ಶುಕ್ರವಾರ, ಮಾರ್ಚ್ 5, 2021
29 °C

ಮೈಸೂರು ಜಿಲ್ಲಾಧಿಕಾರಿ ಶಿಖಾ ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು ಜಿಲ್ಲಾಧಿಕಾರಿ ಶಿಖಾ ವರ್ಗ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎನ್ನಲಾದ  ಕೆ.ಮರೀಗೌಡ ವಿರುದ್ಧ ದೂರು ದಾಖಲಿಸಿದ್ದ ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಅವರನ್ನು ಎತ್ತಂಗಡಿ ಮಾಡಲಾಗಿದೆ.ಶಿಖಾ ಅವರನ್ನು ಸಮಾಜ ಕಲ್ಯಾಣ ಇಲಾಖೆ ಕಮಿಷನರ್‌ ಆಗಿ  ವರ್ಗಾವಣೆ ಮಾಡಲಾಗಿದೆ. ಮಂಡ್ಯ ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರ ಪತಿ ಡಾ.ಎಂ.ಎನ್‌. ಅಜಯ್‌ ನಾಗಭೂಷಣ್‌ ಅವರನ್ನೂ ವರ್ಗಾವಣೆ ಮಾಡಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಮಿಷನರ್ ಆಗಿ ನೇಮಿಸಲಾಗಿದೆ.

ಶಿಖಾ ಹಾಗೂ ಅಜಯ್‌ ನಾಗಭೂಷಣ್‌ ಅವರೂ ಸೇರಿದಂತೆ 11 ಐಎಎಸ್‌ ಅಧಿಕಾರಿಗಳನ್ನು ಬುಧವಾರ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.‘ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಮರೀಗೌಡರು ನನಗೆ  ಅವಾಚ್ಯ ಪದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದರು’ ಎಂದು ಆರೋಪಿಸಿ ಶಿಖಾ ಅವರು ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು.ಈ ಘಟನೆಯಿಂದ ಮುಖ್ಯಮಂತ್ರಿತೀವ್ರ ಮುಜುಗರಕ್ಕೆ ಒಳಗಾದರು. ದೂರು  ಹಿಂದಕ್ಕೆ ಪಡೆಯುವಂತೆ ಶಿಖಾ ಅವರ ಮನವೊಲಿಸುವ ಕೆಲಸವನ್ನು ಕೆಲವು ವ್ಯಕ್ತಿಗಳು ನಡೆಸಿದರು.  ಆ ಪ್ರಯತ್ನ ಫಲ ನೀಡಲಿಲ್ಲ.ವಿಧಾನಮಂಡಲ ಅಧಿವೇಶನದಲ್ಲೂ ವಿರೋಧ ಪಕ್ಷಗಳು ಈ ವಿಷಯವನ್ನು ಪ್ರಸ್ತಾಪಿಸಿ, ಮರೀಗೌಡ ಅವರ ಬಂಧನಕ್ಕೆ ತೀವ್ರ ಒತ್ತಡ ಹೇರಿದ್ದವು.

‘ಶಿಖಾ ಅವರು ಉತ್ತಮ ಅಧಿಕಾರಿ ಯಾಗಿರುವುದರಿಂದಲೇ ಮೈಸೂರಿನಲ್ಲಿ ಮೂರು ವರ್ಷಗಳಿಂದ ಇದ್ದಾರೆ. ಮರೀಗೌಡರನ್ನು ರಕ್ಷಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು.ಪೊಲೀಸರು  ಬಂಧಿಸುವುದು ಖಚಿತ ಆಗುತ್ತಿದ್ದಂತೆ ಮರೀಗೌಡ ತಲೆ ಮರೆಸಿಕೊಂಡಿದ್ದರು. ಜಾಮೀನು ಪಡೆಯಲು ನ್ಯಾಯಾಲಯದ ಬಾಗಿಲು ತಟ್ಟಿದರು.

ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತು. ಹೈಕೋರ್ಟ್‌ ಚಾಟಿ ಬೀಸಿದ ಬಳಿಕ ಮರೀಗೌಡ ಪೊಲೀಸರಿಗೆ ಶರಣಾದರು. ಇದಾದ ಕೆಲವೇ ದಿನಗಳಲ್ಲಿ ಶಿಖಾ ಅವರ ವರ್ಗಾವಣೆ ನಡೆದಿದ್ದು ಅದಕ್ಕೀಗ ರಾಜಕೀಯ ಬಣ್ಣ ಬಂದಿದೆ.ಸಾಮಾಜಿಕ ಜಾಲ ತಾಣಗಳಲ್ಲಿ ಶಿಖಾ  ವರ್ಗಾವಣೆ ವಿಷಯದ ಪರ– ವಿರುದ್ಧ ಚರ್ಚೆ ಆರಂಭಗೊಂಡಿದೆ. ಮುಖ್ಯಮಂತ್ರಿಯವರು ಸೇಡಿನ ಕ್ರಮವಾಗಿ ಈ ತೀರ್ಮಾನ ಕೈಗೊಂಡಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿದ್ದರೆ, ಸಿದ್ದರಾಮಯ್ಯ ಅವರ ಬೆಂಬಲಿಗರು, ಇದೊಂದು ಸಾಮಾನ್ಯ ವರ್ಗಾವಣೆ ಆಗಿದ್ದು ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ. ಶಿಖಾ ಅವರನ್ನು ದಸರಾ ಮುಗಿಯುವವರೆಗೆ ಮೈಸೂರಿನಲ್ಲೇ ಉಳಿಸಿಕೊಳ್ಳುವಂತೆ ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದ್ದಾರೆ.

ಉಳಿದ ಅಧಿಕಾರಿಗಳ ವರ್ಗ

 ಎಂ.ವಿ. ಸಾವಿತ್ರಿ–  ಕರ್ನಾಟಕ ರಾಜ್ಯ ಸಣ್ಣ  ಕೈಗಾರಿಕೆ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕಿ.

ಮನೋಜ್‌ ಜೈನ್‌–   ಕರ್ನಾಟಕ ಆಹಾರ ಮತ್ತು ನಾಗರೀಕ ಪೂರೈಕೆ ನಿಗಮದ  ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು.

ಡಿ.ರಣದೀಪ್‌– ಮೈಸೂರು ಜಿಲ್ಲಾಧಿಕಾರಿ. 

ಖುಷ್ಬೂ  ಗೋಯಲ್‌ ಚೌಧರಿ– ಯಾದಗಿರಿ ಜಿಲ್ಲಾಧಿಕಾರಿ.

ರಮಣ್‌ ದೀಪ್‌ ಚೌಧರಿ–  ಕಲಬುರಗಿ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ  ಹೆಚ್ಚುವರಿ ಆಯುಕ್ತರು.

ಎಚ್‌.ಆರ್‌.ಮಹಾದೇವ– ವಾಣಿಜ್ಯ ಇಲಾಖೆ(ಜಾರಿ) ಹೆಚ್ಚುವರಿ ಆಯುಕ್ತ, ದಕ್ಷಿಣ ವಲಯ, ಬೆಂಗಳೂರು.

ಎಸ್‌.ಜಿಯಾಉಲ್ಲಾ–  ಮಂಡ್ಯ ಜಿಲ್ಲಾಧಿಕಾರಿ. 

ಕೆ.ಬಿ.ಶಿವಕುಮಾರ್‌–  ವಿಜಯಪುರ ಜಿಲ್ಲಾಧಿಕಾರಿ.

ಎಂ.ಜಿ. ಹಿರೇಮಠ–  ಹುಬ್ಬಳ್ಳಿ– ಧಾರವಾಡ ಬಿಆರ್‌ಟಿಎಸ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.