ಶುಕ್ರವಾರ, ಜೂಲೈ 10, 2020
28 °C

ಮೈಸೂರು: ಎರಡು ಬೋಗಿಗಳಿಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅಶೋಕಪುರಂ ರೈಲು ನಿಲ್ದಾಣದ ಆವರಣದಲ್ಲಿ ಉಪಯೋಗಕ್ಕೆ ಬಾರದೆ ನಿಂತಿದ್ದ ಎರಡು ರೈಲ್ವೆ ಬೋಗಿಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸುಟ್ಟು ಕರಕಲಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಘಟನೆಯಿಂದ ಸ್ಥಳದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಶೋಕಪುರಂ ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದ ರೈಲ್ವೆ ಬೋಗಿಗೆ ಮಧ್ಯಾಹ್ನ 12.15 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದ ಪಕ್ಕದ ಇನ್ನೊಂದು ಬೋಗಿಗೂ ಬೆಂಕಿ ಆವರಿಕೊಂಡಿತು. ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮೂರು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದವು.ಮೂರು ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಸತತ ಒಂದು ಗಂಟೆ ಬೆಂಕಿ ನಂದಿಸಿದರು. ಬೆಂಕಿಯ ಕೆನ್ನಾಲಗೆ ಬೋಗಿಯ ಸುತ್ತ ಮುತ್ತ ಹರಡಿದ್ದರಿಂದ, ಇಡೀ ಆವರಣದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಬೆಂಕಿ ಹೊತ್ತಿ ಉರಿಯುತ್ತಿದ್ದ ದೃಶ್ಯ ನೋಡಲು ನೂರಾರು ಜನ ಸ್ಥಳದಲ್ಲಿ ಜಮಾಯಿಸಿದ್ದರು. ಈ ಘಟನೆಯಿಂದಾಗಿ ಮಧ್ಯಾಹ್ನ 12.30 ಗಂಟೆಗೆ ಚಲಿಸಬೇಕಾದ ಮೈಸೂರು-ಚಾಮರಾಜನಗರ- ಮೈಸೂರು ಪ್ಯಾಸೆಂಜರ್ ರೈಲು ಮತ್ತು ಮೈಸೂರು-ತಿರುಪತಿ-ಚೆನ್ನೈ ರೈಲುಗಳು ಅರ್ಧ ಗಂಟೆ ವಿಳಂಬವಾಗಿ ಸಂಚರಿಸಿದವು. ಇದರಿಂದಾಗಿ ಕೆಲಹೊತ್ತು ಪ್ರಯಾಣಿಕರು ಪರದಾಡುವಂತಾಯಿತು.ಅಶೋಕಪುರಂ ರೈಲು ನಿಲ್ದಾಣದ ಆವರಣದಲ್ಲಿ ಉಪಯೋಗಕ್ಕೆ ಬಾರದ ಒಟ್ಟು 8 ಬೋಗಿಗಳನ್ನು ನಿಲ್ಲಿಸಲಾಗಿದೆ. ಈ ಪೈಕಿ ಕಳೆದ ಡಿ. 22ರಂದು ಮೂರು ಬೋಗಿಗಳು ಬೆಂಕಿಗೆ ಆಹುತಿಯಾಗಿದ್ದವು. ಆಗಲೂ ಸಮಯಕ್ಕೆ ಸರಿಯಾಗಿ ಆಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದರು.ಒಣ ಹುಲ್ಲು ಕಾರಣ: ರೈಲು ಹಳಿಗಳ ಎಡ ಮತ್ತು ಬಲ ಬದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹುಲ್ಲು ಹಾಗೂ ಗಿಡಗಂಟಿಗಳು ಬೆಳೆದಿವೆ. ಯಾರೋ ಕಿಡಿಗೇಡಿಗಳು ಎಸೆದ ಬೆಂಕಿಯಿಂದ ಗಿಡ ಗಂಟಿಗಳು ಸುಟ್ಟು, ಬಳಿಕ ಬೋಗಿಗೆ ಬೆಂಕಿ ಬಿದ್ದಿರಬಹುದೆಂದು ಅಗ್ನಿಶಾಮಕ ದಳದ ಪ್ರಾದೇಶಿಕ ಅಧಿಕಾರಿ ಸಿ.ಗುರುಲಿಂಗಯ್ಯ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.