ಮಂಗಳವಾರ, ಜೂನ್ 22, 2021
28 °C

ಮೈಸೂರು ಮೃಗಾಲಯಕ್ಕೆ ವಿದೇಶಿ ಮಂಗಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯಕ್ಕೆ ಜೆಕ್ ರಿಪಬ್ಲಿಕ್ ದೇಶದಿಂದ ವಿರಳ ಜಾತಿಗೆ ಸೇರಿದ ಎಂಟು ಕಂದು ಕಪುಚಿನ್ ಮಂಗಗಳನ್ನು ಪ್ರೇಗ್-ದುಬೈ ಮಾರ್ಗವಾಗಿ ಚೆನ್ನೈ ಮೂಲಕ ಗುರುವಾರ ತರಲಾಗಿದೆ.

ಜೆಕ್‌ನ ಜ್ಲಿನ್ ಮೃಗಾಲಯವು ಅಲ್ಲಿನ ವಾನರ ಜಾತಿ ಪ್ರಾಣಿ ಮನೆಯ ಮರುನಿರ್ಮಾಣ ಮಾಡುವ ಉದ್ದೇಶದಿಂದ ಅವರಲ್ಲಿದ್ದ ಸಂತಾನಾಭಿವೃದ್ಧಿ ಪಡಿಸುವ ಸೆಬಸ್ ಅಪೆಲ್ಲಾಗಳನ್ನು ಮೈಸೂರು ಮೃಗಾಲಯಕ್ಕೆ ಕಳುಹಿಸಿದೆ.ಇವುಗಳನ್ನು ಮಾರ್ಚ್ 19ರಂದು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎಂದು ಮೃಗಾಲಯ ನಿರ್ದೇಶಕ ಬಿ.ಪಿ.ರವಿ ತಿಳಿಸಿದ್ದಾರೆ.ಈ ಎಂಟರಲ್ಲಿ ಮೂರು ಗಂಡು (ವಯಸ್ಸು: 14ವರ್ಷ, 3.6ವರ್ಷ, 1.6ವರ್ಷ), ನಾಲ್ಕು ಹೆಣ್ಣು (ವಯಸ್ಸು: 16, 14, 14, 2.10 ವರ್ಷ), ಇನ್ನೊಂದು ಮರಿಯು ಒಂದು ವರ್ಷದ್ದಾಗಿದ್ದು, ಅದರ ಲಿಂಗ ಪತ್ತೆ ಮಾಡಬೇಕಿದೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.ಕಪುಚಿನ್ ಮಂಗಗಳು ವೃಕ್ಷವಾಸಿ ಮತ್ತು ಹಗಲು ಸಂಚಾರಿಗಳು. ಇವು ಬಹಳ ಚುರುಕು ಬುದ್ಧಿಯನ್ನು ಹೊಂದಿವೆ. ಕಪುಚಿನ್ ಮಂಗಗಳ ಕೂದಲು ಸನ್ಯಾಸಿಗಳು ತಲೆಗೆ ಧರಿಸುವಂತಹ ವಸ್ತ್ರ ವಿನ್ಯಾಸ ಹೊಂದಿವೆ. ಕೈಗಳು ಮಾನವನ ಕೈಗಳಂತೆಯೇ ಇವೆ. ಅವುಗಳ ಹೆಬ್ಬೆರಳು, ದೊಡ್ಡಗಾತ್ರದ ಕಾಲ್ಬೆರಳು ಮತ್ತು ಇತರೆ ಬೆರಳುಗಳು ಭಿನ್ನವಾಗಿವೆ.ಕೂದಲಿನಿಂದ ಆವೃತ್ತವಾಗಿರುವ ಈ ಪ್ರಾಣಿಯ ಶಿರ ಭಾಗವು ಗುಂಡಾಕಾರದಲ್ಲಿದ್ದು, ಹಿಂಬದಿಯ ಕೂದಲು ದೇಹದ ಇತರ ಭಾಗದಲ್ಲಿರುವ ಕೂದಲಿಗಿಂತ ಕಡುಬಣ್ಣದಿಂದ ಕೂಡಿದೆ. ಕೂದಲಿನಿಂದ ಕೂಡಿದ ಉದ್ದನೆಯ ಬಾಲವು ಭಾಗಶಃ ಹಿಡಿಯುವ ಶಕ್ತಿಯನ್ನು ಹೊಂದಿದೆ. ಮಂಗವು ಮರದಲ್ಲಿ ಚಲಿಸುವಾಗ ಈ ಬಾಲವು ಆಧಾರ ಸ್ತಂಭದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.ಕಪುಚಿನ್ ಮಂಗಗಳು ಕಣಿವೆಯಲ್ಲಿರುವ ಅಥವಾ ಯಾವುದೇ ಬಾಹ್ಯ ಒತ್ತಡ ಇರಬಹುದಾದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತವೆ. ಅವುಗಳ ಮೂಲ ಆವಾಸ ಸ್ಥಾನ ಅಮೆರಿಕದ ದಕ್ಷಿಣ ಮಧ್ಯಭಾಗ. ಅವು ಕೋಸ್ಟ್‌ರಿಕಾದಿಂದ ಪರಾಗ್ವೆವರೆಗೆ ಟ್ರಿನಿಡಾಡ್ ಪ್ರದೇಶದಲ್ಲಿ ಕಂಡುಬರುತ್ತವೆ.ಕಪುಚಿನ್ ಮಂಗಗಳನ್ನು ತಾತ್ಕಾಲಿಕವಾಗಿ ಪಕ್ಷಿಗಳ ಆವರಣದಲ್ಲಿ ಬಿಡಲಾಗಿದ್ದು, ನಂತರದಲ್ಲಿ ಅವುಗಳ ಒಂದುಗೂಡುವಿಕೆ ಮತ್ತು ಸಂತಾನಾಭಿವೃದ್ಧಿಗೆ ಅಗತ್ಯವಿರುವ ಎಲ್ಲ ಅನುಕೂಲತೆಗಳನ್ನು ಒಳಗೊಂಡಿರುವ ನೂತನ ಆವರಣದಲ್ಲಿ ಬಿಡಲಾಗುತ್ತದೆ.ಕಪುಚಿನ್ ಮಂಗಗಳಿಗೆ ಹಣ್ಣು, ಮೊಟ್ಟೆ, ಕೀಟಗಳು, ಕಾಯಿ ಮತ್ತು ತರಕಾರಿಯನ್ನು ಆಹಾರವಾಗಿ ನೀಡಲಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.