ಮೊದಲಾ.. ಸಲದ ಗೆಲುವು

7

ಮೊದಲಾ.. ಸಲದ ಗೆಲುವು

Published:
Updated:

ಆಗ ನಾನಿನ್ನೂ ಹದಿನಾಲ್ಕರ ಬಾಲೆ. ನಾನು ಹತ್ತನೇ ತರಗತಿ ಓದುತ್ತಿದ್ದ ಬೆಂಗಳೂರಿನ ಕೆಥೆಡ್ರಲ್ ಹೈಸ್ಕೂಲ್‌ಗೆ ಮೇರು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಬಂದಿದ್ದರು. ಅಂದು ಶಾಲೆಯಲ್ಲಿ ಅವರ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.ನನ್ನ ಶಿಕ್ಷಕರಿಗೆ ನಾನು ಹಾಡುವ ವಿಷಯ ತಿಳಿದಿತ್ತು. ಅವರು ಎಸ್ಪಿ ಅವರೊಂದಿಗೆ ವೇದಿಕೆ ಮೇಲೆ ಹಾಡುವ ಅವಕಾಶ ಒದಗಿಸಿದರು. `ಗೀತಾ~ ಚಿತ್ರದ `ಜೊತೆಯಲಿ..~ ಹಾಡನ್ನು ಅವರ ಜೊತೆ ಹಾಡಿದೆ. ಅಂದು ನನಗಾದ ಖುಷಿ ಅಷ್ಟಿಷ್ಟಲ್ಲ. ಕನಸು ನನಸಾದಂಥ ಭಾವ ನನಗಾಗಿತ್ತು. ಅಂದೇ ಹಿನ್ನೆಲೆ ಗಾಯಕಿಯಾಗಬೇಕೆಂಬ ಕನಸು ಚಿಗುರೊಡೆಯಿತು.ನಮ್ಮೂರು ದಾವಣಗೆರೆ. ಆದರೆ ನಾನು ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿಯೇ. ಬಾದಾಮಿ ಎಂಬುದು ನಮ್ಮ ಹಿರಿಯರ ಹೆಸರಿನ ಜೊತೆ ಇತ್ತು. ಇದೀಗ ಅದು ನನ್ನ ಹೆಸರಿಗೂ ತಳುಕು ಹಾಕಿಕೊಂಡಿದೆ. ಬಿಕಾಂ ಓದಿದ್ದೇನೆ. ಐದು ವರ್ಷ ಇದ್ದಾಗಲೇ ನನ್ನ ತಾಯಿ ವಿದುಷಿ ಬೀನಾ ಬಾದಾಮಿ ಅವರಿಂದ ನನಗೆ ಸಂಗೀತದ ಪಾಠ ಆರಂಭವಾಗಿತ್ತು.ಅವರು ಸಂಗೀತ ಶಾಲೆ ನಡೆಸುತ್ತಾರೆ. ಅವರಿಂದ ಪಾಠ ಕೇಳಿಸಿಕೊಳ್ಳುತ್ತಾ ಬೆಳೆದ ನನಗೆ ಸಹಜವಾಗಿಯೇ ಸಂಗೀತ ಇಷ್ಟವಾಗುತ್ತಾ ಹೋಯಿತು. ಬಳಿಕ ವಿದುಷಿ ಸ್ನೇಹಾ ಹಂಪಿಹೊಳಿ ಅವರ ಬಳಿ ಹಿಂದೂಸ್ತಾನಿ ಸಂಗೀತ ಅಭ್ಯಾಸ ಆರಂಭಿಸಿದೆ. ಇಂದಿಗೂ ಪಾಠ ಮುಗಿದಿಲ್ಲ. ಇನ್ನು ಸಿನಿಮಾದ ಹಿನ್ನೆಲೆ ಸಂಗೀತ ಕಲಿಸಿದವರು ಹಿರಿಯ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್.ನಾನು ಅವರ ಸಾಧನ ಸಂಗೀತ ಶಾಲೆಯ ವಿದ್ಯಾರ್ಥಿನಿ. ಅಲ್ಲಿ ಕಲಿಯುವಾಗ ಸಾಕಷ್ಟು ಸಿನಿಮಾ ಸಂಗೀತ ನಿರ್ದೇಶಕರ ಪರಿಚಯವಾಗಿತ್ತು. ಆಗಲೇ ನನಗೆ ನಾಗಾಭರಣ ನಿರ್ದೇಶನದ `ನೀಲಾ~ ಚಿತ್ರದಲ್ಲಿ ಹಾಡುವ ಅವಕಾಶ ಸಿಕ್ಕಿತು. ಅದೇ ನನ್ನ ಮೊದಲ ಸಿನಿಮಾ ಹಾಡು. ಆಗ ನಾನು ಆರನೇ ತರಗತಿ ಕಲಿಯುತ್ತಿದ್ದೆ.

 

ಅದಾದ ಹಲವು ವರ್ಷಗಳ ಬಳಿಕ ವಿ.ಮನೋಹರ್ ಅವರು `ದುನಿಯಾ~ ಚಿತ್ರದ `ಪ್ರೀತಿ ಮಾಯೆ ಹುಷಾರು..~ ಹಾಡಿನ ಟ್ರ್ಯಾಕ್ ಹಾಡಿಸಿದರು. ಅದು ನಿರ್ದೇಶಕ ಸೂರಿ ಅವರಿಗೆ ಇಷ್ಟವಾಯಿತು. ಅವರು ಅದನ್ನೇ ಅಂತಿಮವಾಗಿ ಬಳಸಿಕೊಂಡರು. ಅಲ್ಲಿಂದ ನನ್ನ ಸಿನಿಮಾ ಸಂಗೀತ ಗಾಯನಕ್ಕೆ ತಿರುವು ಸಿಕ್ಕಿತು.ಅದಾದ ಬಳಿಕ 60 ಸಿನಿಮಾಗಳಿಗೆ ಹಾಡಿದೆ. `ಮೊಗ್ಗಿನ ಮನಸು~ ಚಿತ್ರದ `ಯಾಕಿಂಗಾಡ್ತಾರೋ..~, `ಅಂತೂ ಇಂತೂ ಪ್ರೀತಿ ಬಂತು~ ಚಿತ್ರದ `ಮೊದಲಾ ಸಲ~, `ಕೆಂಪೇಗೌಡ~, ಚಿತ್ರದ `ತರತರ ಹಿಡಿಸಿದೆ..~ ಹೀಗೆ ಸಾಕಷ್ಟು ಹಾಡುಗಳು ಜನಪ್ರಿಯವಾಗಿವೆ.

 

`ದೇವ್ ಸನ್ ಆಫ್ ಮುದ್ದೇಗೌಡ~, `ಆರಕ್ಷಕ~, `ತುಘಲಕ್~, `ಕೃಷ್ಣನ್ ಮ್ಯಾರೇಜ್ ಸ್ಟೋರಿ~, `ಹುಷಾರ್~, `ಕೆಂಚ~ ಮುಂತಾದ ಚಿತ್ರಗಳಲ್ಲಿ ಹಾಡುವ ಅವಕಾಶಗಳು ನನಗೆ ಸಿಕ್ಕಿದವು. ಕೈತುಂಬಾ ಅಲ್ಲದಿದ್ದರೂ ಅವಕಾಶಗಳಲ್ಲಿ ನನಗೆ ಕೊರತೆಯಾಗಿಲ್ಲ. ಇದೀಗ ನಾನು ಹಾಡಿರುವ `ಸೆಂಟ್ರಲ್ ಜೈಲ್~, `ಛತ್ರಪತಿ~, `ಸ್ಟೋರಿ ಕತೆ~ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.ವಿಜಯ ಭಾಸ್ಕರ್, ಹರಿಕೃಷ್ಣ, ರಾಜೇಶ್ ರಾಮನಾಥ್, ಅರ್ಜುನ್ ಜನ್ಯ, ಗುರುಕಿರಣ್, ರಘು ದೀಕ್ಷಿತ್, ಜೆಸ್ಸಿಗಿಫ್ಟ್, ಮನೋಮೂರ್ತಿ, ವಿ ಶ್ರೀಧರ್, ವಿ ಮನೋಹರ್ ಮುಂತಾದ ಸಂಗೀತ ನಿರ್ದೇಶಕರು ಅವಕಾಶ ನೀಡಿದರು. `ರಾಜಧಾನಿ~ ಚಿತ್ರದ `ಟೈಟು ಟೈಟು~ ಹಾಡಿಗೆ ದುಬೈನಲ್ಲಿ ನಡೆದ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್‌ನಲ್ಲಿ ನನಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಬಂತು. ನಾನು ಹಾಡಿರುವ ಹಾಡುಗಳಲ್ಲಿಯೇ ನನಗೆ `ಅಂತೂ ಇಂತೂ ಪ್ರೀತಿ ಬಂತು~ ಚಿತ್ರದ `ಮೊದಲಾ.. ಸಲ~ ಹಾಡು ತುಂಬಾ ಇಷ್ಟ.ಕನ್ನಡದ ಸಂಗೀತ ನಿರ್ದೇಶಕರು ಹೆಚ್ಚಾಗಿ ಪರಭಾಷಾ ಗಾಯಕರಿಂದ ಹಾಡಿಸುತ್ತಾರೆ ಎಂದು ದೂರಲಾಗುತ್ತದೆ. ಹಾಗೆ ದೂರುವ ಮೊದಲು ನಾವು ನಮ್ಮ ಪ್ರಯತ್ನ ಮಾಡುತ್ತಾ ಸಾಗಿದರೆ ಒಂದಲ್ಲಾ ಒಂದು ದಿನ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ನನ್ನದು. ಯಶಸ್ಸು ಎನ್ನುವುದು ಒಂದೇ ದಿನಕ್ಕೆ ದಕ್ಕುವಂಥದಲ್ಲ.

 

ನಿಧಾನವಾಗಿ ಅದು ಒಲಿದು ಬರಲು ಪರಿಶ್ರಮ ಮುಖ್ಯ. ನನಗೆ ಸಿಗುತ್ತಿರುವ ಅವಕಾಶಗಳಿಂದ ನಾನು ಖುಷಿಯಾಗಿದ್ದೇನೆ. ಒಂದರ್ಥದಲ್ಲಿ ನಾನು ಅದೃಷ್ಟವಂತೆ ಎಂದೇ ಹೇಳಬೇಕು. ಇಷ್ಟೊಂದು ಸ್ಪರ್ಧೆ ಇದ್ದರೂ ನನಗೆ ಅವಕಾಶ ಬರುತ್ತಿವೆಯಲ್ಲಾ ಅದಕ್ಕೆ. ನಾನು ಗಾಯಕರಾದ ಕುನಾಲ್ ಗಾಂಜಾವಾಲಾ, ರಾಜೇಶ್ ಕೃಷ್ಣನ್, ಹೇಮಂತ್, ಶಂಕರ್ ಮಹದೇವನ್, ಉದಿತ್ ನಾರಾಯಣ್, ವಿಜಯ್ ಪ್ರಕಾಶ್ ಅವರೊಂದಿಗೆ ಹಾಡಿರುವೆ. ಅದು ನಿಜಕ್ಕೂ ಮರೆಯಲಾರದಂಥ ಅನುಭವ.ಅದು ಯಾರೇ ಆದರೂ ಒಂದು ಕ್ಷೇತ್ರದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಎಲ್ಲರಿಗೂ ಒಂದು ನಿರ್ದಿಷ್ಟ ಅವಧಿ ಇದ್ದೇ ಇರುತ್ತದೆ. ಹೊಸಬರು ಬಂದಾಗ ಹಳಬರು ಹಿಂದೆ ಸರಿಯಲೇ ಬೇಕು. ನಾವೂ ಕೂಡ ಒಂದು ದಿನ ಹಳಬರಾಗಿಯೇ ಆಗುತ್ತೇವೆ. ಸಿನಿಮಾ ಹಿನ್ನೆಲೆ ಗಾಯನದಲ್ಲಿ ಹೆಸರು ಮಾಡಬೇಕೆಂಬ ಮಹದಾಸೆಯೇನೋ ಇದೆ.ಆದರೆ ಸಂಗೀತದಲ್ಲಿ ತೃಪ್ತಿ ಕಂಡುಕೊಂಡಿರುವ ನಾನು ಸಿನಿಮಾ ಹಿನ್ನೆಲೆ ಗಾಯನವನ್ನೇ ನಂಬಿಕೊಂಡಿಲ್ಲ. ದೇವರನಾಮ, ಭಾವಗೀತೆಗಳನ್ನು ಹಾಡುವೆ. ಚಿಕ್ಕಂದಿನಿಂದ ದೇವರನಾಮ, ಭಾವಗೀತೆಗಳನ್ನು ಹಾಡುತ್ತಾ ಬೆಳೆದ ನನಗೆ ಅದು ಕಷ್ಟವಾಗುವುದಿಲ್ಲ. ಭವಿಷ್ಯದಲ್ಲಿ ಅಮ್ಮನ ಸಂಗೀತ ಶಾಲೆಯನ್ನು ಮುಂದುವರಿಸುವಾಸೆ ಇದೆ. ಹಿನ್ನೆಲೆ ಗಾಯಕರ ನನಗೆ ಎಸ್ಪಿ ಅವರ ತಲ್ಲೆನತೆ ತುಂಬಾ ಇಷ್ಟ. ಅವರ ವ್ಯಕ್ತಿತ್ವ ಕೂಡ ಅಷ್ಟೇ ದೊಡ್ಡದು.ಸುವರ್ಣ ವಾಹನಿಯಲ್ಲಿ ಪ್ರಸಾರವಾದ `ಕಾನ್ಪಿಡೆಂಟ್ ಸ್ಟಾರ್ ಸಿಂಗರ್~ ಸ್ಪರ್ಧೆಯಲ್ಲಿ ನಾನು ಅಂತಿಮ ಸುತ್ತಿಗೆ ಪ್ರವೇಶಿಸಿದ್ದೆ. ಅದರಿಂದಲೇ ನಾನು ಮನೆ ಮಾತಾದದ್ದು. ಜನ ಇಂದಿಗೂ ನನ್ನನ್ನು ಆ ಸ್ಪರ್ಧೆಯ ಮೂಲಕವೇ ಗುರುತಿಸುತ್ತಾರೆ. ಅದರ ನಂತರ ಬೆಂಗಳೂರಿನ ಗರುಡ ಮಾಲ್‌ನಲ್ಲಿ ನಡೆಯುವ `ವಾಯ್ಸ ಆಫ್ ಬೆಂಗಳೂರು~ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದೆ. ಅಲ್ಲೂ ಅಂತಿಮ ಸುತ್ತಿಗೆ ಬಂದಿದ್ದೆ. ಆದರೆ ಬಹುಮಾನ ಗೆಲ್ಲಲಿಲ್ಲ. ಆದರೂ ಹಿಂಜರಿಯದೇ ಪ್ರಯತ್ನ ಮುಂದುವರಿಸಿದೆ. ಅವಕಾಶಗಳು ಒದಗಿದವು.ನಾನು ಹಾಡಲು ಕರೆದಾಗ ವಿಶೇಷವಾದಂಥ ಸಿದ್ಧತೆಯನ್ನೇನು ಮಾಡಿಕೊಳ್ಳುವುದಿಲ್ಲ. ಸ್ಟುಡಿಯೋಗೆ ಹೋಗಿ ಸಂಗೀತ ನಿರ್ದೇಶಕರ ಮಾತುಗಳನ್ನು ಆಲಿಸುತ್ತೇನೆ. ಆ ಗ್ರಹಿಕೆಯಿಂದಷ್ಟೇ ಹಾಡಲು ಪ್ರಯತ್ನಿಸುತ್ತೇನೆ.ವಿದೇಶಗಳಲ್ಲಿ ನಡೆಯುವ ಸಿಂಗಿಂಗ್ ಶೋ ಹಾಡಿ ಬಂದಿರುವೆ. ಅವುಗಳಲ್ಲಿ ಗಾಯಕ ಹರಿಹರನ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ನನ್ನ ಪುಣ್ಯ. ಇಷ್ಟು ಹಾಡು ಹಾಡಿದ್ದರೂ ಇಂದಿಗೂ ನಾನು ಟ್ರ್ಯಾಕ್ ಹಾಡುಗಳನ್ನು ಹಾಡುತ್ತಿರುತ್ತೇನೆ. ನನಗೆ ಅದೊಂಥರಾ ಕಲಿಕೆ. ಸಂಗೀತ ನಿರ್ದೇಶಕರಿಗೆ ಕೆಲವು ಹಾಡುಗಳನ್ನು ಇಂಥವರೇ ಹಾಡಬೇಕೆಂಬ ಆಸೆ ಇರುತ್ತದೆ. ಅದರಿಂದ ಆ ಬಗ್ಗೆ ಹೆಚ್ಚು ಚಿಂತಿಸದೇ ನಮ್ಮ ಕೆಲಸವನ್ನಷ್ಟೇ ಮಾಡುತ್ತಾ ಹೋಗುವುದು ನನಗಿಷ್ಟ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry