`ಮೈಸೂರು ಪೈಲಟ್' ಶತಕ ಪ್ರಸಂಗ

7

`ಮೈಸೂರು ಪೈಲಟ್' ಶತಕ ಪ್ರಸಂಗ

Published:
Updated:
`ಮೈಸೂರು ಪೈಲಟ್' ಶತಕ ಪ್ರಸಂಗ

ಶ್ರೀರಾಮ ವೆಂಕಟಸುಬ್ಬಶೆಟ್ಟಿ ವಿಮಾನ ಹಾರಿಸಿದ ಮೊದಲ ಭಾರತೀಯರು. ಅವರು ಮೈಸೂರಿನವರು ಎನ್ನುವುದು ನಮ್ಮ ಹೆಮ್ಮೆ. ಮೊದಲ ವಿಮಾನಯಾನದ ಚಾರಿತ್ರಿಕ ಘಟನೆಗೆ ಈಗ ನೂರು ವರ್ಷಗಳ ಸಂಭ್ರಮ. ರೈಟ್ ಸೋದರರು ಮೊದಲ ಬಾರಿಗೆ ವಿಮಾನ ಚಲಾಯಿಸಿದ ಡಿಸೆಂಬರ್ ತಿಂಗಳು, ಅಪ್ರತಿಮ ವೈಮಾನಿಕ ತಂತ್ರಜ್ಞ ಶೆಟ್ಟಿ ಅವರನ್ನು ನೆನಪಿಸಿಕೊಳ್ಳಲು ಸೂಕ್ತ ಸಂದರ್ಭವೂ ಹೌದು.`ವಿಮಾನ ಹಾರಿಸಿದ ಭಾರತೀಯರಲ್ಲಿ ಮೈಸೂರಿನವರೇ ಮೊದಲಿಗರು ಕಣ್ರೀ...' ಮೂವತ್ತು ವರ್ಷಗಳ ಹಿಂದೆ ಅಧ್ಯಾಪಕರೊಬ್ಬರು ಹೇಳಿದ್ದ ಈ ಮಾತು ಭಾರತೀಯ ವಿಮಾನಯಾನ ಇತಿಹಾಸಕ್ಕೆ ಒಂದು ನೂರು ವರ್ಷ ಆಗುತ್ತಿದೆ ಎಂಬ ಸುದ್ದಿಯೊಂದನ್ನು ಈಚೆಗೆ ಓದಿದಾಗ ನೆನಪಾಯಿತು.ವಿಶ್ವ ವೈಮಾನಿಕ ವಲಯದಲ್ಲಿ ಬೆಂಗಳೂರು ಗಮನಾರ್ಹ ಸ್ಥಾನ ಪಡೆದಿದೆ. ಎರಡು ವರ್ಷಕ್ಕೊಮ್ಮೆ ಇಲ್ಲಿ ನಡೆಯುವ `ಏರ್ ಶೋ' ಕೂಡ ಬೆಂಗಳೂರನ್ನು ಜಾಗತಿಕ ನಕಾಶೆಯಲ್ಲಿ ನಿಲ್ಲಿಸಿದೆ. ಆದರೆ ಮೈಸೂರಿನವರು ಪ್ರಥಮವಾಗಿ ವಿಮಾನ ಹಾರಿಸಿದ ವಿಚಾರ ಮಾತ್ರ ಹೆಚ್ಚು ಪ್ರಚಲಿತವಾಗಿಲ್ಲ.ರೈಟ್ ಸಹೋದರರಿಗೂ ಮೊದಲೇ ಭಾರತೀಯರು ಅದರಲ್ಲೂ ಕರ್ನಾಟಕದವರೊಬ್ಬರು ವಿಮಾನ ಅಭಿವೃದ್ಧಿಪಡಿಸಿದ, ಅದರ ಪ್ರಯೋಗಾರ್ಥ ಹಾರಾಟ ಮುಂಬೈನಲ್ಲಿ ನಡೆದ ವಿಚಾರ ಲೇಖಕ ಜಗನ್ನಾಥ್‌ರಾವ್ ಬಹುಳೆ ಶೋಧ ಮಾಡಿ ಬರೆಯುವವರೆಗೆ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಬಹುಳೆ ಬರೆದ `ಮಾರುತ ಸಖ' ಕೃತಿಯಲ್ಲಿ ಮೈಸೂರು ಪೈಲೆಟ್ ಕುರಿತ ಪುಟ್ಟ ಎಳೆ ಸಿಕ್ಕಿತು. ನಂತರ ಕರ್ನಾಟಕ ಪತ್ರಾಗಾರದ ದಾಖಲೆ ಹುಡುಕಾಟದ ವೇಳೆಗೆ ಇನ್ನಷ್ಟು ಮಾಹಿತಿ ದೊರಕಿತು.ಇಂತಹ ಒಂದೆರಡು ಮಾಹಿತಿ ಹಿಡಿದು ಕೊಳ್ಳೇಗಾಲ, ಮೈಸೂರು, ಚಿಕ್ಕಮಗಳೂರುಗಳಿಗೆ ಓಡಾಡಿ ಮತ್ತಿಷ್ಟು ವಿವರಗಳನ್ನು ಕಲೆಹಾಕಿದ್ದಾಯಿತು. ಅಷ್ಟೊತ್ತಿಗೆ ಸಹೋದ್ಯೋಗಿ ಜ್ಯೋತಿ ವೆಂಕಟರಾಜು ತಮ್ಮ ಚಿಕ್ಕಮಂಗಳೂರು ಬಂಧುಗಳಿಂದ ವಿವರ ವಿಚಾರ ಸಿಕ್ಕಿರುವ ಸಂಗತಿ ಹೇಳಿದ್ದರು. ಡಿ.ಆರ್.ಡಿ.ಓ. ದಲ್ಲಿರುವ ರಾಮಶೆಟ್ಟಿ ಕೊಟ್ಟ ಮಾಹಿತಿಯಿಂದ ಮನೆಯೊಂದನ್ನು ಪತ್ತೆಹಚ್ಚಿ ಮನೆಯವರೊಡನೆ ಮಾತಿಗೆ ಕುಳಿತಾಗ `ಮೈಸೂರು ಪೈಲಟ್' ಸಿಕ್ಕಿಯೇಬಿಟ್ಟರು.ಅವರೇ ಶ್ರೀರಾಮ ವೆಂಕಟಸುಬ್ಬಶೆಟ್ಟಿ (ಎಸ್.ವಿ. ಶೆಟ್ಟಿ). ವಿಮಾನ ಹಾರಿಸಿದ ಮೊದಲ ಭಾರತೀಯ ಎನ್ನುವುದು ಅವರ ಹೆಮ್ಮೆ. ಅಷ್ಟೇ ಅಲ್ಲ, ತಾವೇ ವಿಮಾನ ವಿನ್ಯಾಸ ಸಿದ್ಧಪಡಿಸಿ, ಸ್ವತಃ ವಿಮಾನ ಹಾರಿಸಿದ ಮೈಸೂರ್ ಪೈಲೆಟ್.

ಮೈಸೂರು ಶ್ರೀರಾಮಪೇಟೆಯಲ್ಲಿ ಗ್ರಂಧಿಗೆ ಅಂಗಡಿ ಇಟ್ಟುಕೊಂಡಿದ್ದ ಶ್ರೀರಾಮ ತಿಪ್ಪಯ್ಯಶೆಟ್ಟಿ ಸಾಕಮ್ಮ ಇವರ ಮಗ ಎಸ್.ವಿ. ಶೆಟ್ಟಿ ಅವರು ಹುಟ್ಟಿದ್ದು 1879ರ ಡಿ.28 ರಂದು.ಇದೇ ಡಿಸೆಂಬರ್ ಮಾಹೆಯಲ್ಲೇ ಅಲ್ಲವೇ ರೈಟ್ ಸಹೋದರರು (1903) ಪ್ರಥಮವಾಗಿ ವಿಮಾನವನ್ನು ಬಾನಂಗಳಕ್ಕೆ ಏರಿಸಿದ್ದು. ವ್ಯಾಪಾರ ವಹಿವಾಟಿನ ವಾತಾವರಣದಲ್ಲಿದ್ದರೂ ಎಸ್.ವಿ. ಶೆಟ್ಟಿ ಅವರ ಆಸಕ್ತಿ ಇದ್ದಿದ್ದು ಓದಿನ ಕಡೆಗೆ, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರು ಓದಿದ್ದು ಮೈಸೂರು ವೆಸ್ಲಿಯನ್ ಮಿಷನ್ ಹೈಸ್ಕೂಲ್‌ನಲ್ಲಿ.ಎಳೆಯ ವಯಸ್ಸಿನಲ್ಲೇ ಅನಾರೋಗ್ಯಕ್ಕೆ ತುತ್ತಾಗಿ ನಂತರ ಗುಣಹೊಂದಿ, ಮೈಸೂರು ಮಹಾರಾಜ ಕಾಲೇಜಿನಿಂದ (1900) ಬಿ.ಎ. ಪದವಿ ಪಡೆದ ಶೆಟ್ಟಿ ಅವರು, ಮೈಸೂರು ಸರ್ಕಾರದ ವಿದ್ಯಾರ್ಥಿ ವೇತನದಿಂದಾಗಿ ಮದ್ರಾಸ್ ಎಂಜಿನಿಯರಿಂಗ್ ಕಾಲೇಜಿಗೆ ಸೇರಿದರು. ನಂತರ ಅವರು ಸಿವಿಲ್ ಎಂಜನಿಯರಿಂಗ್ ಪದವಿ ಪಡೆದಿದ್ದು ಉತ್ತರಪ್ರದೇಶದ ರೂರ್ಕಿಯ ಪ್ರತಿಷ್ಠಿತ ಥಾಮ್ಸನ್ ಎಂಜಿನಿಯರಿಂಗ್ ಕಾಲೇಜಿನಿಂದ.ಆಗಿನ ಮೈಸೂರು ಸರ್ಕಾರದಲ್ಲಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಲಾರಂಭಿಸಿದ ಶೆಟ್ಟಿ ಅವರು ಉನ್ನತ ಶಿಕ್ಷಣ ಪಡೆಯಲು ಸರ್ಕಾರವೇ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಿತು. ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಕಲಿಯಲು ಇಂಗ್ಲೆಂಡ್‌ಗೆ ಹೋದ ಅವರನ್ನು ವಿಶೇಷವಾಗಿ ಸೆಳೆದಿದ್ದು ವಿಮಾನಯಾನ ತಂತ್ರಜ್ಞಾನ. ಅದಕ್ಕೆ ಬಹುಮುಖ್ಯ ಕಾರಣ ರೈಟ್ ಸಹೋದರರು ಸಿದ್ಧಗೊಳಿಸಿದ್ದ ವಿಮಾನ ಯಂತ್ರ ಆಗಸದಲ್ಲಿ ಹಾರಾಡಿದ್ದು.ಶೆಟ್ಟಿ ಅವರಿಗೆ ಉನ್ನತ ವ್ಯಾಸಂಗಕ್ಕಾಗಿ ನೀಡಿದ್ದ ಕಾಲಾವಧಿಯಲ್ಲಿ ವೈಮಾನಿಕ ತಂತ್ರಜ್ಞಾನ ಅಭ್ಯಾಸ ಮಾಡಲು ಸಾಧ್ಯವಿರಲಿಲ್ಲ. ಇದಕ್ಕೆ ಅವಕಾಶ ಕೊಟ್ಟು ಇಂಗ್ಲೆಂಡ್‌ನಲ್ಲೇ ಇನ್ನಷ್ಟು ಕಾಲ ಉಳಿಯಲು ಶೆಟ್ಟಿಯವರು ಮಾಡಿದ ಮನವಿಗೆ ಸರ್ಕಾರದಿಂದ ಮನ್ನಣೆ ಸಿಕ್ಕಲಿಲ್ಲ. ಆದರೆ ವೈಮಾನಿಕ ತಂತ್ರಜ್ಞಾನ ತಿಳಿಯಲೇಬೇಕೆಂದು ನಿರ್ಧರಿಸಿದ್ದ ಅವರು, ಬಂಧುಗಳು ಹಾಗೂ ಗೆಳೆಯರ ನೆರವಿನಿಂದ ಇಂಗ್ಲೆಂಡಿನಲ್ಲೇ ವಾಸ್ತವ್ಯ ಮುಂದುವರೆಸಿದರು.ವೈಮಾನಿಕ ತಂತ್ರಜ್ಞಾನ ಆಗಷ್ಟೇ ಚಿಗುರೊಡೆಯುತ್ತಿದ್ದ ಕಾಲ. ವಿಮಾನ ತಯಾರಿಸುವ `ಎ.ವಿ. ರೋ' ಎಂಬ ಕಂಪನಿ ಇತ್ತು. ಇಂಗ್ಲೆಂಡಿನಲ್ಲಿದ್ದ ಏಕಮಾತ್ರ ಸಂಸ್ಥೆ ಅದು. ಅಲ್ಲಿ ತರಬೇತಿ ಪಡೆಯಲು ಅರ್ಜಿ ಹಾಕಿದ ಶೆಟ್ಟಿ ಕಠಿಣ ಸಂದರ್ಶನ ಎದುರಿಸಬೇಕಾಯಿತು. ಆದರೆ ಚತುರಮತಿ, ತೀಕ್ಷ್ಣ ಬುದ್ಧಿಮತ್ತೆಯ ಅವರಿಗೆ ಕಂಪನಿಗೆ ಪ್ರವೇಶ ಸಿಕ್ಕಿತು.ವೈಮಾನಿಕ ಕ್ಷೇತ್ರ ಆಗ ಹೊಸ ಪ್ರಯೋಗಶಾಲೆ. ಕಷ್ಟನಷ್ಟಗಳು ಸಾಮಾನ್ಯವಾಗಿದ್ದವು. ಪ್ರತಿ ಹಂತದಲ್ಲೂ ಸವಾಲು ಎದುರಿಸಬೇಕಾದ ಪರಿಸ್ಥಿತಿ. ಇಂತಹ ಸನ್ನಿವೇಶದಲ್ಲಿ ತರಬೇತಿಗೆ ಕಾಲಿಟ್ಟ ಶೆಟ್ಟಿ ಕೇವಲ ಆರು ತಿಂಗಳುಗಳಲ್ಲಿ ವೈಮಾನಿಕ ತಂತ್ರಜ್ಞಾನದ ಅರಿವು ಪಡೆದರಲ್ಲದೆ ವಿಮಾನ ಹಾರಿಸುವುದರಲ್ಲೂ ಪರಿಣಿತಿ ಸಾಧಿಸಿದರು.ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಪ್ರಸಿದ್ಧ ವೈಮಾನಿಕ ಜಾನ್ ಡ್ಯೂಗನ್ ವಿಮಾನವೊಂದನ್ನು ತಯಾರಿಸಿಕೊಡಲು `ಎ.ವಿ. ರೋ' ಕಂಪನಿಯನ್ನು ಕೋರಿದ್ದರು. ಆಗ ಈ ಕಂಪನಿ ಡ್ಯೂಗನ್ ಅವರಿಗಾಗಿ 40 ಅಶ್ವಶಕ್ತಿಯ ವಿಮಾನವೊಂದನ್ನು ತಯಾರಿಸಿತು. ಆದರದು ಹಾರಲು ಅಡಚಣೆ ಎದುರಿಸುತ್ತಿತ್ತು. ಉತ್ಸಾಹಿ ಶೆಟ್ಟಿ ಅವರನ್ನು ವಿಮಾನ ಪರೀಕ್ಷಿಸಲು ಸೂಚಿಸಲಾಯಿತು.ಬ್ರೂಕ್‌ಲ್ಯಾಂಡ್ ಪ್ರಾಯೋಗಿಕ ಉಡ್ಡಯನ ತಾಣ. ಸವಾಲು ಸ್ವೀಕರಿಸಿದ ಎಸ್.ವಿ. ಶೆಟ್ಟಿ ವಿಮಾನವನ್ನು ತಾವೇ ಉಡಾವಣೆ ಮಾಡಿದರಾದರೂ 50 ಅಡಿ ಏರಿದ ಮೇಲೆ ಅದು ಅಪಘಾತಕ್ಕೆ ಈಡಾಯಿತು. ಶೆಟ್ಟಿಯವರಿಗೆ ಯಾವುದೇ ಅಪಾಯವಾಗಲಿಲ್ಲ. ಈ ವಿಷಯವನ್ನು ಡ್ಯೂಗನ್‌ರಿಂದ ಮರೆಮಾಚಲು ಅಪಘಾತಕ್ಕೀಡಾದ ವಿಮಾನವನ್ನು ಯಾರಿಗೂ ಗೊತ್ತಾಗದಂತೆ ಗೋದಾಮಿಗೆ ಸೇರಿಸಿದರು.ರಾತ್ರಿ ವೇಳೆ ಯಾರಿಗೂ ಗೊತ್ತಾಗದಂತೆ ಗೋದಾಮು ಪ್ರವೇಶಿಸಿದ ಶೆಟ್ಟಿ ಅವರು, ಅಪಘಾತಕ್ಕೆ ಈಡಾದ ವಿಮಾನವನ್ನು ಪರೀಕ್ಷಿಸಿ ಅದರಲ್ಲಿದ್ದ ನ್ಯೂನತೆಗಳನ್ನು ಪತ್ತೆ ಹಚ್ಚಿದರು.

ಕೆಲವು ದಿನಗಳ ಸಂಶೋಧನೆಯ ನಂತರ ನೂತನ ಬಗೆಯ ವಿಮಾನವನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಕಂಪನಿ ಮುಂದಿಟ್ಟರು. `ಎ.ವಿ. ರೋ' ಕಂಪನಿಯಲ್ಲಿ ಪರ‌್ಯಾಯ ವಿನ್ಯಾಸವಿರಲಿಲ್ಲ. ಹಾಗಾಗಿ ಶೆಟ್ಟಿ ಅವರಿಗೆ ವಿಮಾನ ನಿರ್ಮಿಸಲು ಅವಕಾಶ ನೀಡಲಾಯಿತು. ಸಂಸ್ಥೆಯ ವಿಶ್ವಾಸ ಉಳಿಸಿಕೊಳ್ಳಲು ತಾವೇ ವಿನ್ಯಾಸ ಮಾಡಿ ಸಿದ್ಧಪಡಿಸಿದ್ದ ವಿಮಾನವನ್ನು ಪರೀಕ್ಷಾರ್ಥವಾಗಿ ಹಾರಿಸಿ ಸುರಕ್ಷಿತವಾಗಿ ನೆಲದ ಮೇಲಿಳಿಸಿದರು. ಇದು ನಡೆದಿದ್ದು 1912ರ ಮಾರ್ಚ್ 10 ರಂದು.ಈ ಪರೀಕ್ಷಾರ್ಥ ಹಾರಾಟದ ವೇಳೆ ಖುದ್ದು ಹಾಜರಿದ್ದ ಜಾನ್ ಡ್ಯೂಗನ್ ಎಸ್.ವಿ. ಶೆಟ್ಟಿ ಮರುವಿನ್ಯಾಸ ಮಾಡಿದ್ದ ವಿಮಾನವನ್ನು ಸ್ಥಳದಲ್ಲೇ ಖರೀದಿ ಮಾಡಿದರು. ಆವರೆಗೆ `ಡಿ' ಮಾದರಿ ವಿಮಾನಗಳನ್ನು ರೂಪಿಸುತ್ತಿದ್ದ `ಎ. ವಿ. ರೋ' ಕಂಪನಿ ಹೊಸದನ್ನು `ಈ' ಮಾದರಿ ಎಂದು ಕರೆಯಿತು. ಬ್ರಿಟಿಷ್ ರಾಯಲ್ ಏರ್‌ಪೋರ್ಸ್ ಕೂಡ ಇಂತಹ ಎರಡು ವಿಮಾನಗಳನ್ನು ಖರೀದಿಸಿತು. ಜಾಗತಿಕವಾಗಿಯೂ ಪ್ರಸಿದ್ಧಿಗೆ ಬಂದ ಈ ವಿಮಾನ ಮಾದರಿ ಮುಂದೆ ಮೊದಲ ವಿಶ್ವ ಯುದ್ಧದಲ್ಲಿಯೂ ಬಳಕೆಯಾಯಿತು.ಕೇವಲ ಏಳು ತಿಂಗಳುಗಳಲ್ಲಿ ಎರಡು ನೂತನ ವಿಮಾನಗಳನ್ನು ವಿನ್ಯಾಸ ಮಾಡಿ, ನಿರ್ಮಿಸಿ, ಪರೀಕ್ಷಿಸಿದ ಎಸ್.ವಿ. ಶೆಟ್ಟಿ ಅಂದುಕೊಂಡಿದ್ದನ್ನು ಸಾಧಿಸಿದ ಮೇಲೆ ತಾಯ್ನಾಡಿಗೆ ಹಿಂತಿರುಗಲು ನಿರ್ಧರಿಸಿದರು. `ಎ.ವಿ. ರೋ' ಕಂಪೆನಿ 1912ರ ಜೂನ್ 12ರಂದು ಶೆಟ್ಟಿ ಅವರನ್ನು ಗೌರವಿಸಿ, ಅವರ ಅಸಾಧಾರಣ ಅನ್ವೇಷಣೆಗಾಗಿ ಚಿನ್ನದ ಪದಕವನ್ನಿತ್ತು ಸನ್ಮಾನಿಸಿತು.ಭಾರತಕ್ಕೆ ವಾಪಸ್ಸಾದ ಅವರನ್ನು ಮೈಸೂರು ಸರ್ಕಾರ 1913ರಲ್ಲಿ ಆರಂಭಿಸಲಾದ ಮೆಕಾನಿಕಲ್ ಎಂಜಿನಿಯರಿಂಗ್ ಸಂಸ್ಥೆಯ ಸೂಪರಿಂಟೆಂಡೆಂಟ್ ಆಗಿ ನೇಮಿಸಿತು. ನಂತರ ಸ್ಥಾಪನೆಯಾದ ರಾಜ್ಯದ ಪ್ರಥಮ ಎಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ಎಂಜಿನಿಯರಿಂಗ್ ಪ್ರೊಫೆಸರ್ ಆಗಿಯೂ ಅವರು ಕಾರ್ಯ ನಿರ್ವಹಿಸಿದರು.ಇಂಗ್ಲೆಂಡಿನಲ್ಲಿ ಸ್ವಂತ ಪರಿಶ್ರಮದಿಂದ ವಿಮಾನ ಮಾದರಿಗಳನ್ನು ವಿನ್ಯಾಸಿಸಿ ನಿರ್ಮಿಸಿಕೊಟ್ಟ ಶೆಟ್ಟಿ ಅವರಿಗೆ ತಮ್ಮ ತಾಯ್ನೆಲದಲ್ಲಿಯೇ ಮತ್ತೊಂದು ವಿಮಾನ ರೂಪಿಸಲು ಸಾಧ್ಯವಾಗಲಿಲ್ಲ. ಮೊದಲ ಮಹಾಯುದ್ಧ ಆರಂಭಗೊಂಡಿದ್ದರಿಂದಾಗಿ, ವಿಮಾನ ನಿರ್ಮಾಣಕ್ಕೆ ಅತ್ಯಗತ್ಯವಾದ ಎಂಜಿನ್ ಅನ್ನು ಬ್ರಿಟನ್‌ನಿಂದ ಆಮದು ಮಾಡಲು ಸಾಧ್ಯವಾಗದಿದ್ದೇ ಇದಕ್ಕೆ ಕಾರಣ. ತಾಂತ್ರಿಕ ಕ್ಷೇತ್ರದಲ್ಲಿ ಇನ್ನೂ ಹಲವು ಸಾಧನೆಗಳನ್ನು ಮಾಡಿದರೂ ಇನ್‌ಪ್ಲುಯೆಂಜಾಗೆ ತುತ್ತಾದ ಶೆಟ್ಟಿ ಅವರು 39ನೇ ವಯಸ್ಸಿನಲ್ಲೇ (1918ರಲ್ಲಿ) ಕೊನೆಯುಸಿರೆಳೆದರು.ಶೆಟ್ಟಿ ಅವರ ಅಪ್ರತಿಮ ಸಾಧನೆಗೆ ಸಾಕ್ಷಿಯಾದದ್ದು ಬ್ರಿಟಿಷರು ಭಾರತದ ಆಡಳಿತ ಚುಕ್ಕಾಣಿ ಹಿಡಿದಿದ್ದ ಸಂದರ್ಭ. ಆಗ ಭಾರತೀಯರ ಸಾಧನೆಗೆ ಹೆಚ್ಚಿನ ಪ್ರಾಮುಖ್ಯ ಸಿಗುತ್ತಿರಲಿಲ್ಲ. ಶೆಟ್ಟಿ ಅವರನ್ನು ಮೈಸೂರು ಸರ್ಕಾರ ಗೌರವಯುತವಾಗಿ ನಡೆಸಿಕೊಂಡರೂ ಬ್ರಿಟಿಷ್ ವ್ಯವಸ್ಥೆ ಇದನ್ನು ಗೌಣವಾಗುವಂತೆ ನೋಡಿಕೊಂಡಿತು. ಬೆಂಗಳೂರಿನ ದೊಡ್ಡಣ್ಣ ಹಾಲ್‌ನಲ್ಲಿ ಎಸ್.ವಿ. ಶೆಟ್ಟಿ ಅವರಿಗೆ ಪೌರ ಸನ್ಮಾನ ವ್ಯವಸ್ಥೆಯಾಗಿತ್ತು.ಬ್ರಿಟಿಷ್ ವೈಮಾನಿಕ ಚರಿತ್ರೆಯಲ್ಲಿ ಶೆಟ್ಟಿ ಸಾಧನೆಗಳು ದಾಖಲಾಗಿವೆ. ಶೆಟ್ಟಿ ಅವರು ರೂಪಿಸಿದ ವಿಮಾನ ಮಾದರಿಗಳು ಮುಂದೆ ಪ್ರಸಿದ್ಧವಾದರೂ ಅದನ್ನು `ಎ. ವಿ. ರೋ' ತನ್ನದೆಂದೇ ಬಿಂಬಿಸುತ್ತಿದೆ. ಇಂಗ್ಲೆಂಡ್ ವೈಮಾನಿಕ ಇತಿಹಾಸ ರಚನೆ ಸಂದರ್ಭದಲ್ಲಿ ಭಾರತೀಯ ಎಂಜಿನಿಯರ್ ಶೆಟ್ಟಿ ಅವರ ವಿಮಾನ ವಿನ್ಯಾಸ, ಹಾರಿಸಿದ ಬಗೆ ಕುರಿತು ಅಮೂಲ್ಯವಾದ ಕೆಲವು ದಾಖಲೆಗಳು, ಪತ್ರಿಕಾ ತುಣುಕುಗಳು ಲಭಿಸಿವೆ. ಶೆಟ್ಟಿ ಅವರ ಪರಿಶ್ರಮವನ್ನು, ಸಾಹಸ ಕಾರ್ಯಾಚರಣೆಯನ್ನು ದಾಖಲೆ ಸಮೇತ ವಿವರಿಸುವ ಪ್ರಮುಖ ದತ್ತಾವೇಜುಗಳು `ಎ. ವಿ. ರೋ' ಕಂಪೆನಿ ಕಚೇರಿಯಲ್ಲಿ 1959ರಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ ನಾಶವಾದವು.ಈಗ `ಎ. ವಿ. ರೋ' ಕಂಪೆನಿ `ಆವ್ರೊ' ಎಂದಾಗಿದೆ. `ಶೆಟ್ಟಿ ಅವರ ಸಾಧನೆಗಳ ನಿಖರ ಮಾಹಿತಿ ಒದಗಿಸಲು `ಆವ್ರೊ' ಹೆಚ್ಚು ಆಸಕ್ತಿ ತೋರುತ್ತಿಲ್ಲ. ಆದರೆ ಈಗ ಲಭ್ಯವಿರುವ ಸಂಸ್ಥೆಯ ಪತ್ರ ವ್ಯವಹಾರಗಳಲ್ಲಿ, ಸಂಸ್ಥೆಯ ಮಾಲೀಕರ ದತ್ತಾವೇಜುಗಳಲ್ಲಿ ಮಾತ್ರ ಶೆಟ್ಟಿ ಅವರ ಪರಿಶ್ರಮದ ವಿವರಗಳು ದೊರಕಿವೆ.ಇಂಗ್ಲೆಂಡ್‌ನ ವೈಮಾನಿಕ ಇತಿಹಾಸಕಾರ ರೋಜರ್ ಜಾಕ್ಸನ್ ಅವರು ಎಸ್.ವಿ. ಶೆಟ್ಟಿ ಅವರು ವೈಮಾನಿಕ ಕ್ಷೇತ್ರದಲ್ಲಿ ಅಸಾಧಾರಣ ಪರಿಶ್ರಮವನ್ನು ಮುಕ್ತ ಮನಸ್ಸಿನಿಂದ ಕೊಂಡಾಡಿದ್ದಾರೆ. ವಿಮಾನ ಯಾನ ಚರಿತ್ರೆಯ ಶುರುವಿನ ದಿನಗಳಲ್ಲಿ ಭಾರತೀಯ ಯುವಕನ ಅನ್ವೇಷಣೆಗಳನ್ನು ರೋಜರ್ ಮೆಚ್ಚಿ ದಾಖಲಿಸಿದ್ದಾರೆ.ಎವಿರೋ ಡ್ಯೂಗನ್ ಹಾಗೂ ಎವಿರೊ 504 ವಿಮಾನ ವಿನ್ಯಾಸ ಹಾಗೂ ನಿರ್ಮಾಣದಲ್ಲಿ ಶೆಟ್ಟಿ ಅವರ ಪಾತ್ರವನ್ನು ನಿರೂಪಿಸುವ ಪುರಾವೆಗಳನ್ನು ಆಗ ಕಲ್ಕತ್ತಾದಿಂದ ಪ್ರಕಟವಾಗುತ್ತಿದ್ದ `ದಿ ಮಾಡ್ರನ್ ರಿವ್ಯೆ ಜರ್ನಲ್' ಪ್ರಕಟಿಸಿದ್ದು, ಅದೇ ಸಂದರ್ಭದಲ್ಲಿ ಎಸ್. ವಿ. ಶೆಟ್ಟಿ ಅವರನ್ನು ಸಂದರ್ಶಿಸಿದೆ.ಶೆಟ್ಟಿ ಅವರು 1918ರಲ್ಲಿ ಅಕಾಲಿಕವಾಗಿ ನಿಧನರಾದಾಗ ಅವರೊಂದಿಗೆ ಪತ್ನಿ ಹಾಗೂ ಓರ್ವ ಪುತ್ರಿಯೂ ಮರಣ ಹೊಂದಿದರು. ಆ  ಕುಟುಂಬದಲ್ಲಿ ಉಳಿದವರು ಶೆಟ್ಟಿಯವರ ಹಿರಿಯ ಪುತ್ರಿ ಸರಸ್ವತಿ ಮಾತ್ರ. ಶೆಟ್ಟಿ ಅವರ ಮೊಮ್ಮಗ ಜಿ.ಆರ್. ನಾಗರಾಜ್ ಹಾಗೂ ಮರಿ ಮಗ ಜಿ.ಎನ್. ಜಯಪ್ರಕಾಶ್ ಅವರು ಶೆಟ್ಟಿಯವರ ಜೀವನ ಸಾಧನೆಗಳ ವಿವರಗಳನ್ನು ಸಂಗ್ರಹಿಸಿದ್ದಾರೆ. ಈಗಲೂ ಬ್ರಿಟಿಷ್ ವೈಮಾನಿಕ ಇತಿಹಾಸವನ್ನು ಶೋಧಿಸಿ ಶೆಟ್ಟಿ ಅವರ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.ಭಾರತೀಯರ ಸಾಧನೆಗಳ ಬಗ್ಗೆ ನಿರ್ಲಕ್ಷ ಮನೋಭಾವವಿದ್ದ ಬ್ರಿಟಿಷರು ಎಸ್.ವಿ. ಶೆಟ್ಟಿ ಅವರಿಗೆ ಸಿಗಬೇಕಾದ ಗೌರವವನ್ನು ನೀಡಲಿಲ್ಲ. ಈಗ ಅವರಿಗೆ ಸಂಬಂಧಿಸಿದ ಲಭ್ಯವಿರುವ ಎಲ್ಲಾ ಮಾಹಿತಿ ನೀಡಿದರೂ ನಮ್ಮ ಸರ್ಕಾರಗಳೂ ಮಾನ್ಯತೆ ನೀಡುತ್ತಿಲ್ಲ ಎಂಬುದು ಶೆಟ್ಟಿ ಅವರ ಮೊಮ್ಮಗ ನಾಗರಾಜ್ ಅಳಲು.ಜಿ.ಟಿ.ಆರ್.ಇ. ಯಲ್ಲಿ ವಿಜ್ಞಾನಿ ಆಗಿರುವ ಜಿ.ಎನ್. ಜಯಪ್ರಕಾಶ್ ನಿರಂತರವಾಗಿ ಶೆಟ್ಟಿ ಅವರ ಅನ್ವೇಷಣೆಗಳನ್ನು ಹೆಕ್ಕಿ ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಶೆಟ್ಟಿಯವರು ವಿಮಾನ ಮಾದರಿ ರೂಪಿಸಿ, ನಿರ್ಮಿಸಿ, ತಾವೇ ಯಶಸ್ವಿ ಉಡ್ಡಯನ ಮಾಡಿದ್ದಕ್ಕೆ ಈ ವರ್ಷ ನೂರು ವರ್ಷ (1912-2012). ಈ ಸಾಧನೆಯ ನೆನಪಿನಲ್ಲಿ ಸ್ಮಾರಕ ಅಂಚೆ ಚೀಟಿ ಪ್ರಕಟಿಸಲು ಕೇಂದ್ರ ಸರ್ಕಾರಕ್ಕೆ ಮಾಡಿದ ಮನವಿಗೆ ಇನ್ನೂ ಪ್ರತಿಕ್ರಿಯೆ ಸಿಕ್ಕಿಲ್ಲ. ಭಾರತೀಯ ಅನ್ವೇಷಕರೊಬ್ಬರ ಅನನ್ಯ ಶೋಧನೆಯನ್ನು ಗುರುತಿಸುವ ಗೌರವಿಸುವ ಯೋಚನೆ ಯಾರೂ ಮಾಡಿದಂತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry