ಮೊಗೇರರ ಸಂಸ್ಕೃತಿ -ಸಂಸ್ಕಾರ ಗುರುವಿಲ್ಲದ ವಿದ್ಯೆ

7

ಮೊಗೇರರ ಸಂಸ್ಕೃತಿ -ಸಂಸ್ಕಾರ ಗುರುವಿಲ್ಲದ ವಿದ್ಯೆ

Published:
Updated:

ಪುತ್ತೂರು:  ಮೊಗೇರ ಜನಾಂಗವು ಗುರುವಿಲ್ಲದ ವಿದ್ಯೆಯಾಗಿ ತಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಬೆಳೆಸಿಕೊಂಡು ಬಂದಿದೆ. ಅದನ್ನು ಉಳಿಸಿ ಬೆಳೆಸುವ ಕೆಲಸವನ್ನು ಸಂಘಟನೆಗಳು ಮಾಡಬೇಕಾಗಿದೆ ಎಂದು ಮೊಗೇರ ಸಮಾಜದ ಗುರಿಕಾರ ಚಲ್ಲ ಮೊಗೇರ ಹೇಳಿದರು.ಪುತ್ತೂರಿನ ಪುರಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಪುತ್ತೂರು ಮೊಗೇರ ಯುವ ವೇದಿಕೆ ಮತ್ತು ತಾಲ್ಲೂಕು ಮೊಗೇರ ಸಂಘದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ~ಮೊಗೇರ ಕೂಡುಕಟ್ಟು~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮೊಗೇರರು ಮತ್ತು ಕೋಟಿ ಚೆನ್ನಯರು ಬಳಸಿದ ದೈವದ ಕತ್ತಿಯು ಒಂದೇ ಮಾದರಿಯಲ್ಲಿದೆ. ಇದರಿಂದಾಗಿ ಈ ಎರಡು ಜನಾಂಗದ ನಂಬಿಕೆಯಲ್ಲಿ ಸಮಾನತೆಯಿದೆ ಎಂದ ಅವರು ಮೊಗೇರರ ಪಾಡ್ದನಕ್ಕೆ ತಮಿಳು ಮತ್ತು ಮಲಯಾಳದ ಜಾನಪದ ಹಾಡುಗಳೊಂದಿಗೆ ಸಾಮ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.ಮೊಗೇರ ಜನಾಂಗದಲ್ಲಿ ಕಳ್ಳರು, ಮೋಸಗಾರರು ಇಲ್ಲ. ಅತ್ಯುತ್ತಮ ಪ್ರತಿಭೆಗಳಿದ್ದರೂ ಆ ಪ್ರತಿಭೆಗಳಿಗೆ ಸರಿಯಾದ ಸಲಹೆ ಸೂಚನೆ ನೀಡುವವರು ಇಲ್ಲದ ಮತ್ತು ಸಮಾಜದಲ್ಲಿ ಒಗ್ಗಟ್ಟು ಇಲ್ಲದ ಕಾರಣ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದೂ ವಿಷಾದಿಸಿದರು.ಕೋಲಾರ ಆದಿಮ ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕ ಧರ್ಮದರ್ಶಿ ಕೋಟಗಾನಹಳ್ಳಿ ರಾಮಯ್ಯ ವಿಶೇಷ ಉಪನ್ಯಾಸ ನೀಡಿ, ಮುಗೇರ ಜನಾಂಗದ ಸಾಂಸ್ಕೃತಿಕ ನೆಲೆಗಟ್ಟುಗಳನ್ನು ಗಟ್ಟಿಯಾಗಿಸಿದಲ್ಲಿ ಮಾತ್ರ ಈ ಸಮಾಜದ ಪರಂಪರೆ ಮುಂದಿನ ಪೀಳಿಗೆಗೆ ವರ್ಗಾವಣೆಗೊಳ್ಳಲು ಸಾಧ್ಯ ಎಂದವರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry