ಮೊದಲ ಓದು/ ಜ್ಞಾನಪೀಠ ಕೃತಿ ನೋಟ

7

ಮೊದಲ ಓದು/ ಜ್ಞಾನಪೀಠ ಕೃತಿ ನೋಟ

Published:
Updated:
ಮೊದಲ ಓದು/ ಜ್ಞಾನಪೀಠ ಕೃತಿ ನೋಟ

ವಿಮರ್ಶಕರೂ, ಕಥೆಗಾರರೂ ಆಗಿರುವ ಮಾಧವ ಕುಲಕರ್ಣಿ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕೃತಿಗಳ ಕುರಿತಾಗಿ ಬರೆದ ಲೇಖನಗಳನ್ನು ಈ ಪುಸ್ತಕದಲ್ಲಿ ಸಂಗ್ರಹಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕುರಿತಾಗಿ ಅವರು ಸುಮಾರು ಮೂವತ್ತು ವರ್ಷಗಳಿಂದ ಬರೆದಿರುವ ಲೇಖನಗಳು ಇಲ್ಲಿವೆ.

ಆದರೆ, ಕನ್ನಡದಲ್ಲಿ ಜ್ಞಾನಪೀಠ ಬಂದ ಎಲ್ಲ ಸಾಹಿತಿಗಳ ಸಾಹಿತ್ಯದ ಕುರಿತಾಗಿರುವ ಲೇಖನಗಳನ್ನು ಈ ಕೃತಿ ಒಳಗೊಂಡಿಲ್ಲ. ಕನ್ನಡದ ಮಹತ್ವದ ಲೇಖಕರಾದ ಶಿವರಾಮ ಕಾರಂತ, ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರರ ಸಾಹಿತ್ಯದ ಕುರಿತಾಗಿ ಇಲ್ಲಿ ಲೇಖನಗಳಿವೆ. ಇನ್ನುಳಿದ ಜ್ಞಾನಪೀಠ ಸಾಹಿತಿಗಳ ನಾಲ್ಕು ಲೇಖಕರ ಬಗ್ಗೆ ಯಾವುದೇ ಲೇಖನಗಳಿಲ್ಲ. ಇದರಿಂದಾಗಿ ಪುಸ್ತಕದ ಹೆಸರಾದ `ಜ್ಞಾನಪೀಠ ಕೃತಿ ನೋಟ' ಎಂಬುದು ಪೂರ್ಣವಾಗಿ ಇದಕ್ಕೆ ಹೊಂದುವುದಿಲ್ಲ.ಜ್ಞಾನಪೀಠ ಸಾಹಿತಿಗಳು ಎಂಬ ಸಾಮಾನ್ಯ ವರ್ಗೀಕರಣವನ್ನು ಬದಿಗೆ ಸರಿಸಿದರೂ ಕುವೆಂಪು, ಬೇಂದ್ರೆ, ಮಾಸ್ತಿಯವರ ಸಾಹಿತ್ಯದ ಉಲ್ಲೇಖ ಇಲ್ಲದೇ ಆಧುನಿಕ ಕನ್ನಡ ಸಾಹಿತ್ಯದ ಚರ್ಚೆಯನ್ನೇ ಮಾಡಲಾಗುವುದಿಲ್ಲ. ಹಾಗಾಗಿ ಪುಸ್ತಕದ ಚೌಕಟ್ಟಿನ ಹಿನ್ನೆಲೆಯಲ್ಲಿ ಮಾಧವ ಕುಲಕರ್ಣಿ ಅವರ ಈ ಪುಸ್ತಕ ಅಸಮಗ್ರವಾಗಿದೆ.ಕಾರಂತರ ಆರಂಭಿಕ ಕಾದಂಬರಿಗಳಲ್ಲಿ ಒಂದಾದ `ದೇವದೂತರು' ಕೃತಿಯಿಂದ ಹಿಡಿದು ಅವರ ಮಹತ್ವದ (ಹಾಗೂ ಕನ್ನಡದ) ಕಾದಂಬರಿಗಳಾದ ಬೆಟ್ಟದ ಜೀವ, ಮರಳಿ ಮಣ್ಣಿಗೆ, ಅಳಿದ ಮೇಲೆ ಕಾದಂಬರಿಗಳೂ ಸೇರಿದಂತೆ ಅವರ 14 ಕಾದಂಬರಿಗಳ ಕುರಿತಂತೆ ಲೇಖಕರು ಬರೆದಿದ್ದಾರೆ. ಹಾಗೆ ನೋಡಿದರೆ ಕಾರಂತರ ಕಾದಂಬರಿಗಳ ಕುರಿತಂತೆ ಲೇಖಕರು ಸಮಗ್ರವಾದ ಅಧ್ಯಯನ ಮಾಡಿರುವುದು, ಒಳನೋಟಗಳೊಂದಿಗೆ ಅವರ ಕೃತಿಗಳನ್ನು ವಿವರಿಸಿರುವುದು ಇಲ್ಲಿ ಕಾಣುತ್ತದೆ.

ಇದೇ ಮಾತನ್ನು ಅನಂತಮೂರ್ತಿ, ಗಿರೀಶ್, ಕಂಬಾರರ ಸಾಹಿತ್ಯದ ಕುರಿತಂತೆ ಅವರು ಬರೆದಿರುವ ಲೇಖನಗಳ ಬಗ್ಗೆಯೂ ವಿಸ್ತರಿಸಬಹುದು. ಅದರಲ್ಲೂ ಕಂಬಾರರ ಕವಿತೆ, ನಾಟಕಗಳ ಬಗ್ಗೆ ಬರೆದಿರುವ ಅವರ ಬರಹಗಳು ಕಂಬಾರರ ಕುರಿತಂತೆ ಬಂದಿರುವ ಉತ್ತಮ ವಿಮರ್ಶೆಗಳಾಗಿವೆ. ಸಾಹಿತ್ಯದ ಅಧ್ಯಾಪಕನೊಬ್ಬ ಉತ್ಸಾಹದಿಂದ ವಿವರಿಸುವ ಧಾಟಿಯಲ್ಲಿ ಇಲ್ಲಿನ ಬರಹಗಳಿವೆ. ಹಾಗಾಗಿ ಸಾಹಿತ್ಯದ ವಿದ್ಯಾರ್ಥಿಗಳಿಗೆ ಇಲ್ಲಿನ ಬರಹಗಳು ನೆರವಾಗಬಲ್ಲವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry