ಭಾನುವಾರ, ಜನವರಿ 19, 2020
29 °C

ಮೈಸೂರು ವಿವಿ ಅಭಿವೃದ್ಧಿಗೆ ರೂ 50 ಕೋಟಿ

ಪ್ರಜಾವಾಣಿ ವಾರ್ತೆ/ ಸುಭಾಸ.ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) `ಯೂನಿವರ್ಸಿಟಿ ವಿತ್ ಪೊಟೆನ್ಷಿಯಲ್ ಫಾರ್ ಎಕ್ಸಲೆನ್ಸ್~ (ಯುಪಿಇ) ಸ್ಥಾನಮಾನ ನೀಡಿದ್ದು, ರೂ. 50 ಕೋಟಿ ಅನುದಾನ ಘೋಷಿಸಿದೆ. ಈ ಹಿಂದೆಯೇ ವಿವಿಯನ್ನು ಜ್ಞಾನದ ಉತ್ಕೃಷ್ಟ ಸಂಸ್ಥೆಯನ್ನಾಗಿ ಮಾಡಲು ರೂ. 100 ಕೋಟಿ ಅನುದಾನ ಬಂದಿದೆ. ಇದರಿಂದ ವಿವಿಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದ್ದು, ಕೋಟಿ ಕೋಟಿ ರೂಪಾಯಿ ಅನುದಾನ ಹರಿದು ಬರುತ್ತಿದೆ.ಕೇಂದ್ರ ಸರ್ಕಾರದ ರೂ. 100 ಕೋಟಿ ಅನುದಾನ, ಯುಜಿಸಿಯಿಂದ ರೂ. 50 ಕೋಟಿ ಅನುದಾನ ಲಭ್ಯವಾಗಿದ್ದು, ಸಂಶೋಧನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಶ್ರೇಷ್ಠ ಸಾಮರ್ಥ್ಯದ ವಿಶ್ವವಿದ್ಯಾ ನಿಲಯ ಯೋಜನೆಯಡಿ ಒಂದೆರಡು ದಿನಗಳಲ್ಲಿ ರೂ. 30 ಕೋಟಿ ಹಣ ಬಿಡುಗಡೆಯಾಗುತ್ತಿದೆ. ವಿವಿಯನ್ನು ಜ್ಞಾನದ ಉತ್ಕೃಷ್ಟ ಸಂಸ್ಥೆ(ಇನ್ಸ್‌ಟಿಟ್ಯೂಷನ್ ಆಫ್ ಎಕ್ಸಲೆನ್ಸ್) ಯನ್ನಾಗಿ ಅಭಿವೃದ್ಧಿ ಪಡಿಸುವುದಾಗಿ ಘೋಷಿಸಿದ್ದ ಕೇಂದ್ರ ಸರ್ಕಾರ ಈಗಾಗಲೇ ರೂ. 33.33 ಕೋಟಿ ಹಣ ಬಿಡುಗಡೆ ಮಾಡಿದೆ.ಸಂಶೋಧನಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ರೂ. 9 ಕೋಟಿ ನೀಡಿದೆ. 11ನೇ ಪಂಚ ವಾರ್ಷಿಕ ಯೋಜನೆಯಲ್ಲಿ ರೂ. 11.40 ಕೋಟಿ, ಯುಜಿಸಿಯಿಂದ ರೂ. 1 ಕೋಟಿ ಅನುದಾನ ಬಂದಿದೆ. ಹೀಗೆ ಸುಮಾರು 90 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ನಡೆದಿವೆ.ರೂ. 100 ಕೋಟಿ ಅನುದಾನದಲ್ಲಿ `ಜೀವ ವೈವಿಧ್ಯತೆ, ಜೀವ ಸಂಪನ್ಮೂಲಗಳ ಅನ್ವಯಿಕ ಉಪಯುಕ್ತತೆ ಮತ್ತು ಸುಸ್ಥಿರ ಅಭಿವೃದ್ಧಿ~ ಕುರಿತ ಬೃಹತ್ ಸಂಶೋಧನಾ ಯೋಜನೆಯನ್ನು ವಿವಿ ಕೈಗೆತ್ತಿಕೊಂಡಿದೆ. ಈಗಾಗಲೇ ರೂ. 11.58 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೇಷ್ಠ ಗುಣ ಮಟ್ಟದ ಬೋಧನೋಪಕರಣ ಖರೀದಿಸಲಾಗಿದೆ.ಜೀವ ವೈವಿಧ್ಯತೆ ಯೋಜನೆಗಾಗಿ ರೂ. 10.25 ಕೋಟಿ ವೆಚ್ಚದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸಂಶೋಧನಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ಪಶ್ಚಿಮ ಘಟ್ಟದಿಂದ ಔಷಧೀಯ ಸಸ್ಯಗಳನ್ನು ತಂದು, ಇಲ್ಲಿ ಬೆಳೆಸುವ ಮೂಲಕ ಸಂಶೋಧನೆಗೆ ಉತ್ತೇಜನ ನೀಡಲು ಯೋಚಿಸಲಾಗಿದೆ. ವಿದ್ಯಾರ್ಥಿ ನಿಲಯ ಗಳ ಅಭಿವೃದ್ಧಿ, ಪ್ರಯೋಗಶಾಲೆಗಳ ನವೀಕರಣ, ಗ್ರಂಥಾಲಯದಲ್ಲಿ ಕಂಪ್ಯೂಟರ್ ಅಳವಡಿಕೆ, ವಿವಿಯ ಎಲ್ಲ 41 ವಿಭಾಗಗಳಲ್ಲಿ ತಲಾ ಒಂದು ತರಗತಿಯನ್ನು ವಿದ್ಯುನ್ಮಾನ ತರಗತಿಯನ್ನಾಗಿ ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆ.ಸಂಶೋಧನೆಗೆ 15 ಕೋಟಿ

ರೂ. 50 ಕೋಟಿ ಅನುದಾನದಲ್ಲಿ ಸಂಶೋಧ ನೆಗೆ ರೂ. 15 ಕೋಟಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ (ಏಟ್ಝಜಿಠಿಜ್ಚಿ ಈಛಿಛ್ಝಿಟಞಛ್ಞಿಠಿ) ಕೈಗೊಳ್ಳಲು ರೂ. 35 ಕೋಟಿ ಬಳಕೆ ಮಾಡಲಾಗುತ್ತಿದೆ. ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಭಾಗಗಳಿಗೆ ತಾರತಮ್ಯ ಮಾಡಬಾರದು ಎಂಬ ಉದ್ದೇಶದಿಂದ ರೂ. 10 ಕೋಟಿಯನ್ನು ವಿಜ್ಞಾನ ಕ್ಷೇತ್ರಕ್ಕೆ ಹಾಗೂ ರೂ. 5 ಕೋಟಿಯನ್ನು ಸಮಾಜ ವಿಜ್ಞಾನ ಕ್ಷೇತ್ರಗಳ ಸಂಶೋಧನೆಗೆ ಬಳಸಲು ತೀರ್ಮಾನಿಸಲಾಗಿದೆ.ಕಂಪ್ಯೂಟರ್ ಖರೀದಿ: ಸಂಶೋಧನೆ ಕೈಗೊಳ್ಳಲು ವಿವಿಯಲ್ಲಿ ಉತ್ತಮ ಗುಣಮಟ್ಟದ ಕಂಪ್ಯೂಟರ್‌ಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಕಾರ್ಯದಕ್ಷತೆ ಹೊಂದಿರುವ ಕಂಪ್ಯೂಟರ್ ಖರೀದಿಸಲು ರೂ. 5 ಕೋಟಿ ಅನುದಾನ ಬಳಕೆ ಮಾಡಲಾಗುತ್ತಿದೆ. ಇದರ ಜೊತೆಗೆ ಯಾವ ವಿಭಾಗಗಳಲ್ಲಿ ಸಾಧನೆ ಕಡಿಮೆಯಾಗಿದೆ ಎಂಬುದನ್ನು ಗುರುತಿಸಿ, ಆ ವಿಭಾಗಕ್ಕೆ ಉತ್ತೇಜನ ನೀಡಲೂ ಅನುದಾನ ಬಳಸಿಕೊಳ್ಳಲಾಗುತ್ತಿದೆ.ಹಸಿರೇ ಉಸಿರು: ವಿವಿಯಲ್ಲಿ ಹಸಿರೀಕರಣ ಕೈಗೊಳ್ಳುವ ಉದ್ದೇಶದಿಂದ ವಿವಿ ಆವರಣದ ಎಲ್ಲ ರಸ್ತೆಗಳ ಎರಡೂ ಬದಿ ಸಸಿಗಳನ್ನು ನೆಡಲಾಗು ತ್ತಿದೆ. ಮಳೆ ನೀರು ಕೊಯ್ಲು ವಿಧಾನ ಅಳವಡಿ ಸುವ ಮೂಲಕ ನೀರಿನ ಸದ್ಬಳಕೆಗೆ ರೂ. 4 ಕೋಟಿ ಬಳಸಲಾಗುತ್ತಿದೆ. ಹಾಗೆಯೇ ಎಲ್ಲ ವಿದ್ಯಾರ್ಥಿ ನಿಲಯಗಳಲ್ಲೂ ಸ್ಟೀಂ ಕುಕ್ಕಿಂಗ್ ವ್ಯವಸ್ಥೆ, ಇಡೀ ಆವರಣಕ್ಕೆ ಸೋಲಾರ್ ದೀಪ ಅಳವಡಿಸಲಾಗುತ್ತಿದೆ.ದೃಷ್ಟಿ ಕೇಂದ್ರ: ವಿವಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂಗವಿಕಲ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗಾಗಿ `ದೃಷ್ಟಿ~ ಅಂಗವಿಕಲರ ಶೈಕ್ಷಣಿಕ ಕೇಂದ್ರವನ್ನು ರೂ. 1 ಕೋಟಿ ವೆಚ್ಚದಲ್ಲಿ ಆರಂಭಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ಸಾಫ್ಟ್‌ವೇರ್ ಬಳಸಿ ಕಲಿಕೆ ಸುಗಮಗೊಳಿಸುವುದು ಕೇಂದ್ರದ ಉದ್ದೇಶ. ಇದಕ್ಕಾಗಿ ತಜ್ಞರ ಸಹಾಯ ಪಡೆದು ವಿಶೇಷ ಕಿಟ್ ರೂಪಿಸಲು ನಿರ್ಧರಿಸಲಾಗಿದೆ. ಪ್ರಯೋಗಾಲಯ ಆರಂಭಿಸುವ ಯೋಜನೆ ಇದೆ.ಇ-ಲರ್ನಿಂಗ್ ಕಿಟ್: ವಿಜ್ಞಾನ ಮತ್ತು ತಂತ್ರಜ್ಞಾ ನದ ಬೆಳವಣಿಗೆ ಇಂದು ಜಗತ್ತನ್ನು ಕಿರಿದಾಗಿಸಿ, ಕಲಿಕೆಯ ಅವಕಾಶಗಳನ್ನು ಹೆಚ್ಚಿಸಿದೆ. ವಿವಿಯ ಲ್ಲಿರುವ ಇಎಂಆರ್‌ಸಿ ವಿಭಾಗದ ನೆರವಿನೊಂದಿಗೆ `ಇ-ಲರ್ನಿಂಗ್ ಕಿಟ್~ ತಯಾರಿಸಿ ವಿದ್ಯಾರ್ಥಿಗಳಿಗೆ ಹಂಚಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ರೂ. 3.5 ಕೋಟಿ ಅನುದಾನ ಮೀಸಲಾಗಿ ಇಡಲಾಗಿದೆ.ಕಲಿಕೆ-ಗಳಿಕೆ: ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂಬ ಉದ್ದೇಶದೊಂದಿಗೆ `ಅರ್ನ್ ವೈಲ್ ಲರ್ನ್~ (ಕಲಿಕೆಯೊಂದಿಗೆ ಗಳಿಕೆ) ಎಂಬ ವಿನೂತನ ಯೋಜನೆ ಜಾರಿಗೊಳಿಸಲಾಗಿದ್ದು, ರೂ. 1 ಕೋಟಿ ಅನುದಾನ ಬಳಕೆ ಮಾಡಲಾಗುತ್ತಿದೆ.ಕಾರ್ಯಾಗಾರ: ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಲ್ಲಿ ವರ್ಷವಿಡೀ ನಡೆಯುವ ಸಮ್ಮೇಳನ, ಕಾರ್ಯಾಗಾರ ಹಾಗೂ ಉಪನ್ಯಾ ಸಗಳಿಗೆ ನೆರವು ನೀಡಲು ರೂ. 2 ಕೋಟಿ ಮೀಸಲಿರಿಸಲಾಗಿದೆ.ಉತ್ಕೃಷ್ಟ ಕೇಂದ್ರ: ಐಟಿ ಕೌಶಲ, ಇಂಗ್ಲಿಷ್ ವ್ಯಾಕರಣ, ವ್ಯಕ್ತಿತ್ವ ವಿಕಸನ ತರಬೇತಿ ನೀಡಲು `ಉತ್ಕೃಷ್ಟ ಕೇಂದ್ರ~ವನ್ನು ಆರಂಭಿಸಲಾಗುತ್ತಿದೆ. ಚೆನ್ನೈ ಹಾಗೂ ಬೆಂಗಳೂರಿನ ಖಾಸಗಿ ಕಂಪೆನಿಗಳ ನೆರವಿನೊಂದಿಗೆ ವಿವಿ ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಲು ಹೊಸ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ರೂ. 2 ಕೋಟಿ ಹಣ ಬಳಸಿಕೊಳ್ಳಲಾಗುತ್ತಿದೆ.ಇ-ಆಡಳಿತ: ಕಂಪ್ಯೂಟರ್, ಅಂತರ್ಜಾಲ ಬಳಕೆ ಹೆಚ್ಚಾದಂತೆ ಸರ್ಕಾರ `ಇ-ಆಡಳಿತ~ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ಹೆಜ್ಜೆ ಮುಂದಿರುವ ವಿವಿ ವಿಶ್ವವಿದ್ಯಾನಿಲಯದಲ್ಲಿ `ಇ-ಆಡಳಿತ~ ಜಾರಿಗೆ ತರಲು ಯುಜಿಸಿಯಿಂದ ರೂ. 4 ಕೋಟಿ ಅನುದಾನ ಪಡೆದಿದೆ.ವಿವಿ ಮುದ್ರಣಾಲಯ ಮೇಲ್ದರ್ಜೆಗೇರಿಸಲು ರೂ. 1 ಕೋಟಿ, ಪುಸ್ತಕ ಮತ್ತು ಜರ್ನ್‌ಲ್ಸ್ ಖರೀದಿಗೆ ರೂ. 5 ಕೋಟಿ, ಕ್ರೀಡಾ ಸಾಮಗ್ರಿ ಖರೀದಿ ಹಾಗೂ ಕ್ರೀಡೆಗೆ ಉತ್ತೇಜನ ನೀಡಲು ರೂ. 2 ಕೋಟಿ, ವಿದ್ಯಾರ್ಥಿ ನಿಲಯಗಳ ನವೀಕರಣಕ್ಕೆ ರೂ. 4.5 ಅನುದಾನ ಮೀಸಲಾಗಿ ಇಡಲಾಗಿದೆ.

ಪ್ರತಿಕ್ರಿಯಿಸಿ (+)