ಮೊದಲ ಓದು

7

ಮೊದಲ ಓದು

Published:
Updated:

ರೈತನಾಗುವ ಹಾದಿಯಲ್ಲಿ

ಎಸ್.ಎಂ.ಪೆಜತ್ತಾಯ; ಪು:144; ಬೆ: ರೂ.100; ಪ್ರ: ದೇಸಿ ಪುಸ್ತಕ, ನಂ.121, 13ನೇ ಮೇನ್, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು‘ಕಾಗದದ ದೋಣಿ’ ಅನುಭವ ಕಥನದ ಮೂಲಕ ಕನ್ನಡದ ಓದುಗರಿಗೆ ಪರಿಚಿತರಾದ ಎಸ್.ಎಂ.ಪೆಜತ್ತಾಯ ಮೂಲತಃ ಕೃಷಿಕರು. ಸಾಹಿತ್ಯದ ಬಗ್ಗೆ ಪ್ರೀತಿಯುಳ್ಳ, ಕನ್ನಡದ ಬಗ್ಗೆ ಪ್ರೀತಿಯುಳ್ಳ ಪೆಜತ್ತಾಯರು ತಮ್ಮ ಅನುಭವ ಮುಂದಿನ ಪೀಳಿಗೆಗೆ ದಾಟಬೇಕು ಎನ್ನುವ ಆಶಯದಿಂದಲೇ ಬರವಣಿಗೆ ಪ್ರಾರಂಭಿಸಿದ ಹಿರಿಯರು. ಮಂಜುಗಣ್ಣಿನಲ್ಲಿ ಅನುಭವಗಳನ್ನು ಅಕ್ಷರಗಳನ್ನಾಗಿಸುವ ಅವರ ಬರವಣಿಗೆಗೆ ಓದುಗನನ್ನು ಆರ್ದ್ರಗೊಳಿಸುವ ಶಕ್ತಿಯಿದೆ. ಕೃಷಿ ಹಿನ್ನೆಲೆಯ ಅವರ ಮಾನವೀಯ ಅನುಭವಗಳು ಈ ನೆಲದ ಸೊಗಡನ್ನು ಕಟ್ಟಿಕೊಡುವಂತಿವೆ. ಪ್ರಸ್ತುತ ‘ರೈತನಾಗುವ ಹಾದಿಯಲ್ಲಿ’ ಕೃತಿ ಲೇಖಕರ ಒಕ್ಕಲುತನದ ಆರಂಭದ ದಿನಗಳ ಕಥನ. ಇಲ್ಲಿನ ಇಪ್ಪತ್ತಮೂರು ಲೇಖನಗಳು ಕೃಷಿ ಬದುಕಿನ ಜೊತೆಗೆ ಗ್ರಾಮೀಣ ಜೀವನದ ಅನನ್ಯ ಅನುಭವಗಳನ್ನೂ ದಾಖಲಿಸಿವೆ.‘ಕನಸಿನಿಂದ ಎಬ್ಬಿಸಿ ಕೇಳಿದರೂ ತಾನೊಬ್ಬ ರೈತ ಎಂದೇ ಹೇಳುವ ಪೆಜತ್ತಾಯರು ಒಂದು ದುರ್ಬಲ ಗಳಿಗೆಯಲ್ಲೂ ತಾನೊಬ್ಬ ಬರಹಗಾರ ಎಂದು ಅಂದುಕೊಂಡವರಲ್ಲ. ನೀವು ಭೂತಕನ್ನಡಿ ಹಿಡಿದು ಹುಡುಕಿ ನೋಡಿದರೂ ಅವರ ಬರಹದಲ್ಲಿ ಪ್ರತಿಮೆಗಳಾಗಲೀ, ರೂಪಕಗಳಾಗಲೀ, ಸಾಹಿತ್ಯದ ಗುದ್ದಲಿ ಪಿಕಾಸಿ ಸಲಾಕೆಗಳಾಗಲೀ ತೋರುವುದಿಲ್ಲ. ಇದು ಅವರ ಬರಹದ ಶಕ್ತಿ’ ಎಂದು ಕಥೆಗಾರ ಅಬ್ದುಲ್ ರಶೀದರು ಮುನ್ನುಡಿಯಲ್ಲಿ ಗುರ್ತಿಸಿರುವುದು ಸರಿಯಾಗಿಯೇ ಇದೆ.

 

ಚತುರಾಚಾರ್ಯ ಚಾರಿತ್ರ: ಒಂದು ಅಧ್ಯಯನ

ಡಾ.ಎ.ಸಿ.ವಾಲಿ; ಪು:351;ಬೆ:ರೂ.175  ಪ್ರ: ಕಿರಣ-ದರ್ಶನ ಪ್ರಕಾಶನ, ಭಂಡಿವಾಡ, ಹುಬ್ಬಳ್ಳಿ

ವೀರಶೈವ ಪರಂಪರೆಯಲ್ಲಿ ಪಂಚಾಚಾರ್ಯರ ಪ್ರಸ್ತಾಪ ಬರುತ್ತದೆ. ಚತುರಾಚಾರ್ಯರು ಅಷ್ಟೇನೂ ಸುಪರಿಚಿತರಲ್ಲ. ಈ ಚತುರಾಚಾರ್ಯರ ಬಗ್ಗೆ ಅನೇಕ ಊಹೆಗಳೂ ಪ್ರಶ್ನೆಗಳೂ ಇವೆ. ಇಂಥ ಗೊಂದಲಗಳನ್ನು ಎದುರುಹಾಕಿಕೊಂಡಿರುವ ಎ.ಸಿ.ವಾಲಿ ಅವರು ‘ಚತುರಾಚಾರ್ಯರ ಚರಿತ್ರೆ’ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಇದಕ್ಕಾಗಿ ಶಾಸನ, ಶಿಲ್ಪ, ಜಾನಪದ ಸಾಹಿತ್ಯದ ಉಲ್ಲೇಖಗಳನ್ನು ಅವರು ಬಳಸಿಕೊಂಡಿದ್ದು, ಇದವರ ಪ್ರೌಢ ಪ್ರಬಂಧ ರಚನೆಗಾಗಿ ಕೈಗೊಂಡಿರುವ ಅಧ್ಯಯನವಾಗಿದೆ.ಹನ್ನೆರಡನೇ ಶತಮಾನದ ಶರಣರಿಗಿಂತ ಹಿಂದಿನವರಾದ ಚತುರಾಚಾರ್ಯರು ಪಂಚಾಚಾರ್ಯರಿಗಿಂತ ಭಿನ್ನವಾಗಿದ್ದರೂ, ಅದೇ ಪರಂಪರೆಗೆ ಸಲ್ಲುತ್ತಾರೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ದೃಷ್ಟಿಕೋನಗಳ ಮೂಲಕ ಈ ಆಚಾರ್ಯ ಪರಂಪರೆಗೆ ಸಂಬಂಧಿಸಿದ ಇತಿಹಾಸವೊಂದನ್ನು ಕಟ್ಟುಕೊಡುವ ಪ್ರಯತ್ನ ಕೃತಿಕಾರರದು. ಏಳು ಅಧ್ಯಾಯಗಳಲ್ಲಿ ಹರಡಿರುವ ಅಧ್ಯಯನದ ವಿಸ್ತಾರ ಹೊಸ ಚರ್ಚೆಗಳಿಗೆ ಇಂಬು ಕೊಡುವಂತಿದೆ.ಷೇರು ಪ್ರಪಂಚ: ಒಂದು ಇಣುಕು ನೋಟ

ಡಾ. ರಾಘವೇಂದ್ರ ಪುರಾಣಿಕ; ಪು:178; ಬೆ:ರೂ.100; ಪ್ರ: ಸ್ನೇಹ ಬುಕ್‌ಹೌಸ್, ನಂ.34, 50 ಅಡಿ ರಸ್ತೆ, ಅಯ್ಯಪ್ಪಸ್ವಾಮಿ ದೇವಸ್ಥಾನ ಪಕ್ಕದ ರಸ್ತೆ, ರಾಘವೇಂದ್ರ ಬ್ಲಾಕ್, ಬೆಂಗಳೂರುಆರ್ಥಿಕ ವಿಷಯಗಳ ಬಗೆಗಿನ ಸಾಹಿತ್ಯ ಕನ್ನಡದಲ್ಲಿ ತೀರಾ ಕಡಿಮೆ. ಮಾರುಕಟ್ಟೆ ವಿಷಯಕ್ಕೆ ಸಂಬಂಧಿಸಿದ ನುಡಿಗಟ್ಟು ಕನ್ನಡದಲ್ಲಿ ಸಮರ್ಪಕವಾಗಿ ರೂಪುಗೊಳ್ಳದಿರುವುದು ಹಾಗೂ ಆ ಕ್ಷೇತ್ರದ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಇರುವ ತೊಡಕು ಈ ಕೊರತೆಗೆ ಕಾರಣ. ಆದರೆ, ಈಚಿನ ದಿನಗಳಲ್ಲಿ ಕೆಲವು ಲೇಖಕರಾದರೂ ಆರ್ಥಿಕ ವಿಷಯಗಳ ಕುರಿತು ಗಮನಸೆಳೆಯುವಂತೆ ಬರೆಯುತ್ತಿದ್ದಾರೆ. ರಾಘವೇಂದ್ರ ಪುರಾಣಿಕ ಅವರಲ್ಲೊಬ್ಬರು. ‘ಪ್ರಜಾವಾಣಿ’ಯಲ್ಲಿ ಎರಡೂವರೆ ವರ್ಷಗಳ ಕಾಲ ಪ್ರಕಟವಾದ ಅವರ ಅಂಕಣ ಬರಹಗಳು ಇದೀಗ ‘ಷೇರು ಪ್ರಪಂಚ: ಒಂದು ಇಣುಕು ನೋಟ’ ಹೆಸರಿನಲ್ಲಿ, ಪುಸ್ತಕರೂಪದಲ್ಲಿ ಪ್ರಕಟಗೊಂಡಿವೆ.ಷೇರುಪೇಟೆ, ಹೂಡಿಕೆಯ ವಿಧಾನಗಳು, ಆನ್‌ಲೈನ್ ವಹಿವಾಟು, ಮ್ಯೂಚುವಲ್ ಫಂಡ್‌ಗಳು, ಜಾಗತಿಕ ಪೇಟೆ ಸೇರಿದಂತೆ ವಿತ್ತಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಪುರಾಣಿಕರ ಲೇಖನಗಳು ಇಲ್ಲಿವೆ. ಸೂಕ್ಷ್ಮ ವಿಷಯಗಳನ್ನು ಸರಳಭಾಷೆಯಲ್ಲಿ ಓದುಗರಿಗೆ ಮುಟ್ಟಿಸುವ ಅವರ ಪ್ರಯತ್ನ ಪರಿಣಾಮಕಾರಿಯಾಗಿದೆ. ಇಂಗ್ಲಿಷ್‌ನ ಕೆಲವು ಪದಗಳಿಗೆ ಅವರು ಕಂಡುಕೊಂಡಿರುವ ಕನ್ನಡ ರೂಪಗಳು ಕುತೂಹಲ ಹುಟ್ಟಿಸುವಂತಿವೆ.

ಆರ್ಥಿಕ ಕ್ಷೇತ್ರದ ಬಗ್ಗೆ ತಿಳಿಯಬಯಸುವ ಜನಸಾಮಾನ್ಯರಿಗೆ ಉಪಯುಕ್ತ ಪುಸ್ತಕವಿದು.ನಾಡೋಜ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ

ಎಂ.ಎಂ.ಶಿವಪ್ರಕಾಶ; ಪು:40; ಬೆ:ರೂ.30; ಪ್ರ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ    (ಜ.3, 1892-ಅ.24, 1997) ಕನ್ನಡ ನಾಡುನುಡಿಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು. ಏಕೀಕರಣ ಚಳವಳಿಯಲ್ಲಿ ಸಕ್ರಿಯರಾಗಿದ್ದ ಅವರು ನಾಡಿನ ಉದ್ದಗಲಕ್ಕೂ ಸಂಘಟನೆಗಾಗಿ ಓಡಾಡಿ, ಹಲವು ಸಂಸ್ಥೆಗಳ ಸ್ಥಾಪನೆ ಮತ್ತು ಏಳಿಗೆಗಾಗಿ ದುಡಿದಿದ್ದಾರೆ. ಕನ್ನಡ ಮತ್ತು ಸಂಸ್ಕೃತ ವಿದ್ವಾಂಸರಾಗಿದ್ದ ಅವರು ಯಾದಗಿರಿಯಲ್ಲಿ ಸಂಸ್ಕೃತ ಶಾಲೆ ಹಾಗೂ ಹುಬ್ಬಳ್ಳಿಯಲ್ಲಿ ಸಂಸ್ಕೃತ ಕಾಲೇಜು ಸ್ಥಾಪನೆಯ ರೂವಾರಿ. ಇಂಥ ಪ್ರಾತಃಸ್ಮರಣೀಯ ಚೇತನದ ಕುರಿತ ಪುಟ್ಟ ಪುಸ್ತಕ ‘ನಾಡೋಜ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ’. ಎಂ.ಎಂ.ಶಿವಪ್ರಕಾಶರ ಈ ಪುಸ್ತಕ ಶಾಸ್ತ್ರಿಗಳ ಸಾಧನೆಯನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry