ಭಾನುವಾರ, ಜೂಲೈ 12, 2020
29 °C

ಮೊಕದ್ದಮೆಗೆ ರಾಜ್ಯಪಾಲರ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಶುಕ್ರವಾರ ಅನುಮತಿ ನೀಡಿದ್ದಾರೆ. ಇದರಿಂದಾಗಿ ರಾಜ್ಯ ಬಿಜೆಪಿ ಸರ್ಕಾರ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಭ್ರಷ್ಟಾಚಾರ ಆರೋಪದಡಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ. ರಾಜ್ಯಪಾಲರ ನಿರ್ಣಯ ರಾಜ್ಯ ರಾಜಕೀಯದ ದಿಕ್ಕು ಬದಲಿಸುವ ಎಲ್ಲ ಸಾಧ್ಯತೆಗಳೂ ಇವೆ. ಆದರೆ ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಯಡಿಯೂರಪ್ಪ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.

ರಾಜ್ಯಪಾಲರ ನಿರ್ಣಯದಿಂದ ಆಘಾತಕ್ಕೆ ಒಳಗಾಗಿರುವ ಬಿಜೆಪಿ, ಭಾರದ್ವಾಜ್ ವಿರುದ್ಧ ಗರ್ಜಿಸಿದೆ. ರಾಜ್ಯದಾದ್ಯಂತ ತೀವ್ರ ಹೋರಾಟಕ್ಕೆ ಸಜ್ಜಾಗಿದೆ. ‘ರಾಜ್ಯಪಾಲರನ್ನು ವಾಪಸ್ ಕರೆಸಿ’ ಎಂದು ಒತ್ತಾಯಿಸಲು ಶನಿವಾರವೇ ರಾಜ್ಯ ಬಂದ್‌ಗೆ ಕರೆ ಕೊಟ್ಟಿದೆ. ಸ್ವಯಂ ಪ್ರೇರಿತವಾಗಿ ರಾಜ್ಯದ ಜನತೆ ಇದರಲ್ಲಿ ಭಾಗವಹಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದ್ದಾರೆ. ಬಿಜೆಪಿಯ ಈ ಹೋರಾಟದ ವಿರುದ್ಧ ಪ್ರತಿಭಟನೆ ನಡೆಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಕೂಡ ಮುಂದಾಗಿವೆ.

ಭೂ ಹಗರಣ ಮತ್ತು ಭ್ರಷ್ಟಾಚಾರ ಆರೋಪಗಳಡಿ ಯಡಿಯೂರಪ್ಪ ಮತ್ತು ಗೃಹ ಸಚಿವ ಆರ್.ಅಶೋಕ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ವಕೀಲರಾದ ಸಿರಾಜಿನ್ ಬಾಷಾ ಹಾಗೂ ಕೆ.ಎನ್.ಬಾಲರಾಜ್ ಡಿಸೆಂಬರ್ 28ರಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.

ಸರ್ಕಾರ-ರಾಜಭವನದ ನಡುವಣ ಸಂಘರ್ಷ ತಾರಕಕ್ಕೇರಿದ್ದ ನಡುವೆಯೇ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿದರು. ಆದರೆ ಅಶೋಕ ವಿರುದ್ಧವೂ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವ ಸಂಬಂಧ ರಾಜ್ಯಪಾಲರು ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಯಡಿಯೂರಪ್ಪ ಮತ್ತು ಅಶೋಕ ಅವರ ವಿರುದ್ಧ ಭ್ರಷ್ಟಾಚಾರ, ಭೂ ಹಗರಣಗಳಿಗೆ ಸಂಬಂಧಿಸಿದಂತೆ ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988’ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲು ಅವಕಾಶ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯಪಾಲರು ಖುದ್ದು ಪರಿಶೀಲನೆ ನಡೆಸಿದ್ದರು. ಭೂ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ದಾಖಲೆಗಳನ್ನು ತರಿಸಿಕೊಂಡಿದ್ದ ಅವರು, ವಕೀಲರು ಸಲ್ಲಿಸಿದ್ದ ದಾಖಲೆಗಳ ಜೊತೆ ಅವುಗಳನ್ನು ಪರಿಶೀಲಿಸಿದ್ದರು.

ಜನವರಿ 3ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಪತ್ರ ಬರೆದಿದ್ದ ಭಾರದ್ವಾಜ್, ಜನವರಿ 20ರೊಳಗೆ ದಾಖಲೆಗಳನ್ನು ಸಲ್ಲಿಸುವಂತೆ ಆದೇಶಿಸಿದ್ದರು. ಬಳಿಕ ಮುಖ್ಯ ಕಾರ್ಯದರ್ಶಿಯವರು ಪ್ರಕರಣಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನು ರಾಜ್ಯಪಾಲರಿಗೆ ಕಳುಹಿಸಿದ್ದರು.

ಸಂಘರ್ಷದ ಹಾದಿ: ಈ ಮಧ್ಯೆ ಬುಧವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡದಂತೆ ರಾಜ್ಯಪಾಲರಿಗೆ ಮನವಿ ಮಾಡಿ ನಿರ್ಣಯ ಅಂಗೀಕರಿಸಲಾಗಿತ್ತು. ಅದೇ ದಿನ ಸಚಿವ ಸಂಪುಟದ ನಿರ್ಣಯದ ಕುರಿತು ಯಡಿಯೂರಪ್ಪ ಅವರೇ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.

ಗುರುವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಜ್ಯಪಾಲರು, ‘ಕಳ್ಳನೇ ಪೊಲೀಸರನ್ನು ಆಕ್ಷೇಪಿಸಿದಂತಿದೆ ಸರ್ಕಾರದ ನಿಲುವು’ ಎಂದು ಟೀಕಿಸಿದ್ದರು. ಇದು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಣ ಸಂಘರ್ಷ ಜಟಿಲಗೊಳ್ಳಲು ಕಾರಣವಾಗಿತ್ತು. ಗುರುವಾರ ಸಂಜೆಯೇ ಭಾರದ್ವಾಜ್ ಅವರಿಗೆ ಪ್ರತಿಭಟನಾ ಪತ್ರ ಬರೆದಿದ್ದ ಯಡಿಯೂರಪ್ಪ, ಸರ್ಕಾರದ ವಿರುದ್ಧ ನೀಡಿದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಸಂಪುಟದ ನಿರ್ಣಯ ತಿರಸ್ಕೃತ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ರಾಜ್ಯಪಾಲರ ವಿರುದ್ಧ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿತು. ಹೋರಾಟದ ರೂಪುರೇಷೆ ಸಿದ್ಧಪಡಿಸಲು ಶುಕ್ರವಾರ ಬೆಳಿಗ್ಗೆ ನಗರದಲ್ಲಿ ಬಿಜೆಪಿಯ ‘ಕೋರ್ ಕಮಿಟಿ’ ಸಭೆ ನಡೆಯಿತು. ಅಷ್ಟರಲ್ಲೇ ಯಡಿಯೂರಪ್ಪ ಅವರಿಗೆ ಮತ್ತೆ ಪತ್ರ ಬರೆದ ರಾಜ್ಯಪಾಲರು, ವಕೀಲರ ಮನವಿಯನ್ನು ತಿರಸ್ಕರಿಸಬೇಕೆಂಬ ಬೇಡಿಕೆಯುಳ್ಳ ಸಂಪುಟ ಸಭೆಯ ನಿರ್ಣಯವನ್ನು ತಿರಸ್ಕಿರಿಸಿರುವುದಾಗಿ ತಿಳಿ ಸಿದರು.

ರಾಜ್ಯಪಾಲರ ನಡೆಯನ್ನು ಗಮನಿಸಿದ ಬಿಜೆಪಿ ಅವರ ವಿರುದ್ಧ ರಾಜ್ಯ ಬಂದ್, ರಾಷ್ಟ್ರಪತಿ ಭವನದಲ್ಲಿ ಪರೇಡ್ ನಡೆಸುವುದೂ ಸೇರಿದಂತೆ ತೀವ್ರ ಪ್ರತಿಭಟನೆ ನಡೆಸಲು ನಿರ್ಧರಿಸಿತು. ಶತಾಯ-ಗತಾಯ ಮೊಕದ್ದಮೆ ಹೂಡಲು ಅನುಮತಿ ನೀಡದಂತೆ ಭಾರದ್ವಾಜ್ ಮೇಲೆ ಒತ್ತಡ ಹೇರಲು ಬಿಜೆಪಿ ಕಾರ್ಯತಂತ್ರ ರೂಪಿಸಿತು.

ಸಂಜೆ ವಕೀಲರಿಗೆ ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿರುವ ಆದೇಶವನ್ನು ರಾಜ್ಯಪಾಲರು ಪ್ರಕಟಿಸಿದರು. ಈ ಸಂಬಂಧ ರಾಜಭವನದಿಂದ ಅಧಿಕೃತ ಪ್ರಕಟಣೆಯೂ ಹೊರಬಿತ್ತು. ರಾಜ್ಯಪಾಲರ ಕ್ರಮ ಆಡಳಿತಾರೂಢ ಬಿಜೆಪಿಗೆ ದಿಢೀರ್ ಆಘಾತ ನೀಡಿದೆ.

ತುರ್ತು ಸಭೆ: ರಾಜ್ಯಪಾಲರು ಮೊಕದ್ದಮೆ ದಾಖಲಿಸಲು ಅನುಮತಿ ನೀಡಿರುವುದು ತಿಳಿಯುತ್ತಿದ್ದಂತೆ ಯಡಿಯೂರಪ್ಪ ಅವರು ಸಚಿವರು ಮತ್ತು ಪಕ್ಷದ ಪ್ರಮುಖರೊಂದಿಗೆ ತುರ್ತು ಸಭೆ ನಡೆಸಿದರು. ಹಿರಿಯ ವಕೀಲರ ಜೊತೆಗೂ ಚರ್ಚೆ ನಡೆಸಿದ ಅವರು, ಪ್ರಕರಣದಲ್ಲಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕುರಿತು ಚರ್ಚಿಸಿದರು.

‘ಶೀಘ್ರದಲ್ಲಿ ದೂರು ದಾಖಲು’

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಮತ್ತು ಭೂ ಹಗರಣಕ್ಕೆ ಸಂಬಂಧಿಸಿದಂತೆ ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988’ರ ಅಡಿಯಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಶೀಘ್ರವೇ ದೂರು ದಾಖಲಿಸುವುದಾಗಿ ವಕೀಲರಾದ ಸಿರಾಜಿನ್ ಮತ್ತು ಬಾಲರಾಜ್ ತಿಳಿಸಿದ್ದಾರೆ.

ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿದ ಬಳಿಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಇಬ್ಬರೂ ವಕೀಲರು, ‘ರಾಜ್ಯಪಾಲರು ಸಂವಿಧಾನಬದ್ಧವಾಗಿ ನಡೆದುಕೊಂಡಿದ್ದಾರೆ. ಅವರ ನಿರ್ಣಯ ನಮಗೆ ಸಂತಸ ಉಂಟುಮಾಡಿದೆ. ಶೀಘ್ರದಲ್ಲಿ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತೇವೆ’ ಎಂದರು.

‘ಭ್ರಷ್ಟಾಚಾರ ನಿಯಂತ್ರಣ’ ಕಾಯ್ದೆಯ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ದೂರು ದಾಖಲಿಸಲಾಗುವುದು. ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲೇ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ. ಒಂದೆರಡು ದಿನಗಳಲ್ಲಿ ಚರ್ಚೆ ನಡೆಸಿ ಅರ್ಜಿ ಸಲ್ಲಿಕೆಗೆ ಸಿದ್ಧತೆ ನಡೆಸಲಾಗುವುದು ಎಂದು ವಿವರಿಸಿದರು.

‘ಪ್ರಜಾಪ್ರಭುತ್ವದ ಕಗ್ಗೊಲೆ’ತಮ್ಮ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ‘ರಾಜಕೀಯ ಪ್ರೇರಿತ, ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವವನ್ನು ಹಾಡುಹಗಲೇ ಹತ್ಯೆ ಮಾಡಿದಂತೆ’ ಎಂದು ತಿರುಗೇಟು ನೀಡಿರುವ ಸಿಎಂ ಯಡಿಯೂರಪ್ಪ ಅವರು ‘ನನ್ನನ್ನು ಸಂಪರ್ಕಿಸದೆ ನನ್ನ ಮೇಲೆ ದೂರು ದಾಖಲಿಸಲು ಅನುಮತಿ ನೀಡಿರುವುದು ದುರದೃಷ್ಟಕರ’ ಎಂದು ಹೇಳಿದ್ದಾರೆ.

ರಾಜ್ಯಪಾಲರಿಗೆ ತುರ್ತು ಪತ್ರ ರವಾನಿಸಿರುವ ಅವರು ಈ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ರಾಜ್ಯಪಾಲರು ತಮ್ಮ ಮನಸ್ಸಿಗೆ ತೋಚಿದಂತೆ ನಿರ್ಧಾರ ಕೈಗೊಂಡಿದ್ದಾರೆ. ಕೆಲವು ವಕೀಲರು ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರವನ್ನಾಗಲಿ, ನನ್ನ ವಿರುದ್ಧ ದೂರು ದಾಖಲಿಸಲು ರಾಜ್ಯಪಾಲರು ನೀಡಿದ ಅನುಮತಿ ಪತ್ರವನ್ನಾಗಲಿ ನಾನು ನೋಡಿಲ್ಲ. ಸಾಮಾನ್ಯ ಪ್ರಜೆಯಂತೆ ನಾನು ಈ ವಿಷಯವನ್ನು ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ರಾಜ್ಯಪಾಲರು ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ದೂರು ದಾಖಲಿಸಲು ಅನುಮತಿ ನೀಡುವ ಮೊದಲು ರಾಜ್ಯಪಾಲರು ಸರ್ಕಾರದ ಕಡೆಯಿಂದಾಗಲಿ, ಸಚಿವ ಸಂಪುಟದಿಂದಾಗಲಿ ಅಭಿಪ್ರಾಯ ಪಡೆದುಕೊಂಡಿಲ್ಲ’ ಎಂದು ಅವರು ಆಕ್ಷೇಪಿಸಿದ್ದಾರೆ.

‘ವಿಪಕ್ಷಗಳು ಜನಾದೇಶದ ಮೂಲಕ ಏನನ್ನು ಸಾಧಿಸಲು ಸಾಧ್ಯವಾಗಲಿಲ್ಲವೋ ಅದನ್ನು ರಾಜಭವನದ ಮೂಲಕ ಸಾಧಿಸಿವೆ. ಇಲ್ಲಿ ಸರಿ ಯಾವುದು, ತಪ್ಪು ಯಾವುದು ಎಂಬ ನಿರ್ಧಾರ ಕೈಗೊಳ್ಳುವುದನ್ನು ನಾನು ಜನರಿಗೇ ಬಿಟ್ಟಿದ್ದೇನೆ. ರಾಜ್ಯದ ಪ್ರಗತಿಯನ್ನು ಸಹಿಸದವರ ಕೃತ್ಯಗಳ ಬಗ್ಗೆ ರಾಜ್ಯದ ಜನರೇ ನಿರ್ಧರಿಸುತ್ತಾರೆ’ ಎಂದು ಹೇಳಿದ್ದಾರೆ.

ಮುಂದೇನು?

ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದಲ್ಲಿ ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988’ರ ಅಡಿಯಲ್ಲಿ ಖಾಸಗಿ ದೂರು ದಾಖಲಿಸಲು ಇಬ್ಬರೂ ವಕೀಲರಿಗೆ ಅವಕಾಶ ದೊರೆತಿದೆ. ರಾಜ್ಯಪಾಲರ ಈ ನಿರ್ಣಯದಿಂದಾಗಿ ಮುಂದೇನು ಎಂಬ ಕುತೂಹಲ ಸೃಷ್ಟಿಯಾಗಿದೆ.

ಈಗ ರಾಜ್ಯದಲ್ಲಿ ಸಿಬಿಐ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯಗಳು ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಸುವ ಅಧಿಕಾರ ಹೊಂದಿವೆ. ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಪ್ರಕರಣದ ತನಿಖೆಗೂ ಮುನ್ನ ರಾಜ್ಯ ಸರ್ಕಾರದ ಸಮ್ಮತಿ ಅಗತ್ಯ. ಸದ್ಯದ ಸನ್ನಿವೇಶದಲ್ಲಿ ಸಿರಾಜಿನ್ ಬಾಷಾ ಮತ್ತು ಕೆ.ಎನ್.ಬಾಲರಾಜ್ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದು. ಆಗ ನ್ಯಾಯಾಲಯವು ಪ್ರಕರಣದ ತನಿಖೆಯನ್ನು ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುವ ತನಿಖಾ ಸಂಸ್ಥೆಗೆ ಒಪ್ಪಿಸುತ್ತದೆ.

ಸಿಎಂ ಮುಂದಿರುವ ಅವಕಾಶ

ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತಮ್ಮ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಲು ಪಕ್ಷದ ವರಿಷ್ಠರಿಗೆ ಅವಕಾಶ ಮಾಡಿಕೊಡಬಹುದು.

ವಿಧಾನಸಭೆ ವಿಸರ್ಜನೆಗೆ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡು, ಮಧ್ಯಂತರ ಚುನಾವಣೆ ಎದುರಿಸಲು ಸಿದ್ಧರಾಗಬಹುದು.

ಪ್ರಕರಣ ತನಿಖಾ ಸಂಸ್ಥೆ ಕೈಸೇರಿ ಮೊಕದ್ದಮೆ ದಾಖಲಾಗುವವರೆಗೆ ಕಾಯಬಹುದು.

ರಾಜ್ಯಪಾಲರ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

ವಕೀಲರು ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅಲ್ಲಿ ಕಾನೂನು ಹೋರಾಟ ನಡೆಸಬಹುದು.

ರಜೆ: ಅಧಿಕಾರಿಗಳ ನಿರ್ಧಾರಕ್ಕೆ

ಬಿಜೆಪಿ ಶನಿವಾರ ರಾಜ್ಯ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ವಿಚಾರವನ್ನು ಸ್ಥಳೀಯ ಅಧಿಕಾರಿಗಳ ತೀರ್ಮಾನಕ್ಕೇ ಬಿಡಲಾಗಿದೆ. ರಜೆ ಕೊಡಬೇಕೇ ಅಥವಾ ಬೇಡವೇ ಎನ್ನುವುದನ್ನು ಸ್ಥಳೀಯ ಮಟ್ಟದಲ್ಲೇ ನಿರ್ಧರಿಸಿ ಎಂದು ಶಿಕ್ಷಣ ಇಲಾಖೆ ತನ್ನ ಎಲ್ಲ ಅಧೀನ ಅಧಿಕಾರಿಗಳಿಗೆ ತಿಳಿಸಿದೆ. ಇದೇ ನಿಯಮ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳನ್ನು ನಡೆಸುವುದಕ್ಕೂ ಅನ್ವಯಿಸುತ್ತದೆ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಪರೀಕ್ಷೆ ನಡೆಸಬಹುದು. ಒಂದು ವೇಳೆ ಸಾಧ್ಯವಾಗದಿದ್ದರೆ ರಜೆ ಘೋಷಿಸಬಹುದು ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.