ಮೈಸೂರು-ಕಪ್ಪು ಹಂಸಗಳಿಗೆ ಸಂತಾನ ಭಾಗ್ಯ

7

ಮೈಸೂರು-ಕಪ್ಪು ಹಂಸಗಳಿಗೆ ಸಂತಾನ ಭಾಗ್ಯ

Published:
Updated:

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಆಸ್ಟ್ರೇಲಿಯ ಮೂಲದ ಕಪ್ಪು ಹಂಸ (ಬ್ಲ್ಯಾಕ್ ಸ್ವಾನ್) ಜೋಡಿಯ ಏಳು ಮರಿಗಳು ಈಗ ಪ್ರವಾಸಿಗರ ಹೊಸ ಆಕರ್ಷಣೆಯಾಗಿ ಗಮನ ಸೆಳೆಯುತ್ತಿವೆ.ಕಳೆದ ಎಂಟು ವರ್ಷದಿಂದ ಈಚೆಗೆ ಮೃಗಾಲಯದಲ್ಲಿ ಕಪ್ಪು ಹಂಸಗಳ ಸಂತಾನ ಅಭಿವೃದ್ಧಿ ಆಗಿರಲಿಲ್ಲ. ಆದರೆ ಈ ಬಾರಿ ಹಂಸ ಜೋಡಿಯೊಂದು ಮೂರು ತಿಂಗಳ ಹಿಂದೆ ಇಟ್ಟ ಮೊಟ್ಟೆ ಒಡೆದು ಒಂದು ಮರಿ ಬಂದಿತ್ತು. ಇದಾದ ಬಳಿಕ ಇನ್ನೊಂದು ಜೋಡಿ ಇಟ್ಟ ಆರು ಮೊಟ್ಟೆಗಳೂ ಒಡೆದು ಮರಿಗಳಾಗಿ ದಾಖಲೆ ನಿರ್ಮಿಸಿವೆ. ಪುಕ್ಕಗಳಿಲ್ಲದ ಈ ಆರು ಮರಿಗಳು ಆರೋಗ್ಯವಾಗಿದ್ದು ಕೊಳದಲ್ಲಿ ಈಜುತ್ತ ನೆಲದಲ್ಲಿ ಪುಟುಪುಟು ಅಂತ ಓಡಾಡುತ್ತಿವೆ.ಗಾತ್ರದಲ್ಲಿ ಬಲು ದೊಡ್ಡದಾದ ಪ್ರೌಢ ನೀರ ಹಂಸಗಳು 8ರಿಂದ 10 ಕೆಜಿವರೆಗೂ ತೂಗುತ್ತವೆ! ಅವುಗಳ ಕತ್ತು ಉದ್ದವಾಗಿದ್ದು, ಆಂಗ್ಲಭಾಷೆಯ ‘ಎಸ್’ ಆಕಾರದಲ್ಲಿದೆ. ಮೈ ತುಂಬ ಕಪ್ಪು ಗರಿಗಳಿದ್ದು ರೆಕ್ಕೆ ಅಗಲಿಸಿದಾಗ ತುದಿಯಲ್ಲಿ ಬೆಳಿ ಬಣ್ಣ ಗೋಚರಿಸುವುದು. ಅದರ ಕೊಕ್ಕು ಕಡು ಕೆಂಪಾಗಿದ್ದು ಜಾಲ ಪಾದಗಳ ಸಹಾಯದಿಂದ ನೀರಲ್ಲಿ ಸಲೀಸಲಾಗಿ ಈಜುತ್ತವೆ.ಆಸ್ಟ್ರೇಲಿಯದಲ್ಲಿ ನೈಸರ್ಗಿಕವಾಗಿ ಕಾಣಲು ಸಿಗುವ ಕಪ್ಪು ಹಂಸದ ವೈಜ್ಞಾನಿಕ ಹೆಸರು ‘ಸಿಗ್ನಸ್ ಅಟ್ರಟಸ್’. ಭಾರತದಲ್ಲಿ ಇವು ನೈಸರ್ಗಿಕವಾಗಿ ಕಾಣಲು ಸಿಗುವುದಿಲ್ಲ. ಭಾರತದ ಮೃಗಾಲಯಗಳಲ್ಲಿ ಕೂಡ ಅವು ಅಪರೂಪ. ಈ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯದಲ್ಲಿ ಒಂದೇ ಬಾರಿಗೆ ಏಳು ಆರೋಗ್ಯವಂತ ಮರಿಗಳು ಹುಟ್ಟಿರುವುದು ಮೃಗಾಲಯದ ಹೆಗ್ಗಳಿಕೆ. ಈ ಏಳು ಮರಿಗಳು ಸೇರಿದಂತೆ ಈಗ ಮೈಸೂರು ಮೃಗಾಲಯದಲ್ಲಿ ಕಪ್ಪು ಹಂಸಗಳ ಒಟ್ಟು ಸಂಖ್ಯೆ 14ಕ್ಕೆ ಏರಿದೆ.ಮೃಗಾಲಯದಲ್ಲಿ ಈ ಹಿಂದೆ ಕಪ್ಪು ಹಂಸಗಳು ಇಟ್ಟ ಎಲ್ಲ ಮೊಟ್ಟೆಗಳು ಒಡೆದು ಮರಿ ಬರುತ್ತಿರಲಿಲ್ಲ, ಆದರೆ, ಈ ಬಾರಿ ಮೃಗಾಲಯದ ಪಶು ವೈದ್ಯಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿದರು. ಹಳೆಯ ಜಪಾನ್ ಪಾಂಡ್‌ನಿಂದ ಹೆರಿಟೇಜ್ ಕಟ್ಟಡದೊಳಗಿರುವ ಕೊಳದೊಳಗೆ ಹಂಸಗಳನ್ನು ಬಿಟ್ಟು ಅವುಗಳನ್ನು ವಿಶೇಷವಾಗಿ ಆರೈಕೆ ಮಾಡಿದರು. ಇದರ ಫಲವಾಗಿ ಹಂಸಗಳು ಯಶಸ್ವಿಯಾಗಿ ಸಂತಾನ ಅಭಿವೃದ್ಧಿ ಮಾಡಿವೆ.ಕಪ್ಪು ಹಂಸಗಳು ತೀವ್ರ ಚಳಿಯನ್ನಾಗಲಿ ಅಥವಾ ತೀವ್ರ ಸೆಕೆಯನ್ನಾಗಲಿ ಸಹಿಸಲಾರವು. ಈ ಹೀಗಾಗಿ ಅವುಗಳಿಗೆ ಸೂಕ್ತ ಆವಾಸ ನೆಲೆ ಸೃಷ್ಟಿಸಲಾಯಿತು. ಅಲ್ಲದೆ ಅವುಗಳ ಮೊಟ್ಟೆಗೆ ಇಲಿ, ಹೆಗ್ಗಣಗಳು ದಾಳಿ ಇಡದಂತೆ, ಗದ್ದಲದಿಂದ ಕಿರಿಕಿರಿಯಾಗದಂತೆ ಎಚ್ಚರಿಕೆ ವಹಿಸಲಾಯಿತು. ಜೊತೆಗೆ ಅವುಗಳು ತಿನ್ನುವ ಹಸಿರು ಆಹಾರಗಳೊಂದಿಗೆ ಎಲ್ಲ ಬಗೆಯ ವಿಟಮಿನ್, ಕ್ಯಾಲ್ಸಿಯಂ ಟಾನಿಕ್ ಹಾಗೂ ಖನಿಜಯುಕ್ತ ಆಹಾರಗಳನ್ನು ಒದಗಿಸಲಾಯಿತು. ಹಂಸಗಳ ಯಶಸ್ವಿ ಸಂತಾನ ಅಭಿವೃದ್ಧಿಗೆ ಪ್ರಾಣಿ ಪಾಲಕಿಯ ಕೊಡುಗೆಯೂ ಅಪಾರ ಎನ್ನುತ್ತಾರೆ ಮೃಗಾಲಯದ ವೈದ್ಯಾಧಿಕಾರಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry