ಮೊದಲ ಓದು

7

ಮೊದಲ ಓದು

Published:
Updated:
ಮೊದಲ ಓದು

ಬಂಡಾಯದ ಬರಗೂರು

‘ಬಂಡಾಯದ ಬರಗೂರು’ ಪುಸ್ತಕ ಕನ್ನಡ ಲೇಖಕ, ಚಿಂತಕ, ಸಿನಿನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಸಾಹಿತ್ಯ, ಸಿನಿಮಾ, ಚಿಂತನೆಯನ್ನು ಹಲವು ದಿಕ್ಕುಗಳಲ್ಲಿ, ಕೋನಗಳಲ್ಲಿ ಕಂಡವರು ಬರೆದ ಬರಹಗಳನ್ನು ಒಳಗೊಂಡಿದೆ. ಇನ್ನೊಂದು ಪುಸ್ತಕ ಕನ್ನಡಕ್ಕೆ ಮತ್ತು ಕನ್ನಡ ಜನತೆಗೆ ನಟ ರಾಜಕುಮಾರ್ ಕೊಟ್ಟದ್ದೇನು? ಎಂಬ ಪ್ರಶ್ನೆಗೆ ಕಂಡುಕೊಂಡ ಉತ್ತರಗಳ ಬರಹವಾಗಿದೆ.ಬರಗೂರರು ಕತೆಗಾರ, ಕವಿ, ಕಾದಂಬರಿಕಾರ, ಸಿನಿಮಾ ನಿರ್ದೇಶಕ ಹಾಗೂ ಸಂಸ್ಕೃತಿ ಚಿಂತಕರೂ ಆಗಿದ್ದಾರೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿರುವ ಅವರ ಸಾಹಿತ್ಯದ ಕುರಿತಂತೆ ಪ್ರಹ್ಲಾದ ಅಗಸನಕಟ್ಟೆ, ನರಹಳ್ಳಿ ಬಾಲಸುಬ್ರಹ್ಮಣ್ಯ, ಚಂದ್ರಶೇಖರ ಕಂಬಾರ, ಕೆ.ವಿ. ನಾರಾಯಣ, ಸಿ.ಎನ್. ರಾಮಚಂದ್ರನ್, ರಹಮತ್ ತರೀಕೆರೆ, ಜಿ.ಎಸ್. ಆಮೂರ ಮತ್ತಿತರರು ಬರೆದಿದ್ದಾರೆ.

ಅವರ ಸಾಹಿತ್ಯದ ಕುರಿತಾದ ಬರಹಗಳು ಅವರ ಸಾಹಿತ್ಯದ ತಾತ್ವಿಕತೆ, ದರ್ಶನ ಹಾಗೂ ಜನಪರ ನಿಲುವನ್ನು ಹಿಡಿಯಲು ಪ್ರಯತ್ನಿಸಿವೆ. ಬರಗೂರರು ನಿರ್ದೇಶಿಸಿದ ಸಿನಿಮಾಗಳಾದ ‘ಹಗಲುವೇಷ’, ‘ಶಾಂತಿ’, ‘ತಾಯಿ’ ಕುರಿತು ಇಲ್ಲಿ ಕೆಲವು ಲೇಖನಗಳಿವೆ.ಇವೂ ಸೇರಿದಂತೆ ಇಲ್ಲಿನ ಬಹುಪಾಲು ಲೇಖನಗಳು ಬೇರೆಬೇರೆ ಕಡೆ ಬರೆದ ಲೇಖನಗಳಾಗಿದ್ದು, ಅವನ್ನು ಇಲ್ಲಿ ಒಂದೆಡೆ ಸೇರಿಸಲಾಗಿದೆ. ಅವರ ಚಿಂತನೆ, ವ್ಯಕ್ತಿತ್ವದ ಬಗ್ಗೆ ಬರೆದಿರುವ ಲೇಖನಗಳೂ ಇವೆ. ಇವೆಲ್ಲವೂ ಬರಗೂರು ರಾಮಚಂದ್ರಪ್ಪ ಅವರು ಸಾಗಿಬಂದ ದಾರಿಯನ್ನು, ಒಟ್ಟಾರೆಯಾಗಿ ಅವರ ಎಲ್ಲ ಕೆಲಸಗಳ ವೈಶಿಷ್ಟ್ಯವನ್ನು ಗುರುತಿಸುವ ಬರಹಗಳಾಗಿವೆ. ‘ಜನಪದ ನಾಯಕ ಡಾ. ರಾಜಕುಮಾರ್ ಜನರಿಗೆ ಕೊಟ್ಟಿದ್ದೇನು?’

ಎಂಬ ಬರಗೂರರ ಪುಸ್ತಕ ರಾಜಕುಮಾರ್ ಅವರ ಸರಳ ವ್ಯಕ್ತಿತ್ವದ ಅನನ್ಯತೆಯನ್ನು ಹಿಡಿಯಲು ಮಾಡಿದ ಪ್ರಯತ್ನವಾಗಿದೆ. ವೈಯಕ್ತಿಕವಾಗಿ ರಾಜ್ ಅವರನ್ನು ಬಲ್ಲವರಾಗಿದ್ದ ಲೇಖಕರು– ‘ದೊಡ್ಡ ನಟರು ನಮಗೆ ಕೊಟ್ಟದ್ದೇನು?’ ಎಂಬ ಕೆಲವರ ಪ್ರಶ್ನೆಗೆ ಹಲಬಗೆಯ ಉತ್ತರಗಳನ್ನು ಇಲ್ಲಿನ ಮೂರು ಲೇಖನಗಳಲ್ಲಿ ಕೊಟ್ಟಿದ್ದಾರೆ.ಹಳ್ಳಿಯಿಂದ ಬಂದ ಬಡಹುಡುಗ ಸಿನಿಮಾದಲ್ಲಿ ಮಾಡಿದ ಸಾಧನೆ ಹಳ್ಳಿಯ ಹುಡುಗರಿಗೆ ಸ್ಫೂರ್ತಿಯಾಗಿರುವುದನ್ನು, ‘ಜನಪದ ನಾಯಕ’ನಾಗಿ ಬೆಳೆದದ್ದನ್ನು, ಅವರ ಸಿನಿಮಾಗಳನ್ನು ನೋಡಿ ಸೋದರ, ಸೋದರಿ ಸಂಬಂಧಗಳನ್ನು ನಿಜಜೀವನದಲ್ಲಿ ಜನರು ಅಳವಡಿಸಿಕೊಂಡದ್ದನ್ನು, ಅವರ ವಿನಯ, ಎಲ್ಲರ ಬಗ್ಗೆ ಅವರಿಗಿದ್ದ ಪ್ರೀತಿ, ಗೌರವ... ಹೀಗೆ ರಾಜಕುಮಾರ್ ಕನ್ನಡದಲ್ಲಿ ಸ್ಫೂರ್ತಿಯಾಗಿರುವ ಬಗೆಯನ್ನು ಬರಗೂರರ ಈ ಬರಹಗಳು ಗುರುತಿಸುತ್ತವೆ.

ರಾಜ್ ಸಾಮಾಜಿಕವಾಗಿ ಮಾಡಿದ ಸಹಾಯವನ್ನು ಕೂಡ ಅವರಿಲ್ಲಿ ಬರೆದಿದ್ದಾರೆ. ಕನ್ನಡ ಮನಸ್ಸುಗಳನ್ನು ಕಟ್ಟಿದ, ಕನ್ನಡ ನುಡಿಯನ್ನು ಆಡುವ ಬಗೆಯನ್ನು ಕಲಿಸಿದ ರಾಜ್ ಬಗ್ಗೆ ಬರಗೂರರು ಬರೆದ ಇಲ್ಲಿನ ಲೇಖನಗಳು ರಾಜ್ ಕೊಡುಗೆಯನ್ನು ಅನೇಕ ಉದಾಹರಣೆ, ಘಟನೆಗಳ ಮೂಲಕವೇ ದಾಖಲಿಸಿವೆ; ಒಂದು ಪ್ರಶ್ನೆಗೆ ಸರಿಯಾದ ಹಲವು ಉತ್ತರಗಳನ್ನು ನೀಡಿದೆ.

ಮಧುರ ಗಾಯಕ ಮನ್ನಾಡೇ

ಭಾರತದ ಸಿನಿಗಾಯಕ ಮನ್ನಾಡೇ ಅವರ ಮಧುರ ಹಾಡುಗಳನ್ನು ಸಂಗೀತಪ್ರಿಯರು ಕೇಳಿಯೇ ಇರುತ್ತಾರೆ. ಈ ಗಾಯಕ ಒಂದು ದಶಕದಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಈಗ ಅವರಿಗೆ 94 ವರ್ಷ. ಈ ಗಾಯಕನ ಜೀವನ, ಸಾಧನೆಯನ್ನು ಈ ಪುಸ್ತಕದಲ್ಲಿ ಜಿ.ಜಿ. ನಾಗರಾಜ, ಡಾ. ಕುಸುಮ, ಎನ್. ವೆಂಕಟೇಶ್ ಸರಳಗನ್ನಡದಲ್ಲಿ ದಾಖಲಿಸಿದ್ದಾರೆ.ಸುಮಾರು 60 ವರ್ಷಗಳನ್ನು ಹಾಡುತ್ತಲೇ ಕಳೆದಿರುವ ಮನ್ನಾಡೇ ಸಿನಿಮಾ ನಿರ್ಮಾಪಕ, ವಿತರಕರೂ ಆಗಿದ್ದುಂಟು. ಈ ಬಂಗಾಳಿ ಬಾಬು ಕೇವಲ ಹಿಂದಿ ಹಾಡುಗಳಿಗೆ ಸೀಮಿತರಾದವರಲ್ಲ. ಕನ್ನಡದಲ್ಲೂ ಕೆಲಹಾಡುಗಳನ್ನು ಹಾಡಿದ್ದಾರೆ. ಕೇವಲ ತಮ್ಮ ಬಗ್ಗೆ ಮಾತ್ರವಲ್ಲ, ಅವರ ಸಹಗಾಯಕರು, ಸಿನಿಮಾ ಸಂಗೀತದ ಕುರಿತಾಗಿಯೂ ಇಲ್ಲಿ ಮಾತನಾಡಿದ್ದಾರೆ. ಅವರ ಕುರಿತಂತೆ ಗಾಯಕರಾದ ಲತಾ ಮಂಗೇಶ್ಕರ್, ಪಿ.ಬಿ. ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಕವಿತಾ ಕೃಷ್ಣಮೂರ್ತಿ ಕೂಡ ಮಾತನಾಡಿದ್ದಾರೆ.

ಹಾಗಾಗಿ ಇಲ್ಲಿ ಮನ್ನಾಡೇ ಅವರ ನಿರೂಪಣೆ ಮಾತ್ರವಲ್ಲದೆ, ಬೇರೆಯವರು ಕಂಡ ಮನ್ನಾಡೇ ಕೂಡ ಇಲ್ಲಿ ಇದ್ದಾರೆ. ಅನೇಕ ವಿವರಗಳು, ಚಿತ್ರಗಳಿಂದ ಕೂಡಿರುವ ಇದು ಒಂದು ವಿಶಿಷ್ಟ ಪುಸ್ತಕ. ಅವರ ದನಿಯಲ್ಲಿ ಸ್ವರದ ಕಂಪನವನ್ನು, ರಾಗದ ಅಲೆಗಳನ್ನು ಮಾತ್ರ ಕೇಳಿ ಗೊತ್ತಿದ್ದವರಿಗೆ ಮನ್ನಾಡೇ ಎಂಬ ಸಂಗೀತ ನದಿ ಹರಿದು ಬಂದ ಬಗೆಯನ್ನು ಈ ಪುಸ್ತಕ ಪರಿಚಯ ಮಾಡಿಕೊಡುತ್ತದೆ.

ಕಿರಿಯರ ಸಚಿತ್ರ ವಿಶ್ವಕೋಶ

ಮಕ್ಕಳಿಗೆ ವಿವಿಧ ವಿಷಯಗಳನ್ನು ಸಂಕ್ಷಿಪ್ತವಾಗಿ, ಸಚಿತ್ರವಾಗಿ ಈ ವಿಶ್ವಕೋಶ ಪರಿಚಯಿಸುತ್ತದೆ. ಸೌರಮಂಡಲ, ಭೂಗೋಳ ಶಾಸ್ತ್ರ, ಜೀವ ಸಂಕುಲಗಳ ಉಗಮ, ಮನುಷ್ಯನ ದೇಹ, ನೀರು, ಪಕ್ಷಿ, ಮನುಷ್ಯ ಆವಿಷ್ಕಾರ, ಅನ್ವೇಷಣೆಗಳು ಇದರಲ್ಲಿ ಅಡಕವಾಗಿವೆ.ಮಕ್ಕಳು ತಮ್ಮ ಸುತ್ತಲಿನ ಜಗತ್ತಿನ ಬಗ್ಗೆ ಕುತೂಹಲ ಬೆಳೆಸಿಕೊಳ್ಳಲು, ಹೆಚ್ಚಿನ ಮಾಹಿತಿಯನ್ನು ಅರಿತುಕೊಳ್ಳಲು ನೆರವಾಗುವಂತೆ ಇದನ್ನು ರೂಪಿಸಲಾಗಿದೆ. ಮಕ್ಕಳಿಗೆ ಮಾತ್ರವಲ್ಲ ಸಾಮಾನ್ಯಜ್ಞಾನದ ಬಗ್ಗೆ ಆಸಕ್ತರಾಗಿರುವ ಹಿರಿಯರಿಗೂ ಇದು ಇದು ಉಪಯುಕ್ತವಾಗಬಲ್ಲದು.

ಜೊತೆಗೆ ಹಲವು ವಿಷಯಗಳ ಪ್ರಾಥಮಿಕ ಮಾಹಿತಿಯನ್ನು ಇದು ನೀಡುತ್ತದೆ.  ‘1979ರಲ್ಲಿ ಸಹರಾ ಮರುಭೂಮಿಯಲ್ಲಿ ‘ಹಿಮಪಾತ’ವಾಗಿತ್ತು’.

‘ಆಸ್ಟ್ರೇಲಿಯಾದ ಬಾತುಕೋಳಿಯಂತಿದ್ದ ಎಂಡ್ಮೋಂಟೋಸಾರಸ್‌ ಎಂಬ ಡೈನೋಸಾರ್‌ ಬಾಯಿಯಲ್ಲಿ 1000 ಹಲ್ಲುಗಳಿದ್ದವು’. ಈ ಪುಸ್ತಕದಲ್ಲಿರುವ ಇಂಥ ಕೆಲ ಆಸಕ್ತಿಕರ ವಿಷಯಗಳು ಆಸಕ್ತಿಯನ್ನು ಕೆರಳಿಸುವಂತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry