ಮಂಗಳವಾರ, ಮೇ 11, 2021
20 °C

`ಮೊದಲು ಪತಿ ಮನೆಗೆ ಬರಲಿ...'

ನಾಗೇಶ ಶೆಣೈ ಪಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: `ಮೊದಲು ಪತಿ ಮನೆಗೆ ಬರಲಿ. ಆ ಮೇಲೆ ಪೂಜಾ ಕರ್ತವ್ಯಕ್ಕೆ ಮರಳಿ ಹೋಗುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ....'

-ಇದು ಪ್ರಸಿದ್ಧ ಕೇದಾರನಾಥ ದೇವಸ್ಥಾನದ ಪ್ರಧಾನ ಅರ್ಚಕ ವಾಗೀಶ ಲಿಂಗಾಚಾರ್ಯ ಅವರ ಪತ್ನಿ ಶಿಲ್ಪಾ ಅವರ ಆತಂಕದ ಮಾತು. ಯುಗಾದಿಗೆ ಸ್ವಲ್ಪ ದಿನ ಮೊದಲು ಇಬ್ಬರು ಪುಟ್ಟ ಮಕ್ಕಳೊಂದಿಗೆ ಅವರು ಕೇದಾರನಾಥದಿಂದ ಪತಿಯ ಊರಾದ ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮಕ್ಕೆ ಬಂದಿದ್ದು, ಸೋಮವಾರ `ಪ್ರಜಾವಾಣಿ' ಜತೆ ಮಾತನಾಡಿದರು.`ಪತಿಯು 10 ವರ್ಷಗಳಿಂದ ಕೇದಾರನಾಥದಲ್ಲಿ ಅರ್ಚಕರಾಗಿದ್ದಾರೆ. ಕೇದಾರನಾಥ ಮಂದಿರಕ್ಕೆ ಐವರು ಅರ್ಚಕರಿದ್ದು, ಪ್ರತಿ ವರ್ಷ ಪರ್ಯಾಯವಾಗಿ ಪೂಜಾ ಕೈಂಕರ್ಯದ ಅಧಿಕಾರ ಬದಲಾಗುತ್ತದೆ. ಸರದಿಯ ಪ್ರಕಾರ ಈ ವರ್ಷ ನನ್ನ ಪತಿ ಮುಖ್ಯ ಅರ್ಚಕರಾಗಿದ್ದರು.

ದೇವಸ್ಥಾನದ ಪೂಜೆಯ ಅಧಿಕಾರದ ಜತೆ ಉತ್ಸವ ಮೂರ್ತಿ, ಜತೆಗೆ ಕೋಟಿಗಟ್ಟಲೆ ಮೌಲ್ಯದ ದೇವರ ಆಭರಣಗಳನ್ನು ರಕ್ಷಿಸುವ ಹೊಣೆ ಅವರದಾಗಿರುತ್ತದೆ.ವರ್ಷದ ಆರು ತಿಂಗಳು (ಅಕ್ಷಯ ತೃತೀಯದಿಂದ ದೀಪಾವಳಿಯವರೆಗೆ) ಮಾತ್ರ ಇಲ್ಲಿ ಪೂಜೆ ನಡೆಯುತ್ತದೆ. ಚಳಿಗಾಲದ ಅವಧಿಯಲ್ಲಿ ದೇವಸ್ಥಾನ ಮುಚ್ಚಿರುತ್ತದೆ. ಈ ಅವಧಿಯಲ್ಲಿ ಉತ್ಸವ ಮೂರ್ತಿಯನ್ನು 55 ಕಿ.ಮೀ. ದೂರದ, ರುದ್ರಪ್ರಯಾಗ ಜಿಲ್ಲೆಯ ಉಕ್ಕಿಮಠದಲ್ಲಿ ತಂದಿಡಲಾಗುತ್ತದೆ' ಎನ್ನುತ್ತಾರೆ ಶಿಲ್ಪಾ.ಹಿರೇಕೆರೂರು ತಾಲ್ಲೂಕು ಹಳ್ಳಿಯಾಳ ಮೂಲದ ಶಿಲ್ಪಾ ಐದು ವರ್ಷಗಳ ಹಿಂದೆ ವಾಗೀಶ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಯ ಹಿರಿಯ ಮಗ ಕೇದಾರನಾಥನಿಗೆ ನಾಲ್ಕು ವರ್ಷ. ಮಗಳು ಸಂಜನಾಗೆ ಎರಡು ವರ್ಷ.ವಾಗೀಶ್ ಲಿಂಗಾಚಾರ್ಯ ಅವರ ಸಹೋದರ ಗುರುನಂಜಯ್ಯ ಬಾನವಳ್ಳಿಯಲ್ಲಿ ಕೃಷಿ ಕಾರ್ಯ ನಡೆಸುತ್ತಿದ್ದಾರೆ. ಈ ಕುಟುಂಬಕ್ಕೆ ಸುಮಾರು ನಾಲ್ಕು ಎಕರೆ ಕೃಷಿ ಭೂಮಿ ಇದೆ. ಶಿಲ್ಪಾ ಅತ್ತೆ, ಮಾವ ಅವರ ಜತೆ ಇದೇ ಮನೆಯಲ್ಲಿದ್ದಾರೆ.`ನಾನೂ, ಮಕ್ಕಳೂ ಅಲ್ಲಿನ ಹವೆಗೆ ಹೊಂದಿಕೊಂಡಿದ್ದೆವು. ವರ್ಷಕ್ಕೆ ಒಮ್ಮೆ ಬಿಡುವು ಮಾಡಿಕೊಂಡು ಊರಿಗೆ ಬರುತ್ತಿದ್ದೆವು.  ಯುಗಾದಿಗೆ ನಮ್ಮನ್ನು ಬಿಟ್ಟು ಅವರು ಮತ್ತೆ ಕೇದಾರನಾಥಕ್ಕೆ ಹಿಂತಿರುಗಿದ್ದರು' ಎನ್ನುತ್ತಾರೆ ಅವರು.ಕುಡಿಯುವ ನೀರೂ ಇರಲಿಲ್ಲ...: `ಪ್ರವಾಹದ ಸಮಯದಲ್ಲಿ ಪತಿ ದೇವರ ಜಪ ಮಾಡುತ್ತ ಒಂದೂವರೆ ದಿನ ದೇಗುಲದಲ್ಲಿ, ನಂತರ  ಎರಡು ದಿನ ಸಮೀಪದ ಗುಡ್ಡದಲ್ಲಿ ಕಳೆದಿದ್ದರು. ನಾಲ್ಕು ದಿನ ಕುಡಿಯುವ ನೀರೂ ಸಹ ಲಭ್ಯವಿರಲ್ಲಿಲ್ಲ. ಕೇದಾರನಾಥಕ್ಕೆ ಬಂದ ಹೆಲಿಕಾಪ್ಟರ್‌ನಲ್ಲಿ ಹೋಗಲು ಸಜ್ಜಾದಾಗ ಅವರನ್ನು ಗುರುತಿಸಿದ ಸೇನಾ ಸಿಬ್ಬಂದಿ ನೀರು ಕೊಟ್ಟು ಉಪಚರಿಸಿದರು' ಎಂದು ಪತಿ ಹೇಳಿದ್ದನ್ನು ಶಿಲ್ಪಾ ನೆನಪಿಸಿಕೊಳ್ಳುತ್ತಾರೆ.ಪ್ರವಾಹಕ್ಕೆ ದೇವರ ತ್ರಿಶೂಲ ಮುರಿದಿದೆ. ಬೆಳ್ಳಿ ಆರತಿಗಳು ಕೊಚ್ಚಿಕೊಂಡು ಹೋಗಿವೆ. ಅರ್ಚಕರ ಕೊಠಡಿಯೊಳಗೆ ಕೆಸರು ಮಣ್ಣು ತುಂಬಿದೆ. ಪ್ರವಾಹದ ದಿನ ಅವರ ಭುಜದವರೆಗೆ ನೀರು ಬಂದಿತ್ತು. ಅವರ ಎದುರೇ ದೇಗುಲದಲ್ಲಿ ಐದಾರು ಮಂದಿ ಹೆಣವಾಗಿದ್ದರು. ದೇಗುಲದ ಎದುರೂ ಕೆಲವು ಶವಗಳು ತೇಲುತ್ತಿದ್ದವು' ಎಂದು ಪತಿ ಕಣ್ಣಾರೆ ಸಾಕ್ಷಿಯಾಗಿದ್ದ ಅನುಭವವನ್ನು ಪತ್ನಿ ಹಂಚಿಕೊಂಡರು.ಸಮಿತಿ ನಿರ್ಧಾರ: ಸುಮಾರು ಎರಡು ದಿನ ಗುಪ್ತಕಾಶಿಯ ವಿಶ್ವೇಶ್ವರ ದೇವಸ್ಥಾನದಲ್ಲಿ ಕಳೆದ ವಾಗೀಶ್, ಭಾನುವಾರ ಮತ್ತೆ ಉಕ್ಕಿ ಮಠಕ್ಕೆ ಬಂದಿದ್ದಾರೆ. ದೇವಸ್ಥಾನವನ್ನು ಕೆಲವು ವರ್ಷ ಮುಚ್ಚುವ ಕಾರಣ ಮುಂದೇನು ಎಂಬುದನ್ನು ದೇವಸ್ಥಾನದ ಸಮಿತಿ ನಿರ್ಧರಿಸಲಿದೆ. ನಂತರ ಪತಿ ಊರಿಗೆ ಬರುವ ನಿರೀಕ್ಷೆಯಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.