ಮೊದಲು ಓದು

7

ಮೊದಲು ಓದು

Published:
Updated:
ಮೊದಲು ಓದು

`ಕವಿಯ ಮನದೊಳಗೆ ಕಳ್ಳ ಹೆಜ್ಜೆಯ ಕವಿತೆ/ ಆಹಾ ಎಂಥ ಬೆರಗು/ ನನ್ನ ಮನೆ ಅಂಗಳದಿ ನಿನ್ನ ಗೆಜ್ಜೆದನಿ/ ಮೆಲ್ಲನುಲಿಯಬೇಕು, ಕೊಂಚ ನಾಚಬೇಕು~- ಹೀಗೆ ಲಯಬದ್ಧವಾಗಿ ಕವಿತೆ ಕಟ್ಟುವ ರಂಜನಿಪ್ರಭು ಅವರಿಗೆ, ಮೊದಲ ಸಂಕಲನದಲ್ಲಿಯೇ ಪದ್ಯಕ್ಕೆ ಅಗತ್ಯವಾದ ಗೆಜ್ಜೆದನಿಯ ಉಲಿತ ಹಾಗೂ ನಾಚಿಕೆಯ ಅರಿವಿರುವುದು ಗಮನಾರ್ಹ.`ಒಮ್ಮಮ್ಮೆ ಕಿರಿಕಿರಿಯಾಗುವುದುಂಟು/ ಈ ಸಂಸಾರ ನನಗೂ/ ನಾ ಯಾವ ಕದಳೀಬನಕ್ಕೆ/ ಹೊರಡಲೇ?/ ನನ್ನ `ಚೆನ್ನ~ ಮಲ್ಲಿಕಾರ್ಜುನ/ ಇರುವುದು/ ಇಲ್ಲೆ!~ (ಅಕ್ಕನಿಗೆ) ಎಂದು ತರ್ಕಬದ್ಧವಾಗಿ ಬರೆಯುವ ಕವಯತ್ರಿ, `ಬೀಳುವ ತರಗೆಲೆ ಸದ್ದು ಮಾಡದಿರಿ/ ಬುದ್ಧನಿರಬಹುದು ಧ್ಯಾನದಲಿ/ ಕಲ್ಲಿನ ಮೇಲೂ ಮೆಲ್ಲಗೆ ಸುರಿಮಳೆ/ ಅಹಲ್ಯೆಯ ಅಳಲಿದೆ ಮೌನದಲಿ~ (ಕೋರಿಕೆ) ಎಂದು ಆರ್ದ್ರವಾಗಿಯೂ ಬರೆಯಬಲ್ಲರು. ಈ ಆರ್ದ್ರತೆ ಸಂಕಲನದ ಬಹುತೇಕ ಕವಿತೆಗಳಲ್ಲಿ ಭರಣಿಮಳೆಯಂತೆಯೇ ಜಿನುಗಿದೆ.ನಲ್ಲನ ಅಪ್ಪುಗೆಯಲ್ಲಿ, ಅತ್ತೆಯೊಂದಿಗೆ ಅಡುಗೆಮನೆಯಲ್ಲಿ, ಸಂಸಾರದ ದೈನಿಕದ ವಿವರಗಳಲ್ಲಿ ಕಳೆದುಹೋಗುವ ಹೆಣ್ಣುಮಗಳು ಇವರಲ್ಲ. ಹೊಸತೇನನ್ನೋ ಹುಡುಕಾಡುತ್ತ, ಆ ಹೊಸತರ ಹಂಬಲದಲ್ಲಿ ಬದುಕಿನ ಅರ್ಥವಂತಿಕೆಯನ್ನು ಕಾಣುವ ಮನಸು ಅವರದು.

 

ಆ ಹಂಬಲ ಬೆಳಕಿನದೂ ಇರಬಹುದು, ಕವಿತೆಯೂ ಆಗಿರಬಹುದು. ಹೀಗೆ, ಹುಡುಕಾಡುವ ಕವಯತ್ರಿಯೇ, `ಪ್ರೇಯಸಿಯ ಮರುಳು~ ರೀತಿಯ ಕವಿತೆಗಳನ್ನೂ ಬರೆಯುವರು. ಅಂಥ ಸಂದರ್ಭದಲ್ಲಿ ದೇಹದಲ್ಲಿನ ರಕ್ತ ಅವರಿಗೆ ಜೇನಿನಂತೆ ಕಾಣುವುದು!

ರಂಜನಿಪ್ರಭುಕವಿತೆಗಳ ಶಕ್ತಿ ಇರುವುದು ಅವುಗಳಿಗೆ ಸಹಜವಾಗಿ ದಕ್ಕಿರುವ ಲಯದಲ್ಲಿ.

 

ಆದರೆ ಕವಿತೆ ಬರೆಯುವಾಗ ಹಾಡುವ ಉದ್ದೇಶವೂ ಕವಿಯ ಮನಸಿನೊಳಗಿದ್ದರೆ ಕವಿತೆ ಹಿಂದಾಗುತ್ತದೆ. ಈ ಹಿನ್ನಡೆ `ಭರಣಿಮಳೆ~ಯ ಕೆಲವು ಕವಿತೆಗಳಲ್ಲೂ ಇದೆ. ಈ ಗೊಂದಲದಿಂದ `ಭರಣಿಮಳೆ~ಯ ಕವಯತ್ರಿ ಪಾರಾದಲ್ಲಿ, ಅವರ ಕವಿತೆಯೂ ಹದಗೊಂಡೀತು.ಭರಣಿ ಮಳೆ

ಲೇ: ರಂಜನಿಪ್ರಭು

ಪು: 69; ಬೆ: ರೂ. 50; ಪ್ರ: ಸುಂದರ ಪ್ರಕಾಶನ, `ಚಿತ್ರಶ್ರೀ~, 43, ಕಲಾಮಂದರಿ, 5ನೇ ತಿರುವು, ಅ ನ ಸು ರಸ್ತೆ, ಹನುಮಂತನಗರ, ಬೆಂಗಳೂರು- 560 019.----ನಾಕು ಬೀದಿನಾಟಕಗಳು

 
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಬಸವರಾಜ ಸಬರದ ಅವರಿಗೆ ನಾಟಕ ಪ್ರಕಾರದಲ್ಲಿ ವಿಶೇಷ ಆಸಕ್ತಿ, ಅದರಲ್ಲೂ ಬೀದಿ ನಾಟಕಗಳ ಬಗೆಗೆ. ಈ ಮೊದಲು ಮೂರು ನಾಟಕಗಳ ಸಂಕಲವೊಂದನ್ನು ಪ್ರಕಟಿಸಿದ್ದ ಅವರು, ಇದೀಗ ನಾಲ್ಕು ನಾಟಕಗಳನ್ನು ಒಗ್ಗೂಡಿಸಿ ಪುಸ್ತಕ ಹೊರತಂದಿದ್ದಾರೆ.`ಹುಲಿಗೆಮ್ಮ~, `ಎಲೆಮರೆಯ ಹೂಗಳು~, `ಹನುಮ ನಾಯಕ~ ಹಾಗೂ `ಸಾಲದ ಹೆಣ~ ಸಂಕಲನದಲ್ಲಿನ ನಾಟಕಗಳು. ಸಮಾಜದ ಅನಾರೋಗ್ಯವೇ ಈ ಎಲ್ಲ ನಾಟಕಗಳ ವಸ್ತುಗಳಾಗಿದ್ದು, ಸಂವೇದನಾಶೀಲ ಕ್ರಿಯಾಶೀಲ ವ್ಯಕ್ತಿಯೊಬ್ಬರ ಪ್ರತಿಭಟನೆ ಈ ಕೃತಿಗಳಲ್ಲಿ ಒಡಮೂಡಿದೆ. ಸಬರದ ಅವರ ಭಾಷೆ ಸರಳವಾಗಿದ್ದು, ನೋಡುಗರೊಂದಿಗೆ ಸಂವಹನ ಸಾಧಿಸಲು ಅನುಕೂಲವಾಗುವಂತಿದೆ.ನಾಟಕಗಳ ಜೊತೆಗೆ ಎರಡು ಅನುಬಂಧಗಳನ್ನು ನೀಡಲಾಗಿದ್ದು, ಅವುಗಳಲ್ಲಿ ಸಬರದ ಅವರ ನಾಟಕ ಕೃತಿಗಳನ್ನು ಕುರಿತು ವ್ಯಕ್ತವಾಗಿರುವ ಸಹೃದಯರ ಅನಿಸಿಕೆಗಳು ಹಾಗೂ ಅವರ ಪ್ರಕಟಿತ ಕೃತಿಗಳ ವಿವರಗಳಿವೆ.ನಾಕು ಬೀದಿನಾಟಕಗಳು

ಲೇ: ಡಾ. ಬಸವರಾಜ ಸಬರದ

ಪು: 84; ಬೆ: ರೂ. 50; ಪ್ರ: ಪಲ್ಲವಿ ಪ್ರಕಾಶನ, ವಿಶ್ವವಿದ್ಯಾಲಯ ಅಂಚೆ, ಗುಲ್ಬರ್ಗ- 585 106.----ಕಾರ್ಡಿದ್ರೆ ಕೈಲಾಸ

 
`ಪ್ರಜಾವಾಣಿ~ಯಲ್ಲಿ ಪ್ರಕಟವಾದ `ಡುಂಡಿಮ~ ಅಂಕಣಬರಹಗಳನ್ನು `ಕಾರ್ಡಿದ್ರೆ ಕೈಲಾಸ~ ಶೀರ್ಷಿಕೆಯಲ್ಲಿ ಎಚ್.ಡುಂಡಿರಾಜ್ ಒಟ್ಟು ಮಾಡಿದ್ದಾರೆ. ನಗೆಪುಟಗಳ ಸಂಪುಟ ಎಂದು ತಮ್ಮ ಬರಹಗಳನ್ನು ಅವರು ಕರೆದುಕೊಂಡಿದ್ದಾರೆ.

ಸಮಕಾಲೀನ ಸಂದರ್ಭಕ್ಕೆ ಪ್ರತಿಕ್ರಿಯೆಯಂತಿದ್ದ `ಡುಂಡಿಮ~ದ ಬರಹಗಳು ಈಗಲೂ- ಪುಸ್ತಕ ರೂಪದಲ್ಲೂ- ತಮ್ಮ ಓದಿಸಿಕೊಳ್ಳುವ ಗುಣ ಕಳೆದುಕೊಂಡಿಲ್ಲ. ಒಂದು ನಗೆಯ ಮಿಂಚು, ಭಾಷಾ ಬಳಕೆಯ ಹೊಸ ಸಾಧ್ಯತೆಯೊಂದರ ಹೊಳಹು ಅಲ್ಲಲ್ಲಿ ಕಾಣಿಸಿಕೊಳ್ಳುವುದರಿಂದ `ಕಾರ್ಡಿದ್ರೆ ಕೈಲಾಸ~ ಓದುಗರಿಗೆ ರುಚಿಸುತ್ತದೆ.ಇಲ್ಲಿನ ಬಹುತೇಕ ಬರಹಗಳ ಬಾಲಂಗೋಚಿಯಂತಿರುವ ಚುಟುಕುಗಳು ಬರಹದ ಸ್ವಾರಸ್ಯವನ್ನು ಹೆಚ್ಚಿಸಿವೆ. ಕೆಲವೊಮ್ಮೆ ಇವು ಬರಹದಿಂದ ಪ್ರತ್ಯೇಕವಾಗಿ ಸ್ವತಂತ್ರ ಅಸ್ತಿತ್ವವನ್ನೇ ಪಡೆದಿವೆ.

`ಉಗ್ರವಾದಿಯ ನಿರ್ಗಮನ~ ಎನ್ನುವ ಬರಹದೊಂದಿಗಿನ `ಪ್ರಶಸ್ತಿ~ ಎನ್ನುವ ಚುಟುಕ ಹೀಗಿದೆ- `ಅರ್ಹರನ್ನು ಪ್ರಶಸ್ತಿ ಗೌರವ/ ಹುಡುಕಿಕೊಂಡು ಬರುತ್ತದೆ/ ಅವರು ಇರುವಲ್ಲಿಗೆ./ ಕೇಂದ್ರ ಸಾಹಿತ್ಯ ಅಕಾಡೆಮಿ/ ಪ್ರಶಸ್ತಿ ಒಲಿದು ಬಂದಿದೆ/ `ಇರುವಂತಿಗೆ~ ಎಂಬ ಮನೆಯಲ್ಲಿ/ ಇರುವಂತಹ/ ಯಾವುದಕ್ಕೂ ದೇಹಿ ದೇಹಿ ಅನ್ನದ/ ವೇದೇಹಿಗೆ!~. ಈ ಚುಟುಕ ವೈದೇಹಿ ಅವರಿಗೆ ಪ್ರಶಸ್ತಿ ಬಂದ ಸಂಭ್ರಮವನ್ನು ಹಿಡಿಯುವುದರೊಂದಿಗೆ ಅವರ ವ್ಯಕ್ತಿತ್ವವನ್ನೂ ಹಾಗೂ ಪ್ರಶಸ್ತಿ ರಾಜಕಾರಣವನ್ನೂ ಧ್ವನಿಸುತ್ತದೆ. ಹೀಗೆ ಪುಟ್ಟ ದೇಹದಲ್ಲಿನ ಬೇರೆ ಬೇರೆ ಆಯಾಮಗಳಿಂದಾಗಿ ಡುಂಡಿ ಅವರ ಕವಿತೆಗಳು ಇಷ್ಟವಾಗುತ್ತದೆ.ಸಮಕಾಲೀನ ರಾಜಕಾರಣ, ಸಮಾಜದ ಅಪಸವ್ಯಗಳು, ಸಾಂಸ್ಕೃತಿಕ ರಾಜಕಾರಣ- ಯಾವುದೂ ಡುಂಡಿ ಅವರಿಗೆ ವರ್ಜ್ಯವಾಗಿಲ್ಲ. ಆದರೆ ಅವರ ಬರವಣಿಗೆಯ ಹಿಂದೆ ಯಾವುದೇ ಕಹಿಯ ಸೋಂಕಿಲ್ಲ. ಆ ಕಾರಣದಿಂದಲೇ ಅವರ ಬರಹಗಳಿಗೊಂದು ನೈತಿಕ ಪ್ರಭೆ ಒದಗಿದೆ.ಕಾರ್ಡಿದ್ರೆ ಕೈಲಾಸ


ಲೇ: ಎಚ್.ಡುಂಡಿರಾಜ್

ಪು: 160; ಬೆ: ರೂ. 120; ಪ್ರ: ಅಂಕಿತ ಪುಸ್ತಕ, 53, ಶಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-04.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry