕೋಟೆಯ ಪೂಜಾ ವಿಧಿಗಳಿಗೆ ಮಾನ್ಯತೆ ಹೆಚ್ಚು. ಸುಮಾರು 34 ಸಾವಿರ ಚದರ ಅಡಿಗಳಷ್ಟು ಸ್ಥಳವನ್ನು ಬಿ.ಬಿ.ಎಂ.ಪಿ ಕಚೇರಿಯ ಆವರಣದಲ್ಲಿ ಒದಗಿಸಲಾಗಿದ್ದು ಅಲ್ಲಿ ಕರಗದ ಧಾರ್ಮಿಕ ಚಟುವಟಿಕೆಗಳು ಅನೂಚಾನವಾಗಿ ನಡೆಯುತ್ತಾ ಬಂದಿವೆ. ಏಳು ಸುತ್ತಿನ ಕೋಟೆಯೊಳಗೆ ಉತ್ಸವಮೂರ್ತಿಗಳ ಮೆರವಣಿಗೆ, ಗಾವು ಶಾಂತಿ ಸೇವೆಗಳು ಶ್ರದ್ಧಾಭಕ್ತಿಯಿಂದ ನಡೆಯುತ್ತವೆ.

 

ಪ್ರತಿಕ್ರಿಯಿಸಿ (+)