ಮೊದಲ ಓದು : ಹಕ್ಕಿ ಚೆಲ್ಲಿದ ಬೀಜ

7

ಮೊದಲ ಓದು : ಹಕ್ಕಿ ಚೆಲ್ಲಿದ ಬೀಜ

Published:
Updated:
ಮೊದಲ ಓದು : ಹಕ್ಕಿ ಚೆಲ್ಲಿದ ಬೀಜ

ಈಗಾಗಲೇ `ಪ್ರಾಪ್ತಿ~ ಮತ್ತು `ಮೊತ್ತ~ ಎಂಬ ಕಥಾ ಸಂಗ್ರಹಗಳನ್ನು ಪ್ರಕಟಿಸಿದ ಸಿ.ಎನ್.ರಾಮಚಂದ್ರ ತಮ್ಮ ಮೂರನೇ ಸಂಗ್ರಹ `ಹಕ್ಕಿ ಚೆಲ್ಲಿದ ಬೀಜ~ವನ್ನು ಪ್ರಕಟಿಸಿದ್ದಾರೆ. ಸುಮಾರು ಮೂರು ದಶಕಗಳ ಕಥಾಯಾತ್ರೆಯಲ್ಲಿ, ಅದರ ಕಾಯಕದಲ್ಲಿ ಗಂಭೀರವಾಗಿ ತೊಡಗಿಕೊಂಡ ಕಸುಬುದಾರನ ಕಥೆಗಳು ಇಲ್ಲಿವೆ.`ಹಕ್ಕಿ ಚೆಲ್ಲಿದ ಬೀಜ~ ಎಂಬ ಮೊದಲ ಹಾಗೂ ಸಂಕಲನದ ಮುಖ್ಯ ಕಥೆಯೇ ಛಿದ್ರಗೊಂಡ ಜಗತ್ತಿನಲ್ಲಿ ಸಂಬಂಧದ ಎಳೆಗಳನ್ನು ಹುಡುಕುತ್ತ ಹೋಗುವುದಾಗಿದೆ. ತನ್ನ ಬರ್ತ್ ಸರ್ಟಿಫಿಕೇಟ್ ತರಲು ಹೋಗುವ ನಾಯಕ ರಾಬರ್ಟ್‌ನಿಗೆ ತನ್ನ ಹುಟ್ಟಿನ ಮೂಲವೇ ಒಗಟಾಗಿ, ರಹಸ್ಯಮಯವಾಗಿ ಕಾಣುತ್ತದೆ.ತನ್ನ ಹುಟ್ಟಿನ ಬೇರು ಕಾಣುತ್ತಿದ್ದಂತೆ ಬದುಕಿನ ಗಾಢ ದರ್ಶನ ಅವನಿಗಾಗುತ್ತದೆ. ಈ ಕಥೆಗೆ ಹುಟ್ಟು, ಸಾವು, ಧರ್ಮ ಈ ಮೂರು ಪದರುಗಳಿವೆ. ಮೂರು ಆಯಾಮದಲ್ಲಿ ಬೆಳೆಯುವ ಕಥೆ ನಾಲ್ಕನೇ ಆಯಾಮದತ್ತ ತುಯ್ಯುವುದರಲ್ಲಿ ಅದರ ಅರ್ಥವಂತಿಕೆ ಇದೆ. ಯಾವುದೇ ತೀರ್ಪು, ಪೂರ್ವ ನಿಶ್ಚಿತ ಅಭಿಪ್ರಾಯಗಳನ್ನು ಕೊಡದ ಕಾರಣಕ್ಕಾಗಿ, ಬದುಕಿನ ಅನುಭವವನ್ನು ತಮ್ಮ ನಿರೂಪಣೆಯ ಮೂಲಕವೇ ಪರೀಕ್ಷಿಸುವಲ್ಲಿ ರಾಮಚಂದ್ರ ಅವರ ಕಥೆಗಳ ಗೆಲುವು ಇದೆ.ಈ ಅಂಶಗಳು ಅವರ ಇನ್ನಿತರ ಎಂಟು ಕಥೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿದೆ. ಇದನ್ನ ನಾವು ಅವರ `ಮೊತ್ತ~, `ಸಮಾಧಿಯ ಮೇಲೊಂದು ಹೂವು...~, `ಧಿಯೋಯೋನಃ~, `ಆತನನ್ನು ಕೊಂಡಾಡಿರಿ~ ಕಥೆಗಳಲ್ಲಿ ನೋಡಬಹುದು.ಅಂತರಂಗದ ಹಾಗೂ ಬಹಿರಂಗದ ಅವರ ಕಥೆಗಳ ಯಾನದಲ್ಲಿ, ಹುಡುಕಾಟದಲ್ಲಿ ನಮಗೆ ಹೆಚ್ಚಾಗಿ ಕಾಣುವುದು ಕಂಡ ಕಥೆಯನ್ನು ಓದುಗರಿಗೆ ಮುಟ್ಟಿಸಬೇಕು ಎಂಬ ಅವರ ಬರಹದ ತೀವ್ರತೆ. ಈ ಸಂಗತಿ ಇವನ್ನು ಓದಬಲ್ಲ ಕಥೆಗಳನ್ನಾಗಿ ರೂಪಿಸಿವೆ.ಹಕ್ಕಿ ಚೆಲ್ಲಿದ ಬೀಜ

(ಕಥಾಸಂಗ್ರಹ)

ಲೇ: ಸಿ.ಎನ್.ರಾಮಚಂದ್ರ

ಪು: 106; ಬೆ: ರೂ. 70

ಪ್ರ: ಸುಮುಖ ಪ್ರಕಾಶನ, ನಂ. 174ಇ/ 28, 1ನೇ ಮಹಡಿ, 1ನೇ ಮುಖ್ಯ ರಸ್ತೆ, ಮಾಗಡಿ ರಸ್ತೆ ಟೋಲ್‌ಗೇಟ್, ವಿದ್ಯಾರಣ್ಯನಗರ, ಬೆಂಗಳೂರು- 560 023

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry