ಮೊದಲ ಓದು

7

ಮೊದಲ ಓದು

Published:
Updated:

ಮೈಸೂರು ರಾಜ್ಯವನ್ನು ಆಳಿದ ಟೀಪೂ ಸುಲ್ತಾನ್‌ ಹಿಂದೂ ಧರ್ಮ ವಿರೋಧಿ, ದೇಶಪ್ರೇಮಿಯಲ್ಲ ಎಂದು ಕೆಲವರು ಆಗಾಗ ವಾದವಿವಾದ ಸೃಷ್ಟಿಸುವುದುಂಟು. ಈ ಚರ್ಚೆಯ ಹಿನ್ನೆಲೆಯಲ್ಲಿ ಕನ್ನಡದ ಹಿರಿಯ ಲೇಖಕ ಕೋ. ಚೆನ್ನಬಸಪ್ಪ ಟೀಪೂ ಸುಲ್ತಾನ್‌ ಹೇಗೆ ದೇಶಭಕ್ತನಾಗಿದ್ದ ಎಂಬುದನ್ನು ಈ ಪುಟ್ಟ ಪುಸ್ತಕದಲ್ಲಿ ಹೇಳಿದ್ದಾರೆ. ಅದನ್ನು ಅವರು ಅನೇಕ ಆಕರಗಳಿಂದ ಸಂಗ್ರಹಿಸಿ ಇಲ್ಲಿ ಕೊಟ್ಟಿದ್ದಾರೆ. ಬೇರೆ ಬೇರೆ ಲೇಖಕರ ಬರವಣಿಗೆಗಳು, ಮೈಸೂರು ರಾಜ್ಯ ಗೆಝೆಟಿಯರ್ ಹಾಗೂ ಪತ್ರಿಕಾ ವರದಿಗಳು ಈ ಪುಸ್ತಕದ ಮೂಲವಾಗಿವೆ.ಟೀಪೂವಿನ ಪರಮತಪ್ರೇಮ ಹಾಗೂ ಅವನ ದೇಶಪ್ರೇಮವನ್ನು ಸೂಕ್ತ ಸಾಕ್ಷ್ಯಾಧಾರಗಳಿಂದ ಕೋ.ಚೆ ಇಲ್ಲಿ ಕೊಟ್ಟಿದ್ದಾರೆ. ಕೊಡವರ ಮೂಲದ ಬಗ್ಗೆ ಇಲ್ಲಿರುವುದೂ (ಪು 56) ಮೈಸೂರು ಗೆಝೆಟಿಯರ್‌ಲ್ಲಿ ಈಗಾಗಲೇ ಪ್ರಕಟವಾದ ಬರಹದ ಉಲ್ಲೇಖ. ಕನ್ನಡದ ಲೇಖಕ ತಿ.ತಾ. ಶರ್ಮರ ಪುಸ್ತಕ ‘ಮೈಸೂರು ಇತಿಹಾಸದ ಹಳೆಯ ಪುಟಗಳು’ ಪುಸ್ತಕದ ಆಯ್ದ ಭಾಗ ಇಲ್ಲಿನ ಮೊದಲ ಅಧ್ಯಾಯವಾಗಿದೆ. ಹೀಗೆ ಪ್ರಕಟಿತ ಲಭ್ಯ ಮಾಹಿತಿಗಳನ್ನು ಇಟ್ಟುಕೊಂಡು ಕೋ.ಚೆ ಅವರು ಟೀಪೂ ಹೇಗೆ ದೇಶಭಕ್ತನಾಗಿದ್ದ ಎಂಬುದನ್ನು ಹಾಗೂ ಅವನ ಹೋರಾಟದ ವ್ಯಕ್ತಿತ್ವವನ್ನು ಇಲ್ಲಿ ಕೊಟ್ಟಿದ್ದಾರೆ.ಟೀಪೂವಿನ ದೇಶಭಕ್ತಿ, ಧಾರ್ಮಿಕ ಸಹಿಷ್ಣುತೆಗೆ ಉತ್ತರದಂತಿರುವ ಈ ಪುಸ್ತಕವನ್ನು ತಮ್ಮ ಸಾಹಿತ್ಯದ ಅಸಲುಕಸುಬಿಗೆ ಅನುಗುಣವಾಗಿ ಕೋ.ಚೆ ಸಂಪಾದಿಸಿದ್ದಾರೆ. ಟೀಪೂವಿನ ಕುರಿತಂತೆ ಅನುಮಾನ, ಸಂಶಯ ತಾಳುವವರಿಗೆ ಉತ್ತರ ಕೊಡಬೇಕಾದ ಜವಾಬ್ದಾರಿ ಟೀಪುವಿನದ್ದಲ್ಲ, ಒಂದು ಧರ್ಮದವರದಲ್ಲ, ಬದಲಾಗಿ ಆಯಾ ಕಾಲಘಟ್ಟದ ಲೇಖಕರದು ಎಂಬುದನ್ನು ಅವರು ಈ ಹೊತ್ತಿನಲ್ಲಿ ಮಾಡಿ ತೋರಿಸಿದ್ದಾರೆ. ಅದನ್ನು ಸರಿಯಾದ ರೀತಿಯಲ್ಲಿ ಮಾಡಿದ್ದಾರೆ ಎಂಬುದಕ್ಕೆ ಈ ಪುಸ್ತಕವೇ ಉದಾಹರಣೆಯಾಗಿದೆ.

ಹೆಂಡತಿ ಹೇಳಿದ ಹತ್ತು ಸತ್ಯಗಳುಸಂಗ್ರಹ ಮತ್ತು ಸಂಪಾದನೆ:

ಕೋ. ಚೆನ್ನಬಸಪ್ಪ

ಪು: 64 ಬೆ: ರೂ. 40

ಸಂಸಾರದಲ್ಲಿ ದಂಪತಿಯ ನಡುವಿನ ಅನ್ಯೋನ್ಯತೆ, ಸುಮಧುರ ಸಂಬಂಧ ದೀರ್ಘಕಾಲ ಬಾಳಲು ಪರಸ್ಪರ ತಿಳಿವಳಿಕೆ ಅಗತ್ಯ. ಪತ್ನಿ ಪತಿದೇವರಿಗೆ ಕೆಲವು ಸತ್ಯಗಳನ್ನು (ಕೆಲವೊಮ್ಮ ಸುಳ್ಳು ಕೂಡ ಹೇಳಿ!) ಹೇಳದೆ ಸಂಸಾರವನ್ನು ನಡೆಸಿಕೊಂಡು ಹೋಗಿರುತ್ತಾಳೆ.

ಅನುಭವಿ ಪತಿಯಾಗಿರುವ ಲೇಖಕ ಬೇಲೂರು ರಾಮಮೂರ್ತಿ ಪತ್ನಿ ಬಚ್ಚಿಟ್ಟ ಅಂಥ ಹತ್ತು ಸತ್ಯಗಳನ್ನು ಇಲ್ಲಿ ಕೊಟ್ಟಿದ್ದಾರೆ. ಎಂದಿನ ಮಧ್ಯಮ ವರ್ಗದ ಸಾಂಸಾರಿಕ ಪರಿಭಾಷೆ ಇಲ್ಲಿ ಮೂಡಿದೆ. ಅವರು ನಿತ್ಯ ಪಡುವ ಸಂಸಾರದ ಪಾಡು ಇಲ್ಲಿನ ಹತ್ತು ಸತ್ಯಗಳ ವಸ್ತು.

ದೀರ್ಘಕಾಲದ ದಾಂಪತ್ಯದಲ್ಲಿ ಕಾಣಿಸುವ ಎಲ್ಲ ರಾಗಳು, ಸರಿಗಮಗಳು ಇಲ್ಲಿ ಕಾಣಿಸುತ್ತವೆ; ಕೇಳಿಸುತ್ತವೆ. ಅವರದನ್ನು ಆಪ್ತಧಾಟಿಯಲ್ಲಿ ದಾಖಲಿಸಿದ್ದಾರೆ. ಹೆಂಡತಿ ಎಂದರೆ ಲೇಖಕರಿಗೆ ಪ್ರೀತಿ, ಹೆಮ್ಮೆ ಎರಡೂ ಉಂಟು. ಆದರೆ, ಅವರು ಹೆಂಡತಿಗೊಂದು ವ್ಯಕ್ತಿತ್ವ ಇಲ್ಲ ಎನ್ನುವಂತೆ ‘ಲೇ... ಇವಳೇ...’ ಎಂದು ಸಂಬೋಧಿಸುತ್ತಾರೆ.

ಕೊನೆಯಲ್ಲಿ ‘ಏನೇ, ಇವಳೇ, ಶಶಿ’ ಎಂದು ಕರೆಯುತ್ತಾರೆಯಾದರೂ ‘ನಾನು ಏನು ಕರೆದರೂ ನಿನಗೆ ಖುಷಿಯೇ’ ಎನ್ನುತ್ತಾರೆ. ಇದರಿಂದಾಗಿ ಹೆಂಡತಿ ಎಂಬ ಅಗೋಚರ ವ್ಯಕ್ತಿತ್ವವೊಂದು ಇಲ್ಲಿ ರೂಪುಗೊಂಡಿದೆ. ಹಾಗಾಗಿ ಇದನ್ನು ‘ಯಾರ ಹೆಂಡತಿ ಹೇಳಿದ ಸತ್ಯಗಳು ?’ ಎಂದು ಕೆಲವು ರಸಿಕರು ಪ್ರಶ್ನೆ ಕೇಳುವ ಸಾಧ್ಯತೆಯಂತೂ ಇಲ್ಲಿನ ಬರವಣಿಗೆಯ ಸಂದರ್ಭದಲ್ಲಿ ಇದ್ದೇ ಇದೆ!

ಅಗಣಿತ ವಿಸ್ಮಯ

ಗಣಿತ ಎಂದರೆ ಮಾರುದೂರ (ಎಷ್ಟು ಮಾರು ಎಂದು ಲೆಕ್ಕ ಕೇಳುವಂತಿಲ್ಲ!) ಹಾರಿ ಬೀಳುವವರು ಎಂದಿನಿಂದ ಇಂದಿನವರೆಗೂ ಇದ್ದಾರೆ. ಸರಳ ಗಣಿತವೂ ಇವನಿಗೆ/ಇವಳಿಗೆ ಬರುವುದಿಲ್ಲ ಎಂದು ಮಾಸ್ತರರು ಸೇರಿದಂತೆ ಅನೇಕರು ಬೈಯುವುದು ಸಾಮಾನ್ಯ ಸಂಗತಿ. ಇಂಥ ಗಣಿತದ ಚಳಿ ಹಿಡಿದವರ ಚಳಿಯನ್ನು ಬಿಡಿಸಲೆಂದೇ ರೋಹಿತ್‌ ಚಕ್ರವರ್ತಿ ಗಣಿತ ಲೋಕಕ್ಕೆ ಸಂಬಂಧಿಸಿದ ವಿಸ್ಮಯಗಳನ್ನು ಇಲ್ಲಿ ಕೊಟ್ಟಿದ್ದಾರೆ.ಇಲ್ಲಿರುವುದು ಒಂದು ರೀತಿಯಲ್ಲಿ ಗಣಿತಶಾಸ್ತ್ರದ ಹಿಂದಿನ ವಿಸ್ಮಯಕಾರಕ ಕಥೆ. ಕಥೆ ಆಗಿರುವುದರಿಂದ ಗಣಿತ ಎಂದರೆ ಜಾರಿಕೊಳ್ಳುವವರು, ತಲೆಬಿಸಿ ಮಾಡಿಕೊಳ್ಳುವವರು ಇದನ್ನು ಕಥೆಗಳ ಪುಸ್ತಕದಂತೆಯೇ ಓದಬಹುದು. ಭಾರಮಾಪಕದ ಸಹಾಯವಿಲ್ಲದೇ ಆನೆಗಳ ತೂಕವನ್ನು, ಮತ್ತು ಅಳತೆಪಟ್ಟಿಯ ಸಹಾಯವಿಲ್ಲದೆ ಅವುಗಳ ಮೈಯಳತೆಯನ್ನು ಕಂಡು ಹಿಡಿಯುವ ಸೂತ್ರಗಳನ್ನು ಕೊಟ್ಟ ಜೀವವಿಜ್ಞಾನಿ ಕೇರಳದ ಕೆ.ಪಿ. ಶ್ರೀಕುಮಾರ್‌ ಅವರದು ಇಂಥ ಕಥೆ.ಇಂಥ ಆಸಕ್ತಿ ಹುಟ್ಟಿಸುವ ಅನೇಕ ಕಥೆಗಳು ಇಲ್ಲಿವೆ. ಈ ಪುಸ್ತಕದ ವಿಶಿಷ್ಟ ಅಂಶವೆಂದರೆ ಗಹನ ವಿಷಯಗಳನ್ನೇ ತಮಾಷೆಯಾಗಿ ಹೇಳಿರುವುದು. ಗಂಭೀರ ವಿಷಯ ಎಂದುಕೊಂಡಿರುವ ಗಣಿತ ಮತ್ತು ಅದರ ಸಂಶೋಧನೆಯ ಹಿಂದಿನ ಕಥೆಗಳು ರೋಚಕವಾಗಿವೆ ಮಾತ್ರವಲ್ಲ, ಅವು ಶಾಲಾ ಮಕ್ಕಳಿಗೂ ಅರ್ಥವಾಗುವ ಸರಳ ಕನ್ನಡದಲ್ಲಿದೆ ಎಂಬುದು ದುಗರ ಗಮನಕ್ಕೆ ಅರ್ಹವಾದ ಅಂಶವಾಗಿದೆ.

–ಸಂದೀಪ ನಾಯಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry