ಭಾನುವಾರ, ಡಿಸೆಂಬರ್ 8, 2019
19 °C

ಮೊದಲಾ ಸಲದ ನಿರೀಕ್ಷೆ...

Published:
Updated:
ಮೊದಲಾ ಸಲದ ನಿರೀಕ್ಷೆ...

‘ಹೆದ್ದಾರಿ’ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಸಾಕ್ಷಿ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ‘ಹೆದ್ದಾರಿ’ ಚಿತ್ರವನ್ನು ತೇಜಸ್ವಿ ನಿರ್ದೇಶಿಸಿದ್ದು, ಚಿತ್ರದ ನಾಯಕರಾಗಿ ಪೃಥ್ವಿ ಅಭಿನಯಿಸಿದ್ದಾರೆ. ಮೊದಲ ಚಿತ್ರವಾದ್ದರಿಂದ ಈ ಸಿನಿಮಾ ಬಗ್ಗೆ ಆಕೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.‘ಈ ಚಿತ್ರದಲ್ಲಿ ನನ್ನದು ಬಬ್ಲಿ ಹುಡುಗಿಯ ಪಾತ್ರ. ಆ್ಯಕ್ಷನ್‌ ಚಿತ್ರವಾದರೂ ನನ್ನ ಪಾತ್ರಕ್ಕೆ ಪಾ್ರಮುಖ್ಯತೆ ಇದೆ. ಚಿತ್ರದಲ್ಲಿ ನನಗೆಂದೇ ಒಂದು ಸೋಲೊ ಸಾಂಗ್‌ ಇದೆ. ಹಾಗೆಯೇ ಮತ್ತೊಂದು ರೊಮ್ಯಾಂಟಿಕ್‌ ಸಾಂಗ್‌ಗೂ ಹೆಜ್ಜೆ ಹಾಕಿದ್ದೇನೆ. ಅಂದಹಾಗೆ, ಈ ಚಿತ್ರದಲ್ಲಿ ಇಪ್ಪತ್ತೇಳು ನಿಮಿಷ ಹೈಕಂಪ್ಯೂಟರ್‌ ಗ್ರಾಫಿಕ್ಸ್‌ ಬಳಕೆ ಮಾಡಲಾಗಿದೆ. ಇದು ಚಿತ್ರದ ವಿಶೇಷತೆಗಳಲ್ಲೊಂದು. ತುಮಕೂರು– ಬೆಂಗಳೂರು ಹೆದ್ದಾರಿಯಲ್ಲೇ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ’ ಎಂದು ತಮ್ಮ ಮೊದಲ ಚಿತ್ರದ ಬಗ್ಗೆ ಉತ್ಸಾಹದಿಂದ ಹೇಳಿಕೊಳ್ಳುತ್ತಾರೆ ಸಾಕ್ಷಿ.‘ಸಿನಿಮಾ, ಫ್ಯಾಷನ್‌ ಎರಡೂ ಕ್ಷೇತ್ರದಲ್ಲೂ ಸವಾಲುಗಳಿವೆ. ಫಾ್ಯಷನ್‌ ಜತೆಗಿನ ನಂಟು ನನಗೆ ಬಹಳ ಹಿಂದಿನಿಂದಲೂ ಇರುವುದರಿಂದ ಮಾಡೆಲಿಂಗ್‌ ಎನ್ನುವುದು ನನಗೆ ನೀರು ಕುಡಿದಷ್ಟೇ ಸಲೀಸು. ಸಿನಿಮಾಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಪ್ರೇಕ್ಷಕರ ನಿರೀಕ್ಷೆಗಳು ಭಿನ್ನವಾಗಿರುತ್ತವೆ. ನಟಿಯಾದವಳು ನೋಡಲೂ ಚೆಂದವಾಗಿರಬೇಕು, ನಟನೆಯಲ್ಲೂ ಪಳಗಿರಬೇಕು ಇಂಥ ಅನೇಕ ನಿರೀಕ್ಷೆಗಳು ಅವರಲ್ಲಿರುತ್ತವೆ. ಅವರ ನಿರೀಕ್ಷೆಗೆ ಅನುಗುಣವಾಗಿ ನಟಿಸಬೇಕು. ಇದೊಂದು ಸವಾಲಿನ ಕ್ಷೇತ್ರ’ ಎನ್ನುವ ಸಾಕ್ಷಿ, ಫ್ಯಾಷನ್‌ ಹಾಗೂ ಸಿನಿಮಾ ಕ್ಷೇತ್ರಗಳ ನಡುವಿನ ವ್ಯತ್ಯಾಸವನ್ನು ಹೇಳಿಕೊಳ್ಳುತ್ತಾರೆ.ತಮಿಳಿನಲ್ಲಿ ಮೂಡಿಬಂದ ‘ನೋ ಪಾರ್ಕಿಂಗ್‌’ ಎನ್ನುವ ಟೆಲಿಫಿಲ್ಮ್ ಹಾಗೂ ‘ಜಿಲ್ಲಿನು ಒರು ಕಲ್ಲವರಂ’ ಎನ್ನುವ ಆಲ್ಬಂಗೆ ಸಾಕ್ಷಿ ಬಣ್ಣ ಹಚ್ಚಿದ್ದಾರೆ. ಇದರ ಜತೆಗೆ ತಮಿಳು ಚಿತ್ರ ‘ರಾಜ ರಾಣಿ’ ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ಕೂಡ ನಿರ್ವಹಿಸಿದ್ದಾರೆ. ಸದ್ಯಕ್ಕೆ ಒಂದು ಕನ್ನಡ ಚಿತ್ರ ಪೂರೈಸಿರುವ ಸಾಕ್ಷಿಗೆ ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಬರುತ್ತಿವೆಯಂತೆ. ಅವುಗಳಿನ್ನೂ ಮಾತುಕತೆಯ ಹಂತದಲ್ಲಿರುವುದರಿಂದ ಇನ್ನೂ ಯಾವ ಚಿತ್ರವೂ ಓಕೆಯಾಗಿಲ್ಲ. ಎಲ್ಲ ಅಂದುಕೊಂಡಂತೆ ಆದರೆ, ಸಾಕ್ಷಿ ಸದ್ಯದಲ್ಲೇ ಟಾಲಿವುಡ್‌ನ ಚಿತ್ರವೊಂದಕ್ಕೆ ಬಣ್ಣಹಚ್ಚಲಿದ್ದಾರೆ.

ಪ್ರತಿಕ್ರಿಯಿಸಿ (+)