ಮೈಸೂರು ಜಿಲ್ಲಾ ಪಂಚಾಯಿತಿ: ಒಂದಾದ ಬದ್ಧವೈರಿಗಳು

7

ಮೈಸೂರು ಜಿಲ್ಲಾ ಪಂಚಾಯಿತಿ: ಒಂದಾದ ಬದ್ಧವೈರಿಗಳು

Published:
Updated:

ಮೈಸೂರು: ಸ್ಥಳೀಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಬದ್ಧ ವೈರಿಗಳಾದ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟಿದ್ದು ಪರಸ್ಪರ ಅಧಿಕಾರವನ್ನು ಹಂಚಿಕೊಂಡಿವೆ.

ಇದರಿಂದಾಗಿ ಎಲ್ಲ ರೀತಿಯ ನಿರೀಕ್ಷೆಗಳು ಮತ್ತು ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ಇಂತಹ ಅನಿರೀಕ್ಷಿತ ಬೆಳವಣಿಗೆ ಸ್ವತಃ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೇ ಅಚ್ಚರಿಯನ್ನು ಉಂಟುಮಾಡಿದೆ.

ಶುಕ್ರವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಜೆ.ಸುನೀತಾ ವೀರಪ್ಪಗೌಡ (ಮಾಜಿ ಶಾಸಕಿ) ಅಧ್ಯಕ್ಷರಾಗಿ, ಬಿಜೆಪಿಯ ಡಾ.ಶಿವರಾಮ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಇವರು ತಲಾ 25 ಮತಗಳನ್ನು ಪಡೆದರು. ಕ್ರಮವಾಗಿ ಕಾಂಗ್ರೆಸ್‌ನ ಪಿ.ಸುಮಿತ್ರಾ ಗೋವಿಂದರಾಜು ಹಾಗೂ ಕೆ.ಮಹದೇವ್ ಅವರನ್ನು 4 ಮತಗಳ ಅಂತರದಿಂದ ಸೋಲಿಸಿದರು. ಒಟ್ಟು 46 ಸದಸ್ಯರನ್ನು ಹೊಂದಿರುವ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ 21, ಜೆಡಿಎಸ್ 16, ಬಿಜೆಪಿ  8, ಪಕ್ಷೇತರ 1 ಸ್ಥಾನ ಗಳಿಸಿವೆ.

ಕಸರತ್ತು ವ್ಯರ್ಥ: ಗುರುವಾರ ರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದವರೆಗೂ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸ್ಥಳೀಯ ಮುಖಂಡರ ನಡುವೆ ಮೈತ್ರಿಯ ಮಾತುಕತೆ ನಡೆಯಿತು. ಜೆಡಿಎಸ್ ಬಳಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅರ್ಹ ಅಭ್ಯರ್ಥಿ (ಎಸ್.ಸಿ ಪುರುಷ) ಇರಲಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನವನ್ನು ತನಗೇ ಬಿಟ್ಟುಕೊಡುವಂತೆ ಜೆಡಿಎಸ್ ಪಟ್ಟು ಹಿಡಿಯಿತು. ಆದರೆ ಕಾಂಗ್ರೆಸ್ ಮೊದಲ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ತನಗೆ ಬಿಟ್ಟುಕೊಡುವಂತೆ ಕೇಳಿಕೊಂಡಿತು. ಇದಕ್ಕೆ ಜೆಡಿಎಸ್ ಒಪ್ಪಲಿಲ್ಲ. ಆದ್ದರಿಂದ ಕೊನೆ ಗಳಿಗೆಯಲ್ಲಿ ಜೆಡಿ ಎಸ್, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡ ಪರಿಣಾಮವಾಗಿ ವಿರೋಧ ಪಕ್ಷ ನಾಯಕ ಸಿದ್ದ ರಾಮಯ್ಯನವರ ತವರಿನಲ್ಲೇ ಕಾಂಗ್ರೆಸ್ ಮುಖಭಂಗವನ್ನು ಅನುಭವಿಸುವಂತಾಯಿತು.

ಆರಂಭದಲ್ಲೇ ಅಪಸ್ವರ: ಜಿಲ್ಲಾ ಪಂಚಾಯ್ತಿ ಚುನಾವಣೆ ಫಲಿತಾಂಶ ಪ್ರಕಟವಾದ ತಕ್ಷಣದಿಂದಲೇ ಬಿಜೆಪಿಯನ್ನು ಅಧಿಕಾರದಿಂದ  ದೂರ ಇಡುವ ಸಲುವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವ ಮಾತುಕತೆ ಆಗಿತ್ತು.  ಇದಕ್ಕೆ ಸಂಸದ ಎಚ್.ವಿಶ್ವನಾಥ್ ಆರಂಭದಲ್ಲಿಯೇ ಅಪಸ್ವರ ಎತ್ತಿದರು. ಪ್ರತಿಯಾಗಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಸಹ ಕಾಂಗ್ರೆಸ್ ಜೊತೆ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದರು. ‘ಪದೇ ಪದೇ ಜೆಡಿಎಸ್, ವರಿಷ್ಠರು ಹಾಗೂ ಕಾರ್ಯಕರ್ತರನ್ನು ಗೇಲಿ ಮಾಡುವ ವಿಶ್ವನಾಥ್ ಅವರನ್ನು ಕಾಂಗ್ರೆಸ್ ನಿಯಂತ್ರಿಸಬೇಕು. ಇಲ್ಲದೇ ಹೋದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜತೆ ಮೈತ್ರಿ ಬೇಡ ಎನ್ನುವ ನಿರ್ಣಯವನ್ನು ಜಿಲ್ಲಾ ಘಟಕದ ಮೂಲಕ ಪಕ್ಷದ (ಜೆಡಿಎಸ್) ವರಿಷ್ಠರಿಗೆ ಕಳುಹಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದರು. ಅಲ್ಲದೇ ಚುನಾವಣೆ ಬಳಿಕ ಮಾತನಾಡಿದ ಶಾಸಕ ಮಹೇಶ್ ‘ಮೈತ್ರಿ ಮುರಿದು ಬೀಳಲು ವಿಶ್ವನಾಥ್ ಅವರೇ ನೇರ ಕಾರಣ’ ಎಂದು ಆರೋಪಿಸಿದರು.

ವಿಶ್ವನಾಥ್ ಗೇಲಿ: ‘ಜೆಡಿಎಸ್ ಪಕ್ಷವು ಬಿಜೆಪಿ ಜೊತೆ ಬೆಂಗಳೂರಿನಲ್ಲಿ ಜಗಳ, ಮೈಸೂರಿನಲ್ಲಿ ಮಧುಚಂದ್ರದಲ್ಲಿ ನಿರತವಾಗಿದೆ’ ಎಂದು ವಿಶ್ವನಾಥ್ ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜೆಡಿಎಸ್ ಅಧಿಕಾರಕ್ಕಾಗಿ ತನ್ನ ಜಾತ್ಯತೀತ ತತ್ವ, ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿ ಕೋಮುವಾದಿ ಬಿಜೆಪಿ ಜೊತೆ ಕೈ ಜೋಡಿಸಿದೆ. ಇದರಿಂದಾಗಿ ಜೆಡಿಎಸ್‌ನ ಹುಸಿ ಜಾತ್ಯತೀತ ಮುಖವಾಡ ಕಳಚಿ ಬಿದ್ದಿದೆ’ ಎಂದು ಟೀಕಿಸಿದರು.

‘ಜೆಡಿಎಸ್ ಅಧಿಕಾರಕ್ಕಾಗಿ ಎಂತಹ ಹೊಂದಾಣಿಕೆಗೂ ಸಿದ್ಧ ಎನ್ನುವುದನ್ನು ಹಿಂದಿನಿಂದಲೂ ಹೇಳುತ್ತಲೇ ಬರುತ್ತಿದ್ದೆ. ಅದು ಈಗ ನಿಜವಾಗಿದೆ. ಬಿ.ಎಸ್. ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸದೆ ಬಿಜೆಪಿ ಜೊತೆ ವಿವಾಹ ವಿಚ್ಛೇದನ ಪಡೆದಿದ್ದ ಜೆಡಿಎಸ್ ಮತ್ತೆ ಮರು ಮದುವೆ ಆಗಿದೆ. ದೇಶದಲ್ಲಿ ಜಾತ್ಯತೀತವಾಗಿರುವ ಏಕೈಕ ಪಕ್ಷ ಕಾಂಗ್ರೆಸ್’ ಎಂದರು.

‘ಜೆಡಿಎಸ್ ಕೋಮುವಾದಿ ಬಿಜೆಪಿ ಜೊತೆ ಸೇರಿಕೊಂಡಿದೆ. ಆದ್ದರಿಂದ ಜೆಡಿಎಸ್ ಇನ್ನು ಮುಂದೆ ತನ್ನ ಪಕ್ಷದ ಹೆಸರನ್ನು ಜನತಾದಳ (ಕೋಮುವಾದಿ) ಎಂದು ಬದಲಿಸಿಕೊಳ್ಳಬೇಕು. ಇಲ್ಲದೇ ಹೋದರೆ ಜಾತ್ಯತೀತ ಎನ್ನುವ ಪದಕ್ಕೆ ಮಸಿ ಬಳಿಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜೆಡಿಎಸ್ ಅವಕಾಶವಾದಿ-ಸಿದ್ದು: ‘ಈ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ದಾಹ ಮತ್ತು ಅವಕಾಶವಾದಿತನದಿಂದ ಕೋಮುವಾದಿ ಬಿಜೆಪಿ ಜೊತೆ ಕೈ ಜೋಡಿಸಿದೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಆಯಾ ಜಿಲ್ಲೆಗಳಲ್ಲಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಕ್ಕೆ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಜೊತೆ ಕಾಂಗ್ರೆಸ್ ಮಾತುಕತೆ ನಡೆಸಿತ್ತು. ಆದಾಗ್ಯೂ, ಆ ಪಕ್ಷ ಅಧಿಕಾರ ದಾಹದಿಂದ ಜಾತ್ಯತೀತ ತತ್ವವನ್ನು ಧಿಕ್ಕರಿಸಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ’ ಎಂದು ಜೆಡಿಎಸ್ ವಿರುದ್ಧ ಹರಿಹಾಯ್ದರು.

‘ರಾಜ್ಯ ಮಟ್ಟದಲ್ಲಿ ಜೆಡಿಎಸ್‌ಗೆ ಬಿಜೆಪಿ ಕೋಮುವಾದಿ ಪಕ್ಷ. ಆದರೆ, ಸ್ಥಳೀಯವಾಗಿ ಜಾತ್ಯತೀತ ಪಕ್ಷ. ಸರ್ಕಾರದ ವಿರುದ್ಧ ಹೋರಾಟ ನಡೆಸಿರುವ ಜೆಡಿಎಸ್, ಜಾತ್ಯತೀತ ತತ್ವಕ್ಕೆ ಬದ್ಧವಾಗದೇ ಹೊಂದಾಣಿಕೆ ಮಾಡಿಕೊಂಡಿರುವುದು ಅದರ ಹೋರಾಟಕ್ಕೆ ಆಗಿರುವ ಹಿನ್ನಡೆ’ ಎಂದರು.

ನಾಯಕರ ಅಭಿಪ್ರಾಯ

ಜೆಡಿಎಸ್ ಅಧಿಕಾರ ದಾಹದಿಂದ ಜಾತ್ಯತೀತ ತತ್ವವನ್ನು ಧಿಕ್ಕರಿಸಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. 

- ಸಿದ್ದರಾಮಯ್ಯ

ಕಾಂಗ್ರೆಸ್ ನಾಯಕರ ಹಟಮಾರಿತನ ಮತ್ತು ಉದ್ಧಟತನದಿಂದಾಗಿ ಹೊಂದಾಣಿಕೆ ಸಾಧ್ಯವಾಗಲಿಲ್ಲ. 

 - ಎಚ್.ಡಿ.ಕುಮಾರಸ್ವಾಮಿ

 

ಜೆಡಿಎಸ್‌ನವರೇ ಬಂದು ಬೆಂಬಲ ಕೊಡಿ ಎಂದು ಕೇಳಿದ ಮೇಲೆ ನಾವು ಕೊಟ್ಟಿದ್ದೇವೆ. ಇದರಲ್ಲಿ ತಪ್ಪೇನೂ ಇಲ್ಲ.    

 - ಎಸ್.ಎ.ರಾಮದಾಸ್

‘ಜೆಡಿಎಸ್ ಅಧಿಕಾರಕ್ಕಾಗಿ ತನ್ನ ಜಾತ್ಯತೀತ ತತ್ವ, ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿದೆ. ಆ ಪಕ್ಷದ ಹುಸಿ ಜಾತ್ಯತೀತ ಮುಖವಾಡ ಕಳಚಿ ಬಿದ್ದಿದೆ.

  - ಎಚ್.ವಿಶ್ವನಾಥ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry