ಸೋಮವಾರ, ನವೆಂಬರ್ 18, 2019
28 °C

ಮೈಸೂರು: ವಿಷಮುಕ್ತ ದ್ರಾಕ್ಷಿ ಮೇಳ ಇಂದಿನಿಂದ

Published:
Updated:

ಮೈಸೂರು: ಕರ್ನಾಟಕ ರಾಜ್ಯ ನೈಸರ್ಗಿಕ ಕೃಷಿ ಆಂದೋಲನ ವೇದಿಕೆ ವತಿಯಿಂದ `ವಿಷಮುಕ್ತ ದ್ರಾಕ್ಷಿ ಮಾರಾಟ ಮೇಳ'ವನ್ನು ನಗರದ ಜಯಲಕ್ಷ್ಮೀಪುರಂನ 3ನೇ ಮುಖ್ಯರಸ್ತೆಯಲ್ಲಿರುವ `ಹಸಿರು ಸಾವಯವ ಮಳಿಗೆ'ಯಲ್ಲಿ ಏ.8 ರಿಂದ ಏ.30 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ರಾಜ್ಯ ಸಂಚಾಲಕ  ಸ್ವಾಮಿ ಆನಂದ್ ತಿಳಿಸಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಕೃಷಿಕ ಸುಭಾಷ್ ಅ. ಕಮಲದಿಂಡಿ ಅವರು ಕಳೆದ 7 ವರ್ಷ ಗಳಿಂದ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ 16 ಎಕರೆಯಲ್ಲಿ ದ್ರಾಕ್ಷಿ ಬೆಳೆದು ಯಶಸ್ಸು ಕಂಡಿದ್ದಾರೆ. ಯಾವುದೇ ರಸಗೊಬ್ಬರ, ಕ್ರಿಮಿನಾಶಕಗಳನ್ನು ಬಳಸದೆ ಕೊಟ್ಟಿಗೆ ಗೊಬ್ಬರ ಹಾಕಿ ಉತ್ತಮ ಬೆಳೆ ತೆಗೆದಿದ್ದಾರೆ. ಈ ವಿಷಮುಕ್ತ ದ್ರಾಕ್ಷಿಯನ್ನು ಮೈಸೂರಿನ ಜನತೆ ಹಾಗೂ ರೈತರಿಗೆ ಪರಿಚಯಿಸುವ ಉದ್ದೇಶದಿಂದ ಮೇಳವನ್ನು ಆಯೋಜಿಸಲಾಗಿದೆ.ಎಲೆಕೋಸು, ಹೂಕೋಸು, ದ್ರಾಕ್ಷಿ, ದಾಳಿಂಬೆ ಬೆಳೆಗಳನ್ನು ಕ್ರಿಮಿನಾಶಕ ಬಳಸದೆ ಬೆಳೆಯಲು ಸಾಧ್ಯವಿಲ್ಲ ಎಂಬ ನಂಬಿಕೆ ಇಂದಿನ ರೈತರಲ್ಲಿ ಮನೆ ಮಾಡಿದೆ. ಆದರೆ ಹತ್ತು ಸಾವಿರ ವರ್ಷಗಳ ಇತಿಹಾಸ ಇರುವ ಭಾರತೀಯ ಕೃಷಿ ಪದ್ಧತಿಯಲ್ಲಿ 1980 ರವರೆಗೂ ನೈಸರ್ಗಿಕ ಪದ್ಧತಿಯಲ್ಲೇ ರೈತರು ಅತ್ಯುತ್ತಮ ಇಳುವರಿ ಪಡೆಯುತ್ತಿದ್ದರು. ಆದರೆ 1980ರ ನಂತರ ಬಂದ ಹಸಿರು ಕ್ರಾಂತಿ ಸಾಂಪ್ರದಾ ಯಿಕ ಕೃಷಿ ಪದ್ಧತಿಯನ್ನು ನಾಶ ಮಾಡಿತು ಎಂದರು.ಏ.8 ರಂದು ಬೆಳಿಗ್ಗೆ 11.30ಕ್ಕೆ ಸಾಹಿತಿ ಡಾ. ಟಿ.ವಿ.ವೆಂಕಟಾಚಲಶಾಸ್ತ್ರಿ ಮೇಳವನ್ನು ಉದ್ಘಾಟಿ ಸಲಿದ್ದಾರೆ. ಅತಿಥಿಗಳಾಗಿ ರಾಜ್ಯ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ನೈಸರ್ಗಿಕ ಕೃಷಿಕ ಬನ್ನೂರು ಕೃಷ್ಣಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಎಂ.ನಾಗರಾಜು, ಉದ್ಯಮಿ ಇಮ್ರಾನ್‌ಖಾನ್ ಭಾಗವಹಿಸಲಿದ್ದಾರೆ.ಬೆಳೆಗಾರರಿಂದ ಬಳಕೆದಾರರಿಗೆ ನೇರವಾಗಿ ತಾಜಾ ಮತ್ತು ವಿಷಮುಕ್ತ ದ್ರಾಕ್ಷಿ ಮಾರಾಟ ಮಾಡುವ ಉದ್ದೇಶದಿಂದ ಈ ಮೇಳವನ್ನು ಹಮ್ಮಿಕೊಂಡಿದ್ದು, ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೂ ಮಳಿಗೆ ತೆರೆದಿ ರುತ್ತದೆ. ಅಸ್ತಮಾ ಸಮಸ್ಯೆ ನಿವಾರಣೆಗಾಗಿ `ದ್ರಾಕ್ಷಾ ಕಲ್ಪ' ಮಾಡಿಕೊಳ್ಳಲು ಇಚ್ಛಿಸುವವರು ಹಾಗು ಮನೆ ಯಲ್ಲೇ ವೈನ್ ತಯಾರಿಸುವವರು ಈ ಅವಕಾಶದ ಸದುಪಯೋಗ ಪಡೆಯಬಹುದು ಎಂದರು.

ಮಾಹಿತಿಗೆ 94484 72748 ಸಂಪರ್ಕಿಸಿ.

ಪ್ರತಿಕ್ರಿಯಿಸಿ (+)