ಶನಿವಾರ, ಜನವರಿ 18, 2020
22 °C

ಮೈಸೂರು ಮಹಾರಾಜ ವಿಧಿವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಸೂರು ರಾಜಮನೆತನದ ಕೊನೆಯ ಕುಡಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ ಸಿಎ) ಅಧ್ಯಕ್ಷ ಮಹಾರಾಜ ಶ್ರೀಕಂಠದತ್ತ ಒಡೆಯರ್ (60) ಅವರು ಮಂಗಳವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ನಿಧನರಾದರು.

ಒಡೆಯರ್ ಅವರು ಪತ್ನಿ ಮಹಾರಾಣಿ ಪ್ರಮೋದಾ ದೇವಿ ಮತ್ತು ಕುಟುಂಬ ಸದಸ್ಯರನ್ನು ಅಗಲಿದ್ದಾರೆ.

1953ರಲ್ಲಿ ಮೈಸೂರು ಸಂಸ್ಥಾನದ ಆಗಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಏಕೈಕ ಪುತ್ರನಾಗಿ ಜನಿಸಿದ್ದ ಶ್ರೀಕಂಠದತ್ತ ಒಡೆಯರ್ ಅವರು 1974ರ ಸೆಪ್ಟೆಂಬರಿನಲ್ಲಿ ತಂದೆಯ ನಿಧನಾನಂತರ ರಾಜಕುಟುಂಬದ ಮುಖ್ಯಸ್ಥರಾಗಿ ಪಟ್ಟಕ್ಕೇರಿದ್ದರು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಜಯಗಳಿಸಿ ಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸಿದ್ದ ಶ್ರೀಕಂಠದತ್ತ ಒಡೆಯರ್ ಅವರು ಒಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಹಾಗೂ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದರು.ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಅಧ್ಯಕ್ಷರಾಗಿ 2010ರ ತನಕ ಸೇವೆ ಸಲ್ಲಿಸಿದ್ದ ಶ್ರೀಕಂಠದತ್ತ ಒಡೆಯರ್ ಅವರು ಹತ್ತು ದಿನಗಳ  ಹಿಂದಷ್ಟೇ (ಡಿಸೆಂಬರ್ 1) ನಡೆದ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಗೆದ್ದು ಬಂದಿದ್ದರು.ಕ್ರಿಕೆಟ್ ಪಟುವಾಗಿ ಕಾಲೇಜು ದಿನಗಳಲ್ಲೇ ಮೈಸೂರು ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಆಗ ಅವರು ವಿಶ್ವವಿದ್ಯಾಲಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದರು.ಫ್ಯಾಷನ್ ಡಿಸೈನರ್ ಕೂಡಾ ಆಗಿದ್ದ ಒಡೆಯರ್ ಅವರು 'ಮೈಸೂರು ಬ್ರಾಂಡ್'  ರೇಷ್ಮೆ ಸೀರೆಯನ್ನು ಜನಪ್ರಿಯಗೊಳಿಸುವಲ್ಲಿ ಮಹತ್ವದ ಕೆಲಸ ಮಾಡಿದ್ದರು.

ಪ್ರತಿಕ್ರಿಯಿಸಿ (+)