ಮೊಟ್ಟೆ ಮಾರುಕಟ್ಟೆ

7

ಮೊಟ್ಟೆ ಮಾರುಕಟ್ಟೆ

Published:
Updated:

ಎಲ್ಲೆಡೆಯೂ ಚಿನ್ನದ ದರ ಏರಿಕೆ, ಷೇರು ಮಾರುಕಟ್ಟೆ ಕುಸಿತ, ರೂಪಾಯಿ ಬೆಲೆ ಕುಸಿತದ್ದೇ ಸುದ್ದಿ, ಕೋಟ್ಯಂತರ ಮಂದಿಯ ಬಾಯಲ್ಲೂ ಅದೇ ಚರ್ಚೆ~.`ಗೃಹಿಣಿಯರಂತೂ ತರಕಾರಿ ಬೆಲೆ ಜಾಸ್ತಿಯಾಯಿತು. ಹಾಲೂ ತುಟ್ಟಿಯಾಯಿತು. ಕರೆಂಟ್ ಬಿಲ್ ಸಹ ಭಾರಿ ಆಯ್ತು. ಚಿನ್ನ ಏನ್ರೀ ಈ ಪಾಟಿ ಬೆಲೆ ಏರಿದೆ. ಬೆಳ್ಳಿಯನ್ನಾದರೂ ಕೊಳ್ಳೋಣ ಎಂದರೆ ಅದೂ ಕೈಗೆಟುವಂತಿಲ್ಲ ಎಂದು ಲೊಚಗುಟ್ಟುತ್ತಿದ್ದಾರೆ~.`ಆದರೆ ನಮ್ಮತ್ತ ಗಮನ ಹರಿಸುವವರೇ ಇಲ್ಲ. ನಮ್ಮ ಬೆಲೆಯೂ ಹೆಚ್ಚಾಗಿದೆ. ಆ ಕುರಿತಾಗಲೀ, ಕಳೆದ ತಿಂಗಳು ಧಾರಣೆ ಕುಸಿದ ಬಗೆಗಾಗಲೀ ಚರ್ಚಿಸಿದರಾ? ಅದೂ ಇಲ್ಲ. ಪತ್ರಿಕೆಗಳಾದರೂ ನಮ್ಮ ಕಷ್ಟ-ಸುಖದ ಬಗ್ಗೆ `ವಿಶೇಷ ವರದಿ~ ಪ್ರಕಟಿಸಿಲ್ಲ.

 

ಟಿವಿಗಳಾದರೂ ಕನಿಷ್ಠ ಸ್ಕ್ರಾಲ್‌ನಲ್ಲಿಯೂ ನಮ್ಮ ವಿಚಾರ ಪ್ರಸಾರ ಮಾಡುತ್ತಿಲ್ಲ~ ಎಂದು ಕುಕ್ಕಟ ಕೂಟ ಬಹಳ ಬೇಸರದಲ್ಲಿತ್ತು.ವಿಚಾರಿಸಲು ಮುಂದಾದರೆ ಎಲ್ಲ ಕೋಳಿಗಳೂ ಒಂದೇ ಏಟಿಗೆ `ಕೊಕ್ಕೊಕ್ಕೋ~.... ಎಂದು ಮೈಮೇಲೆ ಬಂದಂತೆ ಗಲಾಟೆ ಆರಂಭಿಸಿದವು. ನನಗೂ ತಡಬಡಾಯಿಸುವಂತೆ ಆಯಿತು.ಎಲ್ಲಿಂದ ಮಾತು ಆರಂಭಿಸಲಿ ಎಂದು ಯೋಚಿಸಿದರೂ ತಕ್ಷಣಕ್ಕೆ ಹೊಳೆಯಲಿಲ್ಲ. `ಕೋಳಿ ಮೊದಲೋ-ಮೊಟ್ಟೆ ಮೊದಲೋ~ ಎಂಬಂತೆ ಗೊಂದಲಕ್ಕೊಳಗಾದೆ. ಸರಿ ಇವುಗಳ ಜತೆ `ಕೋಳಿ ಜಗಳ~ ಏಕೆ ಎಂದು ಜಾಗ ಖಾಲಿ ಮಾಡಿದೆ.ಈ ಬಗ್ಗೆ ಮಾತನಾಡಲು ಸೂಕ್ತ ವ್ಯಕ್ತಿ ಗಾಗಿ ಹುಡುಕಾಟದಲ್ಲಿದ್ದಾಗ ಎದುರಾದವರು `ನ್ಯಾಷನಲ್ ಎಗ್ ಕೋ-ಆರ್ಡಿನೇಷನ್ ಕಮಿಟಿ~(ಎನ್‌ಇಸಿಸಿ) ಬೆಂಗಳೂರು ವಲಯದ ಅಧ್ಯಕ್ಷ ಬಿ.ಆರ್.ಸಾಯಿನಾಥ್.ಅವರು ತೆರೆದಿಟ್ಟ ರಾಜ್ಯದ ಕೋಳಿ ಮೊಟ್ಟೆ ಉದ್ಯಮದ ಚಿತ್ರಣ ಇಲ್ಲಿದೆ.ಕುಕ್ಕುಟ ಉದ್ಯಮ ಅಂತರಂಗ

ರಾಜ್ಯದಲ್ಲಿ ಸುಮಾರು 2500 ಮೊಟ್ಟೆಕೋಳಿ ಪೌಲ್ಟ್ರಿಗಳಿವೆ. ಕೆಲವರು 10 ಸಾವಿರದವರೆಗೆ ಕೋಳಿ ಇಟ್ಟುಕೊಂಡು ಚಿಕ್ಕದಾಗಿ ಪೌಲ್ಟ್ರಿ ನಡೆಸುತ್ತಿದ್ದರೆ, ದೊಡ್ಡ ಪ್ರಮಾಣದ ಪೌಲ್ಟ್ರಿಗಳಲ್ಲಿ 10 ಲಕ್ಷದವರೆಗೂ ಕೋಳಿ ಸಾಕಣೆ ನಡೆಯುತ್ತಿದೆ. ಪ್ರತಿ 100 ಕೋಳಿಗಳಿಗೆ ದಿನಕ್ಕೆ 80ರಿಂದ 85 ಮೊಟ್ಟೆ ನಿರೀಕ್ಷಿಸಬಹುದು.ಪೌಲ್ಟ್ರಿ ಕೆಲಸಗಾರರು, ಸಾಗಣೆ ಮಾಡುವವರು, ಮೊಟ್ಟೆ ಮಾರಾಟಗಾರರನ್ನೂ ಒಳಗೊಂಡಂತೆ ಈ ಉದ್ಯಮ ನೇರವಾಗಿ 5 ಲಕ್ಷ ಮಂದಿಗೆ ಉದ್ಯೋಗ ನೀಡಿದೆ. ಪರೋಕ್ಷವಾಗಿ ಕೋಳಿಮೊಟ್ಟೆಗಳಿಂದ ಬದುಕು ಕಟ್ಟಿಕೊಂಡವರ ಸಂಖ್ಯೆ ಸುಲಭದ ಎಣಿಕೆಗೆ ನಿಲುಕದ್ದು.ಅಲ್ಲದೆ, ಕೋಳಿಗಳಿಗೆ ಮೇವು ಒದಗಿಸುವ ಉದ್ಯಮವೂ ದೊಡ್ಡ ಪ್ರಮಾಣದ್ದೇ ಆಗಿದೆ. ಈ ಮೇವಿನಲ್ಲಿ ಮೆಕ್ಕೆಜೋಳದ ಪ್ರಮಾಣವೇ ಅಧಿಕ. ಜತೆಗೆ ಬತ್ತದ ತೌಡು, ಕಪ್ಪೆಚಿಪ್ಪಿನ ಚೂರು ಸೇರಿದಂತೆ 9 ಬಗೆಯ ವಸ್ತುಗಳನ್ನು ಬಳಸಿ ಕೋಳಿ ಆಹಾರ ತಯಾರಿಸಲಾಗುತ್ತದೆ. ಕೋಳಿ ಆಹಾರ ಸಿದ್ಧಪಡಿಸುವುದೂ ಸಹ ಕೋಟಿ ಕೋಟಿ ಲೆಕ್ಕದ ಉದ್ದಿಮೆ.ಕೋಳಿ ಉದ್ಯಮದಿಂದ ರೈತರಿಗೂ ದೊಡ್ಡ ಅನುಕೂಲವಾಗುತ್ತಿದೆ. ರಾಜ್ಯದಲ್ಲಿ ಬೆಳೆಯುವ ಮುಸುಕಿನ ಜೋಳದಲ್ಲಿ ಬಹುದೊಡ್ಡ ಪಾಲನ್ನು ಖರೀದಿಸುವುದು ಕೋಳಿ ಮೇವಿನ ಉದ್ಯಮವೆ. ಕೋಳಿ ಮತ್ತು ಜೋಳದ ನಂಟು ಅಷ್ಟೊಂದು ಗಟ್ಟಿ ಇದೆ.ಕೋಳಿಗಳ ಮೇವಿನ ವೆಚ್ಚ ಅಪಾರ. ರೂ 3 ಬೆಲೆಬಾಳುವ ಪ್ರತಿ ಮೊಟ್ಟೆ ಮೇಲೆ ಮೇವಿನ ಖರ್ಚೇ ರೂ 2.40ರಷ್ಟಿರುತ್ತದೆ. ಇನ್ನು ಕಾಯಿಲೆ ಬಂದಾಗ ಚುಚ್ಚುಮದ್ದು, ಬಾರದಂತೆ ಮುನ್ನೆಚ್ಚರಿಕೆ ಕ್ರಮ ಮತ್ತಿತರ ಖರ್ಚೂ ಹೆಚ್ಚೇ ಇದೆ.ಲಾಭದ ವಿಚಾರಕ್ಕೆ ಬಂದರೆ ತಿಂಗಳಲ್ಲಿ ಪ್ರತಿ ಮೊಟ್ಟೆಕೋಳಿಯಿಂದ ರೂ 2ರಿಂದ 2.50 ನಿವ್ವಳ ಲಾಭ (ಎಲ್ಲ ಖರ್ಚು ತೆಗೆದು) ನಿರೀಕ್ಷಿಸಬಹುದು. ಹಾಗಾಗಿ ಈ ಪೌಲ್ಟ್ರಿ ಉದ್ಯಮದಲ್ಲಿ ಸಣ್ಣ ಲಾಭವನ್ನಾದರೂ ಕಾಣಬೇಕೆಂದರೆ ಕನಿಷ್ಠ 5000 ಕೋಳಿಗಳನ್ನಾದರೂ ಸಾಕಬೇಕು. ಕೋಳಿಗಳ ಸಂಖ್ಯೆ ಹೆಚ್ಚಿದಷ್ಟೂ ಲಾಭದ ಪ್ರಮಾಣವೂ ಅಧಿಕವಾಗುತ್ತದೆ ಎನ್ನುತ್ತಾರೆ ಕುಕ್ಕಟ ಉದ್ಯಮದಲ್ಲಿ ಭಾರಿ ಅನುಭವ ಹೊಂದಿರುವ ಸಾಯಿನಾಥ್.ಪೌಲ್ಟ್ರಿ ಆರಂಭದಲ್ಲಿ ಹೆಚ್ಚು ಬಂಡವಾಳ ಅಗತ್ಯ. ಅಂದರೆ ಒಂದು ಕೋಳಿಯ ಲೆಕ್ಕ ತೆಗೆದುಕೊಂಡರೆ ರೂ 600 ಬಂಡವಾಳ ತೊಡಗಿಸಬೇಕು. ಮೊದಲ 18 ವಾರಗಳಲ್ಲಿ ಆಗುವ ವೆಚ್ಚವೇ ಪ್ರತಿ ಕೋಳಿಮರಿಗೆ(ಅದರ ಖರೀದಿ ಬೆಲೆಯೂ ಸೇರಿ) ರೂ 120 ಇರುತ್ತದೆ. ಪೌಲ್ಟ್ರಿಫಾರ್ಮ್‌ಗೆ ಕಟ್ಟಡ/ಶೆಡ್ ನಿರ್ಮಿಸಲು ವಿಶಾಲವಾದ ಜಾಗ, ನೀರಿನ ಸೌಲಭ್ಯ, ವಿದ್ಯುತ್ ಸಂಪರ್ಕ ಇರಲೇಬೇಕು.ಕೋಳಿಗಳನ್ನು ಜೋಪಾನವಾಗಿ ಕೂಡಿಡಲು 3-4 ಹಂತಗಳಿರುವ ದೊಡ್ಡ ಪಂಜರದಂತಹ ಸ್ಟ್ಯಾಂಡ್, ವಿಶಾಲವಾದ ಕಟ್ಟಡ ನಿರ್ಮಾಣ ಎಂದೆಲ್ಲ ಆರಂಭದಲ್ಲಿ ಉದ್ಯಮದ ಸ್ಥಾಪನೆ ಖರ್ಚು ಬರುತ್ತದೆ. ನಂತರದ ದಿನಗಳಲ್ಲಿ ಕೋಳಿಮರಿ ಖರೀದಿ ಮತ್ತು ಮೇವು-ಔಷಧ ಮತ್ತು ಕಾರ್ಮಿಕರ ಕೂಲಿ ವೆಚ್ಚ ಮಾತ್ರ ಇರುತ್ತದೆ.ದೇಶದಿಂದ ಕೋಳಿಮೊಟ್ಟೆ ರಫ್ತು ಗಮನಾರ್ಹ ಪ್ರಮಾಣದಲ್ಲಿ ಇದೆಯಾದರೂ ಕರ್ನಾಟಕದ ಪಾಲು ಬಹಳ ಕಡಿಮೆ ಇದೆ. ತಮಿಳುನಾಡಿನಿಂದ ರಫ್ತು ಜಾಸ್ತಿ ಇದೆ. ಮಹಾರಾಷ್ಟ್ರದಿಂದ ಸ್ವಲ್ಪ ಪ್ರಮಾಣದಲ್ಲಿದೆ.ಹೆಚ್ಚುವರಿ ಆದಾಯ

ತೆಂಗು, ಅಡಿಕೆ, ಕಾಫಿ ತೋಟದ ಕೃಷಿಯಲ್ಲಿ ಸಾಕಷ್ಟು ಉಪ ಉತ್ಪತ್ತಿ ಇರುವಂತೆಯೇ ಕೋಳಿ ಸಾಕಣೆ ಉದ್ಯಮದಲ್ಲಿಯೂ ಹೆಚ್ಚುವರಿ ಆದಾಯ ಇದೆ.ಮೊಟ್ಟೆ ಕೋಳಿ ಸಾಕಣೆ 78 ವಾರದ ಲೆಕ್ಕದ್ದು. ಈ ಒಂದೂವರೆ ವರ್ಷದಲ್ಲಿ ಕೋಳಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ಇದೆಯಲ್ಲ ಅದರ ವರಮಾನವೂ ದೊಡ್ಡ ಪ್ರಮಾಣದ್ದೇ ಆಗಿರುತ್ತದೆ.ಸಾಯಿನಾಥ್ ಅವರು ಹೇಳುವಂತೆ, `5 ಸಾವಿರ ಕೋಳಿಗಳ ಪೌಲ್ಟ್ರಿಯಲ್ಲಿ ಕೋಳಿ ಗೊಬ್ಬರದಿಂದಲೇ ಒಂದೂವರೆ ವರ್ಷದಲ್ಲಿ 60 ಸಾವಿರ ರೂಪಾಯಿವರೆಗೂ ವರಮಾನ ಇರುತ್ತದೆ~.ಒಂದು ಕೋಳಿ  ಮೊದಲ 18 ವಾರಗಳ ಆರೈಕೆಯ ನಂತರ ನಿರಂತರವಾಗಿ 54 ವಾರಗಳ ಕಾಲ ಮೊಟ್ಟೆ ನೀಡುತ್ತದೆ. ಕನಿಷ್ಠ ವರ್ಷಕ್ಕೆ 300ರಿಂದ 340 ಮೊಟ್ಟೆ ಇಡುತ್ತದೆ. 72 ವಾರ ಕಳೆದ ಮೇಲೆಯೂ ಇವು ಮೊಟ್ಟೆ ಇಡಬಲ್ಲವು. ಆದರೆ, ಅವು ಸೇವಿಸುವ ಮೇವಿಗೆ ಹೋಲಿಸಿದರೆ ಮೊಟ್ಟೆ ಇಳುವರಿ ಬಹಳವೇ ಕಡಿಮೆ ಇರುತ್ತದೆ.

 

ಹಾಗಾಗಿ ಅವನ್ನು 72 ವಾರಗಳ ನಂತರ ಮಾಂಸಕ್ಕೆ (ಬೇಡಿಕೆ-ಪೂರೈಕೆಗೆ ತಕ್ಕಂತೆ ಕೆ.ಜಿ.ಗೆ ರೂ 30ರಿಂದ 50ರವರೆಗೂ ಬೆಲೆ ಇರುತ್ತದೆ) ಮಾರಾಟವಾಗುತ್ತವೆ.

ಬ್ರಾಯ್ಲರ್ ಕೋಳಿಗಳಲ್ಲಿ ಕೊಬ್ಬಿನಂಶ ಸಾಕಷ್ಟು ಇರುತ್ತದೆ. ಆದರೆ, ಮೊಟ್ಟೆಕೋಳಿಗಳಲ್ಲಿ `ಫ್ಯಾಟ್~ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ರುಚಿಯ ವಿಚಾರವೇಮುಖ್ಯವಾಗಿರುವುದರಿಂದ ಮೊಟ್ಟೆಕೋಳಿ ಮಾಂಸಕ್ಕೆ ಬೇಡಿಕೆಯೂ ಅಷ್ಟಕ್ಕಷ್ಟೆ ಎನ್ನುತ್ತಾರೆ ಸಾಯಿನಾಥ್.ಕೋಳಿ ಇಟ್ಟ ಮೊಟ್ಟೆಯೆಲ್ಲ ಏನಾಯ್ತು?

ದಕ್ಷಿಣ ಭಾರತದಲ್ಲಿ ಕೋಳಿ ಮೊಟ್ಟೆ ಉತ್ಪಾದನೆಯಲ್ಲಿ ಆಂಧ್ರಪ್ರದೇಶದ್ದು ದೊಡ್ಡ ಕೊಡುಗೆ.

ಕೋಳಿಮೊಟ್ಟೆ ಉತ್ಪಾದಿಸುವ ದೇಶದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಕ್ಕೆ 5ನೇ ಸ್ಥಾನ.

ರಾಜ್ಯದ ಮೂರು ವಲಯಗಳಲ್ಲಿನ ಪೌಲ್ಟ್ರಿಗಳಿಂದ ದಿನಕ್ಕೆ 54-55 ಲಕ್ಷ ಮೊಟ್ಟೆ ಉತ್ಪಾದನೆ ಆಗುತ್ತವೆ.ಇಡೀ ರಾಜ್ಯದ ಲೆಕ್ಕ(ಗ್ರಾಮೀಣ ಭಾಗದಲ್ಲಿ ಚಿಲ್ಲರೆ ಪ್ರಮಾಣದ ಉತ್ಪಾದನೆ ಎನ್‌ಇಸಿಸಿ ವಲಯದ ಲೆಕ್ಕಕ್ಕೆ ಸಿಗದು) ತೆಗೆದುಕೊಂಡರೆ ನಿತ್ಯ 1.40ರಿಂದ 1.50 ಕೋಟಿ ಮೊಟ್ಟೆ ಉತ್ಪಾದನೆ ಆಗುತ್ತವೆ.ಬೆಂಗಳೂರು ವಲಯದಲ್ಲಿ  ದೊಡ್ಡ ಲೆಕ್ಕದಲ್ಲಿ ಉತ್ಪಾದನೆಯೂ ಇದೆ. ಬಳಕೆ ಪ್ರಮಾಣವೂ ಅತ್ಯಧಿಕವಾಗಿದೆ. ಮೈಸೂರು ವಲಯದಲ್ಲಿಯೂ ಉತ್ಪಾದನೆ ಹೆಚ್ಚಿದೆ, ಬಳಕೆ ಪ್ರಮಾಣ ಮಾತ್ರ ಸ್ವಲ್ಪ ಕಡಿಮೆ ಇದೆ.ಹೊಸಪೇಟೆ ಉತ್ಪಾದನೆಯಲ್ಲಿ ಮುಂದಿದೆ. ಮೊಟ್ಟೆ ಬಳಕೆ ಪ್ರಮಾಣ ಬಹಳ ಕಡಿಮೆ ಇದೆ.ಬೆಂಗಳೂರು ನಗರ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೋಳಿಮೊಟ್ಟೆ ಬಳಸುವ ನಗರ. ಇಲ್ಲಿಗೆ ಪ್ರತಿದಿನ ಏನಿಲ್ಲವೆಂದರೂ 45 ಲಕ್ಷ ಕೋಳಿಮೊಟ್ಟೆ ಬೇಕಿದೆ. ಆದರೆ, ನಗರದ ಸುತ್ತಮುತ್ತಲ ಪೌಲ್ಟ್ರಿಗಳ ಉತ್ಪಾದನೆ ಕೇವಲ 18 ಲಕ್ಷ ಮೊಟ್ಟೆಗಳು. ಉಳಿದಂತೆ ನಗರಕ್ಕೆ ಹೊಸಪೇಟೆ, ದಾವಣಗೆರೆಯಿಂದ ಬರುತ್ತದೆ.ಸೇಲಂ ಸಮೀಪದ `ನಾಮಕಲ್~ ಒಂದು ಲೆಕ್ಕಕ್ಕೆ ದಕ್ಷಿಣ ಭಾರತದ ಕೋಳಿಮೊಟ್ಟೆಗಳ ರಾಜಧಾನಿ. ಇಲ್ಲಿ ನಿತ್ಯ 3.5 ಕೋಟಿ ಕೋಳಿಮೊಟ್ಟೆ ಉತ್ಪಾದನೆ ಆಗುತ್ತವೆ. ಇಲ್ಲಿಂದ ಬೆಂಗಳೂರಿಗೆ ನಿತ್ಯ 20 ಲಕ್ಷ ಮೊಟ್ಟೆ ಬರುತ್ತವೆ.ಮೈಸೂರಿನಲ್ಲಿ 18 ಲಕ್ಷದಿಂದ 20 ಲಕ್ಷ ಕೋಳಿಗಳು ನಿತ್ಯ ಮೊಟ್ಟೆ ಇಟ್ಟರೂ ಆ ಭಾಗದಲ್ಲಿ ಬಳಕೆ ಪ್ರಮಾಣ ತುಸು ಕಡಿಮೆ. ಹೆಚ್ಚೆಂದರೆ ದಿನಕ್ಕೆ ಸ್ಥಳೀಯವಾಗಿ 5 ಲಕ್ಷ ಮೊಟ್ಟೆ ಖಾಲಿಯಾಗಬಹುದು. ಮೈಸೂರಿನಿಂದ ಬೆಂಗಳೂರಿಗೆ ರವಾನೆಯಾಗುವ ಮೊಟ್ಟೆ ಪ್ರಮಾಣವೂ ಬಹಳ ಕಡಿಮೆ. ಮೈಸೂರಿನ ಮೊಟ್ಟೆಗಳಿಗೆ ಕೊಡಗು ಮತ್ತು ಮಂಗಳೂರಿನಲ್ಲಿ 5-6 ಲಕ್ಷದಷ್ಟು ಬೇಡಿಕೆ ಇದೆ.ಹೊಸಪೇಟೆ ವಲಯದಲ್ಲಿ ದಾವಣಗೆರೆಯಲ್ಲಿ ಪೌಲ್ಟ್ರಿ ಉದ್ಯಮ ಚುರುಕಾಗಿದೆ. ಇಲ್ಲಿ ನಿತ್ಯ 15-16 ಲಕ್ಷ ಕೋಳಿಗಳು ಮೊಟ್ಟೆ ಇಡುತ್ತವೆ. ಆದರೆ, ಹೊಸಪೇಟೆ ವಲಯದಲ್ಲಿ ಬಳಕೆ ಪ್ರಮಾಣ ಕಡಿಮೆ. ಇಲ್ಲಿಂದ ಬೆಂಗಳೂರು ಮತ್ತು ಮಂಗಳೂರಿಗೆ, ಒಂದಷ್ಟು ಭಾಗ ಚಿತ್ರದುರ್ಗ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ರವಾನೆಯಾಗುತ್ತದೆ.ಕೇರಳಕ್ಕೆ ಮೈಸೂರು ಮೊಟ್ಟೆ

ಕೇರಳದಲ್ಲಿ ಕೋಳಿಮೊಟ್ಟೆ ಉತ್ಪಾದನೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಪ್ರಮಾಣದಲ್ಲಿದೆ. ಆದರೆ, ಅಲ್ಲಿ ಮೊಟ್ಟೆ ಸೇವನೆ ಪ್ರಮಾಣ ಹೆಚ್ಚೇ ಇದೆ. ಕರ್ನಾಟಕದಿಂದ ಇಲ್ಲಿಗೆ ಮೊಟ್ಟೆ ಸರಬರಾಜು ಆಗುತ್ತದೆ. ಮುಖ್ಯವಾಗಿ ಈ `ದೇವರ ಸ್ವಂತ ನಾಡಿಗೆ~ ನಮ್ಮ `ಅರಮನೆಗಳ ನಗರಿ~ ಮೈಸೂರಿನಿಂದ 10 ಲಕ್ಷ ಕೋಳಿಮೊಟ್ಟೆ ರವಾನೆ ಆಗುತ್ತದೆ ಎನ್ನುವುದು ಸಾಯಿನಾಥ್ ವಿವರಣೆ.ಹೊಟ್ಟೆ ತುಂಬಿಸಿದ ಮೊಟ್ಟೆ

ಮೊಟ್ಟೆ ಗಾತ್ರದಲ್ಲಿ ಪುಟ್ಟದಾದರೂ ಅದರ ಉದ್ಯಮ-ಮಾರುಕಟ್ಟೆ ಗಾತ್ರ ಮಾತ್ರ ಭಾರಿ ದೊಡ್ಡದು. ಅದು ಎಲ್ಲೆಡೆಯೂ ಲಭಿಸುವ ಸರಕು. ದೊಡ್ಡ ಬಜಾರ್, ಮಾಲ್, ದಿನಸಿ ಅಂಗಡಿ, ತರಕಾರಿ  ಮಾರುಕಟ್ಟೆಯಲ್ಲಿ ಮೊಟ್ಟೆ ಹಾಜರಿ ಇದ್ದೇ ಇರುತ್ತದೆ.ಭಾರತದಲ್ಲಿ ಮೊಟ್ಟೆ ತಲಾವಾರು ಬಳಕೆ ವರ್ಷಕ್ಕೆ 44ರಿಂದ 45ರಷ್ಟಿದೆ. ರಾಜ್ಯದಲ್ಲಿಯೂ ಇಷ್ಟೇ ಪ್ರಮಾಣದ್ದಿದೆ. ಆದರೆ, ಬೆಂಗಳೂರು ಸುತ್ತಮುತ್ತ ತಲಾವಾರು ಬಳಕೆ ಪ್ರಮಾಣ ವರ್ಷಕ್ಕೆ 50ರಿಂದ 55 ಮೊಟ್ಟೆ ಇದೆ.ಮನೆಯಲ್ಲಿ ಗೃಹಿಣಿಯರಿಲ್ಲದ ವೇಳೆ ಕ್ಷಿಪ್ರಗತಿ ಅಡುಗೆ ಎಂದರೆ ನೂಡ  ಲ್ಸ್. ಮೊಟ್ಟೆ ಸಹ ಅಷ್ಟೇ ಬೇಗದಲ್ಲಿ ಬೇಯಿಸಿ ಅಥವಾ ಆಮ್ಲೆಟ್ ಮಾಡಿ ಸೇವಿಸಬಹುದಾದ ಪೌಷ್ಟಿಕಾಂಶಭರಿತ ಆಹಾರ. ಏಕಾಂಗಿ ವಾಸದ ಬ್ರಹ್ಮಚಾರಿಗಳು, ವಿದ್ಯಾರ್ಥಿಗಳ ಪಾಲಿಗೆ ಮೊಟ್ಟೆ ಸದಾಕಾಲದ, ತಕ್ಷಣದ ಆಹಾರ.ಇತ್ತೀಚಿನ ದಿನಗಳಲ್ಲಿ (ಕಟ್ಟಾ ಸಸ್ಯಾಹಾರಿಗಳನ್ನು ಹೊರತುಪಡಿಸಿ) ಎಲ್ಲರ ಮನೆಯಲ್ಲೂ ಒಂದಲ್ಲ ಬಂದು ಬಗೆಯಲ್ಲಿ ಕೋಳಿಮಟ್ಟೆ ಬಳಕೆ ಇದ್ದೇಇದೆ.ದೇಹದ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸುವವರು ಬೆಳಿಗ್ಗೆ ಬೇಗನೇ ಎದ್ದು ವ್ಯಾಯಾಮ, ವೇಗದ ನಡಿಗೆ, ಆಟ-ಓಟ, ಜಿಗಿದಾಟ ಎಂದೆಲ್ಲ ಕಸರತ್ತು ಮಾಡುವುದು ನಗರ-ಹಳ್ಳಿ ಎನ್ನದೆ ಎಲ್ಲೆಡೆಯ ದಿನಚರಿಯಾಗಿದೆ. ದೇಹದಂಡನೆ ನಂತರ ಹಾಲು-ಮೊಟ್ಟೆ ಸೇವನೆ ಸಹಜ ಎನ್ನುವಂತಾಗಿದೆ. ಕೆಲವರು ಹಾಲಿಗೇ ಹಸಿಮೊಟ್ಟೆ ಮಿಶ್ರಣ ಮಾಡಿ ಸೇವಿಸಿದರೆ, ಕೆಲವರು ಬೇಯಿಸಿ ಉಪ್ಪು-ಮೆಣಸಿನ ಪುಡಿ ಹಚ್ಚಿಕೊಂಡು ತಿನ್ನುತ್ತಾರೆ. ಕೆಲವರು ಆಮ್ಲೆಟ್ ಮಾಡಿಕೊಂಡೊ, ಬ್ರೆಡ್ ಸ್ಲೈಸ್ ನಡುವೆ ಜೋಡಿಸಿಕೊಂಡೋ ಮೊಟ್ಟೆ ಸೇವಿಸುತ್ತಾರೆ.ಮೊಟ್ಟೆಯನ್ನು ನೇರವಾಗಿ ಸೇವಿಸದವರ, ಸೇವಿಸಲು ಇಚ್ಛಿಸದವರ ಹೊಟ್ಟೆಗೂ ಮೊಟ್ಟೆ ಬೇರೆ ರೂಪದಲ್ಲಿ ಸೇರಿಕೊಳ್ಳುತ್ತದೆ. ಮೊಟ್ಟೆ ಇಲ್ಲದೆ ಬೇಕರಿಯ ಬಹಳಷ್ಟು ತಿನಿಸುಗಳು ತಯಾರಾಗುವುದೇ ಇಲ್ಲ. ಕೇಕ್‌ಗಂತೂ ಮೊಟ್ಟೆ ಅಗತ್ಯ-ಅನಿವಾರ್ಯ ಎನ್ನುವಂತಾಗಿದೆ(ಇತ್ತೀಚಿನ ದಿನಗಳಲ್ಲಿ ಮೊಟ್ಟೆ ರಹಿತ ಕೇಕ್‌ಗಳೂ ಬಂದಿವೆ).ಹೀಗ ಚಿಕ್ಕ ಕೋಳಿಯ ಪುಟಾಣಿ ಮೊಟ್ಟೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಒಡಲು ಸೇರುತ್ತಿದೆ. ಆ ಮೂಲಕ `ಸಿ~ ಅನ್ನಾಂಗ ಹೊರತುಪಡಿಸಿ ವಿವಿಧ ವಿಟಮಿನ್‌ಗಳನ್ನು ನಮ್ಮ ದೇಹಕ್ಕೆ ಒದಗಿಸುತ್ತಿದೆ.ಕೃಷಿಗೆ ಕೋಳಿ ನೆರವು

ಕೃಷಿ ಕ್ಷೇತ್ರಕ್ಕೂ ಕೋಳಿ ಸಾಕಣೆ ಉದ್ಯಮಕ್ಕೂ ಅವಿನಾಭಾವ ಸಂಬಂಧ. ಕೋಳಿ ಮೇವು ಮಿಶ್ರಣಕ್ಕೆ  ಬಹಳವಾಗಿ ಅಗತ್ಯವಾದುದು ಮುಸುಕಿನ ಜೋಳ. ಹಾಗಾಗಿ ಜೋಳದ ದೊಡ್ಡ ಗ್ರಾಹಕ ಎಂದರೆ ಕೋಳಿ ಉದ್ಯಮವೇ ಆಗಿದೆ.ರವೆ, ಬನ್ಸಿರವೆ  ಉತ್ಪಾದನೆ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿಯೂ, ಪಾಪ್‌ಕಾರ್ನ್ ಮತ್ತಿತರ ಕುರುಕಲು ತಿನಿಸು ತಯಾರಿಕೆ ಉದ್ಯಮಕ್ಕೆ ಮುಸುಕಿನ ಜೋಳ ಹೆಚ್ಚು ಬಳಕೆಯಾದರೂ ರಾಜ್ಯದ ಮುಸುಕಿನ ಜೋಳಕ್ಕೆ ಶಕ್ತಿ ತುಂಬುತ್ತಿರುವುದು ಕುಕ್ಕಟ ಉದ್ಯಮ.ಕೆಲವೊಮ್ಮೆ ರಾಜ್ಯದಲ್ಲಿನ ಮುಸುಕಿನ ಜೋಳವೂ ಸಾಲದೇ ಕೇಂದ್ರ ಸರ್ಕಾರದ ಆಹಾರ ಮತ್ತು ಕೃಷಿ ಇಲಾಖೆಯ ಮೊರೆಹೋಗಿ ದೊಡ್ಡ ಪ್ರಮಾಣದಲ್ಲಿ ಮುಸುಕಿನ ಜೋಳವನ್ನು ತಂದಿದ್ದೂ ಇದೆ ಎನ್ನುತ್ತಾರೆ ಸಾಯಿನಾಥ್.ಇತ್ತೀಚೆಗೆ ರಾಜ್ಯದಲ್ಲಿ ಮುಸುಕಿನ ಜೋಳದ ಕೊರತೆ ಎದುರಾಗಿತ್ತು. ಹಾಗಾಗಿ ತಿಂಗಳ ಹಿಂದೆ ರಾಜ್ಯದ ಕುಕ್ಕುಟ ಉದ್ಯಮದ ಪ್ರತಿನಿಧಿಗಳನ್ನು ನವದೆಹಲಿಗೆ ಕರೆದೊಯ್ದು, ಕೃಷಿ ಸಚಿವ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಬಹಳ ಕಡಿಮೆ ಬೆಲೆಗೆ 30 ಸಾವಿರ ಟನ್ ಮುಸುಕಿನ ಜೋಳವನ್ನು ರಾಜ್ಯಕ್ಕೆ ತಂದಿದ್ದನ್ನು ಅವರು ಮಾತಿನ ಮಧ್ಯೆ ನೆನಪಿಸಿಕೊಂಡರು.ರಾಜ್ಯ ಸರ್ಕಾರವೂ ರೈತರಿಂದ ನೇರವಾಗಿ ಮುಸುಕಿನ ಜೋಳ ಖರೀದಿಸಿ ಪೌಲ್ಟ್ರಿ ಉದ್ಯಮಿಗಳಿಗೆ ವಿತರಿಸಿದರೆ ಉದ್ಯಮದ ಬೆಳವಣಿಗೆಗೆ ಬಹಳ ಅನುಕೂಲವಾಗುತ್ತದೆ ಎನ್ನುವುದು ಸಾಯಿನಾಥ್ ಅವರ ಮನವಿ.ನೆರವಿಗೆ ಬಿಸಿಯೂಟ ಸಿಕ್ಕರೆ!

ರಾಜ್ಯದ ಮೊಟ್ಟೆಕೋಳಿ ಉದ್ಯಮ ವರ್ಷಂಪ್ರತಿ ಸರಾಸರಿ ಶೇ 15ರ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಕೆಲವೊಮ್ಮೆ ಶೇ 20ರಷ್ಟು ಬೆಳವಣಿಗೆ ಕಂಡಿದ್ದೂ ಇದೆ ಎನ್ನುವ ಸಾಯಿನಾಥ್, ಈ ಉದ್ಯಮಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳಿಂದ ಹೆಚ್ಚಿನ ನೆರವೇನೂ ಸಿಕ್ಕಿಲ್ಲ. ಸಹಾಯಧನದ ಮಾತು ದೂರವೇ ಇದೆ.ಕೃಷಿಗೆ ನೀಡುವಂತೆ ಕಡಿಮೆ ದರದಲ್ಲಿ ವಿದ್ಯುತ್ತನ್ನಾದರೂ ನೀಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡುತ್ತಾರೆ ಅವರು.ರಾಜ್ಯ ಸರ್ಕಾರ ಯಾವುದೇ ನೆರವು ನೀಡದೇ ಇದ್ದರೂ ಕನಿಷ್ಠ `ಬಿಸಿಯೂಟ~ದ ಮೂಲಕ ಕೋಳಿಮೊಟ್ಟೆ ಉದ್ಯಮಕ್ಕೆ ಶಕ್ತಿ ತುಂಬ ಬಹುದಾಗಿದೆ.

 

ಪಕ್ಕದ ತಮಿಳುನಾಡಿನಲ್ಲಿ ಶಾಲೆಯ ಬಿಸಿಯೂಟಕ್ಕೆ ವಾರದಲ್ಲಿ 3 ದಿನ ಬೇಯಿಸಿದ ಮೊಟ್ಟೆ ಕೊಡುತ್ತಾರೆ. ಇದರಿಂದ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶಭರಿತ ಆಹಾರ ನೀಡಿದಂತಾಗುತ್ತಿದೆ. ಕರ್ನಾಟಕ ಸರ್ಕಾರವೂ ಇತ್ತ ಗಮನ ಹರಿಸಬೇಕಿದೆ. ನಮ್ಮ ರಾಜ್ಯದಲ್ಲಿಯೂ ಮಕ್ಕಳಿಗೆ ಬಿಸಿಯೂಟದ ಜತೆಗೆ ಬೇಯಿಸಿದ ಮೊಟ್ಟೆ, ಮೊಟ್ಟೆ ಪಲ್ಯ ನೀಡಬಹುದು ಎಂಬ ಸಲಹೆ ಮತ್ತು ಮನವಿ ಅವರದು.ಪೌಲ್ಟ್ರಿಯಲ್ಲಿ ಉತ್ಪತ್ತಿಯಾಗುವುದು `ಸ್ಟೆರೈಲ್ ಎಗ್~ ಆಗಿರುವುದರಿಂದ (ಅಂದರೆ ಈ ಮೊಟ್ಟೆಗಳು ಶಾಖ ಕೊಟ್ಟರೂ ಮರಿ ಆಗುವುದಿಲ್ಲ) ಅವನ್ನು ಮಾಂಸಾಹಾರದ ಪಟ್ಟಿಗೆ ಸೇರಿಸಲಾಗದು.ಮೊಟ್ಟೆಯೂ ಈಗ ಸಸ್ಯಾಹಾರ ಎಂದೇ ಪರಿಗಣಿತವಾಗಿದೆ. ಜತೆಗೆ ಮೊಟ್ಟೆಯಲ್ಲಿ ಕಲಬೆರಕೆ ಆಹಾರ ಸಮಸ್ಯೆ ಎಂಬ ವಿಚಾರವೇ ಇಲ್ಲ. ಹಾಗಾಗಿ ಶಾಲೆಗಳಲ್ಲಿ ಮೊಟ್ಟೆ ತಿನಿಸು ನೀಡಿದರೆ ಒಳಿತೇ ಆಗುತ್ತದೆ. ಹಳ್ಳಿಗಾಡಿನಲ್ಲಿ ಪೌಷ್ಟಿಕಾಂಶ ಕೊರತೆಯಿಂದ ಬಳಲುವ ಬಡಮಕ್ಕಳಿಗೆ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲವೆ? ಎಂಬುದು ಅವರ ಪ್ರಶ್ನೆ ರೂಪದ ಕಾಳಜಿಯ ಮಾತು.ಒಂದು ಚದರಡಿ ಕೃಷಿ ಭೂಮಿಯಲ್ಲಿ ಎಷ್ಟು ಆಹಾರ ಉತ್ಪಾದಿಸಬಹುದು? ಎಂಬ ಪ್ರಶ್ನೆ ಮುಂದಿಡುವ ಬೆಂಗಳೂರು ಎನ್‌ಇಸಿಸಿಯ ಈ ಮುಂದಾಳು, ಇಷ್ಟೇ ಜಾಗದಲ್ಲಿ 3 ಕೋಳಿಗಳನ್ನು(ವಿವಿಧ ಹಂತದ ಕೇಜ್   ನಲ್ಲಿಟ್ಟು) ಸಾಕಬಹುದು.

 

ವರ್ಷಕ್ಕೆ ಕೋಳಿ ಮತ್ತು ಮೊಟ್ಟೆ ಎರಡೂ ಸೇರಿಸಿ 23ರಿಂದ 24 ಕೆ.ಜಿ. ಆಹಾರ ಉತ್ಪಾದಿಸಬಹುದು. ಜತೆಗೆ 1 ಮೊಟ್ಟೆ ಬಳಕೆ ಹೆಚ್ಚಿದರೂ ಅದು ಅಷ್ಟೇ ಪ್ರಮಾಣದಲ್ಲಿ ಉದ್ಯೋಗ ಪ್ರಮಾಣವನ್ನೂ ಹೆಚ್ಚಿಸುತ್ತದೆ ಎಂದು ಕುಕ್ಕಟ ಉದ್ಯಮದ ಮಹಿಮೆಯನ್ನು ಕೊಂಡಾಡುತ್ತಾರೆ. 

ನಷ್ಟದ ಲೆಕ್ಕಚಾರ

ಮೊಟ್ಟೆ ಉದ್ಯಮದಲ್ಲಿಯೂ ನಷ್ಟದ ಲೆಕ್ಕ ಇದೆ. ಪೌಲ್ಟ್ರಿಯಲ್ಲಿ ಸಂಗ್ರಹಣೆ ವೇಳೆ ಶೇ 2ರಷ್ಟು ಮೊಟ್ಟೆಗಳು ಒಡೆದುಹೋಗುತ್ತವೆ. ಸಾಗಣೆ ವೇಳೆ 1.25 ಲಕ್ಷ ಮೊಟ್ಟೆಗೆ ಕನಿಷ್ಠ 250 ಮೊಟ್ಟೆ ಚೂರಾಗುತ್ತವೆ.

ಮರಿ ಕೋಳಿ ಸಾಕುವಾಗ ಬೇಗನೇ ರೋಗಬಾಧೆ ಬೀತಿ ಎದುರಾಗುತ್ತದೆ. ಕೆಲವೊಮ್ಮೆ ರೋಗ ಹರಡಿದರೆ ಇಡೀ ಪೌಲ್ಟ್ರಿಯಲ್ಲಿನ ಕೋಳಿಗಳೆಲ್ಲವನ್ನೂ ನಾಶಪಡಿಸಬೇಕಾಗುತ್ತದೆ ಎನ್ನುವ ಸಾಯಿನಾಥ್, ಒಂದೂವರೆ ತಿಂಗಳ ಹಿಂದೆ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ನಡೆದ ಇಂತಹುದೇ ಘಟನೆಯನ್ನು ನೆನಪಿಸಿದರು.
ಕುಕ್ಕಟ ಲೋಕ ವೈಶಿಷ್ಟ್ಯ

ಮೊಟ್ಟೆ ಕೋಳಿಗಳದ್ದು ಒಂದೂವರೆ ವರ್ಷದ ಬದುಕು. ಮಾಂಸದ ಕೋಳಿಗಳದ್ದು ತಿಂಗಳ ಲೆಕ್ಕದ ಜೀವಮಾನ.

ಮೊಟ್ಟೆಕೋಳಿ ಜಾತಿಯ ಪುಟ್ಟ ಮರಿಗೆ ಸಾಮಾನ್ಯವಾಗಿ ರೂ 23 ಬೆಲೆ ಇರುತ್ತದೆ. ಇವು 18 ವಾರವಾದ ನಂತರವೇ ಮೊಟ್ಟೆ ಇಡಲು ಆರಂಭಿಸುವುದು. ಅಲ್ಲಿಯವರೆಗೂ ಮೇವು, ನೀರು, ಔಷಧ, ಚುಚ್ಚುಮದ್ದು ಎಂದು ಜೋಪಾನ ಮಾಡಬೇಕು. ಚುಚ್ಚುಮದ್ದು ವಿಚಾರದಲ್ಲಂತೂ ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡಲೇಬೇಕು. 8ನೇ ದಿನಕ್ಕೆ ಚುಚ್ಚುಮದ್ದು ಎಂದರೆ 7ಕ್ಕೂ ಅಲ್ಲ, 9ಕ್ಕೂ ಅಲ್ಲ, ಸರಿಯಾಗಿ ಎಂಟನೇ ದಿನಕ್ಕೆ ನೀಡಬೇಕು ಎನ್ನುತ್ತಾರೆ ಕುಕ್ಕಟೋದ್ಯಮವೂ ಶ್ರಮ-ಶಿಸ್ತು ಬೇಡುತ್ತದೆ ಎನ್ನುವುದು ಸಾಯಿನಾಥ್ ಅವರ ಅನುಭವದ ಮಾತು. ಹೌದು, ಕೋಳಿ ಮೊಟ್ಟೆ ಬೆಲೆಯಲ್ಲಿಯೂ ಕಳೆದ ಕೆಲವು ದಿನಗಳಿಂದ ತುಸು ಏರಿಕೆಯಾಗಿದೆ.ಏಪ್ರಿಲ್ 7ರಂದು 100 ಮೊಟ್ಟೆ ಬೆಲೆ ರೂ 270, ಹತ್ತು ಮೊಟ್ಟೆಗೆ ರೂ 25 ಇದ್ದಿತು. ಆದರೆ, ನಾಲ್ಕೈದು ದಿನಗಳ ಅಂತರದಲ್ಲಿ 3-4 ರೂಪಾಯಿಯಂತೆ ಏರುತ್ತಾ ಬಂದು ಮೇ 14ರಿಂದ 100 ಮೊಟ್ಟೆ ಸಗಟು ದರ ರೂ 274ಕ್ಕೂ, ಹತ್ತು ಮೊಟ್ಟೆ ಚಿಲ್ಲರೆ ಬೆಲೆ ರೂ 30ಕ್ಕೂ ಬಂದಿದೆ.ದಿನಸಿ ಅಂಗಡಿಗಳಲ್ಲಿ 1 ಮೊಟ್ಟೆ ರೂ 3.25ರಿಂದ 3.50ಕ್ಕೆ ಮಾರಾಟವಾಗುತ್ತಿದೆ.ಮೊಟ್ಟೆ ಧಾರಣೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರುವ ಸಂಭವವಿದೆ ಎನ್ನುತ್ತಾರೆ ಈ ಉದ್ಯಮದ ಹಿರಿಯರು. `ಮೊಟ್ಟೆಗೇ ಇಷ್ಟು ಬೆಲೆಯಾದರೆ, ಇನ್ನು ಕೋಳಿ ಬೆಲೆ ಎಷ್ಟಿರಬಹುದು?~ ಎಂಬ ಪ್ರಶ್ನೆ ಕೋಳಿಯತ್ತ ಕಣ್ಣು ಹಾಯಿಸದ ಮೊಟ್ಟೆಯನ್ನಷ್ಟೇ ಸೇವಿಸುವ ಸಸ್ಯಾಹಾರಿಗಳ ಮನದಲ್ಲೂ ಮೂಡಬಹುದು!ಮೊಟ್ಟೆಯ ಸಗಟು ಮಾರಾಟ ಬೆಲೆ ಪ್ರತಿನಿತ್ಯ ಏರಿಳಿತ ಕಾಣುತ್ತಲೇ ಇರುತ್ತದೆ. ವಲಯಗಳು ತಮ್ಮ ವ್ಯಾಪ್ತಿಯಲ್ಲಿ ಆ ದಿನ ಲಭ್ಯವಿರುವ ಮೊಟ್ಟೆ ಸಂಖ್ಯೆ, ಪೂರೈಕೆ ಆಗುವ ಪ್ರಮಾಣ, ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಕ್ಷಿಪ್ರಗತಿಯಲ್ಲಿ ಅಧ್ಯಯನ ಮಾಡಿ ಅಂದಿನ ಸಗಟು ಮತ್ತು ಚಿಲ್ಲರೆ ಬೆಲೆಯನ್ನು ನಿರ್ಧರಿಸುತ್ತದೆ.ತಮಿಳುನಾಡಿನ ಸೇಲಂ ಸಮೀಪದ `ನಾಮಕಲ್~ನಲ್ಲಿ ಮಧ್ಯಾಹ್ನ 1 ಗಂಟೆಗೆಲ್ಲಾ ಅಂದಿನ ಧಾರಣೆ ಪ್ರಕಟವಾಗುತ್ತದೆ. ಅದನ್ನು ಅನುಸರಿಸಿ ನಂತರ ಆಂಧ್ರಪ್ರದೇಶದಹೈದರಾಬಾದ್‌ನ `ಎನ್‌ಇಸಿಸಿ~ ವಲಯ ಬೆಲೆ ನಿರ್ಧರಿಸುತ್ತದೆ.ಈ ಎರಡೂ ವಲಯದ ಧಾರಣೆ ಮಾಹಿತಿ ಪಡೆದುಕೊಳ್ಳುವ ಬೆಂಗಳೂರು ವಲಯ ಸಂಜೆ 6 ಗಂಟೆ ವೇಳೆಗೆ ಧಾರಣೆ ಪ್ರಕಟಿಸುತ್ತದೆ. ಈ ಸಂದರ್ಭದಲ್ಲಿ  ಸ್ಥಳೀಯ ಮಾರುಕಟ್ಟೆಯಲ್ಲಿ ಪೂರೈಕೆ ಮತ್ತು ಬೇಡಿಕೆಯನ್ನೂ ಗಮನದಲ್ಲಿಟ್ಟುಕೊಂಡಿರುತ್ತದೆ.ಹಾಗೆಂದು ಎಲ್ಲ ವಲಯಗಳಲ್ಲಿಯೂ ಮೊಟ್ಟೆ ಧಾರಣೆ ಒಂದೇ ರೀತಿ ಇರುತ್ತದೆ ಎನ್ನುವಂತಿಲ್ಲ. ಒಂದು ಮೊಟ್ಟೆ ಬೆಲೆಯಲ್ಲಿ ಕನಿಷ್ಠ 10ರಿಂದ 12ಪೈಸೆಯಷ್ಟು ವ್ಯತ್ಯಾಸವಿರುತ್ತದೆ ಎನ್ನುತ್ತಾರೆ ಬಿ.ಆರ್.ಸಾಯಿನಾಥ್.10 ವರ್ಷದ ಹಿಂದೆ ಮೊಟ್ಟೆ ಚಿಲ್ಲರೆ ಮಾರಾಟ ದರ ಸುಮಾರು ರೂ. 1.40 ಇದ್ದಿತು. ಈಗ ರೂ 3 ಇದೆ. ಋತುಮಾನಗಳೂ ಕೋಳಿಮೊಟ್ಟೆ ಬಳಕೆ ಪ್ರಮಾಣದ ಮೇಲೆ ಪರಿಣಾಮ ಬೀರುತ್ತವೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಮೊಟ್ಟೆಗೆ ಬೇಡಿಕೆ ಕುಸಿಯುತ್ತದೆ. ಬೇಸಿಗೆ ಕಾಲದಲ್ಲಿ ಮೊಟ್ಟೆ ತಿಂದರೆ ದೇಹದಲ್ಲಿನ ಉಷ್ಣಾಂಶ ಮತ್ತಷ್ಟು ಹೆಚ್ಚುತ್ತದೆ ಎಂಬ ತಪ್ಪು ಕಲ್ಪನೆಯೇ ಇದಕ್ಕೆ ಕಾರಣ.ಮೇವು ಸರಿಯಾಗಿ ಕೊಟ್ಟರೆ ಕೋಳಿಗಳು ಯಾವುದೇ ಕಾಲದಲ್ಲಾದರೂ ಎಂದಿನ ಲೆಕ್ಕದಲ್ಲಿಯೇ ಮೊಟ್ಟೆ ಇಡುತ್ತವೆ. ಆದರೆ ಬೇಸಿಗೆಯಲ್ಲಿ ಬೇಡಿಕೆ ಕುಸಿಯುವ ಕಾರಣ ಮೊಟ್ಟೆ ಧಾರಣೆಯೂ ಕೆಳಗಿರುತ್ತದೆ. ಬೇಸಿಗೆ ಕಳೆಯುತ್ತಿದ್ದಂತೆ ಬೆಲೆ ವೇಗವಾಗಿ ಮೇಲೇರುತ್ತದೆ ಎನ್ನುತ್ತಾ ಸದ್ಯದ ಮಾರುಕಟ್ಟೆಯತ್ತ ಬೊಟ್ಟು ಮಾಡುತ್ತಾರೆ ಸಾಯಿನಾಥ್.

ಎನ್‌ಇಸಿಸಿ

ಕುಕ್ಕುಟ ಉದ್ಯಮದಲ್ಲಿನ ಸದಸ್ಯರೇ ಸೇರಿ ರಚಿಸಿಕೊಂಡ ಪ್ರಾತಿನಿಧಿಕ ಸಂಸ್ಥೆಯೇ `ಎನ್‌ಇಸಿಸಿ~. ದೇಶದಲ್ಲಿ 28 ವಲಯಗಳನ್ನು ರಚಿಸಲಾಗಿದೆ. ಇವು ರಾಜ್ಯವಾರು ವಲಯಗಳಲ್ಲ, ಕೋಳಿಮೊಟ್ಟೆ ಉತ್ಪಾದನೆ ಮತ್ತು ಬಳಕೆಯ ಪ್ರಮಾಣ ಅನುಸರಿಸಿ ವಲಯಗಳನ್ನು ರಚಿಸಲಾಗಿದೆ. ಕರ್ನಾಟಕದಲ್ಲಿಯೇ 3 ವಲಯಗಳಿವೆ. ಬೆಂಗಳೂರು, ಮೈಸೂರು ಮತ್ತು ಹೊಸಪೇಟೆ.ವಲಯ ಸಮಿತಿಗಳಿಗೆ ಮುಖ್ಯಸ್ಥರನ್ನು ಅದರ ರೈತ ಸದಸ್ಯರೇ ಆಯ್ಕೆ ಮಾಡುತ್ತಾರೆ. ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ.ಎನ್‌ಇಸಿಸಿಯ ಬೆಂಗಳೂರು ವಲಯಕ್ಕೆ ಕಳೆದ 15 ವರ್ಷಗಳಿಂದಲೂ ಬಿ.ಆರ್.ಸಾಯಿನಾಥ್ ಅವರೇ ಅಧ್ಯಕ್ಷರಾಗಿದ್ದಾರೆ ಎಂಬುದೇ ಅವರ ಕಾರ್ಯದಕ್ಷತೆ, ಸದಸ್ಯರು ಅವರಲ್ಲಿ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.`ದಿನಕ್ಕೊಂದು ಮೊಟ್ಟೆ-ತುಂಬುವುದು ನಿಮ್ಮ ಹೊಟ್ಟೆ~....`ನಿತ್ಯ ಮೊಟ್ಟೆ ಸೇವಿಸಿದರೆ ಕಣ್ಣುಗಳಲ್ಲಿ ಹೊಳಪು-ಹಲ್ಲುಗಳು ಗಟ್ಟಿ~ ... ಎಂಬಿತ್ಯಾದಿ ಘೋಷಣೆಗಳೊಂದಿಗೆ ಜನರಲ್ಲಿ ಕೋಳಿಮೊಟ್ಟೆ ಸೇವನೆ ಬಗ್ಗೆ ಆಸಕ್ತಿ ಮೂಡಿಸುವ ಯತ್ನವನ್ನೂ ಎನ್‌ಇಸಿಸಿ ಮಾಡುತ್ತಿದೆ.ಮೊಟ್ಟೆ ಕಟ್ಟಿಕೊಟ್ಟ ಬದುಕು

ಮೊಟ್ಟೆ ಉದ್ಯಮ ಕೋಳಿ ಸಾಕಣೆದಾರರಿಗೆ, ಅದರ ಕೂಲಿಕಾರ್ಮಿಕರಿಗೆ, ಸಾಗಣೆ ಮಾಡುವವರಿಗಷ್ಟೇ ದುಡಿಮೆಯಾಗಿಲ್ಲ. ದೇಶದ ಕೋಟ್ಯಂತರ ಮಂದಿಗೆ ಬದುಕಿನ ಆಧಾರವಾದ ದುಡಿಮೆಯ ಮಾರ್ಗವಾಗಿದೆ.ಅದರಲ್ಲೂ ಸಂಜೆಯಾಯಿತೆಂದರೆ ಸಾಕು ನಗರ, ಪಟ್ಟಣ, ಹಳ್ಳಿ ಎನ್ನದೆ ರಸ್ತೆಬದಿ, ವೃತ್ತಗಳಲ್ಲಿ, ಪಾರ್ಕ್‌ಗಳ ಮಗ್ಗಲಲ್ಲಿ, ವೈನ್‌ಷಾಪ್‌ಗಳ ಪಕ್ಕ ತೆರೆದುಕೊಳ್ಳುವ ತಳ್ಳುಗಾಡಿ ಅಂಗಡಿಗಳಲ್ಲಿ ಆಮ್ಲೆಟ್, ಬೇಯಿಸಿದ ಮೊಟ್ಟೆ ಮಾರುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಮೊಟ್ಟೆ ಮತ್ತು ಅದರ ತಿನಿಸುಗಳನ್ನು ಮಾರಿದರೇ ಇವರ ಬದುಕಿನ ಚಕ್ರ ಉರುಳುವಂತಿರುತ್ತದೆ.ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಕತ್ತಲಾಗುತ್ತಿದ್ದಂತೆ ಹತ್ತಿಪ್ಪತ್ತು ಜನ ಸ್ಟೀಲಿನ ಡಬರಿಯೊಳಗೆ ಬೇಯಿಸಿದ ಕೋಳಿ ಮೊಟ್ಟೆಗಳನ್ನೂ, ಉಪ್ಪು-ಮೆಣಸಿನ ಪುಡಿ ಬೆರೆಸಿದ ಡಬ್ಬಿಯನ್ನೂ ಇಟ್ಟುಕೊಂಡು ಮಾರಾಟ ಶುರು ಮಾಡುತ್ತಾರೆ. ದೂರದ ಊರುಗಳಿಂದ ಬಂದು ಕೆಲಸ ಮುಗಿಸಿಕೊಂಡು ವಾಪಸಾಗಲು ಬಸ್ ಹತ್ತುವ ಗಡಿಬಿಡಿಯಲ್ಲಿರುವ ಸಾವಿರಾರು ಪ್ರಯಾಣಿಕರ ಹಸಿವಿಗೂ ಮೊಟ್ಟೆಗಳೇ ತಕ್ಷಣದ ಆಹಾರವಾಗುತ್ತವೆ.

 

ಬೇಯಿಸಿದ ಒಂದು ಮೊಟ್ಟೆ ರೂ 6ರಿಂದ ರೂ7ವರೆಗೂ ಮಾರಾಟವಾಗುತ್ತದೆ. ಚೌಕಾಶಿಯಿಂದ ಲಾಭವೇನೂ ಆಗದು. ಮೊಟ್ಟೆ ಬೆಲೆ ಜಾಸ್ತಿಯಾಗಿದೆಯಲ್ಲ ಎಂಬ ಉತ್ತರ ಸಿಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry