ಶುಕ್ರವಾರ, ಡಿಸೆಂಬರ್ 13, 2019
20 °C

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಹರಿದು ಬರಲಿದೆ 50 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಹರಿದು ಬರಲಿದೆ 50 ಕೋಟಿ

ಮೈಸೂರು: ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ನೀಡುವ `ಯೂನಿವರ್ಸಿಟೀಸ್ ವಿತ್ ಪೊಟೆನ್ಸಿಯಲ್ ಫಾರ್ ಎಕ್ಸಲೆನ್ಸ್~ (ಯುಪಿಇ) ಸ್ಥಾನಮಾನ ದೊರೆತಿದೆ. ಈ ಸ್ಥಾನಮಾನ ದೊರೆತಿರುವುದರಿಂದ ವಿಶ್ವವಿದ್ಯಾನಿಲಯಕ್ಕೆ 50 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಅನುದಾನ ದೊರೆಯಲಿದೆ.

 

ಈ ಅನುದಾನವನ್ನು ವಿಶ್ವವಿದ್ಯಾನಿಲಯವು ನಿಗದಿತ ಬೃಹತ್ ಯೋಜನೆಗಳು ಮತ್ತು ಸಮಗ್ರ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. 11 ನೇ ಯೋಜನೆಯ ಮಾರ್ಗಸೂಚಿಯನ್ನು ಅನುಸರಿಸಿ ಯೋಜನೆ ಮತ್ತು ಬಜೆಟ್ ಅನ್ನು ರೂಪಿಸಿ ಯುಜಿಸಿಗೆ ಕಳುಹಿಸಿದರೆ ಅನುದಾನ ಬಿಡುಗಡೆಯಾಗುತ್ತದೆ.ಮೈಸೂರು ವಿಶ್ವವಿದ್ಯಾನಿಲಯವು ಅಡ್ವಾನ್ಸಡ್ ಫಂಕ್ಷನಲ್ ಮೆಟೀರಿಯಲ್ ಸೈನ್ಸ್ ಯೋಜನೆಗೆ ರೂ.10 ಕೋಟಿ, ಮೀಡಿಯಾ ಅಂಡ್ ಸೋಶಿಯಲ್ ಡಿಪಾರ್ಟ್‌ಮೆಂಟ್‌ಗೆ ರೂ.5 ಕೋಟಿ ಹಾಗೂ ಉಳಿದಂತೆ ವಿಶ್ವವಿದ್ಯಾನಿಲಯದ ಸಮಗ್ರ ಅಭಿವೃದ್ಧಿಗಾಗಿ ಎಂಟು ಉಪ ಯೋಜನೆಗಳನ್ನು ಹಮ್ಮಿಕೊಳ್ಳಲು ಕುಲಪತಿ ಚಿಂತಿಸಿದ್ದಾರೆ.

 

ಇಷ್ಟೇ ಅಲ್ಲದೆ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ಗಳು, ಪ್ರಯೋಗಾಲಗಳು ಹಾಗೂ ಗ್ರಂಥಾಲಯಗಳನ್ನು ಇನ್ನಷ್ಟು ಉತ್ತಮಗೊಳಿಸಲು ಈ ಹಣವನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದ್ದಾರೆ.`ನಮ್ಮ ವಿಶ್ವವಿದ್ಯಾನಿಲಯಕ್ಕೆ ಯುಪಿಇ ಸ್ಥಾನಮಾನ ದೊರೆತಿರುವುದು ಸಹಜವಾಗಿ ಖುಷಿ ತಂದಿದೆ. ಇದರಿಂದ ಬರುವ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡು ಮತ್ತಷ್ಟು ಅನುದಾನ ಪಡೆಯುವುದೇ ನಮ್ಮ ಗುರಿಯಾಗಿದೆ. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲಾಗುವುದು~ ಎಂದು ಕುಲಪತಿ ಪ್ರೊ.ವಿ.ಜಿ.ತಳವಾರ `ಪ್ರಜಾವಾಣಿ~ಗೆ ತಿಳಿದರು.ಮೈಸೂರು ವಿಶ್ವವಿದ್ಯಾನಿಲಯವು 1916 ರಲ್ಲಿ ನಾಲ್ಕನೇ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸ್ಥಾಪನೆ ಆಯಿತು. ಇದು ರಾಜ್ಯ ಮತ್ತು ದೇಶದ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯವಾಗಿದೆ. ರಾಜ್ಯದ ಕರ್ನಾಟಕ ವಿಶ್ವವಿದ್ಯಾನಿಲಯವೂ ಯುಪಿಇ ಸ್ಥಾನಮಾನಕ್ಕೆ ಆಯ್ಕೆಯಾಗಿದೆ.ಯುಪಿಇ ಸ್ಥಾನಮಾನ ನೀಡುವ ಸಲುವಾಗಿ ಯುಜಿಸಿಯು ಎರಡು ವರ್ಷಗಳ ಹಿಂದೆ ಅರ್ಜಿ ಕರೆದಿತ್ತು. ಹೀಗಾಗಿ ವಿಶ್ವವಿದ್ಯಾನಿಲಯವು ಪ್ರಸ್ತಾವ ಕಳುಹಿಸಿಕೊಟ್ಟಿತ್ತು. ಇದೇ ರೀತಿ ದೇಶದ 30 ವಿಶ್ವವಿದ್ಯಾನಿಲಯಗಳು ಸಹ ಪ್ರಸ್ತಾವ ಕಳುಹಿಸಿದ್ದವು. ಆನಂತರ ಯುಜಿಸಿಯು ಒಂದು ಸಮಿತಿ ರಚಿಸಿತು. ಈ ಸಮಿತಿಯು ಆರು ತಿಂಗಳ ಹಿಂದೆ ವಿಶ್ವವಿದ್ಯಾನಿಲಯದ ಎಲ್ಲ ವಿಭಾಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿತ್ತು.

 

ನಂತರದ ಹಂತದಲ್ಲಿ ಆಂಧ್ರ ವಿಶ್ವವಿದ್ಯಾನಿಲಯ, ಉಸ್ಮಾನಿಯ ವಿಶ್ವವಿದ್ಯಾನಿಲಯ, ಪಂಜಾಬ್ ವಿಶ್ವವಿದ್ಯಾನಿಲಯ, ಕರ್ನಾಟಕ ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ, ಬೆಂಗಳೂರು ವಿಶ್ವವಿದ್ಯಾನಿಲಯ, ಗುರುನಾನಕ್‌ದೇವ್ ವಿಶ್ವವಿದ್ಯಾನಿಲಯ, ಪಂಜಾಬಿ ವಿಶ್ವವಿದ್ಯಾನಿಲಯ, ರಾಜಸ್ತಾನ್ ವಿಶ್ವವಿದ್ಯಾನಿಲಯ ಹಾಗೂ ಬನಾರಸ್ ಹಿಂದು ವಿಶ್ವವಿದ್ಯಾನಿಲಯಗಳು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದವು.ಸಮಿತಿಯು ಈ ಹತ್ತು ವಿಶ್ವವಿದ್ಯಾನಿಲಯಗಳ ಕುಲಪತಿಗಳಿಂದ ವಿವರ ಪಡೆದ ಬಳಿಕ ನೀಡಿದ ಅಂಕಗಳು ಮತ್ತು ಶ್ರೇಣಿಯ ಆಧಾರದ ಮೇಲೆ  ಆರು ವಿಶ್ವವಿದ್ಯಾನಿಲಯಗಳು ಯುಪಿಇ ಸ್ಥಾನಮಾನ ಪಡೆಯಲು ಅರ್ಹತೆ ಗಳಿಸಿಕೊಂಡವು.

ಪ್ರತಿಕ್ರಿಯಿಸಿ (+)