ಸೋಮವಾರ, ಅಕ್ಟೋಬರ್ 21, 2019
25 °C

ಮೊದಲು ಸಾಮಾನ್ಯ ಸಭೆ ನಂತರ ಪರಿಶೀಲನೆ

Published:
Updated:

ರಾಮನಗರ: ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆ ನಡೆಸಲು ದಿನಾಂಕ ನಿಗದಿ ಮಾಡದ ಹೊರತು ಜಿ.ಪಂನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲು ಬಿಡುವುದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ್ ಪಟ್ಟುಹಿಡಿದ ಘಟನೆ ಗುರುವಾರ ನಡೆಯಿತು.ಕಾಂಗ್ರೆಸ್ ಬೆಂಬಲದಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿರುವ ಜೆಡಿಎಸ್‌ನ ಯು.ಪಿ.ನಾಗೇಶ್ವರಿ ಅವರ ಅಧ್ಯಕ್ಷತೆಯಲ್ಲಿ ಜಿ.ಪಂನ ನೂತನ ಕಟ್ಟಡದಲ್ಲಿ ಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಏರ್ಪಾಡಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಧನಂಜಯ್ ಮತ್ತು ಚಂದ್ರಣ್ಣ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.ನಾಲ್ಕು ತಿಂಗಳಿಂದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆದಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಯೋಜನೆಗಳು, ಕಾಮಗಾರಿಗಳು, ಪ್ರಸ್ತಾವಗಳಿಗೆ ಅನುಮೋದನೆ ದೊರೆತಿಲ್ಲ. ಆದರೂ ಅಧ್ಯಕ್ಷರು ಸಾಮಾನ್ಯ ಸಭೆ ಕರೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ದೂರಿದರು.

ಆಗ ಪ್ರತಿಕ್ರಿಯಿಸಿದ ಉಪಾಧ್ಯಕ್ಷೆ ಮಾದೇವಿ, `ನಾನು ಪ್ರಭಾರ ಅಧ್ಯಕ್ಷೆಯಾಗಿದ್ದಾಗ ಸಭೆ ಕರೆಯಲಾಗಿತ್ತು. ಆದರೆ ಜೆಡಿಎಸ್‌ನ ಬಹುತೇಕ ಸದಸ್ಯರು ಗೈರು ಹಾಜರಾದರು. ಇದರಿಂದ ಕೊರಂ ಕೊರತೆ ಎದುರಾಗಿ ಸಭೆಯೇ ರದ್ದಾಗಿತ್ತು.ತುರ್ತು ಅಗತ್ಯ ಕಾರ್ಯಗಳಿದ್ದಿದ್ದರೆ ಆ ಸಭೆಗೆ ಎಲ್ಲ ಸದಸ್ಯರು ಬಂದು ಅನುಮೋದನೆ ಮತ್ತು ಅಂಗೀಕಾರ ಪಡೆಯಬಹುದಿತ್ತು. ಆದರೆ ನೀವೆಲ್ಲ ಏಕೆ ಬರಲಿಲ್ಲ~ ಎಂದು ಪ್ರಶ್ನಿಸಿದರು. ಜಿ.ಪಂ ಅಧ್ಯಕ್ಷೆ ಯು.ಪಿ.ನಾಗೇಶ್ವರಿ ಮಾತನಾಡಿ, `ನಾನು ಅಧ್ಯಕ್ಷರಾಗಿ ಒಂದು ತಿಂಗಳ ಮೇಲೆ ಕೆಲವೇ ದಿನಗಳು ಆಗಿರುವುದು. ಆದರೆ ಸಾಮಾನ್ಯ ಸಭೆಗೆ ಇಷ್ಟು ಒತ್ತಡ ಏಕೆ ಹೇರುತ್ತಿದ್ದೀರಾ~ ಎಂದು ಕೇಳಿದರು.ಆಗ ಪ್ರತಿಕ್ರಿಯಿಸಿದ ಧನಂಜಯ್ ಅವರು, `ಜಿ.ಪಂ ನೂತನ ಅಧ್ಯಕ್ಷರಾಗಿ ಆಯ್ಕೆ ಆದ 5 ದಿನದೊಳಗೆ ಸಾಮಾನ್ಯ ಸಭೆ ಕರೆಯಬೇಕು. ಆದರೆ ಒಂದು ತಿಂಗಳಾದರೂ ನೀವು ಇನ್ನೂ ಸಭೆ ಕರೆಯುತ್ತಿಲ್ಲ. ಇದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿವೆ. ಅದಕ್ಕೆ ವೇಗ ದೊರೆಯಲಿ ಎಂಬ ಉದ್ದೇಶದಿಂದ ಕೇಳುತ್ತಿರುವೆ~ ಎಂದರು. ಕೆಲಕಾಲ ಸಭೆಯಲ್ಲಿ ಮೌನ ಆವರಿಸಿತು.ನಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚರ್ಚೆ ನಡೆಸಿ ಇದೇ 23ರಂದು ಸಾಮಾನ್ಯ ಸಭೆ ನಡೆಸುವುದಾಗಿ ಭರವಸೆ ನೀಡಿದರು. ಆಗ ಪ್ರಗತಿ ಪರಿಶೀಲನಾ ಸಭೆ ನಡೆಯಲು ಸ್ಥಾಯಿ ಸಮಿತಿ ಅಧ್ಯಕ್ಷರು ಅನುವು ಮಾಡಿಕೊಟ್ಟರು.ಸಬ್ಸಿಡಿ ಅವ್ಯವಹಾರ-ತನಿಖೆಗೆ ಆಗ್ರಹ: ಕೈಮಗ್ಗ ಸ್ಥಾಪನೆಗೆ ಸಬ್ಸಿಡಿ ನೀಡುವ ವಿಚಾರದಲ್ಲಿ ಸಾಕಷ್ಟು ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿದೆ. ಹೊಸದಾಗಿ ಸ್ಥಾಪಿಸಲಾಗುವ ಕೈಮಗ್ಗ ಘಟಕಕ್ಕೆ ಸಬ್ಸಿಡಿ ನೀಡಬೇಕು ಎಂಬುದು ಸರ್ಕಾರಿ ನಿಯಮ. ಆದರೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಒಂದೇ ಕುಟುಂಬದವರಿಗೆ, ಒಬ್ಬರಿಗೆ ಕೈಮಗ್ಗ ಘಟಕ ಸ್ಥಾಪನೆಗೆ ಕೆಲವು ಬಾರಿ ಸಬ್ಸಿಡಿ ಸೌಲಭ್ಯ ನೀಡಿದೆ ಎಂದು ಧನಂಜಯ್ ದೂರಿದರು. ಈ ಕುರಿತು ನುರಿತ ಅಧಿಕಾರಿಗಳ ತಂಡ ರಚಿಸಿ, ಸಮಗ್ರ ತನಿಖೆ ನಡೆಸಬೇಕು. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದವತಿಯಿಂದ ಇತ್ತೀಚೆಗೆ ಫಲಾನುಭವಿಗಳಿಗೆ ವಿವಿಧ ಸಲಕರಣೆಗಳನ್ನು ಒದಗಿಸಲಾಗಿದೆ. ಈ ಸಲಕರಣೆಗಳ ವಿತರಣೆ ಕಾರ್ಯಕ್ರಮಕ್ಕೆ ಸೌಜನ್ಯಕ್ಕಾದರೂ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಆಹ್ವಾನಿಸಿಲ್ಲ. ಸ್ಥಳೀಯ ಜನ ಪ್ರತಿನಿಧಿಗಳನ್ನು ಮರೆತು ನಿಗಮದ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ದೂರಿದರು. ನಿಗಮದವರಿಗೆ ವಿವಿದ ಯೋಜನೆಗಳ ಅನುಮೋದನೆಗೆ, ಅಂಗೀಕಾರಕ್ಕೆ, ಹಣಕಾಸು ಬಿಡುಗಡೆಗೆ, ಕ್ರಿಯಾ ಯೋಜನೆ ಒಪ್ಪಿಗೆಗೆ ಜಿಲ್ಲಾ ಪಂಚಾಯಿತಿ ಬೇಕು. ಆದರೆ ಸವಲತ್ತು ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳನ್ನು, ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಆಹ್ವಾನಿಸುವ ಸೌಜನ್ಯ ಇಲ್ಲವಾಗಿದೆ ಎಂದು ಅವರು ಆರೋಪಿಸಿದರು. ನಿಗಮದ ಜಿಲ್ಲಾ ಮಟ್ಟದ ಅಧಿಕಾರಿಯನ್ನು ಮುಂದಿನ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೆ ಆಹ್ವಾನಿಸುವಂತೆ ಅವರು ಇದೇ ಸಂದರ್ಭದಲ್ಲಿ ಸೂಚಿಸಿದರು ಎಂದು ತಿಳಿದು ಬಂದಿದೆ.ಜಿ.ಪಂ ಸಿಇಒ ಕೆ.ಎಸ್.ವೆಂಕಟೇಶಪ್ಪ, ಉಪ ಕಾರ್ಯದರ್ಶಿ ಸಿದ್ದರಾಮಯ್ಯ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)